varthabharthi

ನಿಮ್ಮ ಅಂಕಣ

ಸರಕಾರಿ ಶಾಲೆಗಳ ಸ್ಥಿತಿಯನ್ನು ಸರಕಾರ ಸುಧಾರಿಸಬೇಕಾಗಿದೆ

ವಾರ್ತಾ ಭಾರತಿ : 23 May, 2019
ತಲ್ಹ ಇಸ್ಮಾಯಿಲ್ ಬೆಂಗ್ರೆ ಸಂಶೋಧಕರು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಅನಾಲಿಸಿಸ್, ಬೆಂಗಳೂರು

ಇಪ್ಪತ್ತೊಂದನೆಯ ಶತಮಾನ ಎಂದರೆ ದೇಶದ ಪ್ರತೀ ಪ್ರಜೆಗೂ ದೊರೆತಿರುವ ಹಲವು ಪ್ರಮುಖ ಮೂಲಭೂತ ಹಕ್ಕುಗಳ ಪೈಕಿ ಅತೀ ಪ್ರಮುಖವಾದುದು, ಶಿಕ್ಷಣದ ಹಕ್ಕು ದೊರೆತಿದೆ ಎನ್ನುವುದು. ಹಾಗಾಗಿ, ಶಿಕ್ಷಣ ನೀಡುವ ಸಂಸ್ಥೆಗಳು ಅತ್ಯಂತ ಉತ್ತಮ ರೀತಿಯಲ್ಲಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಹೀಗಿರುವಾಗ ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಯಾವುದೇ ಕಟ್ಟಕಡೆಯ ಮಗುವಿಗೂ ಶಿಕ್ಷಣನೀಡುವ ಜವಾಬ್ದಾರಿಯನ್ನು ಹೊತ್ತ ಸಾವಿರಾರು ಸರಕಾರಿ ಶಾಲೆಗಳು ನಾನಾ ಕಾರಣಗಳಿಗಾಗಿ ವ್ಯವಸ್ಥಿತವಾಗಿ ಮುಚ್ಚಲಾಗಿರುವುದು, ಸೂಚಿಸುವುದಾದರೂ ಏನನ್ನು? ಶಿಕ್ಷಣ ಹಕ್ಕನ್ನು ಹೊಂದಿರುವ ಭಾರತೀಯ ಪ್ರಜೆಯು ಶಿಕ್ಷಣ ಪಡೆಯಲು ಇರುವ ಅವಕಾಶವನ್ನು ಸರಕಾರವೇ ಮುಚ್ಚುತ್ತಿದೆ ಎಂದಲ್ಲವೇ?

 ಶಾಲೆ ಮುಚ್ಚುವ ಕಾರಣವನ್ನು ಕೇಳಿದರೆ, ‘‘ಮಕ್ಕಳಿಲ್ಲದ ಶಾಲೆಯನ್ನು ನಡೆಸಲು ಹೇಗೆ ತಾನೇ ಸಾಧ್ಯ’’ವೆಂದು ಮರುಪ್ರಶ್ನಿಸುವರು, ‘‘ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಸರಕಾರಿ ಶಾಲೆಯಲ್ಲಿ ಮಕ್ಕಳ ಕೊರತೆ ಸಂಭವಿಸಲು ಕಾರಣವಾದರು ಏನು?’’ ಎಂದು ಕೇಳಿದರೆ ಅವರಲ್ಲಿ ಉತ್ತರವಿರುವುದಿಲ್ಲ. ಏಕೆಂದರೆ ಸರಕಾರವು ಕಳೆದ ಹಲವು ದಶಕಗಳಿಂದ ನಿರಂತರ ಸರಕಾರಿ ಶಾಲೆಯನ್ನು ಕಡೆಗಣಿಸುತ್ತಾ ಬಂದಿದೆ ಎಂಬ ವಿಚಾರವು ಅವರಿಗೆ ತಿಳಿದಿದೆ.

