varthabharthi

ಕ್ರೀಡೆ

ಹರಿಣ ಪಡೆಗೆ ಕೈಕೊಟ್ಟ ಅದೃಷ್ಟ

ಪಾಕ್‌ಗೆ ಒಲಿದ ವಿಶ್ವ ಚಾಂಪಿಯನ್ ಪಟ್ಟ

ವಾರ್ತಾ ಭಾರತಿ : 16 May, 2019

ವಿಶ್ವಕಪ್ ನೆನಪು

ಭಾರತ ಮತ್ತು ಪಾಕಿಸ್ತಾನ 1987ರಲ್ಲಿ ಜಂಟಿಯಾಗಿ ಆಯೋಜಿಸಿದ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಎರಡೂ ತಂಡಗಳು ವಿಶ್ವಚಾಂಪಿಯನ್ ಪ್ರಶಸ್ತಿಯನ್ನು ಪಡೆಯುವ ಅವಕಾಶದಿಂದ ವಂಚಿತಗೊಂಡಿದ್ದವು. ಆದರೆ 1992ರಲ್ಲಿ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿ ವಿಶ್ವ ಚಾಂಪಿಯನ್ ಎನಿಸಿಕೊಂಡಿತು.

ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ಜಂಟಿ ಆತಿಥ್ಯ ವಹಿಸಿದ್ದ ವಿಶ್ವಕಪ್ ಟೂರ್ನಮೆಂಟ್ 1992ರ ಫೆಬ್ರವರಿ 22ರಿಂದ ಮಾರ್ಚ್ 25ರ ತನಕ ನಡೆಯಿತು. ಬೆನ್ಸೆನ್ ಆ್ಯಂಡ್ ಹೆಡ್ಜೆಸ್ ಕಪ್ ವಿಶ್ವಕಪ್ ಟೂರ್ನಿಯಲ್ಲಿ 33 ದಿನಗಳ ಕಾಲ 39 ಪಂದ್ಯಗಳನ್ನು ಆಡಲಾಗಿತ್ತು.

ಪಾಕಿಸ್ತಾನ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ವೆಸ್ಟ್ ಇಂಡೀಸ್, ಭಾರತ, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು.

ಹಿಂದಿನಂತೆ ಗ್ರೂಪ್ ಇರಲಿಲ್ಲ. ರೌಂಡ್ ರಾಬಿನ್ ಮಾದರಿಯಲ್ಲಿ 9 ತಂಡಗಳು ಪರಸ್ಪರ ಲೀಗ್ ಹಂತದಲ್ಲಿ ಸೆಣಸಾಡಿತ್ತು. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶ ಪಡೆದ್ದವು. ಪ್ರಥಮ ಬಾರಿ ಆಟಗಾರರು ಬಣ್ಣ ಬಣ್ಣದ ಜರ್ಸಿ ಧರಿಸಿ ಕ್ರೀಡಾಂಗಣಕ್ಕೆ ಇಳಿದರು. ಹೊನಲು ಬೆಳಕಿನ ಪಂದ್ಯ, ಬಿಳಿ ಚೆಂಡು ಬಳಕೆ, ಬ್ಲಾಕ್‌ಸೈಟ್ ಸ್ಕ್ರೀನ್ ಅಳವಡಿಕೆ, ಪಂದ್ಯ ಮಳೆಗಾಹುತಿಯಾದಾಗ ಫಲಿತಾಂಶ ನಿರ್ಣಯಿಸಲು ಹೊಸ ವಿಧಾನ ಜಾರಿಗೆ ಬಂತು. ಪರ್ತ್‌ನಲ್ಲಿ ಫೆ.22, 1992ರಂದು ನಡೆದ ವಿಶ್ವಕಪ್ ಟೂರ್ನಿಯ ಮೊದಲ ಹೊನಲು ಬೆಳಕಿನ ಪಂದ್ಯದಲ್ಲಿ ಹಿಂದಿನ ಫೈನಲ್‌ನಲ್ಲಿ ಸೋತು ಪ್ರಶಸ್ತಿ ವಂಚಿತಗೊಂಡಿದ್ದ ಇಂಗ್ಲೆಂಡ್ ತಂಡ ಭಾರತವನ್ನು 9 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ ಇಂಗ್ಲೆಂಡ್ ಬಳಿಕ ಫೈನಲ್ ವರೆಗೂ ಸಾಗಿ ಪ್ರಶಸ್ತಿ ಎತ್ತುವಲ್ಲಿ ಮುಗ್ಗರಿಸಿತು.

ನ್ಯೂಝಿಲ್ಯಾಂಡ್ ಕೂಟದಲ್ಲಿ ಅಗ್ರ ಸ್ಥಾನ ಪಡೆದಿತ್ತು. ಅದು 8 ಪಂದ್ಯಗಳಲ್ಲಿ 7ರಲ್ಲಿ ಜಯ ಗಳಿಸಿತ್ತು. ಇಂಗ್ಲೆಂಡ್ ಎರಡನೇ,ದಕ್ಷಿಣ ಆಫ್ರಿಕ 3ನೇ ಮತ್ತು ಪಾಕಿಸ್ತಾನ ನಾಲ್ಕನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಏರಿತ್ತು. ಪಾಕಿಸ್ತಾನ ತಂಡ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸಿತ್ತು. 3ರಲ್ಲಿ ಸೋಲು ಅನುಭವಿಸಿತ್ತು. 1 ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿತ್ತು.

