varthabharthi

ಕರ್ನಾಟಕ

ಪ್ರಾಕೃತಿಕ ವಿಕೋಪದಿಂದ ಬೆಳೆ ನಾಶ

34 ಸಾವಿರ ಫಲಾನುಭವಿಗಳಿಗೆ 35 ಕೋಟಿ ರೂ.ಪರಿಹಾರ ವಿತರಣೆ: ಕೊಡಗು ಜಿಲ್ಲಾಧಿಕಾರಿ ಸ್ಪಷ್ಟನೆ

ವಾರ್ತಾ ಭಾರತಿ : 16 May, 2019

ಮಡಿಕೇರಿ, ಮೇ 16: ಪ್ರಾಕೃತಿಕ ವಿಕೋಪದಿಂದಾಗಿ ಉಂಟಾದ ಬೆಳೆ ನಾಶ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಕೊಡಗಿನ 34 ಸಾವಿರ ಫಲಾನುಭವಿಗಳ ಖಾತೆಗೆ 35 ಕೋಟಿ ರೂ. ಪರಿಹಾರ ಧನವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಉಂಟಾದ ಬೆಳೆನಾಶಕ್ಕೆ ಪರಿಹಾರ ನೀಡುವ ಸಂದರ್ಭದಲ್ಲಿ ತಾರತಮ್ಯ ನೀತಿ ಅನುಸರಿಸಿ ಅರ್ಹರಲ್ಲದವರಿಗೂ ಪರಿಹಾರ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದ್ದು, ಈ ರೀತಿಯ ಯಾವುದೇ ತಪ್ಪುಗಳು ನಡೆದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

3 ಸಾವಿರ ಫಲಾನುಭವಿಗಳಿಗೆ ಭಾಗಶಃ ಪರಿಹಾರ ನೀಡಿದ್ದು, ಉಳಿದ ಮೊತ್ತವನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಾವೊಬ್ಬ ಫಲಾನುಭವಿಯೂ ಪರಿಹಾರದಿಂದ ವಂಚಿತರಾಗದಿರಲು ಜಿಲ್ಲಾಡಳಿತವು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಯಾವುದಾದರೂ ರೈತರಿಗೆ ಪರಿಹಾರ ಲಭಿಸದೇ ಇದ್ದಲ್ಲಿ ತಾವು ನೇರವಾಗಿ ದಾಖಲೆಗಳೊಂದಿಗೆ ನನ್ನ ಕಚೇರಿಯನ್ನು ಸಂಪರ್ಕಿಸಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮಾನದಂಡ ಅನುಸರಿಸಲಾಗಿದೆ
ಕೇಂದ್ರದ ಮಾನದಂಡದಂತೆ ಕಾಫಿ, ಸಾಂಬಾರ ಬೆಳೆ ಹಾನಿಗೆ ಸಂಬಂಧಿಸಿದಂತೆ ಹೆಕ್ಟೇರಿಗೆ 18 ಸಾವಿರ ರೂ.ನಂತೆ ಗರಿಷ್ಠ 2 ಹೆಕ್ಟೇರ್ ವರೆಗೆ, ಕೃಷಿ ಭೂಮಿಯಲ್ಲಿನ ಹೂಳನ್ನು ಎತ್ತುವುದಕ್ಕೆ ಹೆಕ್ಟೇರಿಗೆ 12 ಸಾವಿರ ರೂ.ನಂತೆ ಗರಿಷ್ಠ 2 ಹೆಕ್ಟೇರ್ ವರೆಗೆ, ಭೂಕುಸಿತದಿಂದಾಗಿ ಜಮೀನು ನಾಶವಾದ ಪ್ರಕರಣಗಳಲ್ಲಿ ಹೆಕ್ಟೇರಿಗೆ 37,500 ರಂತೆ ಗರಿಷ್ಠ 2 ಹೆಕ್ಟೇರ್ ವರೆಗೆ ಪರಿಹಾರ ನೀಡಲು ಅವಕಾಶವಿದ್ದು, ಅದರಂತೆ ಪರಿಹಾರವನ್ನು ಪಾವತಿ ಮಾಡಲಾಗಿದೆ.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಜಂಟಿ ಸರ್ವೇ ಕೈಗೊಂಡು ಪ್ರವಾಹ ಹಾಗೂ ಭೂಕುಸಿತದಿಂದ ಬೆಳೆ ಹಾನಿ, ಜಮೀನು ನಾಶ ಹಾಗೂ ಜಮೀನುಗಳಲ್ಲಿ ಹೂಳು ತುಂಬಿರುವ ಪ್ರಮಾಣವನ್ನು ಕಂಡುಹಿಡಿದು ದೃಢೀಕರಿಸಿರುತ್ತಾರೆ. ಸದರಿ ಜಂಟಿ ಸರ್ವೇಯ ಆಧಾರದ ಮೇಲೆಯೇ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಸದರಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ, ತಾರತಮ್ಯ ಮಾಡುವ ಅವಕಾಶ ಇರುವುದಿಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಪರಿಹಾರ ವಿತರಣೆಯಲ್ಲಿ ಸಣ್ಣ ಅಥವಾ ದೊಡ್ಡ ಹಿಡುವಳಿ ಹೊಂದಿರುವ ರೈತರ ನಡುವೆ ಯಾವುದೇ ರೀತಿಯ ತಾರತಮ್ಯ ನೀತಿ ಅನುಸರಿಸಿಲ್ಲ. ಮಾನದಂಡದಲ್ಲಿನ ಗರಿಷ್ಠ ಕ್ಷೇತ್ರದ (2 ಹೆಕ್ಟೇರ್ ವರೆಗೆ) ಹಾನಿಗೆ ಮಾತ್ರ ಪರಿಹಾರ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸುಳ್ಳುಸುದ್ದಿಗೆ ಕಿವಿಗೊಡಬೇಡಿ
ಯಾವುದೇ ಸುಳ್ಳುಸುದ್ದಿಗಳಿಗೆ ಕಿವಿಗೊಡದೆ, ಯಾವುದಾದರು ಸಂದೇಹಗಳಿದ್ದಲ್ಲಿ ನೇರವಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಬೆಳೆ ಪರಿಹಾರ ಪಾವತಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ವೆಬ್ ಸೈಟ್ ನಲ್ಲಿ ಪ್ರಚುರ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)