ಮಕ್ಕಳ ಜೀವ ರಕ್ಷಣೆಯ ದೃಷ್ಟಿಯಿಂದ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ನಿರಾಳವಾಗಿ ಕಳುಹಿಸುವ ವಾತಾವರಣ ಸೃಷ್ಟಿಯ ಅಗತ್ಯತೆಯಿಂದ, ದುಸ್ಥಿತಿಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು ಮತ್ತು ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ತುರ್ತು ಕ್ರಮ ವಹಿಸಬೇಕು. ಸರಕಾರಿ ಶಾಲೆಗಳನ್ನು ಮುಚ್ಚುವ, ವಿಲೀನ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಮುಚ್ಚಿರುವ ಎಲ್ಲಾ ಸರಕಾರಿ ಶಾಲೆಗಳನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳಬೇಕು ಎನ್ನುವ ಈ ಬೇಡಿಕೆಯು ನಿನ್ನೆ ಮೊನ್ನೆಯದಲ್ಲ, ಬದಲಾಗಿ ಹಲವು ದಶಕಗಳಿಂದ ನಿರಂತರ ಶಿಕ್ಷಣ ಪರ ಹೋರಾಟಗಾರರು ನಾನಾ ರೀತಿಯಲ್ಲಿ ಈ ಬೇಡಿಕೆಯನ್ನು ಸರಕಾರ ಮತ್ತು ಜನ ಪ್ರತಿನಿಧಿಗಳ ಮುಂದೆ ಮಂಡಿಸುತ್ತಾ ಬಂದಿದ್ದಾರೆ.
ಈ ಶಿಫಾರಸಿನ ಕೆಲವೊಂದು ಅಂಶಗಳನ್ನು ಜನ ಸಾಮಾನ್ಯರು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.

ಕೊಠಡಿಗಳ ದುಸ್ಥಿತಿ:
ಶಿಫಾರಸಿನಂತೆ ದುಸ್ಥಿತಿಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು ಎನ್ನುವಾಗ, ಏನೋ ಒಂದು ಹತ್ತಿಪ್ಪತ್ತು ಕೊಠಡಿಗಳಿರುವುದು ಅದನ್ನು ಒಂದೆರಡು ತಿಂಗಳಲ್ಲಿ ನವೀಕರಣಗೊಳಿಸಬಹುದೆಂದು ಭಾಸವಾಗಬಹುದು. ಆದರೆ, ಅದರ ಸಂಖ್ಯೆಯು ನಿಮ್ಮನ್ನು ಅಚ್ಚರಿಗೊಳಿಸಬಹುದು. ಇನ್ನೂ ಎರಡು ವರ್ಷಗಳ ಹಿಂದೆಯೇ ದುಃಸ್ಥಿತಿಯಲ್ಲಿರುವ ಕೊಠಡಿಗಳ ಸಂಖ್ಯೆ 73,129 ಎಂದು ಸರಕಾರ ಅಧಿಕೃತ ಮಾಹಿತಿ ನೀಡಿತ್ತು, ಹಾಗಾದರೆ ಕಳೆದ ಎರಡು ವರ್ಷಗಳಲ್ಲಿ ಅದು ಎಷ್ಟು ಹೆಚ್ಚಿರಬಹುದು ಮತ್ತು ಸರಕಾರವು ಮಾಡುವ ನಿಧಾನಗತಿಯ ನವೀಕರಣ ಕೆಲಸದಿಂದ ಎಷ್ಟು ಶಾಲೆಗಳು ನವೀಕರಣ ಗೊಂಡಿರಬಹುದು ಎಂದು ನೀವೇ ಊಹಿಸಿ ನೋಡಿ. ಈ ಎಲ್ಲಾ ಕೊಠಡಿಗಳ ನವೀಕರಣ ಮತ್ತು ನಿರ್ವಹಣೆಯ ಹೊಣೆ ಸರಕಾರದ್ದು ಎಂದು ತಿಳಿದಿದ್ದರೂ, ಸರಕಾರವನ್ನು ಪ್ರಶ್ನಿಸುವ ಅಥವಾ ತನ್ನ ಕ್ಷೇತ್ರದ ಜನಪ್ರತಿನಿಧಿ ಹಾಗೂ ಶಾಲಾ ಎಸ್‌ಡಿಎಂಸಿ ಕಮಿಟಿಯ ಅಧ್ಯಕ್ಷರಾದ ಶಾಸಕರನ್ನು ಈ ಕುರಿತು ಕೇಳುವವರು ಯಾರೂ ಇರುವುದಿಲ್ಲ. ಮಕ್ಕಳ ಪೋಷಕರು, ಎಸ್‌ಡಿಎಂಸಿ ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳು ನಿರಂತರ ಪ್ರಯತ್ನ ಮಾಡಿದಲ್ಲಿ ಈ ಸರಕಾರಿ ಶಾಲೆಗಳ ಸ್ಥಿತಿಯು ಉತ್ತಮಗೊಳ್ಳಬಹುದು. ಶಾಲೆಗಳಲ್ಲಿ ಕೊಠಡಿಗಳದ್ದೇ ಸಮಸ್ಯೆಯಲ್ಲ. ಬದಲಾಗಿ, ಶಾಲಾ ಶೌಚಾಲಯ, ವಿದ್ಯುತ್, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳೆಲ್ಲವೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಅದನ್ನು ಸಬಲೀಕರಿಸಲು ಪ್ರಯತ್ನಿಸ ಬೇಕಾದುದು ಅಗತ್ಯವಾಗಿದೆ.

