varthabharthi

ಸಂಪಾದಕೀಯ

ಚುನಾವಣಾ ಆಯೋಗದ ದುರುಪಯೋಗ: ಯಾರು ಹೊಣೆ?

ವಾರ್ತಾ ಭಾರತಿ : 21 May, 2019

ತಾನು ಐದು ವರ್ಷ ನೀಡಿದ ಆಡಳಿತದ ಕುರಿತಂತೆ ಮೋದಿಯವರು ಎಳ್ಳಷ್ಟು ಭರವಸೆ ಹೊಂದಿದ್ದರೆ ಈ ಚುನಾವಣೆಯಲ್ಲಿ ಚುನಾವಣಾ ಆಯೋಗವೂ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ತನಗೆ ಪೂರಕವಾಗಿ ದುರುಪಯೋಗ ಪಡಿಸುವ ಅಗತ್ಯ ಬರುತ್ತಿರಲಿಲ್ಲ. ಎನ್‌ಐಎ, ಐಟಿ, ಐಬಿ, ಸಿಬಿಐ, ನ್ಯಾಯಾಲಯ ಹೀಗೆ ಎಲ್ಲ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ನಾಶ ಮಾಡಿದ ಮೋದಿಯವರು, ಶ್ರೀಸಾಮಾನ್ಯರ ಅಂತಿಮ ಭರವಸೆಯಾಗಿದ್ದ ಚುನಾವಣಾ ಆಯೋಗವನ್ನೂ ಬಿಡಲಿಲ್ಲ. ಮೋದಿಯ ಆಡಳಿತದ ಸಫಲತೆ ಮತ್ತು ವಿಫಲತೆಗಳ ಫಲಿತಾಂಶಗಳನ್ನು ತಿಳಿಸುವ ಚುನಾವಣೆಯಲ್ಲೇ ಅಕ್ರಮ ನಡೆದರೆ, ಪ್ರಜಾಸತ್ತೆಗೆ ಅರ್ಥವೇನು ಉಳಿಯಿತು? ಚುನಾವಣೆಯ ಫಲಿತಾಂಶ ಏನೇ ಇರಲಿ, ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಮೋದಿಯವರು ತನ್ನ ಸೋಲನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗ ತನ್ನನ್ನು ಸಮರ್ಥಿಸಿ ಹೇಳಿಕೆ ನೀಡುತ್ತಿದೆಯಾದರೂ, ಆಯೋಗದೊಳಗಿರುವ ಭಿನ್ನಮತವೇ ನಡೆಯುತ್ತಿರುವುದು ಏನು ಎನ್ನುವುದನ್ನು ದೇಶಕ್ಕೆ ತಿಳಿಸಿದೆ.

