varthabharthi

ಕರ್ನಾಟಕ

ಮತದಾರರ ಅಮೂಲ್ಯ ಮತಗಳನ್ನು ಮಾರಿಕೊಂಡವರು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲ: ಡಾ. ಜಿ ಪರಮೇಶ್ವರ್

ವಾರ್ತಾ ಭಾರತಿ : 16 May, 2019

ಚಿಂಚೋಳಿ : "ಚಿಂಚೋಳಿ ಕ್ಷೇತ್ರದಲ್ಲಿ ಉಪಚುನಾವಣೆ ಯಾಕೆ ಬಂತು ಎನ್ನುವುದು ಎಲ್ಲರಿಗೆ ಗೊತ್ತಿದೆ. ಉಮೇಶ್ ಜಾಧವ್‌ಗೆ ನಾನೇ ಎರಡು ಬಾರಿ ಬಿ ಫಾರಂ ನೀಡಿದ್ದೆ. ಹಿಂದುಳಿದ ವರ್ಗದ ಬಂಜಾರ ಸಮುದಾಯಕ್ಕೆ‌ ನ್ಯಾಯ‌ ಒದಗಿಸಲು ವಿದ್ಯಾವಂತ ಎಂಬ ಕಾರಣಕ್ಕಾಗಿ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದ್ದೆವು. ಅದಕ್ಕಾಗಿ ಈ ಕ್ಷೇತ್ರದ ಜನರು ಅಭಿಮಾನದಿಂದ ಆರಿಸಿ ಕಳಿಸಿದರು" ಎಂದು ಡಾ ಜಿ ಪರಮೇಶ್ವರ ಅವರು ಹೇಳಿದರು.

ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಕೈ ಬೆಂಬಲಿತ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಭಾಗವಹಿಸಿದರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿ ವೀರೇಂದ್ರ ಪಾಟೀಲ್ ಅವರ ಕ್ಷೇತ್ರಕ್ಕಿಂದು ಜಾಧವ್ ಇಂದು ಕಳಂಕ ತಂದಿದ್ದಾರೆ ಎಂದು ಹೇಳಿದ ಉಪ ಮುಖ್ಯಮಂತ್ರಿಗಳು ಚಿಂಚೋಳಿ ಕ್ಷೇತ್ರದ ಅಭಿವೃದ್ದಿಗಾಗಿ ಅಂದಿನ ಸಿಎಂ ಸಿದ್ದರಾಮಯ್ಯ ಎಲ್ಲ ಸಹಕಾರ ನೀಡಿದ್ದರು. ಇದನ್ನು ಲೆಕ್ಕಿಸದೆ ಪಕ್ಷವನ್ನು ಜಾಧವ್ ಅವರು ತೊರೆದಿದ್ದಾರೆ ಎಂದು ಅವರು ಹೇಳಿದರು.

ಅಧಿವೇಶನ ಸಮಯದಲ್ಲೇ ಜಾಧವ್ ಬಿಜೆಪಿಗರೊಂದಿಗೆ ಯಾರ ಸಂಪರ್ಕಕ್ಕೂ ಸಿಗದೆ ಮುಂಬೈಗೆ ಹೋಗಿದ್ದರು ಎಂದ ಉಪ ಮುಖ್ಯಮಂತ್ರಿ ಡಾ ಪರಮೇಶ್ವರ್ ಅವರು, "ಬಿಜೆಪಿಯರೊಂದಿಗೆ ಹೋಗಿದ್ದೀರಲ್ಲ ಜಾಧವ್ ಅವರೇ, ನೀವು ಕ್ಷೇತ್ರದ ಜನರನ್ನು ಈ ಕುರಿತು ಕೇಳಿದ್ದೀರಾ? ಏನಾದರೂ ಸಮಸ್ಯೆ ಇದ್ದರೆ ನಮಗೆ ಹೇಳಿದ್ದೀರಾ ? ಇಲ್ಲ. ಯಾಕೆಂದರೆ‌ ನೀವು 50 ಕೋಟಿ ರೂಪಾಯಿಗೆ ಮಾರಾಟವಾಗಿದ್ದೀರಿ. ಮತದಾರರ ಅಮೂಲ್ಯ ಮತಗಳನ್ನು ಮಾರಿಕೊಂಡವರು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಎಲ್ಎಮ್ ಪದವೀಧರರಾದ ಸುಭಾಷ್ ರಾಠೋಡ್ ಅವರು ಜನರ ಮುಂದೆ ನಿಂತಿದ್ದಾರೆ. ಅವರಿಗೆ ಮತ ನೀಡಿ ಆಶೀರ್ವಾದ ನೀಡಬೇಕು ಎಂದು ಅವರು ಜನರಲ್ಲಿ ವಿನಂತಿಸಿಕೊಂಡರು.