ಸೆಮಿಫೈನಲ್: ಆಕ್ಲೆಂಡ್(ಮಾ.21)ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ನ್ನು 4 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ಫೈನಲ್‌ಗೇರಿತು. ಸಿಡ್ನಿ(ಮಾ.22)ಯಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ದಕ್ಷಿಣ ಆಫ್ರಿಕ ತಂಡ ಮಣಿಸುವ ಹಾದಿಯಲ್ಲಿದ್ದರೂ ಮಳೆಯಿಂದಾಗಿ ಆಫ್ರಿಕ ತಂಡಕ್ಕೆ ಅದೃಷ್ಟ ಕೈಕೊಟ್ಟಿತು. ಇಂಗ್ಲೆಂಡ್ 19 ರನ್‌ಗಳಿಂದ ಜಯಿಸಿ ಫೈನಲ್ ಪ್ರವೇಶಿಸಿತು. ಮಳೆಯ ಭೀತಿಯ ನಡುವೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 45 ಓವರ್‌ಗಳಲ್ಲಿ 6 ವಿಕೆಟ್‌ಗೆ 252 ರನ್ ಮಾಡಿತ್ತು. ಗೆಲುವಿಗೆ 253 ರನ್‌ಗಳ ಸವಾಲನ್ನು ಪಡೆದ ಆಫ್ರಿಕ ತಂಡಕ್ಕೆ ಮಳೆಯಿಂದಾಗಿ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಮೆಲ್ಬೋರ್ನ್‌ನಲ್ಲಿ (ಮಾ.25)ನಡೆದ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್‌ನ್ನು 22 ರನ್‌ಗಳ ಅಂತರದಿಂದ ಸೋಲಿಸಿ ವಿಶ್ವಚಾಂಪಿಯನ್ ಕಿರೀಟ ಧರಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 249 ರನ್ (ಇಮ್ರಾನ್ ಖಾನ್ 72,ಜಾವೇದ್ ಮಿಯಾಂದಾದ್ 58,ಇಂಝಮಾಮ್ ಉಲ್ ಹಕ್ 42, ವಸೀಮ್ ಅಕ್ರಮ್ 33)ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್49.2 ಓವರ್‌ಗಳಲ್ಲಿ 227 ರನ್(ಫೈರ್‌ಬ್ರದರ್ 62, ಲ್ಯಾಂಬ್ 31)ಗಳಿಸಿ ಸೋಲಿಗೆ ಶರಣಾಯಿತು.

ಪಾಕಿಸ್ತಾನದ ವಸೀಮ್ ಅಕ್ರಮ್ 18 ಎಸೆತಗಳಲ್ಲಿ 33 ರನ್ ಮತ್ತು 49ಕ್ಕೆ 3 ವಿಕೆಟ್ ಕಿತ್ತುಕೊಂಡು ಜಯದ ರೂವಾರಿ ಎನಿಸಿಕೊಂಡರು. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.

ಪ್ರಮುಖ ಅಂಶಗಳು

►ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಝಿಂಬಾಬ್ವೆ 312 ರನ್‌ಗಳನ್ನು ಕಲೆ ಹಾಕಿತು. ಆದರೆ ಈ ಸವಾಲನ್ನು ಬೆನ್ನಟ್ಟಿದ ಶ್ರಿಲಂಕಾ ಇನ್ನೂ 4 ಎಸೆತಗಳು ಬಾಕಿ ಉಳಿದಿರುವಂತೆ 313 ಸ್ಕೋರ್ ಗಳಿಸಿ ವಿಜಯ ಪತಾಕೆ ಹಾರಿಸಿತು.

►ಕ್ರೈಸ್ಟ್ ಚರ್ಚ್‌ನಲ್ಲಿ ಮಾರ್ಚ್ 18ರಂದು ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ರಮೀಝ್ ರಾಜಾ ಅಜೇಯ 119 ರನ್ ಬಾರಿಸಿದ್ದರು. ಪಾಕ್‌ನ ಜಾವೆದ್ ಮಿಯಾಂದಾದ್ 1 ಶತಕ ಮತ್ತು 4 ಅಧರ್ಶತಕಗಳಿರುವ 456 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲಿಸಿದ್ದರು. 

►ಪಾಕ್‌ನ ವಸೀಮ್ ಅಕ್ರಮ್ 18 ವಿಕೆಟ್ ಪಡೆದಿದ್ದರು. ಇದು 1992ರ ವಿಶ್ವಕಪ್‌ನಲ್ಲಿ ಆಟಗಾರನೊಬ್ಬನ ಗರಿಷ್ಠ ವಿಕೆಟ್‌ಗಳ ಸಾಧನೆ. ಇದರೊಂದಿಗೆ ಭಾರತದ ರೋಜರ್ ಬಿನ್ನಿ 1983ರಲ್ಲಿ ಮತ್ತು ಕ್ರೆಗ್ ಮೆಕ್‌ಡರ್ಮೊಟ್ 1987ರಲ್ಲಿ ನಿರ್ಮಿಸಿದ್ದ 18 ವಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಿದ್ದರು. ಇಯಾನ್ ಬೋಥಮ್ 16 ವಿಕೆಟ್ ಪಡೆದು ಎರಡನೇ ಸ್ಥಾನ ಪಡೆದರು.

►1992ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕದ ಮಧ್ಯಮ ವೇಗದ ಬೌಲರ್ ಪ್ರಿಂಗಲ್ ಕಡಿಮೆ ರನ್ ನೀಡಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದರು.(8-4-11-4).

►ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ವೀಕ್ಷಣೆಗೆ 87,182 ಪ್ರೇಕ್ಷಕರು ಆಗಮಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)