 ಒಂದು ದೇಶ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಮರ್ಥ ಸಂಸ್ಥೆಗಳನ್ನು ಹೊಂದಿದ್ದರೆ ಮಾತ್ರ ಅದು ರಾಜಕೀಯವಾಗಿ ಅಭಿವೃದ್ಧಿ ಹೊಂದಿದ ದೇಶ ಎಂದೆನಿಸಿಕೊಳ್ಳುತ್ತದೆ. ದುರದೃಷ್ಟಕರವೆಂದರೆ, ಸದ್ಯ ಈ ಸಿದ್ಧಾಂತ ಅಪಾಯದಲ್ಲಿದೆ. ಮುಖ್ಯವಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಭಿನ್ನ ಅಭಿಪ್ರಾಯಗಳನ್ನು ದಾಖಲಿಸಲಾಗಿಲ್ಲ ಎಂದು ಚುನಾವಣಾ ಆಯುಕ್ತ ಅಶೋಕ್ ಲವಾಸ ಆರೋಪಿಸಿರುವುದು ಈ ಸಿದ್ಧಾಂತಕ್ಕೆ ಬಿದ್ದ ದೊಡ್ಡ ಹೊಡೆತ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಪ್ರಧಾನ ಮಂತ್ರಿಗೆ ನೆರವಾಗುತ್ತಿದೆ ಎಂದು ವಿಪಕ್ಷಗಳು ಮತ್ತು ವಿಶ್ಲೇಷಕರು ಟೀಕಿಸುತ್ತಲೇ ಬಂದಿರುವಾಗ, ಲವಾಸ ಅವರ ಹೇಳಿಕೆ ಮಹತ್ವವನ್ನು ಪಡೆದಿದೆ. ಚುನಾವಣಾ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ಲವಾಸ ಈ ರೀತಿ ಆರೋಪ ಮಾಡುವ ಮೂಲಕ ಆಯೋಗದ ಮೇಲಿನ ವಿಶ್ವಾಸಾರ್ಹತೆ ಸಂಪೂರ್ಣವಾಗಿ ಕಳೆದುಹೋಗುವುದನ್ನು ತಪ್ಪಿಸಿದ್ದಾರೆ. ಆಯೋಗದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಶೋಕ್ ಲವಾಸ ಮುಖ್ಯ ಚುನಾವಣಾ ಅಧಿಕಾರಿ (ಸಿಇಸಿ)ಗೆ ಪತ್ರ ಬರೆದಿದ್ದರು. ಅಲ್ಪಸಂಖ್ಯಾತ ನಿರ್ಧಾರಗಳನ್ನು ದಾಖಲಿಸುವುದು ಸೇರಿದಂತೆ ಆಯೋಗದ ಕಾನೂನಾತ್ಮಕ ಕಾರ್ಯಗಳು ಪುನಸ್ಥಾಪನೆಯಾಗುವವರೆಗೆ ಅದರ ಸಭೆಗಳಲ್ಲಿ ನಾನು ಭಾಗವಹಿಸುವುದು ನಿಷ್ಪ್ರಯೋಜಕ ಎಂದು ಲವಾಸ ತನ್ನ ಪತ್ರದಲ್ಲಿ ಬರೆದಿದ್ದಾರೆ. ಆದರೆ ಮುಖ್ಯ ಚುನಾವಣಾ ಆಯುಕ್ತರು ಕಾನೂನನ್ನೇ ಗುರಾಣಿಯಾಗಿಸಿ ಈ ಪತ್ರದಿಂದ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಕೇವಲ ನ್ಯಾಯಿಕ ಪ್ರಕ್ರಿಯೆಗಳಲ್ಲಿ ಅಲ್ಪಸಂಖ್ಯಾತ ಅಭಿಪ್ರಾಯಗಳನ್ನು ದಾಖಲಿಸಲಾಗುತ್ತದೆ.

ಚುನಾವಣಾ ನೀತಿ ಸಂಹಿತೆ ವಿಷಯಗಳು ನ್ಯಾಯಿಕ ಪ್ರಕ್ರಿಯೆಗಳಲ್ಲದ ಕಾರಣ ಅವುಗಳಲ್ಲಿ ಅಲ್ಪಸಂಖ್ಯಾತ ನಿಲುವುಗಳನ್ನು ದಾಖಲಿಸುವ ಅಗತ್ಯವಿಲ್ಲ ಎಂದು ಸಿಇಸಿ ತಿಳಿಸಿದ್ದರು. 324ನೇ ವಿಧಿಯಡಿ ಚುನಾವಣಾ ಆಯೋಗ ಯಾವುದೇ ಪಕ್ಷಕ್ಕೆ ವಾಲದೆ ಸ್ವತಂತ್ರವಾಗಿ ಚುನಾವಣೆಯನ್ನು ನಡೆಸಬೇಕಿದೆ. ಆದರೆ 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಆಯೋಗವು ಆಡಳಿತಪಕ್ಷಕ್ಕೆ ನೆರವಾಗುತ್ತಿದೆ ಎನ್ನುವ ವ್ಯಾಪಕ ಆರೋಪ ಕೇಳಿ ಬರುತ್ತಿದೆ. ಪ್ರಧಾನ ಮಂತ್ರಿಗೆ ಯಾವುದೇ ನಿರ್ಬಂಧ ಹೇರದಿರುವುದು ಮತ್ತು ಪಾರದರ್ಶಕತೆ ಪಾಲಿಸದಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮಾದರಿ ನೀತಿ ಸಂಹಿತೆಯ ಉಲ್ಲಂಘಟನೆಯ ಯಾವ ಪ್ರಕರಣಗಳಲ್ಲೂ ಆಯೋಗದೊಳಗೆ ನಡೆದ ಚರ್ಚೆಯನ್ನು ಬಹಿರಂಗಪಡಿಸಲಾಗಿಲ್ಲ. ಇದರಿಂದ ಚುನಾವಣಾ ಆಯೋಗ ಆಡಳಿತ ಪಕ್ಷದ ಆಣತಿಯಂತೆ ಕೆಲಸ ಮಾಡುತ್ತಿದೆ ಎಂಬ ಸಂಶಯ ಮೂಡಿದೆ. ಈ ಅನುಮಾನ ಚುನಾವಣಾ ಪ್ರಕ್ರಿಯೆಯ ಪಾವಿತ್ರತೆಗೆ ಧಕ್ಕೆ ತಂದಿದೆ. ಈಗ ಅಶೋಕ್ ಲವಾಸ ಹೇಳಿಕೆ ಆಯೋಗದ ಕಾರ್ಯವೈಖರಿಯ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟಿಸಿದೆ.

