varthabharthi

ಕರ್ನಾಟಕ

ದಲಿತ ಮುಖ್ಯಮಂತ್ರಿ ವಿಚಾರ ಅಪ್ರಸ್ತುತ: ಕೆ.ಎಚ್.ಮುನಿಯಪ್ಪ

ವಾರ್ತಾ ಭಾರತಿ : 16 May, 2019

ಹುಬ್ಬಳ್ಳಿ, ಮೇ 16: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನದಿಂದ ಹಲವು ಬಾರಿ ವಂಚಿತರಾಗಿರುವುದು ಸತ್ಯ. ಆದರೆ, ಈಗಿನ ಪರಿಸ್ಥಿತಿಯಲ್ಲಿ ದಲಿತ ಮುಖ್ಯಮಂತ್ರಿಯ ವಿಚಾರವನ್ನು ಚರ್ಚಿಸುವುದು ಅಪ್ರಸ್ತುತ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೆ ಅನ್ಯಾಯವಾಗಿರುವುದು ನಿಜ. ಅದೇ ರೀತಿ ಕೇಂದ್ರದಲ್ಲಿಯೂ ಬಾಬು ಜಗಜೀವನ್ ರಾಮ್ ಪ್ರಧಾನಿ ಸ್ಥಾನದಿಂದ ವಂಚಿತರಾಗಿದ್ದರು. ಆದರೆ, ಈ ವಿಷಯಗಳನ್ನು ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ರಚಿಸುವಾಗ ಕುಮಾರಸ್ವಾಮಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಉಭಯ ಪಕ್ಷಗಳ ವರಿಷ್ಠರು ತೀರ್ಮಾನ ಮಾಡಿ, ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ತೀರ್ಮಾನವನ್ನು ನಾವು ಶಿಸ್ತಿನಿಂದ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಅವರು ಹೇಳಿದರು.

ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸರಕಾರ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾಯಕರು ಗೊಂದಲಮಯ ಹೇಳಿಕೆಗಳನ್ನು ನೀಡಿ, ವಿವಾದ ಉಂಟು ಮಾಡುವ ಅಗತ್ಯವಿಲ್ಲ. ನಾವೆಲ್ಲ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವಾಗ ಈಗ ಅನಗತ್ಯವಾದ ಮಾತುಗಳನ್ನು ಆಡುತ್ತಿರುವುದು ಏಕೆ ಎಂದು ಮುನಿಯಪ್ಪ ಪ್ರಶ್ನಿಸಿದರು.

ಒಳ್ಳೆಯ ಕೆಲಸವನ್ನು ಯಾರೇ ಮಾಡಿದ್ದರೂ ಅದು ಜನರ ಮನಸ್ಸಿನಲ್ಲಿ ಇರುತ್ತದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಒಪ್ಪಿಕೊಂಡು ನಾವು ಕೆಲಸ ಮಾಡಬೇಕು. ಆದರೆ, ಕೆಲವರಿಗೆ ಈ ವಿಚಾರ ಅರ್ಥವಾಗದಿರುವುದು ಬೇಸರದ ಸಂಗತಿ ಎಂದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಶಾಸಕರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)