varthabharthi

ಆರೋಗ್ಯ

ಈ 10 ಎಚ್ಚರಿಕೆಯ ಸಂಕೇತಗಳು ಕಂಡುಬಂದರೆ ಕೂಡಲೇ ನೇತ್ರತಜ್ಞರನ್ನು ಭೇಟಿಯಾಗಿ

ವಾರ್ತಾ ಭಾರತಿ : 19 May, 2019

ಜನರು ಆಗಾಗ್ಗೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ದುರ್ದೈವವೆಂದರೆ ಹೆಚ್ಚಿನವರು ನೇತ್ರತಜ್ಞರ ಬಳಿಗೆ ಹೋದಾಗ ಅದಾಗಲೇ ತುಂಬ ವಿಳಂಬವಾಗಿರುತ್ತದೆ,ಕಣ್ಣಿಗೆ ಆಗಬೇಕಾಗಿದ್ದ ಹಾನಿ ಆಗಿರುತ್ತದೆ. ನಿಮಗೆ ನಿಮ್ಮ ಕಣ್ಣುಗಳ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ನೀವು ಕಡೆಗಣಿಸಲೇಬಾರದ ಕೆಲವು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ......

► ಕೆಂಪು ಕಣ್ಣುಗಳು

 ಕಣ್ಣುಗಳು ಗುಲಾಬಿ ಅಥವಾ ಕೆಂಪು ವರ್ಣಕ್ಕೆ ತಿರುಗುವುದು ಕಣ್ಣಿನ ಸೋಂಕಿನ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಅಲರ್ಜಿಯಿಂದ ಸೋಂಕಿನವರೆಗೆ,ಗಾಯದಿಂದ ತುರಿಕೆಯವರೆಗೆ ಯಾವುದೇ ಸಮಸ್ಯೆಯು ಕಣ್ಣು ಕೆಂಪುಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಈ ಎಲ್ಲ ಸಮಸ್ಯೆಗಳಿಗೂ ವಿಭಿನ್ನ ಚಿಕಿತ್ಸೆಗಳು ಅಗತ್ಯವಾಗುತ್ತವೆ. ಕಣ್ಣು ಕೆಂಬಣ್ಣಕ್ಕೆ ತಿರುಗಿದಾಗ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಐ ಡ್ರಾಪ್‌ಗಳನ್ನು ಖರೀದಿಸುವುದನ್ನು ನಿವಾರಿಸಿ. ವೈದ್ಯರ ಸಲಹೆಯಿಲ್ಲದೆ ಇಂತಹ ಔಷಧಿಗಳನ್ನು ಬಳಸಿದರೆ ಅವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

► ದಿಢೀರನೆ ದೃಷ್ಟಿ ಮಸುಕಾಗುವುದು

 ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಷ್ಟವಾಗುತ್ತಿದ್ದರೆ ನೀವು ಮಸುಕು ದೃಷ್ಟಿಯಿಂದ ಬಳಲುತ್ತಿರಬಹುದು. ಇದಕ್ಕೆ ಮಯೋಪಿಯಾ ಅಥವಾ ಸಮೀಪದೃಷ್ಟಿ ಮತ್ತು ಹೈಪರಾಪಿಯಾ ಅಥವಾ ದೂರದೃಷ್ಟಿ ಅತ್ಯಂತ ಸಾಮಾನ್ಯ ಕಾರಣಗಳಾಗಿರುತ್ತವೆ. ಈ ಸಮಸ್ಯೆಯನ್ನು ನೇತ್ರತಜ್ಞರಿಂದ ಮಾತ್ರ ಬಗೆಹರಿಸಲು ಸಾಧ್ಯ. ದಿಢೀರನೆ ದೃಷ್ಟಿ ಮಸುಕಾದರೆ ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಇದಕ್ಕೆ ಕನ್ನಡಕದ ನಂಬರ್ ಬದಲಿಸುವ ಸರಳ ಕಾರಣವಿರಬಹುದು ಅಥವಾ ದೃಷ್ಟಿನರಗಳ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಂಬಂಧಿತ ಕಾರಣಗಳೂ ಇರಬಹುದು.

