varthabharthi

ವಿಶೇಷ-ವರದಿಗಳು

ಈ ಫುಡ್ ಡೆಲಿವರಿ ಬಾಯ್ ಇಂಟರ್ನೆಟ್ ಹೀರೋ ಆಗಿದ್ದು ಹೇಗೆ.....?

ವಾರ್ತಾ ಭಾರತಿ : 23 May, 2019

ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರವನ್ನು ರದ್ದುಗೊಳಿಸಿದಾಗ ಏನಾಗುತ್ತದೆ ಎನ್ನುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಸಂಬಂಧಿಸಿದ ರೆಸ್ಟೋರೆಂಟ್‌ಗೆ ಕೆಲವು ದಿನಗಳಲ್ಲಿ ಹಣ ವಾಪಸ್ ದೊರೆಯಬಹುದು,ಆದರೆ ಅದಾಗಲೇ ಸಿದ್ಧಗೊಂಡಿರುವ ಆಹಾರವೆಲ್ಲಿಗೆ ಹೋಗುತ್ತದೆ?

ಗ್ರಾಹಕರು ಫುಡ್ ಡೆಲಿವರಿ ಆ್ಯಪ್‌ನಲ್ಲಿ ಆಹಾರಕ್ಕಾಗಿ ಸಲ್ಲಿಸಿದ ಬೇಡಿಕೆಯನ್ನು ರದ್ದುಗೊಳಿಸಿದಾಗ ಅದಾಗಲೇ ಆಹಾರವನ್ನು ಸಿದ್ಧಗೊಳಿಸಿದ್ದ ರೆಸ್ಟೋರೆಂಟ್‌ಗೆ ಹಣ ದೊರೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೆಸ್ಟೋರೆಂಟ್‌ಗಳ ಮಾಲಕರು ಆಹಾರವನ್ನು ಡೆಲಿವರಿ ಬಾಯ್‌ಗಳಿಗೆ ನೀಡುತ್ತಾರೆ. ಆಹಾರವು ಅದಾಗಲೇ ನಿಗದಿತ ಗಮ್ಯದತ್ತ ಸಾಗುತ್ತಿದ್ದರೆ,ಅದನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಅಥವಾ ಬಡವರಿಗೆ ನೀಡುವಂತೆ ಝೊಮ್ಯಾಟೊ ಕಸ್ಟಮರ್ ಕೇರ್ ಡೆಲಿವರಿ ಬಾಯ್‌ಗೆ ಸೂಚಿಸುತ್ತದೆ ಎಂದು ಕೋಲ್ಕತಾದಲ್ಲಿ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ದುಡಿಯುತ್ತಿರುವ,ಸದ್ಯ ಇಂಟರ್ನೆಟ್‌ನಲ್ಲಿ ಹೀರೋ ಆಗಿರುವ ಪಥಿಕೃತ ಸಹಾ ಅವರು ಸಾಮಾಜಿಕ ಧನಕ್ರೋಢೀಕರಣ ಸಮುದಾಯ ‘ಎಫರ್ಟ್ಸ್ ಫಾರ್ ಗುಡ್’ ಕುರಿತು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಝೊಮ್ಯಾಟೊ ರದ್ದುಗೊಂಡ ತನ್ನ ಎಲ್ಲ ಆಹಾರ ಆರ್ಡರ್‌ಗಳನ್ನು ಸ್ಥಳೀಯ ಆಶ್ರಯ ತಾಣಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು,ಭಿನ್ನ ಚೇತನರ ಕೇಂದ್ರಗಳು ಮತ್ತು ಇಂತಹುದೇ ಸಂಸ್ಥೆಗಳಿಗೆ ತಲುಪಿಸಲು ಎನ್‌ಜಿಒ ಫೀಡಿಂಗ್ ಇಂಡಿಯಾ ಜೊತೆ ಕೈಜೋಡಿಸಿದೆ.

