varthabharthiಸಂಪಾದಕೀಯ

ನೀಲಿ ನರಿಯ ಧ್ಯಾನ

ವಾರ್ತಾ ಭಾರತಿ : 20 May, 2019

ಅತಿ ಆತ್ಮಸ್ತುತಿ ಆತ್ಮಹತ್ಯೆಗೆ ಸಮ ಎನ್ನುತ್ತದೆ ಮಹಾಭಾರತ. ಅರ್ಜುನ ಯಾವುದೋ ಆತುರದಲ್ಲಿ, ತನ್ನನ್ನು ತಾನು ಕೊಂದುಕೊಳ್ಳುವ ಶಪಥ ಮಾಡುತ್ತಾನೆ. ಆದರೆ ವಿವೇಕ ಜಾಗೃತವಾದಾಗ ಆತನಿಗೆ ತನ್ನ ಆತುರ ಅರ್ಥವಾಗಿ ಬಿಟ್ಟಿತು. ಆದರೆ ‘ಆತ್ಮಹತ್ಯೆ’ ಮಾಡುತ್ತೇನೆ ಎಂದು ಅದಾಗಲೇ ಪ್ರತಿಜ್ಞೆ ಮಾಡಿಯಾಗಿತ್ತು. ಕುರುಕ್ಷೇತ್ರ ಯುದ್ಧ ನಡೆಯುತ್ತಿರುವ ಸಮಯ. ಅರ್ಜುನ ಆತ್ಮಹತ್ಯೆ ಮಾಡಿದರೆ ಪಾಂಡವರ ಗತಿ ಏನು? ಆಗ ಕೃಷ್ಣ ಒಂದು ಉಪಾಯ ಹೇಳಿದನಂತೆ. ‘ಆತ್ಮಸ್ತುತಿ ಆತ್ಮಹತ್ಯೆಗೆ ಸಮ. ಆದುದರಿಂದ ನಿನ್ನನ್ನು ನೀನೆ ಹೊಗಳಿಕೋ. ಈ ಮೂಲಕ ಆತ್ಮಹತ್ಯೆಯ ಪ್ರತಿಜ್ಞೆ ಈಡೇರಿದಂತಾಗುವುದು’’. ಅರ್ಜುನ ತನ್ನೆಲ್ಲ ಸಾಧನೆಗಳನ್ನು ತಾನೇ ವರ್ಣಿಸುತ್ತಾ ತನ್ನನ್ನು ತಾನೇ ಕೊಂದುಕೊಂಡನಂತೆ. ಸದ್ಯದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಕಾರ್ಪೊರೇಟ್ ಶಕ್ತಿಗಳು ಮಾಧ್ಯಮಗಳ ಮೂಲಕ, ಮೋದಿಯನ್ನು ಕಳೆದ ನಾಲ್ಕು ದಶಕಗಳಲ್ಲಿ ಮಹಾನ್ ನಾಯಕನಂತೆ, ಸರ್ವಜ್ಞನಂತೆ ಬಿಂಬಿಸುತ್ತಾ ಬಂದಿರುವುದನ್ನು ಸ್ವತಃ ಮೋದಿಯವರು ನಿಜವೆಂದೇ ಭ್ರಮಿಸಿದ್ದಾರೆ. ತನ್ನಲ್ಲೇನೋ ವಿಶೇಷ ಶಕ್ತಿ ಇದೆ ಎಂದು ಭಾವಿಸಿ ಅವರು ಆ ಸುಳ್ಳುಗಳನ್ನೇ ನಿಜವಾಗಿಸಲು ಹೊರಟಿದ್ದಾರೆ. ಪರಿಣಾಮವಾಗಿ ಅವರು ಆ ಸುಳ್ಳುಗಳಿಗೆ ಇನ್ನಷ್ಟು ಬಣ್ಣ ಸೇರಿಸಿ ಹೇಳಿಕೆ ಕೊಡಲು ಶುರುಹಚ್ಚಿ, ಮೋದಿ ಎಂದರೆ ಏನು ಎನ್ನುವುದನ್ನು ಜಗಕ್ಕೆ ಜಾಹೀರು ಮಾಡುತ್ತಿದ್ದಾರೆ.

