varthabharthi

ಕರ್ನಾಟಕ

ಮಡಿಕೇರಿ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ; ಅಗತ್ಯ ಕ್ರಮಕ್ಕೆ ಸೂಚನೆ

ವಾರ್ತಾ ಭಾರತಿ : 16 May, 2019

ಮಡಿಕೇರಿ, ಮೇ 16: ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿನ ಮಡಿಕೇರಿ ಜೋಡುಪಾಲ ರಸ್ತೆಯಲ್ಲಿ ಅತಿವೃಷ್ಟಿಗೆ ಹಾನಿಯಾದ ರಸ್ತೆಯ ಶಾಶ್ವತ ಕಾಮಗಾರಿಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ. ರಸ್ತೆ ಹಾನಿಗೊಳಗಾದ ಪ್ರದೇಶದಲ್ಲಿ 300 ಮೀಟರ್ ವಿಸ್ತಾರದ 30 ಅಡಿ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿಗಳೊಂದಿಗೆ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗಾಳಿಬೀಡು ಪಂಚಾಯತ್ ವ್ಯಾಪ್ತಿಯ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಪೂರ್ಣ, ಭಾಗಶಃ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿದರು. ಹಾಗೆಯೇ ರಸ್ತೆ, ಕುಡಿಯುವ ನೀರು, ಮನೆ ಪರಿಹಾರ, ಬೆಳೆ ಪರಿಹಾರ, ಮನೆ ಬಾಡಿಗೆ ಹಾಗೂ ಇನ್ನಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಪರಿಹಾರ ವಂಚಿತರ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸ್ಥಳದಲ್ಲಿದ್ದ ನೊಡೆಲ್ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಇದೇ ಸಂದರ್ಭ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರೊಂದಿಗೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಮತ್ತು ಕುಂದ ಹಾಡಿಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ತಾ.ಪಂ.ಇಒ ಜಯಣ್ಣ ಇತರರು ಹಾಜರಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಮದೆ ಮತ್ತು ಜೋಡುಪಾಲ ಗ್ರಾಮಗಳಲ್ಲಿ ಮುಂಬರುವ ಮಳೆಗಾಲದಲ್ಲಿ ನೀರಿನ ಹರಿವಿಗೆ ಅನುಕೂಲವಾಗುವಂತೆ 2018ರ ಪ್ರಕೃತಿ ವಿಕೋಪದಿಂದಾಗಿ ಹೊಳೆ ಮತ್ತು ತೋಡುಗಳಲ್ಲಿ ಬಿದ್ದಿರುವಂತಹ ಮರಗಳನ್ನು ತೆರವು ಮಾಡುವ ಕಾರ್ಯವು ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)