varthabharthi

ಕರಾವಳಿ

‘ಕೊರಗರ ಡೋಲು ಕಲೆಗೆ ರಾಷ್ಟ್ರೀಯಮಟ್ಟದಲ್ಲಿ ಮಿಂಚಲು ವೇದಿಕೆ ಅಗತ್ಯ’

ವಾರ್ತಾ ಭಾರತಿ : 16 May, 2019
ಚಿತ್ರ-ವರದಿ: ಬಿ.ಬಿ.ಶೆಟ್ಟಿಗಾರ್

ಮಾಳ (ಕಾರ್ಕಳ), ಮೇ 16: ಕರಾವಳಿಯ ಮೂಲನಿವಾಸಿಗಳಾದ ಕೊರಗರ ಡೋಲು ವಾದನ ಕಲೆ ಜಾನಪದವೆನಿಸಿದರೂ, ಯಾವುದೇ ಶಾಸ್ತ್ರೀಯ ಕಲೆಗೆ ಕಡಿಮೆ ಇಲ್ಲ. ಆದರೆ ಈಗಲೂ ಮುಖ್ಯವಾಹಿನಿಯಿಂದ ದೂರವೇ ಉಳಿದಿರುವ ಕೊರಗರ ಜೀವನ ಕ್ರಮದಿಂದಾಗಿ ಅವರ ಕಲೆ, ಅವರ ಸಂಪ್ರದಾಯ ಈಗಲೂ ಬಹುಸಂಖ್ಯಾತರಿಗೆ ಅಸ್ಪಶ್ಯವಾಗಿಯೇ ಉಳಿದಿದೆ.

ಈ ನಿಟ್ಟಿನಲ್ಲಿ ಕೊರಗ ಡೋಲು ವಾದನ ಕಲೆಗೆ ಸಮಾಜದ ಮುಖ್ಯ ವಾಹಿನಿಯಲ್ಲೊಂದು ಶಾಶ್ವತ ಸ್ಥಾನವನ್ನು ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಯ ಪ್ರಾಚೀ ಫೌಂಡೇಷನ್, ಉಡುಪಿ ಜಿಲ್ಲೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯ ಸಹಕಾರದೊಂದಿಗೆ ಕಾರ್ಕಳ ತಾಲೂಕು ಮಾಳ ಗ್ರಾಪಂನ ಮಣ್ಣಪಾಪು ಮನೆಯ ಪ್ರಕೃತಿ ಮಡಿಲಿನ ನಡುವೆ ಮೂರು ದಿನಗಳ ಕಾಲ ಆಯೋಜಿಸಿದ ‘ತಳ-ತಾಳ’ ಕೊರಗರ ಡೋಲು ಕಾರ್ಯಾಗಾರ ಕಿರು ಪ್ರಯತ್ನವೆನಿಸಿದರೂ ಅಗಾಧ ಪರಿಣಾಮ ಬೀರುವ ಸಾಧ್ಯತೆಯನ್ನು ತೋರಿಸಿ ಕೊಟ್ಟಿತು.

ಕೊರಗರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಡೋಲು ವಾದನಕ್ಕೆ ಈವರೆಗೆ ಯಾವುದೇ ಚೌಕಟ್ಟಿನ ಪರಿಧಿ ಇರಲಿಲ್ಲ. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಡಿನ ಖ್ಯಾತನಾಮ ಸಂಗೀತಕಾರ ಪ್ರವೀಣ್ ಡಿ.ರಾವ್ ನೇತೃತ್ವದ ತಂಡ ಅದಕ್ಕೊಂದು ಸಮಯದ ಮಿತಿಯನ್ನು ಹೇರಿ, ಆ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಕ್ಕೆ ಬೇಕಾದ ಅಡಿಪಾಯವನ್ನು ಹಾಕಿಕೊಟ್ಟಿದೆ.

