varthabharthi

ರಾಷ್ಟ್ರೀಯ

ಮಹಿಳೆಯರಿಬ್ಬರ ಕಳ್ಳ ಸಾಗಾಣಿಕೆ: ಸಂತ್ರಸ್ತರಿಂದ ಪೊಲೀಸ್ ದೂರು

ವಾರ್ತಾ ಭಾರತಿ : 21 May, 2019

ಜೈಪುರ(ರಾಜಸ್ಥಾನ),ಮೇ 21: ಚುರು ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಮ್ಮನ್ನು ಮಾರಾಟ ಮಾಡಲಾಗಿತ್ತು ಮತ್ತು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಆರೋಪಿಸಿ ಮಹಿಳೆಯರಿಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ. ಚುರು ಎಸ್ಪಿ ಕಚೇರಿಯ ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕವು ಆರೋಪಗಳ ಕುರಿತು ತನಿಖೆಯನ್ನು ನಡೆಸುತ್ತಿದೆ.

ದೂರುದಾರರ ಪೈಕಿ ಓರ್ವಳು ಮುಂಬೈನ 24ರ ಹರೆಯದ ಯುವತಿಯಾಗಿದ್ದರೆ, 21ರ ಹರೆಯದ ಇನ್ನೋರ್ವಳು ಜಾರ್ಖಂಡ್‌ನ ಸಾಹಿಬಗಂಜ್ ಜಿಲ್ಲೆಗೆ ಸೇರಿದವಳಾಗಿದ್ದಾಳೆ.

ಮುಂಬೈನ ಯುವತಿ ಅಜ್ಮೀರ್ ಜಿಲ್ಲೆಯ ಕಿಷನಗಡ್ ಪಟ್ಟಣದಲ್ಲಿ ತನ್ನ ಮಲತಾಯಿಯೊಂದಿಗೆ ವಾಸವಾಗಿದ್ದಳು. ಸುಮಾರು 20 ದಿನಗಳ ಹಿಂದೆ ಹರ್ಯಾಣದ ನಿಕ್ಕಿ ಎಂಬಾತನ ಸಲಹೆಯ ಮೇರೆಗೆ ಮಗಳ ಮದುವೆಗೆ ಗಂಡನ್ನು ಹುಡುಕುವ ನೆಪದಲ್ಲಿ ಮಲತಾಯಿ ಆಕೆಯನ್ನು ಕರೆದುಕೊಂಡು ಅಜ್ಮೀರ್‌ಗೆ ತೆರಳಿದ್ದಳು. ಮೇ 6ರಂದು ಯುವತಿಯನ್ನು ಚುರು ಜಿಲ್ಲೆಯ ರಾಜಗಡಕ್ಕೆ ಕರೆದೊಯ್ದಿದ್ದ ನಿಕ್ಕಿ ಮತ್ತು ಮಲತಾಯಿ ಆಕೆಯನ್ನು ಅಪರಿಚಿತ ವ್ಯಕ್ತಿಯ ಬಳಿ ಬಿಟ್ಟು ವಾಪಸಾಗಿದ್ದರು. ಅಲ್ಲಿ ದಿಲೀಪ್ ಎಂಬಾತ ಆಕೆಯನ್ನು ಚುರು ಜಿಲ್ಲೆಯ ಸರದಾರಪುರ ನಿವಾಸಿ ಗೋಪಾಲ ಜಾಟ್ ಎಂಬಾತನಿಗೆ 70,000 ರೂ.ಗೆ ಮಾರಾಟ ಮಾಡಿದ್ದ.

ಜಾಟ್‌ನ ಮನೆಯಲ್ಲಿ ಆಕೆ ಇನ್ನೋರ್ವ ದೂರುದಾರಳನ್ನು ಭೇಟಿಯಾಗಿದ್ದಳು. ಐದು ವರ್ಷಗಳ ಹಿಂದೆ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಾಗ ಜಾರ್ಖಂಡ್‌ನಿಂದ ಆಕೆಯನ್ನು ಕಳ್ಳಸಾಗಾಣಿಕೆ ಮಾಡಲಾಗಿತ್ತು. ಆಕೆಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳು ನಡೆದಿದ್ದು,85,000 ರೂ.ಗಳಿಗೆ ಭಿವಾನಿ ಜಿಲ್ಲೆಯ ಸಂಜಯ ಎಂಬಾತನಿಗೆ ಮಾರಾಟ ಮಾಡಲಾಗಿತ್ತು. ಆತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಆಕೆ ಪ್ರತಿಭಟಿಸಿದ್ದಳು. ಹೀಗಾಗಿ ಸಂಜಯ ಜಾರ್ಖಂಡ್‌ನ ಯುವತಿಯನ್ನು ವಾಪಸ್ ಜಾಟ್‌ನ ಮನೆಗೆ ಬಿಟ್ಟುಹೋಗಿದ್ದ.

ಜಾಟ್‌ನ ಸೋದರ ಹಲವಾರು ಮಹಿಳೆಯರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟಿದ್ದಾನೆ ಮತ್ತು ಯುವತಿಯರ ಕಳ್ಳಸಾಗಾಣಿಕೆಯಲ್ಲಿ ಬಾಗಿಯಾಗಿದ್ದಾನೆ ಎನ್ನುವುದು ಈ ಯುವತಿಯರಿಗೆ ತಿಳಿದುಬಂದಿತ್ತು. ಈ ದುರುಳರನ್ನು ಬಯಲಿಗೆಳೆಯಲು ನಿರ್ಧರಿಸಿದ್ದ ಅವರಿಬ್ಬರೂ ಹೇಗೋ ಜಾಟ್ ಮನೆಯಿಂದ ತಪ್ಪಿಸಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸಪೆಕ್ಟರ್ ಎಂ.ಡಿ.ಶರ್ಮಾ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)