ಖಾಲಿ ಇರುವ ಶಿಕ್ಷಕರ ಹುದ್ದೆ:

 2016-17ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆಯು 28,582 ಆಗಿದೆ ಎಂದು ಹೇಳಲಾಗಿತ್ತು, ಆದರೆ ಕೆಲವು ತಿಂಗಳುಗಳ ಹಿಂದೆ ಸುಮಾರು ಹತ್ತು ಸಾವಿರ ಶಿಕ್ಷಕರ ಹುದ್ದೆಗೆ ಅಹ್ವಾನ ನೀಡಲಾಗಿತ್ತು. ಅದರ ಪೈಕಿ ಎಷ್ಟು ಹುದ್ದೆಗಳನ್ನು ಪ್ರಸಕ್ತ ಸರಕಾರವು ತುಂಬುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದಕ್ಕೆ ಕಾರಣ ಸರಕಾರಿ ಶಾಲೆಗಳಲ್ಲಿರುವ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬ ಬೇಕೆನ್ನುವ ಚಿಂತೆ ಆ ಕ್ಷೇತ್ರದಲ್ಲಿರುವ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಸಕರಿಗೆ ಹಾಗೂ ಎಸ್‌ಡಿಎಂಸಿ ಸದಸ್ಯರಿಗಿರುವುದು ಬಹಳ ಕಡಿಮೆ. ಕೆಲವು ಶಾಸಕರಂತೂ ಶಿಕ್ಷಣಪರ ಹೋರಾಟಗಾರರ ಬೇಡಿಕೆಗಳಿಗೆ ಸೊಪ್ಪುಹಾಕುವುದೇ ಇಲ್ಲ. ಆದ್ದರಿಂದ ಸರಕಾರಿ ಶಾಲೆಗಳ ಈ ಸ್ಥಿತಿಗೆ ನೇರ ಕಾರಣ ಅವರೇ ಎಂದು ದೂರುವವರು ಇದ್ದಾರೆ. ಬಹಳಷ್ಟು ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ವಿಜ್ಞಾನ, ಗಣಿತ, ಇಂಗ್ಲಿಷ್ ಹೀಗೆ ಮಕ್ಕಳು ಕಲಿಕೆಯಲ್ಲಿ ಹಿಂದಿರುವ ವಿಷಯಗಳ ಶಿಕ್ಷಕರ ಹುದ್ದೆಯು ಹತ್ತು-ಹದಿನೈದು ವರ್ಷಗಳಿಂದ ಖಾಲಿ ಇರುವ ಕುರಿತು ಯಾರೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಸರಕಾರಿ ಶಾಲೆಗಳ ಎಸ್‌ಡಿಎಂಸಿಗಳಲ್ಲಿ ಹೆಚ್ಚಿನ ಸದಸ್ಯರು ಕಾರ್ಮಿಕ ವರ್ಗ ಅಥವಾ ಇತರ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡು ತಮ್ಮ ಹೊಟ್ಟೆ ಪಾಡಿಗಾಗಿ ದುಡಿಯುವ ಅವರಿಗೆ ಶಾಲೆಯ ಸಮಸ್ಯೆಗಳು ತಲೆಗೆ ಹೊಕ್ಕುವುದೇ ವಿರಳ.