ಕುಂದಾಪುರ, ಕುಂಭಾಶಿ, ಬಾರಕೂರು, ವಂಡಾರು ಹಾಗೂ ಇತರೆಡೆಗಳಿಂದ ಆಗಮಿಸಿದ 15 ಮಂದಿ ಕೊರಗ ಜನಾಂಗದ ಯುವ ಕಲಾವಿದರು ಮೂರು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ, ಹಿರಿಯರು ಹೇಳಿಕೊಟ್ಟ ಡೋಲು ಬಾರಿಸುವ ಕಲೆಯನ್ನು ಅದರ ಮೂಲಸ್ವರೂಪಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ಶಾಸ್ತ್ರೀಯವಾದ ಚೌಕಟ್ಟಿನೊಳಗೆ ಪ್ರದರ್ಶಿಸುವ ಸಾಧ್ಯತೆಯನ್ನು ಇಲ್ಲಿ ಕಂಡುಕೊಂಡರು. ಮುಂದೆ ಇದನ್ನು ಇನ್ನಷ್ಟು ಸುಧಾರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡ ಕೊರಗ ಯುವಕರು ಹೊಸ ಹುರುಪಿ ನೊಂದಿಗೆ ನುಡಿಸಿದ ಡೋಲು ವಾದನದ ಇಂಪು, ನಾಲ್ಕು ಸುತ್ತಲೂ ದಟ್ಟ ಕಾಡುಗಳಿಂದ ಆವರಿಸಲ್ಪಟ್ಟ ಹಚ್ಚಹಸಿರಿನ ಪ್ರಕೃತಿ ಮಡಿಲಲ್ಲಿ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ಬೆರತು ಹೊಸ ಅನುಭವಕ್ಕೆ ಕಾರಣವಾಯಿತು.
ಮಾಳದ ಮಣ್ಣಪಾಪು ಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದವರು ಕರಾವಳಿಯ ಮೂಲನಿವಾಸಿಗಳ ಈ ಕಲೆ, ಇಲ್ಲಿಗೆ ಸೀಮಿತವಾಗುಳಿಯದೇ, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸೂಕ್ತ ವೇದಿಕೆಗಳ ಅಗತ್ಯವನ್ನು ಪ್ರತಿಪಾದಿಸಿದರು.

ಮಾಳದ ಮಣ್ಣಪಾಪು ಮನೆಯಲ್ಲಿ ನಡೆದ ಸಮಾರೋಪ ಸಮಾರಂದಲ್ಲಿಅತಿಥಿಗಳಾಗಿಾಗವಹಿಸಿದವರು ಕರಾವಳಿಯ ಮೂಲನಿವಾಸಿಗಳ ಈ ಕಲೆ, ಇಲ್ಲಿಗೆ ಸೀಮಿತವಾಗುಳಿಯದೇ, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸೂಕ್ತ ವೇದಿಕೆಗಳ ಅಗತ್ಯವನ್ನು ಪ್ರತಿಪಾದಿಸಿದರು. ನಶಿಸುತ್ತಿರುವ ಕೊರಗ ಸಮುದಾಯದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ದಾಖಲಿಸುವುದರೊಂದಿಗೆ, ಮುಖ್ಯವಾಹಿನಿಯಲ್ಲೂ ಅದಕ್ಕೊಂದು ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಆಯೋಜಕರಲ್ಲೊಬ್ಬರಾದ ರಂಗಕರ್ಮಿ ನಂದಕಿಶೋರ್ ನುಡಿದರು.

ನಶಿಸುತ್ತಿರುವ ಕೊರಗ ಸಮುದಾಯದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ದಾಖಲಿಸುವುದರೊಂದಿಗೆ, ಮುಖ್ಯವಾಹಿನಿಯಲ್ಲೂ ಅದಕ್ಕೊಂದು ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಆಯೋಜಕರಲ್ಲೊಬ್ಬರಾದ ರಂಗಕರ್ಮಿ ನಂದಕಿಶೋರ್ ನುಡಿದರು.

ನಿಧಾನವಾಗಿ ನಶಿಸುತ್ತಿರುವ ಕೊರಗ ಸಮುದಾಯದ ಭಾಷೆ ಮತ್ತು ಕಲೆಗೆ ಉತ್ತಮ ವೇದಿಕೆ ಸಿಕ್ಕರೆ ಕೊರಗ ಸಮುದಾಯದ ಕಲಾ ಪ್ರಕಾರ ಇತರ ಕಲಾ ಪ್ರಕಾರಗಳ ಜೊತೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಪ್ರವೀಣ್ ಡಿ.ರಾವ್, ಪ್ರಮಥ್ ಕಿರಣ್ ಹಾಗೂ ವಾರಿಜಾಕ್ಷಿ ಅಭಿಪ್ರಾಯಪಟ್ಟರು. ಶಿಬಿರಾರ್ಥಿಗಳಾಗಿ ಭಾಗವಹಿಸಿದ 15 ಮಂದಿ ಕೊರಗ ಯುವ ಕಲಾವಿದರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಕೊರಗರು ತಮ್ಮದೇ ಆದ ತಂಡಗಳನ್ನು ರಚಿಸಿ, ಹಿರಿಯರಿಂದ ಬಂದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಿಕೊಳ್ಳುತ್ತಿದ್ದು, ಮೂಲ ಕಲೆಗೆ ಯಾವುದೇ ಧಕ್ಕೆ ಬಾರದಂತೆ ಚೌಕಟ್ಟನ್ನು ರಚಿಸಿ, ಮುಂದಿನ ಪೀಳಿಗೆಗೆ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಮುದಾಯದ ಕಲಾ ಪ್ರಕಾರಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಳ್ಳುವಂತಾಗಬೇಕು. ಈ ಮೂಲಕ ಕೊರಗರ ಡೋಲು ಕೇವಲ ದೇವಸ್ಥಾನದ ಹೊರಗೆ ಮಾತ್ರ ಪ್ರದರ್ಶಿಸಲು ಅಲ್ಲ, ಅದನ್ನು ಇತರ ಕಲೆಗಳಂತೆ ವೇದಿಕೆಯಲ್ಲಿ ಪ್ರದರ್ಶಿಸಲು ಸಾಧ್ಯ ಎಂಬುದನ್ನು ಹೊರ ಜಗತ್ತಿಗೆ ತೋರಿಸಿ ಕೊಡುವಂತಾಗಬೇಕು ಎಂದು ಪ್ರವೀಣ್ ಆಶಯ ವ್ಯಕ್ತಪಡಿಸಿದರು.