► ಕಣ್ಣುಗಳೆದುರು ದೊಡ್ಡ ಕಪ್ಪು ಚುಕ್ಕಿಗಳು

ಇದು ಸಮೀಪದೃಷ್ಟಿಯಿಂದ ಬಳಲುತ್ತಿರುವವರ ಪಾಲಿಗೆ ಮಹತ್ವದ್ದಾಗಿದೆ. ಇಂತಹವರ ಕಣ್ಣುಗಳೆದುರು ಕೆಲವು ಕಪ್ಪುಚುಕ್ಕಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ ಗೋಚರತೆಯ ಕ್ಷೇತ್ರದಲ್ಲಿ ಕಪ್ಪು ಚುಕ್ಕಿಗಳ ಸಂಖ್ಯೆ ಅಥವಾ ಗಾತ್ರದಲ್ಲಿ ದಿಢೀರ್ ಏರಿಕೆಯಾದರೆ ಅದು ‘ರೆಟಿನಲ್ ಡಿಟ್ಯಾಚ್‌ಮೆಂಟ್(ಅಕ್ಷಿಪಟಲದ ಬೇರ್ಪಡುವಿಕೆ) ಎಂಬ ಗಂಭೀರ ಸಮಸ್ಯೆಯ ಪ್ರಾರಂಭಿಕ ಲಕ್ಷಣವಾಗಿರಬಹುದು. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಮುಖ್ಯವಾಗುತ್ತದೆ.

► ನಿರಂತರ ತಲೆನೋವು

ತಲೆನೋವು ಅತ್ಯಂತ ಸಾಮಾನ್ಯ,ಆದರೆ ಅತ್ಯಂತ ಕಡೆಗಣಿಸಲ್ಪಡುವ ಲಕ್ಷಣವೂ ಆಗಿದೆ. ಸೂಕ್ತ ಸಮಯದಲ್ಲಿ ರೋಗ ನಿರ್ಧಾರವಾಗದಿದ್ದರೆ ತಲೆನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ತಲೆನೋವಿಗೆ ಹಲವಾರು ಕಾರಣಗಳಲ್ಲಿ ಕಣ್ಣಿಗೆ ಒತ್ತಡ,ಆಯಾಸವೂ ಪ್ರಮುಖ ಕಾರಣವಾಗಿರುತ್ತದೆ.

► ಸಮೀಪ ದೃಷ್ಟಿ ಕಡಿಮೆಯಾಗುವಿಕೆ

 ಸಾಮಾನ್ಯವಾಗಿ ವ್ಯಕ್ತಿ 40 ವರ್ಷಗಳನ್ನು ದಾಟಿದರೆ ಸಮೀಪದೃಷ್ಟಿ ದೋಷ ಕಾಡಬಹುದು ಮತ್ತು ಓದಲು ಕನ್ನಡಕಗಳು ಅಗತ್ಯವಾಗಬಹುದು. ಆದರೆ ಯುವಜನರಲ್ಲಿ ಮತ್ತು ವಯಸ್ಸಾದವರಲ್ಲಿ ಸಮೀಪದೃಷ್ಟಿಯು ದಿಢೀರನೆ ಕಡಿಮೆಯಾದರೆ ಅದು ಗೋಚರತೆಯ ಕ್ಷೇತ್ರದ ಕೇಂದ್ರಭಾಗದಲ್ಲಿ ಸಮಸ್ಯೆಯನ್ನು ಸೂಚಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಮತ್ತು ತಕ್ಷಣ ನೇತ್ರತಜ್ಞರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

 ► ಒಂದರ ಬದಲು ಎರಡೆರಡು ಗೋಚರ

ನಿಮ್ಮ ಕಣ್ಣುಗಳು ಮಿದುಳಿನೊಂದಿಗೆ ಗೊಂದಲ ಮಾಡಿಕೊಂಡು ಒಂದರ ಬದಲು ಎರಡೆರಡು ವಸ್ತುಗಳು ಕಂಡು ಬರುತ್ತಿದ್ದರೆ ಅದನ್ನೆಂದೂ ಕಡೆಗಣಿಸಬೇಡಿ.

► ಪ್ರಖರ ಬೆಳಕು ನೋಡಿದಾಗ ಕಣ್ಣುಗಳಲ್ಲಿ ನೋವು

ಕಣ್ಣಿನ ಮೇಲ್ಮೈಯಲ್ಲಿ ತರಚು ಗಾಯದಿಂದ ಹಿಡಿದು ಉರಿಯೂತ ಮತ್ತು ಹೆಚ್ಚಿದ ಕಣ್ಣಿನ ಒತ್ತಡದವರೆಗೆ ಯಾವುದೂ ಪ್ರಖರ ಬೆಳಕಿಗೆ ಅಸಹಿಷ್ಣುತೆಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಪ್ರಖರ ಬೆಳಕನ್ನು ನೀಡಿದಾಗ ಕಣ್ಣುಗಳಲ್ಲಿ ನೋವುಂಟಾಗುತ್ತದೆ. ಇದು ಕಣ್ಣಿನ ಮೇಲ್ಮೈ ಅಥವ ಒಳಭಾಗದಲ್ಲಿ ಹಾನಿಯ ಸಂಕೇತವಾಗಿದ್ದು,ಶೀಘ್ರ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