ಇಲ್ಲಿ ಬೆಟ್ಟು ಮಾಡಿ ಹೇಳಬೇಕಾದ ವಿಷಯವೆಂದರೆ, ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಯಾವುದೇ ನಿರ್ಧಾರಿತ ವ್ಯವಸ್ಥೆಯಿಲ್ಲ. ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಹಲವು ವೇದಿಕೆಗಳಲ್ಲಿ ಎತ್ತಲಾಗಿದೆ. ನೇಮಕಾತಿಯ ಮೇಲೆ ಆಡಳಿತ ಪಕ್ಷ ಸಂಪೂರ್ಣ ಅಧಿಕಾರ ಹೊಂದಿದೆ ಮತ್ತು ನೇಮಕಕ್ಕೆ ಯಾವುದೇ ಅರ್ಹತೆಯನ್ನು ಉಲ್ಲೇಖಿಸದಿರುವ ಪರಿಣಾಮ ಬಹುತೇಕ ಬಾರಿ ಆಡಳಿತ ಪಕ್ಷದ ನಿಷ್ಠರೇ ಆಯೋಗದ ಉನ್ನತ ಸ್ಥಾನಕ್ಕೆ ನೇಮಿಸಲ್ಪಡುತ್ತಾರೆ. ಇದು ಬಳಿಕ ನಡೆಯುವ ಚುನಾವಣೆಯ ಮೇಲೆ ತನ್ನ ಪರಿಣಾಮವನ್ನು ಬೀರುವ ಸಾಧ್ಯತೆಗಳಿವೆ. ತನಗೆ ಪೂರಕವಾದ ಸರಕಾರದ ಪರವಾಗಿ ಚುನಾವಣಾ ಆಯುಕ್ತ ಕೆಲಸ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ವಾಗ್ದಂಡನೆ ನೀಡಿದಂತೆ, ಮುಖ್ಯ ಚುನಾವಣಾ ಆಯುಕ್ತರನ್ನು ಉಚ್ಚಾಟಿಸಲಾಗುತ್ತದೆ. ಆದರೆ, ಚುನಾವಣಾ ಆಯುಕ್ತರನ್ನು ಸಿಇಸಿ ಸಲಹೆಯ ಆಧಾರದಲ್ಲಿ ರಾಷ್ಟ್ರಪತಿಗಳು ಉಚ್ಚಾಟಿಸಬಹುದಾಗಿದೆ. ಈ ರೀತಿಯ ಕ್ರಮ ಚುನಾವಣಾ ಆಯುಕ್ತರನ್ನು ಸರಕಾರದ ಕೈಕೆಳಗೆ ಇರಿಸುತ್ತದೆ ಮತ್ತು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಅವರು ಮೇಲಧಿಕಾರಿಗಳ ಆದೇಶಗಳನ್ನು ಪಾಲಿಸಲೇಬೇಕಾಗುತ್ತದೆ. ಇವೆಲ್ಲ ಬೆದರಿಕೆಗಳ ನಡುವೆಯೂ ಆಯೋಗದ ಕಚೇರಿಯ ಆಂತರಿಕ ಬಿಕ್ಕಟ್ಟನ್ನು ಬಯಲು ಮಾಡಿದ ಅಶೋಕ್ ಲವಾಸ ಅವರ ಧೈರ್ಯವನ್ನು ಈ ಸಂದರ್ಭದಲ್ಲಿ ನಾವು ಮೆಚ್ಚಲೇಬೇಕು. ಸದ್ಯ ಆಯೋಗದ ಮೇಲಿನ ಆರೋಪದ ಭಾರ ಹೊರಬೇಕಾಗಿರುವುದು ಮುಖ್ಯ ಚುನಾವಣಾ ಅಧಿಕಾರಿ.