3 ದಿನಗಳ ಕಾಲ ನಡೆದ ತರಬೇತಿಯಲ್ಲಿ ಸಂಗೀತ ಸಂಯೋಜಕ ಪ್ರವೀಣ್ ಡಿ ರಾವ್ 15 ಕೊರಗ ಯುವಕರಿಗೆ ತರಬೇತಿ ನೀಡಿದ್ದು, ಪಾರಂಪರಿಕ ಕಲೆಗೆ ಒಂದು ಚೌಕಟ್ಟು ರಚಿಸಿ, ಲಿಸುವ ಪ್ರಯತ್ನ ನಡೆಸಲಾಯಿತು.ಇತರ ಕಲಾ ಪ್ರಕಾರಗಳಂತೆ ವೇದಿಕೆಯಲ್ಲಿ ಕೊರಗರ ಡೋಲು ನಾದ ಪ್ರದರ್ಶಿಸಲು ಅವಕಾಶ ಸಿಗುವಂತಾಗಬೇಕು ಎಂಬುದು ಕೊರಗ ಸಮುದಾಯದ ಆಶಯ ಎಂದು ಕೊರಗ ಮುಖಂಡರಾದ ಗಣೇಶ್ ಕುಂಭಾಶಿ ಹಾಗೂ ಗಣೇಶ್ ಬಾರಕೂರು ನುಡಿದರು.

ಕೊರಗರ ಡೋಲು ನಾದದ ನುಡಿ ಸಾಣಿಕೆಯಲ್ಲಿ ಕಠಿಣತೆ ಇದ್ದು ಪ್ರಬುದ್ಧತೆ ಯನ್ನು ಹೊಂದಿದೆ. ಈ ಕಲೆಯನ್ನು ಇನ್ನಷ್ಟು ಸುಭದ್ರಹಗೊಳಿಸಬೇಕು. ಈ ಮೂಲಕ ಕೊರಗರ ಡೋಲು ವಾದನವನ್ನು ಹೊರ ಜಗತ್ತಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಕೇಳಿಬಂತು. ಈ ತರಬೇತಿ ಕೊರಗ ಸಮುದಾಯದ ಸಾಂಸ್ಕೃತಿಕ ಕಲಾ ಪ್ರಕಾರಗಳ ದಾಖಲಿಸುವಿಕೆಗೆ ಮುನ್ನುಡಿ ಬರೆದಿದ್ದು, ಗುರುವಾರ ಮಣ್ಣಪಾಪುವಿನ ಪ್ರಕೃತಿ ಮಧ್ಯೆ ಪ್ರತಿಧ್ವನಿಸಿದ ಡೋಲು ನಾದ ಇದರ ಸಾರ್ಥಕತೆಗೆ ನಾಂದಿಯಾಯಿತು.

ಕಾರ್ಯಕ್ರಮ ಸಂಯೋಜಕರಾದ ಪ್ರಾಚಿ ಫೌಂಡೇಶನ್‌ನ ಪುರುಷೋತ್ತಮ ಅಡ್ವೆ, ಸಂಗೀತ ತಜ್ಞರಾದ ವಾರಿಜಶ್ರೀ, ಪ್ರಮಥ್ ಕಿರಣ್, ಐಟಿಡಿಪಿಯ ವ್ಯವಸ್ಥಾಪಕ ವಿಶ್ವನಾಥ್, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಕುಮಾರ್, ಕೊರಗ ಸಮುದಾಯದ ಗಣೇಶ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)