► ಕಣ್ಣಿನಲ್ಲಿ ರಾಸಾಯನಿಕಗಳು/ಬಾಹ್ಯವಸ್ತುಗಳು

  ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ರಾಸಾಯನಿಕ ಕಣ್ಣುಗಳಿಗೆ ಸಿಡಿದರೆ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುವುದಷ್ಟೇ ಸಾಲುವುದಿಲ್ಲ. ರಾಸಾಯನಿಕಗಳನ್ನು ಸಂಪೂರ್ಣವಾಗಿ ನಿವಾರಿಸಲು ನೇತ್ರತಜ್ಞರನ್ನು ತಕ್ಷಣ ಭೇಟಿಯಾಗಬೇಕು. ಕಣ್ಣುಗಳಿಗೆ ಯಾವುದೇ ಶಾಶ್ವತ ಹಾನಿಯನ್ನು ತಪ್ಪಿಸಲು ಇದು ಅಗತ್ಯವಾಗಿದೆ. ಕಣ್ಣುಗಳಲ್ಲಿ ಏನೋ ಸಿಕ್ಕಿಕೊಂಡಿದೆ ಎಂದು ಭಾಸವಾಗುತ್ತಿದ್ದರೆ ಮತ್ತು ಅದು ತನ್ನಿಂತಾನೆ ಬಗೆಹರಿಯದೆೆ ಸ್ಥಿತಿಯು ಹದಗೆಟ್ಟರೆ ಕಣ್ಣಿನಲ್ಲಿ ಧೂಳು ಮತ್ತು ಗಾಳಿಯಲ್ಲಿನ ಯಾವುದೋ ಸಣ್ಣ ಕಣ ಸಿಕ್ಕಿಕೊಂಡಿದೆ ಎಂದಾಗುತ್ತದೆ. ಇದಕ್ಕೆ ತುರ್ತು ಗಮನದ ಅಗತ್ಯವಿದೆ ಮತ್ತು ನೇತ್ರತಜ್ಞರ ಮೂಲಕ ಅದನ್ನು ಹೊರತೆಗೆಸಬೇಕಾಗುತ್ತದೆ.

► ಗಾಯ

ಕಣ್ಣಿಗೆ ಪೆಟ್ಟು ಬಿದ್ದಾಗ ಸುತ್ತಲೂ ಊದಿಕೊಳ್ಳಬಹುದು ಮತ್ತು ಇದು ತನ್ನಿಂತಾನೇ ಗುಣವಾಗಬಹುದು. ಆದರೆ ಗಾಯ ತಾತ್ಕಾಲಿಕ ಸ್ವರೂಪದ್ದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅದು ನಿಮ್ಮ ದೃಷ್ಟಿಗೆ ಯಾವುದೇ ಹಾನಿಯನ್ನುಂಟು ಮಾಡದಂತೆ ಸೂಕ್ತ ಚಿಕಿತ್ಸೆ ಪಡೆಯಲು ನೇತ್ರವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

► ಬೆಳಕಿನ ಮಿಂಚು

ನಿಮ್ಮ ದೃಷ್ಟಿಕ್ಷೇತ್ರದಲ್ಲಿ ಬೆಳಕಿನ ಮಿಂಚುಗಳು ಕಂಡು ಬರುತ್ತಿದ್ದರೆ ಅದು ಮೈಗ್ರೇನ್ ತಲೆನೋವನ್ನು ಅಥವಾ ನಿಮ್ಮ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುವ ಇತರ ಯಾವುದೋ ಸಮಸ್ಯೆಯನ್ನು ಸೂಚಿಸುತ್ತಿರಬಹುದು.

ಕಣ್ಣು ನಮ್ಮ ಶರೀರದ ಅತ್ಯಂತ ಸೂಕ್ಷ್ಮ ಮತ್ತು ಮುಖ್ಯ ಸಂವೇದನಾ ಅಂಗವಾಗಿರುವುದರಿಂದ ಅದರ ಬಗ್ಗೆ ಕಾಳಜಿಯನ್ನು ವಹಿಸುವುದು ಅನಿವಾರ್ಯವಾಗಿದೆ. ಮೇಲಿನ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ತಕ್ಷಣ ನಿಮ್ಮ ನೇತ್ರವೈದ್ಯರನ್ನು ಭೇಟಿಯಾಗಿ ಪರಿಹಾರ ಪಡೆದುಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)