ಚಹಾ ಮಾರಿರುವುದನ್ನು, ಹಿಮಾಲಯಕ್ಕೆ ತೆರಳಿರುವುದನ್ನು ಜಗತ್ತು ನಿಜಕ್ಕೂ ನಂಬಿದೆ ಎಂದು ಭಾವಿಸಿರುವ ಮೋದಿ, ಅದಕ್ಕೆ ಇನ್ನಷ್ಟು ಒಗ್ಗರಣೆ ಸೇರಿಸಿ ವಿವರಿಸುತ್ತಿದ್ದಾರೆ. ತಾನು ಮಾವಿನ ಹಣ್ಣು ಹೇಗೆ ತಿನ್ನುತ್ತಿದ್ದೇನೆ ಎನ್ನುವುದನ್ನು ತಿಳಿಯಲು ಜಗತ್ತು ಕಾದು ಕುಳಿತಿದೆ ಎಂದು ಅವರು ನಂಬಿದಂತಿದೆ. ಇವೆಲ್ಲದರ ಪರಿಣಾಮವಾಗಿ ಬಾಲಕೋಟ್ ಕಾರ್ಯಾಚರಣೆಯ ಕುರಿತಂತೆ ತನ್ನ ತಾನು ಬಣ್ಣಿಸುತ್ತಾ ಬಣ್ಣ ಕಳೆದುಕೊಂಡಿದ್ದಾರೆ. ಬಾಲಕೋಟ್ ಕಾರ್ಯಾಚರಣೆಗೆ ತಾನೇ ನಿರ್ದೇಶನ ನೀಡಿದೆ ಎಂದು ರೇಡಾರ್ ಕುರಿತಂತೆ ಏನೇನೋ ಹೇಳಲು ಹೋಗಿ ಇದೀಗ ಸಾಮಾಜಿಕ ತಾಣಗಳಲ್ಲಿ ತಮಾಷೆಯ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾರೆ. ಅದರ ಬೆನ್ನಿಗೇ ಅವರು ಹೇಳಿರುವ ಡಿಜಿಟಲ್ ಕ್ಯಾಮರ ಮತ್ತು ಇಮೇಲ್ ವಾಸ್ತವವೂ ಬಯಲಾಗಿ ಇನ್ನಷ್ಟು ಮುಖಭಂಗಕ್ಕೊಳಗಾಗಿದ್ದಾರೆ. ಸುಳ್ಳಿನಿಂದ ಕಟ್ಟಿ ನಿಲ್ಲಿಸಿದ ಮೋದಿ ಎನ್ನುವ ಉಸುಕಿನ ವ್ಯಕ್ತಿತ್ವ ನಿಧಾನಕ್ಕೆ ಕುಸಿದು ಬೀಳುತ್ತಿದೆ.

ಈ ಚುನಾವಣೆಯ ಬಳಿಕ ಮೋದಿ ಪ್ರಧಾನಿಯಾಗಲಿ, ಬಿಡಲಿ ಆದರೆ ಈ ಹಿಂದಿನಂತೆ ಸುಳ್ಳು ಹೇಳಿ ಆಡಳಿತ ನಡೆಸುವುದು ಅವರ ಪಾಲಿಗೆ ತೀವ್ರ ಕಷ್ಟವಾಗಬಹುದು. ಇವೆಲ್ಲಕ್ಕೂ ಕ್ಲೈಮಾಕ್ಸ್ ಎಂಬಂತೆ ಕೇದಾರನಾಥ ಗುಹೆಯಲ್ಲಿ ಧ್ಯಾನದಲ್ಲಿ ಕುಳಿತಂತೆ ನಟಿಸಿ ಫೋಟೋ ತೆಗೆಸಿ ಆ ಮೂಲಕ ಮತದಾರರನ್ನು ಸೆಳೆಯುವ ಕೊನೆಯ ಪ್ರಯತ್ನ ನಡೆಸಿದ್ದಾರೆ. ಈ ಕ್ಲೈಮಾಕ್ಸ್‌ನ್ನು ಜೀರ್ಣಿಸುವುದಕ್ಕೆ ಸ್ವತಃ ಅವರ ಭಕ್ತರಿಗೂ ಕಷ್ಟವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ತನ್ನ ಸರಕಾರ ಮಹತ್ತಾದುದೇನನ್ನೋ ಸಾಧಿಸಿದೆ ಎಂದ ಮೇಲೆ ಪ್ರಧಾನಿಯವರು ಪತ್ರಕರ್ತರಿಗೆ ಯಾಕೆ ಅಂಜುತ್ತಿದ್ದಾರೆ? ಎನ್ನುವ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಐದು ವರ್ಷಗಳಲ್ಲಿ ಮೊತ್ತ ಮೊದಲ ಬಾರಿ ಪತ್ರಿಕಾಗೋಷ್ಠಿಯನ್ನು ನಡೆಸಿದರಾದರೂ, ಅಲ್ಲೂ ನರೇಂದ್ರ ಮೋದಿ ಪತ್ರಕರ್ತರಿಂದ ನುಣುಚಿಕೊಂಡರು. ಪತ್ರಕರ್ತರು ಕೇಳಿದ 17 ಪ್ರಶ್ನೆಗಳಲ್ಲಿ ಒಂದಕ್ಕೂ ನರೇಂದ್ರ ಮೋದಿಯವರು ಉತ್ತರಿಸಲಿಲ್ಲ. ಎಲ್ಲವೂ ಪೂರ್ವ ನಿರ್ಧರಿತ ಎಂಬಂತೆ, ಮೋದಿ ಪ್ರಶ್ನೆಗಳನ್ನು ಆಲಿಸುವುದು, ಬಳಿಕ ಅಮಿತ್ ಶಾ ಕಡೆಗೆ ಕೈ ತೋರಿಸುವುದಷ್ಟೇ ನಡೆಯಿತು. ಇದೊಂದು ರೀತಿಯ ಉದ್ಧಟತನದ ಪರಮಾವಧಿಯೂ ಹೌದು.

