varthabharthi

ಕರ್ನಾಟಕ

ಸುಮಲತಾ ಅಂಬರೀಷ್ ಗೆಲ್ಲಲಿದ್ದಾರೆ: ನಟ ಯಶ್ ವಿಶ್ವಾಸ

ವಾರ್ತಾ ಭಾರತಿ : 16 May, 2019

ಮಂಡ್ಯ, ಮೇ 14: ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಗೆಲ್ಲಲಿದ್ದಾರೆಂದು ಅವರ ಪರ ಪ್ರಚಾರ ನಡೆಸಿ ಗಮನ ಸೆಳೆದಿರುವ ಚಿತ್ರನಟ ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ತನ್ನ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಪ್ರಸಾದ್ ಅವರ ಗೃಹ ಪ್ರವೇಶಕ್ಕೆ ತೆರಳುವ ವೇಳೆ ಮದ್ದೂರಿನ ಕೊಪ್ಪ ವೃತ್ತದಲ್ಲಿ ಅಭಿಮಾನಿಗಳಿಂದ ಆಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸುಮಲತಾ ಗೆಲ್ಲಲಿದ್ದಾರೆ. ಆದರೆ, ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆಂದು ಹೇಳುವುದು ಜಂಬಕೊಚ್ಚಿಕೊಂಡಂತೆ ಎಂದರು.

ಸುಮಲತಾ ಅವರಿಗೆ ತಮ್ಮದೇ ಆದ ಆಲೋಚನೆಗಳಿದ್ದು, ಗೆದ್ದ ನಂತರ ಅವುಗಳ ಕಾರ್ಯರೂಪಕ್ಕೆ ತರಲು ಶ್ರಮಿಸಲಿದ್ದಾರೆ. ಜನಪ್ರತಿನಿಧಿಗಳಾದವರು ಜನರ ಸೇವೆ ಮಾಡಬೇಕು. ಜನರ ಪರವಾಗಿ ಕೆಲಸ ಮಾಡುವುದು ಅವರ ಜವಾಬ್ಧಾರಿ ಎಂದು ಅವರು ಹೇಳಿದರು.

ನಾನು, ದರ್ಶನ್ ಸುಮಲತಾ ಅವರ ಗೆಲುವಿಗಾಗಿ ಪ್ರಚಾರಕ್ಕೆ ಜಿಲ್ಲೆಗೆ ಬಂದಿದ್ದೆವು. ಮುಂದೆಯೂ ಬರುತ್ತಿರುತ್ತೇವೆ. ಒಳ್ಳೆಯ ಸಿನಿಮಾ ಸಿಕ್ಕರೆ ದರ್ಶನ್ ಜತೆ ನಟಿಸುವ ಆಸೆ ಇದೆ. ಈಗ ಕೆಜಿಎಫ್-2 ಶೂಟಿಂಗ್ ಶುರುವಾಗಲಿದೆ. ಜೋಡೆತ್ತುಗಳು ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದೆ. ಆದರೆ, ನಾನು ಅದರಲ್ಲಿ ನಟಿಸುತ್ತಿಲ್ಲ. ನಿಖಿಲ್ ಎಲ್ಲಿದ್ದೀಯಪ್ಪಾ ಸಿನಮಾಗೆ ಒಳ್ಳೆಯದಾಗಲಿ ಎಂದು ಯಶ್ ಹೇಳಿದರು.

ಮಗುವಿನ ಹುಟ್ಟುಹಬ್ಬ:
ಅಭಿಮಾನಿಗಳಾದ ಅಯ್ಯಂಗಾರ್ ಬೇಕರಿ ಮಾಲಕರಾದ ರಾಧಿಕಾಹಾಲಪ್ಪ ದಂಪತಿ ತಮ್ಮ ಮಗಳಾದ ಲಹರಿ ಅವರ 3ನೇ ವರ್ಷದ ಹುಟ್ಟುಹಬ್ಬವನ್ನು ಯಶ್  ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ ಮಗುವಿಗೆ ಕೇಕ್ ತಿನ್ನಿಸಿ ಗಮನ ಸೆಳೆದರು.
ಇಂಡುವಾಳು ಸಚ್ಚಿದಾನಂದ್, ಎಂ.ಪಿ.ಅಮರ್ ಬಾಬು, ಹೊಟ್ಟೆಗೌಡನದೊಡ್ಡಿ ನಾಗೇಶ್, ರಾಘು, ಸಚಿನ್, ನಂದಿಶ್, ಮಹೇಂದ್ರ, ಇತರೆ ಮುಖಂಡರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)