"ಬಿಜೆಪಿಯವರಿಗೆ ಬಸವಣ್ಣನ ತತ್ವಗಳು ಬೇಕಿಲ್ಲ"

ವಿಶ್ವದಲ್ಲಿಯೇ ಸಮಾನತೆಯ ಮಾತುಗಳನ್ನು ಕಾರ್ಯಗತ ಮಾಡಿರುವುದು ಬಸವಣ್ಣ ಮಾತ್ರ. ಅವರ ನಂತರ ಪ್ರಯತ್ನಪಟ್ಟವರು ಮಹಾತ್ಮ ಗಾಂಧೀಜಿಯವರು. ಲಂಡನ್ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನ ಪ್ರತಿಷ್ಟಾಪನೆ ಸೂಕ್ತ. ಶ್ರೇಷ್ಠ ಕಾನೂನುಗಳನ್ನು ರೂಪಿಸುವ ಸಂಸತ್ ಮುಂದೆ ಪ್ರತಿಮೆ ಸ್ಥಾಪಿಸಿದ್ದು ಸೂಕ್ತ ಎಂದು ನಾನು ಲಂಡನ್ ಗೆ ಹೋಗಿದ್ದಾಗ ಅಲ್ಲಿರುವ ಸ್ನೇಹಿತರಿಗೆ ಹೇಳಿದ್ದೆ.

"ಆದರೆ ಬಿಜೆಪಿಯವರಿಗೆ ಬಸವಣ್ಣನ ತತ್ವಗಳು ಬೇಕಿಲ್ಲ. ಬಸವಣ್ಣನ ಸಿದ್ದಾಂತ ಪಾಲನೆ ಮಾಡದ ಪಕ್ಷದಲ್ಲಿ‌ ಬಿಎಸ್ ವೈ ಶೆಟ್ಟರ್ ಹೇಗೆ ಇರುತ್ತಾರೋ. ಶೀಘ್ರದಲ್ಲೇ ಅವರು ರಾಜೀನಾಮೆ ನೀಡಿ ಹೊರಗೆ ಬರಬೇಕು" ಎಂದು ಡಾ ಪರಮೇಶ್ವರ್ ಅವರು ಹೇಳಿದರು. 

ಮಲ್ಲಿಖಾರ್ಜುನ್ ಖರ್ಗೆಯವರು ಯಾವೊತ್ತೊ ಸಿಎಂ ಆಗಬೇಕಿತ್ತೆಂಬ ಸಿಎಂ ಎಚ್‌ಡಿಕೆ ಅವರ ಹೇಳಿಕೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತ ಅವರು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಧುರೀಣರು. ಕಾಂಗ್ರೆಸ್ ಪಕ್ಷದಲ್ಲಿ ಅವರಷ್ಟು ಹಿರಿತನ ಹೊಂದಿದ ಮತ್ತು ಹಲವು ವರ್ಷ ದುಡಿದವರು ಬಹಳ ಕಡಿಮೆ. ಬಹಳಷ್ಟು ಬಾರಿ ಅವರಿಗೆ ಇಂತಹ ಅವಕಾಶಗಳು ತಪ್ಪಿವೆ ಹಾಗಾಗಿ ಸಿಎಂ ಕುಮಾರಸ್ವಾಮಿ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. 

ಸಿಎಂಗೆ ಖರ್ಗೆ ಮೇಲೆ ಪ್ರೀತಿ ಇದ್ದರೆ ಸ್ಥಾನ ಬಿಟ್ಟುಕೊಡಲಿ ಎನ್ನುವ ಯಡಿಯೂರಪ್ಪ ಹೇಳಿಕೆಯನ್ನು ಉದ್ದೇಶಿಸಿ ಡಾ. ಪರಮೇಶ್ವರ್ ಅವರು ಯಡಿಯೂರಪ್ಪನವರಿಂದ ಹೇಳಿಸಿಕೊಂಡು ನಾವು ಯಾರನ್ನೂ ಮುಖ್ಯಮಂತ್ರಿ ಮಾಡಬೇಕಿಲ್ಲ. ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿರುಗೇಟು ನೀಡಿದರು. 

ಶಾಸಕರನ್ನು ಖರೀದಿ ಮಾಡುವಂತ ಕೆಟ್ಟ ಆಚರಣೆಯನ್ನು ಸೃಷ್ಟಿಸಿದವರು ಬಿ ಎಸ್ ಯಡಿಯೂರಪ್ಪನವರು. ಬಿಎಸ್ ವೈ ಸಿಎಂ ಅಗಲು ತುಂಬಾ ಅವಸರದಲ್ಲಿದ್ದಾರೆ. 24 ಮೇ ನಂತರ ಸಿಎಂ ಆಗುವ ಆತುರದಲ್ಲಿದ್ದಾರೆ. ಈ ಕನಸು ನನಸಾಗದು. ಈ‌ ಮೈತ್ರಿ ಸರಕಾರ ಐದು ವರ್ಷ ಇರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)