ಅಷ್ಟಕ್ಕೂ ಅವರು ಇಂಥದ್ದೊಂದು ಅನುಮಾನ ಮೂಡಲು ಅವಕಾಶ ನೀಡಿದ್ದಾದರೂ ಯಾಕೆ? ಸಂಕೀರ್ಣ ಪ್ರಕರಣಗಳಲ್ಲಿ ಯಾಕೆ ಪಾರದರ್ಶಕತೆಯಿರಲಿಲ್ಲ? ಒಬ್ಬ ಸದಸ್ಯನ ದೃಷ್ಟಿಕೋನವನ್ನು ಯಾಕೆ ದಾಖಲಿಸಲಾಗಿಲ್ಲ? ಎಲ್ಲಿಯ ತನಕ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲವೋ, ಅಲ್ಲಿಯವರೆಗೆ ಚುನಾವಣಾ ಫಲಿತಾಂಶಗಳ ಮೇಲೆ ಜನರು ನಂಬಿಕೆ ಹೊಂದಲಾರರು. ದ್ವೇಷ ಭಾಷಣಗಳು, ಕೀಳು ಮಟ್ಟದ ಭಾಷೆಗಳ ಬಳಕೆ ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಕುಸಿತ, ಇವು ಸದ್ಯ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯ ಋಣಾತ್ಮಕ ಅಂಶಗಳಾಗಿವೆ. ಇದು ದೇಶದ ಪ್ರಜಾಸತ್ತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ತಕ್ಷಣದ ಅಗತ್ಯವೆಂದರೆ ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವುದು. ಡಾ. ಬಿ. ಆರ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಹೀಗೆ ಹೇಳಿಕೆ ನೀಡಿದ್ದರು; ‘‘ಸಂಪೂರ್ಣ ಚುನಾವಣಾ ಯಂತ್ರ ಕೇಂದ್ರ ಚುನಾವಣಾ ಆಯೋಗದ ನಿಯಂತ್ರಣದಲ್ಲಿರಬೇಕು. ಅದುವೇ ಎಲ್ಲ ರಿಟರ್ನಿಂಗ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಇತರರಿಗೆ ಸೂಚನೆಗಳನ್ನು ನೀಡಬೇಕು. ಆ ಮೂಲಕ ಭಾರತದ ಯಾವ ಪ್ರಜೆಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.’’ ಭಾರತದ ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಸಿಇಸಿಯನ್ನು ಸಂವಿಧಾನ ಸಭೆ ಇಷ್ಟೊಂದು ಬಲಿಷ್ಠಗೊಳಿಸಿತೇ ವಿನಹ ರಾಜಕೀಯ ಪಕ್ಷಗಳ ಹಿತ ಕಾಯಲು ಅಲ್ಲ. ಇದನ್ನು ಅರಿಯಲು ಚುನಾವಣಾ ವ್ಯವಸ್ಥೆಯ ಪ್ರತಿ ಹಂತದಲ್ಲಿರುವ ಜನರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಟಿ. ಎನ್. ಶೇಷನ್‌ರಂತಹ ಆಯುಕ್ತರಿಂದ ಚುನಾವಣಾ ಆಯೋಗಕ್ಕೊಂದು ಘನತೆ ಬಂದಿತ್ತು. ರಾಜಕೀಯ ನಾಯಕರೂ ಅದರ ಮುಂದೆ ಬೆದರಿ ನಿಲ್ಲಬೇಕಾದ ಸ್ಥಿತಿಯನ್ನು ಅವರು ನಿರ್ಮಾಣ ಮಾಡಿದ್ದರು. ಆದರೆ ಇದೀಗ ಚುನಾವಣಾ ಆಯೋಗದ ಕುತ್ತಿಗೆಯ ಸರಪಳಿ, ಪ್ರಧಾನಿ ಮೋದಿಯ ಕೈಯಲ್ಲಿದೆಯೋ ಎಂಬಂತಿದೆ ಮುಖ್ಯ ಆಯುಕ್ತರ ವರ್ತನೆ. ಇದು ಆಯೋಗದ ಘನತೆಗೆ ಅತ್ಯಂತ ಅವಮಾನಕರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)