ಊರಿನ ಕೆಲವು ಜನರು ಶಾಸಕ ಮಹಾಶಯನ ಬಳಿ, ‘‘ಸ್ವಾಮಿ ನಮ್ಮ ಶಾಲೆಯ ಮುಖ್ಯ ಶಿಕ್ಷಕ ಹುದ್ದೆ, ಗಣಿತ ಶಿಕ್ಷಕ ಹುದ್ದೆ, ಇಂಗ್ಲಿಷ್ ಶಿಕ್ಷಕ ಹುದ್ದೆ ಖಾಲಿ ಇದೆ ಅದನ್ನು ಭರ್ತಿ ಮಾಡಿಕೊಡಿ’’ ಎಂದು ಬೇಡಿಕೊಂಡರೆ ಅವರು ‘‘ನಾನು ಮಾಡಿ ಕೊಡುತ್ತೇನೆ ನೀವು ಧೈರ್ಯವಾಗಿರಿ. ಅದು ನನ್ನ ಕ್ಷೇತ್ರದ ಶಾಲೆ ಮತ್ತು ಆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷನೂ ನಾನೇ’’ ಎಂದೆಲ್ಲಾ ಬಡಾಯಿ ಕೊಚ್ಚುತ್ತಾರೆ. ಐದು ವರ್ಷ ಮುಗಿದಾಗ ಅವರ ಸಾಧನೆಯನ್ನು ಮೆಲುಕು ಹಾಕಲು ಹೋದರೆ ಊರಿನ ಸರಕಾರಿ ಶಾಲೆಗೆ ಅವರಿಂದ ಏನೂ ದೊರೆಯಲಿಲ್ಲವೆಂದೂ ತಿಳಿದು ಬರುತ್ತದೆ. ಆಗ ಮತ್ತೊಮ್ಮೆ ಯಾರಾದರೂ ಪ್ರಶ್ನಿಸಿದರೆ, ‘‘ಈ ಚುನಾವಣೆಯಲ್ಲಿ ಗೆಲ್ಲಿಸಿ ನಾನು ನಿಮ್ಮ ಊರಿಗೆ ಹೈಟೆಕ್ ಶಾಲೆಯನ್ನು ಮಾಡಿಕೊಡುತ್ತೇನೆ’’ ಎಂದೆಲ್ಲಾ ಮಹಾಶಯರು ಭರವಸೆ ಕೊಡುವ ಮೂಲಕ ಜನರನ್ನು ಮರುಳು ಮಾಡುತ್ತಾರೆ. ಇನ್ನ್ನು ಕೆಲವು ಕಾರ್ಪೊರೇಟರ್‌ಗಳು ಶಾಲಾ ಕೆಲಸಗಳು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ ಎನ್ನುತ್ತಾರೆ, ಒಂದು ವೇಳೆ ಊರಿನ ಶಾಲೆಯು ಮತ್ತು ಅದರ ಅಭಿವೃದ್ಧಿಯು ಅವರ ಹೊಣೆಯಲ್ಲದಿದ್ದರೆ, ಶಾಲೆಗಳಿಗೆ ಹೋಗಿ ‘‘ನಾನು ಈ ಊರಿನ ಪ್ರಥಮ ಪ್ರಜೆ, ಇಲ್ಲಿನ ಅಭಿವೃದ್ಧಿ ಮಾಡುತ್ತಿದ್ದೇನೆ’’ ಎಂದು ಆಗಾಗ ಭಾಷಣ ಬಿಗಿಯುವುದಾದರೂ ಏಕೆ? ಒಂದು ವೇಳೆ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ, ಆ ಪ್ರದೇಶದ ಜನತೆಗೆ ಇವರಿಂದಾಗುವ ಪ್ರಯೋಜನವಾದರೂ ಏನು? ಈ ರೀತಿಯ ವರ್ತನೆಯನ್ನು ಪ್ರಶ್ನಿಸುವ ಒಂದು ಶಿಕ್ಷಣ ಪ್ರೇಮಿ ಜನರ ಗುಂಪನ್ನು ಸೃಷ್ಟಿಸಬೇಕಾದುದು ಅತೀ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)