varthabharthi

ವಿಶೇಷ-ವರದಿಗಳು

ಮೋದಿಗೆ ಮತ್ತೊಮ್ಮೆ ಅಧಿಕಾರ ಸಿಕ್ಕರೆ ಭಾರತ ಕತ್ತಲೆಯೆಡೆಗೆ: ‘ದ ಗಾರ್ಡಿಯನ್’ ಲೇಖನ

ವಾರ್ತಾ ಭಾರತಿ : 22 May, 2019

ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದ್ದು, ದೇಶದ ಜನರು ಕಾತರದಿಂದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಎನ್ ಡಿಎ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಮತ್ತೊಮ್ಮೆ ಮೋದಿ ಅಧಿಕಾರಕ್ಕೇರಿದರೆ ಭಾರತವು ಕತ್ತಲೆಯೆಡೆಗೆ ಸಾಗಲಿದೆ ಎಂದು ‘ದ ಗಾರ್ಡಿಯನ್’ ಲೇಖನವೊಂದನ್ನು ಪ್ರಕಟಿಸಿದೆ. ಈ ಲೇಖನವನ್ನು ಕಪಿಲ್ ಕೋಮಿರೆಡ್ಡಿ ಬರೆದಿದ್ದು, ಲೇಖನದ ಮುಖ್ಯಾಂಶಗಳು ಈ ಕೆಳಗಿವೆ.

ಭಾರತದ  ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಇಡೀ ದೇಶ ಹಾಗೂ ಜಗತ್ತೇ ಕಾತುರದಿಂದ ಎದುರು ನೋಡುತ್ತಿದೆ.  ಚುನಾವಣೋತ್ತರ ಫಲಿತಾಂಶಗಳಂತೆ ಬಿಜೆಪಿ ನೇತೃತ್ವದ ಎನ್‍ ಡಿಎ 300ರ ಗಡಿ ದಾಟಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆಯೇ ?

ಈ ಪ್ರಜಾಪ್ರಭುತ್ವ ತನ್ನ ಮೂಲ ಸಿದ್ಧಾಂತಗಳನ್ನು ಉಳಿಸಿಕೊಳ್ಳಲಿದೆಯೇ ಅಥವಾ  ಮತ್ತೆ ಮೋದಿ ಗೆದ್ದರೆ ಸಮಾಜ ಇನ್ನಷ್ಟು ಧ್ರುವೀಕರಣಗೊಂಡು ಮತ್ತೆ ಹಿಂದಿನ ಸ್ಥಿತಿಗೆ ವಾಪಸಾಗುವುದು ವಸ್ತುಶಃ ಅಸಾಧ್ಯವಾಗಬಹುದು.

ಮೋದಿ ನೇತೃತ್ವದ ಎನ್‍ ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅದು 2014ರ ಚುನಾವಣಾ ಪೂರ್ವ ನೀಡಿದ್ದ ಹೆಚ್ಚಿನ ಆಶ್ವಾಸನೆಗಳನ್ನು ಈಡೇರಿಸಿಲ್ಲವೆಂಬುದು ವಾಸ್ತವ. ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಪಣ ತೊಟ್ಟಿದ್ದರೆ  ಈಗ ದೇಶದ ನಿರುದ್ಯೋಗ ಪ್ರಮಾಣ ಕಳೆದ 20 ವರ್ಷಗಳಲ್ಲಿಯೇ ಗರಿಷ್ಠವಾಗಿ ಬಿಟ್ಟಿದೆ. ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ  ಪಡಿಸಲಾಗುವುದೆಂದು ಹೇಳಲಾಯಿತಾದರೂ ಹೆಚ್ಚೇನೂ ಆಗಿಲ್ಲ, ಗಂಗೆ ಶುದ್ಧೀಕರಣ ಕಾರ್ಯವೂ  ಸಮಾಧಾನಕರವಾಗಿಲ್ಲ.

ಇದು ಸಾಲದೆಂಬಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬುಡವನ್ನೇ ಸರಕಾರ ಅಲುಗಾಡಿಸಿ ಬಿಟ್ಟಿದೆ. ತನ್ನ ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಹೆಸರು ಪಡೆದಿದ್ದ ಚುನಾವಣಾ ಆಯೋಗ ಮೋದಿಯ ಕೈಗೊಂಬೆಯಾಗಿ ಬಿಟ್ಟಿದೆಯೋ ಎಂಬಂತಹ ಭಾವನೆ ಮೂಡಿದೆ. ದೇಶದ ಮಿಲಿಟರಿ ಕಾರ್ಯಾಚರಣೆಗಳನ್ನು ರಾಜಕೀಯಕ್ಕೆಳೆದು ತರಲಾಗಿದ್ದರೆ,  ನ್ಯಾಯಾಂಗದ ಸ್ವಾತಂತ್ರ್ಯವೂ ಅಪಾಯದಲ್ಲಿದೆ.

ಭಾರತವನ್ನು ಆಧುನಿಕತೆ, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವ ಹರಿಕಾರನೆಂಬಂತೆ  ಮೋದಿಯನ್ನು ಬಿಂಬಿಸಲಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿರುವುದನ್ನೇ ನೋಡಿದ್ದೇವೆ. ಹಿಂದು ರಾಷ್ಟ್ರವಾದದ ಉತ್ಪ್ರೇಕ್ಷೆ, ಕೋಮುವಾದಕ್ಕೆ ಉತ್ತೇಜನ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

ಇಂತಹ ಒಂದು ಸಂದಿಗ್ಧತೆಯ ಸಮಯದಲ್ಲಿ ಭಾರತದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪ್ರಬಲ ಪರ್ಯಾಯವಿಲ್ಲದೇ ಇರುವುದು ಶೋಚನೀಯ. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗೆ ಬಲವಾಗಿ ಸಡ್ಡು ಹೊಡೆಯಲು ಸಾಧ್ಯವಾಗಿಲ್ಲದೇ ಇರುವುದೂ ಒಂದು ದುರಂತ.

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮುಸ್ಲಿಮರನ್ನು ಬೀಫ್ ತಿಂದದ್ದಕ್ಕಾಗಿ, ಹಿಂದೂಗಳ ಜೊತೆಗಿದ್ದುದಕ್ಕಾಗಿ ಮತ್ತು ರೈಲಿನಲ್ಲಿ ಸೀಟು ಕೊಡದೆ ಇದ್ದುದಕ್ಕಾಗಿ ಥಳಿಸಿ ಕೊಲ್ಲಲಾಗುತ್ತಿದೆ. ಮೋದಿ ಯಶಸ್ವಿಯಾಗಿದ್ದೇ ಆದಲ್ಲಿ  ಹಿಂದು ರಾಷ್ಟ್ರವಾದ ಈ ಪ್ರಜಾಪ್ರಭುತ್ವ ದೇಶದ ಅಧಿಕೃತ ಸಿದ್ಧಾಂತವಾಗುವ ಭಯವಿದೆ.  ಒಂದು ವೇಳೆ ಮೋದಿ ಸೋತರೆ ಹಿಂದು ರಾಷ್ಟ್ರವಾದ ಯೋಜನೆ ಅಂತ್ಯಗೊಳ್ಳದೇ ಇದ್ದರೂ ತೆರೆಮರೆಗೆ ಸರಿಯಬಹುದಷ್ಟೇ.

ಕೃಪೆ: theguardian.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)