varthabharthi

ನಿಮ್ಮ ಅಂಕಣ

ಖಂಡನೀಯ

ವಾರ್ತಾ ಭಾರತಿ : 16 May, 2019
-ರಿಯಾಝ್ ಅಹ್ಮದ್, ರೋಣ

ಮಾನ್ಯರೇ,

ನಾಥೂರಾಮ್ ಗೋಡ್ಸೆಯನ್ನು ‘‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ’’ ಎಂದು ಹೇಳಿಕೆ ನೀಡಿದ ಎಂಎನ್‌ಎಂ ಸಂಸ್ಥಾಪಕ ಕಮಲ್ ಹಾಸನ್ ಅವರ ನಾಲಿಗೆ ಕತ್ತರಿಸಬೇಕು ಎಂದು ತಮಿಳುನಾಡಿನ ಸಚಿವ ಟಿ.ಆರ್. ರಾಜೆಂದ್ರ ಬಾಲಾಜಿ ಅವರ ಹೇಳಿಕೆ ನಿಜಕ್ಕೂ ಖಂಡನೀಯವಾದುದು. ಕಾನೂನು ವ್ಯವಸ್ಥೆಯು ತಕ್ಷಣ ಇವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಸಮಾಜವನ್ನು ಕಟ್ಟಿಬೆಳೆಸುವಲ್ಲಿ ರಾಜಕಾರಣಿಗಳು ತಮ್ಮದೇ ಆದ ಪಾತ್ರ ನಿರ್ವಹಿಸುತ್ತಾರೆ ಎಂದು ಇಲ್ಲಿಯ ಸಾಮಾನ್ಯ ಜನರು ನಂಬಿ ಇವರನ್ನು ಆರಿಸಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸುತ್ತಾರೆ. ಅವರ ಪ್ರತಿಯೊಂದು ನಡೆಯೂ ಇತರರಿಗೆ ಮಾದರಿಯಾಗಿರಬೇಕು, ತಮ್ಮ ನಡೆನುಡಿಗಳಿಂದ ಯಾರಿಗೂ ಚ್ಯುತಿ ಬರದ ಹಾಗೆ ಈ ರಾಜಕಾರಣಿಗಳು ಬದುಕಬೇಕು ಎಂಬುವುದು ಮುಗ್ಧ ಜನರ ಆಶಯವಾಗಿರುತ್ತದೆ. ಆದರೆ ಇಂದು ದುರದೃಷ್ಟವಶಾತ್ ಹೊಡಿ ಬಡಿ ಕಡಿ ಸಂಸ್ಕೃತಿಯನ್ನು ಬೆಂಬಲಿಸುವವರು ಇಂತಹ ಪವಿತ್ರ ಸ್ಥಾನವನ್ನು ಅಲಂಕರಿಸುತ್ತಿರುವುದು ದುರಂತವೇ ಸರಿ. ಇಲ್ಲಿ ಕೆಲವರ ವಾಸ್ತವಿಕ ಮಾತುಗಳು ನಮ್ಮ ಭಾವನೆಗಳಿಗೆ ವಿರುದ್ಧವಾಗಿಬರಹುದು ಅಥವಾ ಅಂತಹ ಸತ್ಯ ಅರಗಿಸಿಕೊಳ್ಳಲು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ಅದನ್ನು ಎದುರಿಸುವ ರೀತಿ ಯಾವುದು ಎಂಬ ಸಾಮಾನ್ಯ ಜ್ಞಾನವಾದರೂ ಈ ರಾಜಕಾರಣಿಗಳಿಗೆ ಇರಬೇಕಾದುದು ಅತ್ಯಗತ್ಯ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂವಿಧಾನ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶವನ್ನು ನೀಡಿದೆ. ಅದಕ್ಕೆಂದೇ ಇಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ. ಪ್ರಕರಣವನ್ನು ಗಮನಿಸಿ ತೀರ್ಪು ನೀಡುವ ನ್ಯಾಯಾಧೀಶರಿದ್ದಾರೆ. ಇದನ್ನೆಲ್ಲ ಬಿಟ್ಟು ಸಚಿವರು ನೇರವಾಗಿ ನಾಲಿಗೆ ಕತ್ತರಿಸುವ ಬೆದರಿಕೆ ಒಡ್ಡಿರುವುದು ಇಲ್ಲಿಯ ವ್ಯವಸ್ಥೆಗೆ ಹಾಕಿದ ಸವಾಲಾಗಿದೆ. ಇನ್ನು ಕಾನೂನು ವ್ಯವಸ್ಥೆ ಕೈಕಟ್ಟಿಕೊಂಡು ಕುಳಿತುಕೊಳ್ಳದೆ ಸಚಿವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿಗಳು ಒಂದು ವೇಳೆ ತಾವು ಪ್ರಜಾಪ್ರಭುತ್ವದ ನೈಜ ಕಾವಲುಗಾರರಾಗಿದ್ದರೆ ತನ್ನ ಸಚಿವ ಸಂಪುಟದ ಸಹೋದ್ಯೋಗಿಯ ಈ ನಡೆಯನ್ನು ಖಂಡಿಸುತ್ತ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)