varthabharthi

ರಾಷ್ಟ್ರೀಯ

ಲೋಕಸಭಾ ಚುನಾವಣೆ

ವಾಟ್ಸ್‌ಆ್ಯಪ್‌ಗೆ ತಿರುಮಂತ್ರ ಹೇಳುತ್ತಿರುವ ಜುಜುಬಿ ಬೆಲೆಗಳ ಸಾಫ್ಟ್‌ವೇರ್‌ಗಳು!

ವಾರ್ತಾ ಭಾರತಿ : 15 May, 2019

 ಹೊಸದಿಲ್ಲಿ,ಮೇ 15: ಲೋಕಸಭಾ ಚುನಾವಣೆಗಳ ಸಂದರ್ಭ ತನ್ನ ವೇದಿಕೆಯಲ್ಲಿ ಸುಳ್ಳುಸುದ್ದಿಗಳ ಪ್ರಸಾರಕ್ಕೆ ತಡೆಯೊಡ್ಡಲು ವಾಟ್ಸ್‌ಆ್ಯಪ್ ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ಆದರೆ 1,000 ರೂ.ನಷ್ಟು ಜುಜುಬಿ ಬೆಲೆಗಳಲ್ಲಿ ಮಾರಾಟವಾಗುತ್ತಿರುವ ವಾಟ್ಸ್‌ಆ್ಯಪ್ ತದ್ರೂಪಿಗಳು ಮತ್ತು ಸಾಫ್ಟ್‌ವೇರ್ ಸಾಧನಗಳು ಈ ಆ್ಯಪ್‌ನ ಆ್ಯಂಟಿ-ಸ್ಪಾಮ್ ನಿರ್ಬಂಧಗಳಿಂದ ನುಣುಚಿಕೊಳ್ಳಲು ಡಿಜಿಟಲ್ ಮಾರ್ಕೆಟಿಯರ್‌ಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ನೆರವಾಗುತ್ತಿವೆ.

 ಈ ಚಟುವಟಿಕೆಗಳು ಭಾರತದಲ್ಲಿ ತನ್ನ ವೇದಿಕೆಯ ದುರುಪಯೋಗವನ್ನು ತಡೆಯುವಲ್ಲಿ ವಾಟ್ಸ್‌ಆ್ಯಪ್ ಎದುರಿಸುತ್ತಿರುವ ಸವಾಲುಗಳನ್ನು ಪ್ರಮುಖವಾಗಿ ಬಿಂಬಿಸುತ್ತಿವೆ. 200 ಮಿಲಿಯನ್‌ಗೂ ಅಧಿಕ ಬಳಕೆದಾರರಿರುವ ಭಾರತವು ವಾಟ್ಸ್‌ಆ್ಯಪ್ ಪಾಲಿಗೆ ವಿಶ್ವದ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ.

ಮೇ 19ರಂದು ಅಂತ್ಯಗೊಳ್ಳಲಿರುವ ಲೋಕಸಭಾ ಚುನಾವಣೆಯ ಪ್ರಚಾರ ಅಭಿಯಾನ ಇನ್ನಷ್ಟು ಕಾವು ಪಡೆದುಕೊಂಡಿದ್ದು, ಇಂತಹ ಸಾಫ್ಟ್‌ವೇರ್ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಡಿಜಿಟಲ್ ಕಂಪನಿಗಳು ಹಾಗೂ ಆಡಳಿತ ಬಿಜೆಪಿ ಮತ್ತು ಅದರ ಮುಖ್ಯ ಎದುರಾಳಿ ಕಾಂಗ್ರೆಸ್ ಪಕ್ಷದಲ್ಲಿನ ಮೂಲಗಳು ತಿಳಿಸಿವೆ.

ಕಳೆದ ವರ್ಷ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳುಸುದ್ದಿಗಳ ಪ್ರಸಾರವು ದೇಶದಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳಿಗೆ ಕಾರಣವಾದ ಬಳಿಕ ಕಂಪನಿಯು ಸಂದೇಶಗಳನ್ನು ಫಾರ್ವರ್ಡ್ ಮಾಡುವುದನ್ನು ಕೇವಲ ಐದು ಬಳಕೆದಾರರಿಗೆ ಸೀಮಿತಗೊಳಿಸಿತ್ತು. ಆದರೆ ಪ್ರಚಲಿತ ಸಾಫ್ಟ್‌ವೇರ್ ಸಾಧನಗಳು ಈ ನಿರ್ಬಂಧವನ್ನು ಭೇದಿಸಿ ಏಕಕಾಲದಲ್ಲಿ ಸಾವಿರಾರು ಜನರಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅವಕಾಶ ಕಲ್ಪಿಸಿರುವಂತಿದೆ.

    ಇತ್ತೀಚಿನ ತಿಂಗಳುಗಳಲ್ಲಿ ಇಬ್ಬರು ಬಿಜೆಪಿ ನಾಯಕರಿಗಾಗಿ ದಿನವೊಂದಕ್ಕೆ ಒಂದು ಲಕ್ಷದವರೆಗೆ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಲು ತಾನು 1,000 ರೂ.ಬೆಲೆಯ ಸಾಫ್ಟ್‌ವೇರ್‌ನ್ನು ದಿನದ 24 ಗಂಟೆಗಳ ಕಾಲ ಬಳಸಿದ್ದೇನೆ ಎಂದು ದಿಲ್ಲಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರ ನಡೆಸುತ್ತಿರುವ ರೋಹಿತಾಷ್ ರೆಪ್ಸ್ವಾಲ್ ಎಂಬಾತ ರಾಯ್ಟರ್ಸ್ ಸುದ್ದಿಸಂಸ್ಥೆಗೆ ಬಹಿರಂಗಗೊಳಿಸಿದ್ದಾನೆ. ವಾಟ್ಸ್‌ಆ್ಯಪ್ ಏನೇ ತಂತ್ರ ಮಾಡಲಿ,ಅದಕ್ಕೆ ಪ್ರತಿತಂತ್ರ ಇರುತ್ತದೆ ಎಂದು ಆತ ಹೇಳಿದ.

ಇಂತಹ ಕನಿಷ್ಠ ಮೂರು ಸಾಫ್ಟ್‌ವೇರ್ ಸಾಧನಗಳು ಅಮೆಝಾನ್ ಡಾಟ್ ಕಾಮ್‌ನ ಭಾರತೀಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ೆ ಕಾಂಪ್ಯಾಕ್ಟ್ ಡಿಸ್ಕ್‌ಗಳ ರೂಪದಲ್ಲಿ ಗ್ರಾಹಕರ ಕೈ ಸೇರುವ ಈ ಸಾಧನಗಳು ಯಾವುದೇ ಕಂಪನಿಯ ಬ್ರಾಂಡ್ ಹೊಂದಿರುವುದಿಲ್ಲ ಎಂದು ರಾಯ್ಟರ್ಸ್ ತಿಳಿಸಿದೆ.

ತನ್ಮಧ್ಯೆ,ನಕಲಿ ವಾಟ್ಸ್‌ಆ್ಯಪ್ ಸೇವೆಗಳ ವಿರುದ್ಧ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುತ್ತಿದ್ದೇವೆ. ದುರುಪಯೋಗವನ್ನು ತಡೆಯಲು ನೂರಾರು ಸಗಟು ಸಂದೇಶ ಸೇವೆ ಪೂರೈಕೆದಾರರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)