varthabharthi

ರಾಷ್ಟ್ರೀಯ

ಬಹುಕೋಟಿ ವಂಚನೆ ಪ್ರಕರಣ: ಹೀರಾ ಗ್ರೂಪ್ ನ ನೌಹೇರಾ ಶೇಖ್ 7 ದಿನ ಈಡಿ ಕಸ್ಟಡಿಗೆ

ವಾರ್ತಾ ಭಾರತಿ : 16 May, 2019

ಹೊಸದಿಲ್ಲಿ, ಮೇ 16: ಹೀರಾ ಗ್ರೂಪ್ ನಿರ್ದೇಶಕಿ ನೌಹೇರಾ ಶೇಖ್, ಮೊಲ್ಲಿ ಥಾಮಸ್ ಮತ್ತು ಬಿಜು ಥಾಮಸ್ ಅವರನ್ನು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ 2002 ಅನ್ವಯ ಏಳು ದಿನಗಳ ಕಾಲ ತನ್ನ ವಶಕ್ಕೆ ಪಡೆದುಕೊಂಡಿದೆ. ಆಕೆಯ ಹೈದರಾಬಾದ್ ಮೂಲದ ಸಂಸ್ಥೆ ವಂಚನಾ ಜಾಲವೊಂದನ್ನು ನಡೆಸುತ್ತಿತ್ತು ಎಂಬ ಆರೋಪವಿದೆ.

ಆರೋಪಿಗಳನ್ನು  ಹೈದರಾಬಾದ್ ನ ಮೆಟ್ರೋಪಾಲಿಟನ್ ಸೆಶನ್ಸ್ ನ್ಯಾಯಾಲಯ ಹಾಗೂ ಎಂಎಸ್‍ ಜೆ ನ್ಯಾಯಾಲಯದೆದುರು  ಹಾಜರುಪಡಿಸಲಾಗಿದ್ದು, ಮೇ 15ರಂದು ಅನ್ವಯವಾಗುವಂತೆ ಮೂವರನ್ನೂ ಏಳು ದಿನಗಳ ಕಸ್ಟಡಿಗೆ ವಹಿಸಲಾಗಿದೆ.

ಮೂವರು ಆರೋಪಿಗಳ ವಿರುದ್ಧ ಹಾಗೂ ಹೀರಾ ಸಮೂಹ ಕಂಪೆನಿಗಳ ವಿರುದ್ಧ ತೆಲಂಗಾಣ ಪೊಲೀಸರು ದಾಖಲಿಸಿದ ಎಫ್‍ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಗೋಲ್ಡ್ ಟ್ರೇಡಿಂಗ್ ಮೂಲಕ ಶೇ. 36ರಷ್ಟು ಹೆಚ್ಚು ಗಳಿಕೆಯ ಆಮಿಷ ತೋರಿಸಿ ಲಕ್ಷಗಟ್ಟಲೆ ಜನರಿಂದ ವಂಚನೆಯಿಂದ ಹೂಡಿಕೆಗಳನ್ನು ಹೀರಾ ಗ್ರೂಪ್ ಪಡೆದಿತ್ತೆಂಬ ಆರೋಪವಿದೆ. ಆದರೆ ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭವನ್ನೂ ಗ್ರಾಹಕರಿಗೆ ಕಂಪೆನಿ ನೀಡಲು ವಿಫಲವಾದ ನಂತರ ದೂರುಗಳು ದಾಖಲಾಗಿದ್ದವು.

ಕಂಪೆನಿ ರೂ 3,000 ಕೋಟಿಗೂ ಅಧಿಕ ಹಣವನ್ನು 1,72,114 ಹೂಡಿಕೆದಾರರಿಂದ  ಸಂಗ್ರಹಿಸಿತ್ತು  ಎಂದು ತನಿಖೆಯ ವೇಳೆ ತಿಳಿದು ಬಂದಿತ್ತು. ಕಂಪೆನಿಯಿಂದ  ಮೋಸ ಹೋದವರ ಪೈಕಿ ಹೈದರಾಬಾದ್, ತೆಲಂಗಾಣ, ಕೇರಳ, ಹಾಗೂ ಸೌದಿ, ಸಂಯುಕ್ತ ಅರಬ್ ಸಂಸ್ಥಾನ ಮತ್ತು ಮಧ್ಯ ಪೂರ್ವ ದೇಶಗಳಲ್ಲಿರುವ ಅನಿವಾಸಿ ಭಾರತೀಯರೂ ಸೇರಿದ್ದರು.

ಹೀರಾ ಸಮೂಹದಡಿ ಶೇಖ್ 24 ಸಂಸ್ಥೆಗಳನ್ನು ಸ್ಥಾಪಿಸಿ 182 ಖಾತೆಗಳನ್ನು ದೇಶದ ವಿವಿಧ ಭಾಗಗಳ ಬ್ಯಾಂಕುಗಳಲ್ಲಿ ತೆರೆದಿದ್ದಳೆಂದು ತನಿಖೆಯ ವೇಳೆ ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)