 ಸಹಾ ಹಸಿವಿನಿಂದ ಬಳಲುತ್ತಿರುವವರು ಮತ್ತು ಶೋಷಿತ ವರ್ಗಗಳ ಮಕ್ಕಳ ಹೊಟ್ಟೆ ತುಂಬಿಸುತ್ತಿರುವ ಈ ಸೇವೆಗೆ ನೆರವಾಗುತ್ತಿರುವ ಪರೋಪಕಾರಿಗಳ ಪೈಕಿ ಒಬ್ಬರಾಗಿದ್ದಾರೆ. ಅವರು ರದ್ದುಗೊಂಡ ಆಹಾರಗಳನ್ನು ಅಗತ್ಯವುಳ್ಳವರಿಗೆ ಪೂರೈಸುತ್ತಾರೆ. ಕೋಲ್ಕತಾ ಮಹಾನಗರ ಪಾಲಿಕೆಯಲ್ಲಿ ಉದ್ಯೋಗದಲ್ಲಿದ್ದ ಸಹಾ ದುರ್ಬಲ ವರ್ಗಗಳ ಮಕ್ಕಳಿಗಾಗಿ ತನ್ನೆಲ್ಲ ಸಮಯವನ್ನು ಮೀಸಲಿಡಲು ಅದನ್ನು ಬಿಟ್ಟಿದ್ದರು. ಆದರೆ ಅವರಿಗೆ ತನ್ನ ಕುಟುಂಬವನ್ನು ಸಾಕುವ ಹೊಣೆಗಾರಿಕೆಯೂ ಇತ್ತು. ಹೀಗಾಗಿ ಅವರು ಕಳೆದ ವರ್ಷದ ಜುಲೈನಲ್ಲಿ ಝೊಮ್ಯಾಟೊದಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡಿದ್ದರು. ಈ ವೇಳೆ ಅವರಿಗೆ ಡಮ್‌ಡಮ್‌ನ ಓರ್ವ ದಯಾಳು ರೆಸ್ಟೋರಂಟ್ ಮಾಲಕನೊಂದಿಗೆ ಸ್ನೇಹ ಬೆಳೆದಿತ್ತು ಮತ್ತು ಸಹಾ ಮಕ್ಕಳ ಏಳಿಗೆಗಾಗಿ ದುಡಿಯುತ್ತಿರುವದು ಗೊತ್ತಾದಾಗ ಅವರ ತಂಡದೊಂದಿಗೆ ಸೇರಿಕೊಂಡಿದ್ದ. ಈಗ ಝೆಮಾಟೊದಿಂದ ರದ್ದಾದ ಆಹಾರಗಳ ಜೊತೆಗೆ ಆತನ ರೆಸ್ಟೋರಂಟ್‌ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಆಹಾರಗಳೂ ಸಹಾರ ಆಶ್ರಯದಲ್ಲಿರುವ ಮಕ್ಕಳ ಸಂಜೆಯ ತಿಂಡಿಗೆ,ಕೆಲವೊಮ್ಮೆ ರಾತ್ರಿಯ ಊಟಕ್ಕೆ ಪೂರೈಕೆಯಾಗುತ್ತಿವೆ.

ಸಹಾ ಈ ವಿಷಯವನ್ನು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಂದ ಪ್ರೀತಿಯಿಂದ ‘ರೋಲ್ ಕಾಕು(ರೋಲ್ ಚಿಕ್ಕಪ್ಪ)’ ಎಂದು ಕರೆಯಲ್ಪಡುವ ರೆಸ್ಟೋರಂಟ್ ಮಾಲಿಕ ಮಕ್ಕಳಿಗೆ ಪ್ರತಿದಿನ ಆರ್ಡರ್‌ಗಳು ರದ್ದುಗೊಂಡ ಎಗ್ ರೋಲ್‌ಗಳು,ಫ್ರೈಡ್ ರೈಸ್ ಮತ್ತು ಇತರ ಖಾದ್ಯಗಳನ್ನು ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅವರು ಮಕ್ಕಳಿಗೆ ಭೋಜನಕೂಟವನ್ನೂ ಏರ್ಪಡಿಸುತ್ತಾರೆ. ಅವರು ಪ್ರಚಾರವನ್ನು ಬಯಸುವುದಿಲ್ಲ. ಹೀಗಾಗಿ ಎಲ್ಲಿಯೂ ತನ್ನ ಹೆಸರನ್ನು ಉಲ್ಲೇಖಿಸದಂತೆ ಅಥವಾ ತನ್ನ ರೆಸ್ಟೋರಂಟ್‌ನ ಹೆಸರನ್ನು ಬಹಿರಂಗಗೊಳಿಸದಂತೆ ಅವರು ತನ್ನ ಬಳಿ ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂದು ಸಹಾ ವಿವರಿಸಿದ್ದಾರೆ.

ಸಹಾರ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಸಾವಿರಕ್ಕೂ ಅಧಿಕ ಜನರು ಅದನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 ಇತ್ತೀಚಿಗಷ್ಟೇ ತನ್ನ ಲಾಭರಹಿತ ಸಂಸ್ಥೆ ಹೆಲ್ಪ್ ಫೌಂಡೇಷನ್ ಅನ್ನು ನೋಂದಣಿ ಮಾಡಿಸಿಕೊಂಡಿರುವ ಸಹಾ ಕೋಲ್ಕತಾದಲ್ಲಿನ ಮತ್ತು ಸುತ್ತುಮುತ್ತಲಿನ ಶೋಷಿತ ವರ್ಗಗಳ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ. ಈ ಮಕ್ಕಳಿಗೆ ಆಹಾರವನ್ನು ಪೂರೈಸುವ ಜೊತೆಗೆ ಅಗತ್ಯವುಳ್ಳವರಿಗೆ ಸ್ಟೇಷನರಿ ಮತ್ತು ಬಟ್ಟೆಗಳನ್ನೂ ಒದಗಿಸುತ್ತಿದ್ದಾರೆ ಮತ್ತು ಅವರೊಂದಿಗೆ ಸಮಯವನ್ನೂ ಕಳೆಯುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)