ಪ್ರಧಾನಿ ಹುದ್ದೆಗೆ ಸಂಬಂಧಿಸಿ ನಾಚಿಕೆಗೇಡಿನ ಸಂಗತಿಯೂ ಹೌದು. ಈ ಹಿಂದೆ, ಮನಮೋಹನ್ ಸಿಂಗ್ ಅವರನ್ನು ಸೋನಿಯಾಗಾಂಧಿ ನಿಯಂತ್ರಿಸುತ್ತಿದ್ದಾರೆ ಎಂದು ಇದೇ ಬಿಜೆಪಿ ದೂರುತ್ತಿತ್ತು. ಆದರೆ ಕೇಳಿದ ಪ್ರಶ್ನೆಗಳಿಗೆ ತಾನೇ ಉತ್ತರಿಸುವಷ್ಟು ಮುತ್ಸದ್ದಿತನ ಮನಮೋಹನ್ ಸಿಂಗ್ ಅವರಲ್ಲಿತ್ತು. ಪತ್ರಿಕಾಗೋಷ್ಠಿಯನ್ನಾಗಲಿ, ಪತ್ರಕರ್ತರನ್ನಾಗಲಿ ಅವರೆಂದೂ ದೂರ ಇಟ್ಟದ್ದಿಲ್ಲ. ಆದರೆ ನರೇಂದ್ರ ಮೋದಿಯವರು ಐದು ವರ್ಷಗಳ ಅವಧಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಒಂದು. ಅದರಲ್ಲೂ ಅವರು ಪತ್ರಕರ್ತರಿಗೆ ಮುಖ ಕೊಟ್ಟು ಮಾತನಾಡಲು ಸಾಧ್ಯವಾಗಲಿಲ್ಲ. ಹಾಗಾದರೆ ಈವರೆಗೆ ಮೋದಿಯವರು ವಿವಿಧ ವೇದಿಕೆಗಳಲ್ಲಿ ಆಡಿದ ಮಾತುಗಳು ಯಾರು ಬರೆದುಕೊಟ್ಟಿರುವುದು ? ಅವರನ್ನು ನಿಯಂತ್ರಿಸುವವರು ಯಾರು? ಐದು ವರ್ಷಗಳಲ್ಲಿ ಅವರು ಜಾರಿಗೆ ತಂದ ನೋಟು ನಿಷೇಧ, ಖಾಸಗೀಕರಣ, ಜಿಎಸ್‌ಟಿ ಇತ್ಯಾದಿಗಳೆಲ್ಲದರ ಹಿಂದೆ ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಶಕ್ತಿಗಳ ಸೂಚನೆ, ನಿರ್ದೇಶನಗಳಿವೆಯೇ? ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಮಿತ್ ಶಾ ಉತ್ತರಿಸುತ್ತಾರೆ ಎಂದಾದರೆ ಒಂದೋ ಮೋದಿಯವರು ಯಾವುದೋ ಅಸೌಖ್ಯಕ್ಕೆ ಒಳಗಾಗಿದ್ದಾರೆ ಮತ್ತು ಮಾತನಾಡಲು ಅಶಕ್ತರಾಗಿದ್ದಾರೆ. ಆ ಕಾರಣಕ್ಕಾಗಿ ಅಮಿತ್ ಶಾ ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ನಾವು ನಂಬಬೇಕು ಅಥವಾ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಅವರಲ್ಲಿಲ್ಲ ಎಂದು ಭಾವಿಸಬೇಕು. ವಿಪರ್ಯಾಸವೆಂದರೆ, ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಬೆನ್ನು ಹಾಕಿ ನಡೆದ ಮೋದಿ ಇದೀಗ ಕೇದಾರನಾಥ ಗುಹೆಯಲ್ಲಿ ಹೋಗಿ ಕುಳಿತರು.

ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪ್ರಧಾನಮಂತ್ರಿ ಪುಣ್ಯ ಕ್ಷೇತ್ರಗಳನ್ನು ತನ್ನ ಚುನಾವಣಾ ಪ್ರಹಸನಗಳಿಗೆ ಬಳಸುತ್ತಿರುವುದು ಪ್ರಜಾಸತ್ತೆಗೂ, ಪುಣ್ಯಕ್ಷೇತ್ರಗಳಿಗೂ ಏಕಕಾಲದಲ್ಲಿ ಮಾಡಿದ ಅವಮಾನವಾಗಿದೆ. ತಪಸ್ಸಿಗೆ ಕೂರಲು ಮೋದಿಯವರು ಬುದ್ಧನೂ ಅಲ್ಲ, ಋಷಿಮುನಿಯೂ ಅಲ್ಲ. ಐದು ವರ್ಷಗಳ ಆಡಳಿತದ ವೈಫಲ್ಯಕ್ಕೆ ಅದು ಉತ್ತರವೂ ಅಲ್ಲ. ಒಂದು ರೀತಿಯಲ್ಲಿ ಅವರು ಹಿಂದೂ ಪುಣ್ಯ ಕ್ಷೇತ್ರವನ್ನು, ಧ್ಯಾನವನ್ನು ಅಣಕಿಸಿದ್ದಾರೆ. ಈ ದೇಶದಲ್ಲಿ ಆಗಿ ಹೋದ ಮಹನೀಯರೆಂದೂ ತಪಸ್ಸು, ಧ್ಯಾನ ಮಾಡುವ ಸಂದರ್ಭದಲ್ಲಿ ಫೋಟೊಗ್ರಾಫರ್‌ಗಳನ್ನು ಅಥವಾ ಕಲಾವಿದರನ್ನು ಜೊತೆಗೆ ಕೊಂಡೊಯ್ದ ಇತಿಹಾಸವಿಲ್ಲ. ಮುಖ್ಯವಾಗಿ ಮೋದಿ ಅವರು ಧ್ಯಾನ ಮಾಡಿರುವುದು ಗುಹೆಯಲ್ಲಲ್ಲ, ಅದೊಂದು ಕೃತಕ ರೆಸಾರ್ಟ್. ಅದಕ್ಕೆ ದಿನಕ್ಕೆ ಇಂತಿಷ್ಟು ಎಂದು ಬಾಡಿಗೆ ಪಾವತಿಸಲಾಗುತ್ತದೆ. ಮೈ ತುಂಬಾ ಕಾವಿ ಹೊದ್ದು ಫೋಟೊ ಹೊಡೆಸಿ ಅದನ್ನು ಪತ್ರಿಕೆಗಳ ಮೂಲಕ ಪ್ರಸಾರ ಮಾಡಿ ಆ ಮೂಲಕ ಮತದಾರರನ್ನು ಸೆಳೆಯಲು ಹೊರಟ ಮೋದಿಯ ಈ ಪ್ರಯತ್ನ ಅವರ ಹತಾಶೆಯ ಪರಮಾವಧಿಯಾಗಿದೆ. ಚುನಾವಣೆಯ ಮಳೆಯಲ್ಲಿ ನೀಲಿ ನರಿಯ ಬಣ್ಣ ಸಂಪೂರ್ಣ ಕರಗೀತೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)