varthabharthi

ನಿಮ್ಮ ಅಂಕಣ

ಚುನಾವಣಾ ಸಮರದಲ್ಲಿ ಮೋದಿ ಗೆಲುವಿನ ಅಸ್ತ್ರಗಳು

ವಾರ್ತಾ ಭಾರತಿ : 24 May, 2019
ಅಶುತೋಶ್

ಪ್ರತಿಪಕ್ಷಗಳು ನೂತನ ರಾಜಕೀಯ ಕಾರ್ಯತಂತ್ರಕ್ಕಾಗಿ ಅನ್ವೇಷಣೆ ನಡೆಸಲು ಕಾಲ ಈಗ ಪಕ್ವವಾಗಿದೆ. ಬಿಜೆಪಿಯ ದೈತ್ಯ ಚುನಾವಣಾ ಯಂತ್ರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಕೂಡಾ ಅಷ್ಟೇ ಸಮರ್ಥವಾದ ಚುನಾವಣಾ ಯಂತ್ರವೊಂದನ್ನು ಮರು ಸಂಶೋಧಿಸುವ ಅಗತ್ಯವಿದೆ. ಮೋದಿ ರಾಜಕಾರಣದಲ್ಲಿ ಯಾಕೆ ಯಶಸ್ವಿಯಾಗುತ್ತಿದ್ದಾರೆಂದರೆ ಅವರು ಗೆಲ್ಲಲೆಂದೇ ಹೋರಾಡುತ್ತಾರೆ. ಆದರೆ ರಾಹುಲ್ ಅಥವಾ ಇತರ ಪ್ರತಿಪಕ್ಷ ನಾಯಕರ ವಿಷಯದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ.


17ನೇ ಲೋಕಸಭಾ ಚುನಾವಣೆಯ ಫಲಿತಾಂಶವು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಸಂಘಪರಿವಾರ ಪ್ರತಿಪಾದಿಸುತ್ತಿರುವ ಹಿಂದೂ ಕೋಮುವಾದವನ್ನು ಎದುರಿಸಲು ಹಾಗೂ ಅದರ ವಿರುದ್ಧ ಹೋರಾಡುವ ಬಗ್ಗೆ ಆತ್ಮಾವಲೋಕನ ಮಾಡಲು ಪ್ರತಿಪಕ್ಷಗಳಿಗಿದು ಸಕಾಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಶ್ರೇಯಸ್ಸು ಅವರೊಬ್ಬರಿಗೆ ಸಲ್ಲಬೇಕಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. 2014ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ಪುನರಾವರ್ತಿಸಲು ಮೋದಿಗೆ ಸಾಧ್ಯವಿಲ್ಲವೆಂದೇ ಬಹುತೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದರು. ಆದರೆ ಆ ಯಶಸ್ಸನ್ನು ಪುನರಾವರ್ತಿಸುವಲ್ಲಿ ಮೋದಿ ತನ್ನ ಮೇಧಾವಿತನ ಪ್ರದರ್ಶಿಸಿದ್ದಾರೆ. ಮೋದಿ ಅನುಸರಿಸಿಕೊಂಡು ಬಂದಿರುವ ರಾಜಕಾರಣದ ವೈಖರಿ ಹಾಗೂ ಸಿದ್ಧಾಂತವನ್ನು ನಾನು ಸದಾ ವಿರೋಧಿಸುತ್ತಾ ಬಂದವನು. ಆದಾಗ್ಯೂ ಅವರೊಬ್ಬ ಸಾಂಪ್ರದಾಯಿಕ ರಾಜಕಾರಣಿಯಲ್ಲವೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗೂ ಬಿಜೆಪಿಗೆ ಇಂದು ದೊರೆತ ಅಭೂತಪೂರ್ವ ಗೆಲುವಿಗೆ ಅವರೊಬ್ಬರೇ ನಾಯಕನಾಗಿದ್ದಾರೆ.

ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಗಳು ಮೋದಿಯನ್ನು ಓರ್ವ ಜೀವಂತ ದಂತಕತೆಯ ಪಾತ್ರವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. 2018ರ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಉತ್ತರದ ಮೂರು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡಗಳಲ್ಲಿ ಸೋಲನುಭವಿಸಿತ್ತು. ಆಗ ಮೋದಿ ತಕ್ಷಣವೇ ತನ್ನ ರಾಜಕಾರಣದ ತಂತ್ರಗಾರಿಕೆಯನ್ನು ಬದಲಾಯಿಸಿದರು. ತನ್ನ ಸರಕಾರದ ಸಣ್ಣಪುಟ್ಟ ಸಾಧನೆಗಳಿಗೂ ಅಬ್ಬರದ ಪ್ರಚಾರವನ್ನು ನೀಡುವಲ್ಲಿ ಅವರು ಜಾಣತನವನ್ನು ಪ್ರದರ್ಶಿಸಿದ್ದರು. ಇದೇ ವೇಳೆ ರಾಷ್ಟ್ರೀಯವಾದವನ್ನು ಕೂಡಾ ರಾಜಕೀಯ ತಂತ್ರಗಾರಿಕೆಯಾಗಿ ಬಳಸಿಕೊಂಡರು. ಅವರು ರಾಜಕಾರಣದ ಬತ್ತಳಿಕೆಯಲ್ಲಿ ರಾಷ್ಟ್ರವಾದವು ಅತ್ಯಂತ ಶಕ್ತಿಶಾಲಿಯಾದ ಶಸ್ತ್ರವೆನಿಸಿಕೊಂಡಿತು.

ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ನೇಮಕ ಗೊಂಡಾಗ ಅವರು ಆ ಕೆಲಸಕ್ಕೆ ಹೊಸಬರಾಗಿದ್ದರು. 2002ರ ಗುಜರಾತ್ ಗಲಭೆಯಿಂದಾಗಿಯೇ ಮೋದಿಗೆ ತನ್ನ ಮೊದಲನೇ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಯಿತೆಂದು ಅವರ ಕಟುಟೀಕಾಕಾರರು ಹೇಳುತ್ತಾರೆ. ಆದರೆ ತರುವಾಯ 2007 ಹಾಗೂ 2012ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾಣೆಗಳಲ್ಲಿಯೂ ಮೋದಿ ಸಾಧಿಸಿದ ಗೆಲುವುಗಳು, ಮತದಾರರೊಂದಿಗೆ ಅವರ ಸ್ಪಂದನೆ ಹಾಗೂ ಅವರಿಗಿರುವ ರಾಜಕೀಯ ಸಾಮರ್ಥ್ಯವನ್ನು ಸಾಬೀತು ಪಡಿಸಿದವು. ಮುಖ್ಯಮಂತಿ್ರ ಹುದ್ದೆಯು ಇತರ ಯಾವುದೇರಾಜ್ಯಮಟ್ಟದ ರಾಜಕಾರಣಿಯನ್ನು ಸಂತೃಪ್ತನಾಗಿ ಮಾಡಬಹುದಿತ್ತು. ಆದರೆ ಮೋದಿಗೆ ಗುಜರಾತ್ ಗಲಭೆಯ ಕಳಂಕ ತನಗಂಟಿರುವ ತನಕ ತಾನು ರಾಷ್ಟ್ರ ರಾಜಕಾರಣದಲ್ಲಿ ಹೆಜ್ಜೆಯೂರಲು ಸಾಧ್ಯವಿಲ್ಲವೆಂಬುದು ಮನದಟ್ಟಾಗಿತ್ತು. ಆಗ ಅವರು ತನ್ನ ಹಿಂದುತ್ವವಾದಿ ಇಮೇಜ್ ಅನ್ನು ಗುಜರಾತ್ ಅಸ್ಮಿತೆಯ ಜೊತೆ ಸಮ್ಮಿಳಿತಗೊಳಿಸಿದರು. ಇದಕ್ಕೆ ಅವರು ಅಭಿವೃದ್ಧಿಯ ಲೇಪವನ್ನು ಬಳಿದರು. ಆವರೆಗೆ ಅವರಂತೆ ಇನ್ನಾವುದೇ ರಾಜಕಾರಣಿಯು ಗುರುತಿನ ರಾಜಕಾರಣವನ್ನು ಜನತೆಯ ಆರ್ಥಿಕ ಆಶೋತ್ತರಗಳ ಜೊತೆ ವಿಲೀನಗೊಳಿಸಿರಲಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ‘ಗುಜರಾತ್ ಮಾದರಿಯ ಅಭಿವೃದ್ಧಿ’ಯನ್ನು ಯಶಸ್ವಿಯಾಗಿ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯ ಲಾಯಿತು. ಪ್ರಧಾನಿಯಾಗಿ ಅವರ ಆಳ್ವಿಕೆಯ ಮೊದಲ ಐದು ವರ್ಷಗಳಲ್ಲಿ ದೇಶದ ಆರ್ಥಿಕ ರಂಗದಲ್ಲಿ ಅಗಾಧವಾದ ವೈಫಲ್ಯ ಕಂಡಿತು. ಆದಾಗ್ಯೂ ಅಭಿವೃದ್ಧಿ ಕುರಿತಾಗಿ ಅವರ ಬಣ್ಣಬಣ್ಣದ ಮಾತುಗಾರಿಕೆಗಳು ಮಂಕಾಗಲೇ ಇಲ್ಲ. ತನ್ನ ಸರಕಾರದ ನೀತಿಗಳಿಂದಾಗಿ ಭಾರತವು ಆರ್ಥಿಕವಾಗಿ ಹಿನ್ನಡೆ ಅನುಭವಿಸಿದೆಯೆಂಬ ಪ್ರತಿಪಕ್ಷಗಳು ಹಾಗೂ ತಜ್ಞರ ವಾದಗಳನ್ನು ಅವರು ಅಲ್ಲಗಳೆದರು. ತನ್ನ ನಾಯಕತ್ವದಲ್ಲಿ ಭಾರತವು ನೂತನ ಮಜಲುಗಳನ್ನು ತಲುಪಿದೆ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂಬ ಭಾವನೆಯನ್ನು ಮೂಡಿಸುವಲ್ಲಿ ಅವರು ಯಶಸ್ವಿಯಾದರು. ಕಳೆದ ವರ್ಷಾಂತ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದ ಬಳಿಕ ಮೋದಿ ರಾಜಕೀಯವಾಗಿ ದುರ್ಬಲರೆಂಬ ಭಾವನೆ ಮೂಡಿತ್ತು. ಆಗ ಬಾಲಕೋಟ್ ವಾಯುದಾಳಿಯ ಘಟನೆಯು ಅವರ ನೆರವಿಗೆ ಬಂದಿತು. ತನ್ನ ನಾಯಕತ್ವದಲ್ಲಿ ಭಾರತವು ಬದಲಾಗಿದೆ ಹಾಗೂ ಬಾಲಕೋಟ್ ದಾಳಿಗೆ ಭಾರತವು ಪ್ರಬಲವಾದ ಪ್ರತ್ಯುತ್ತರ ನೀಡಿದೆಯೆಂಬ ಭಾವನೆಯನ್ನು ಜನಸಮೂಹದಲ್ಲಿ ಮೂಡಿಸಿದ್ದರು. ‘ನಾವು ಪಾಕಿಸ್ತಾನಿಯರನ್ನು ಅವರ ಮನೆಗೆ ನುಗ್ಗಿ ಸದೆಬಡಿದೆವು’ ಎಂಬ ಮಾತುಗಳು ಅವರ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದ್ದವು.

ಮೋದಿ ಪ್ರತಿಪಾದಿಸಿದ ತೋಳ್ಬಲದ ರಾಷ್ಟ್ರವಾದಕ್ಕೆ ಮಾಧ್ಯಮರಂಗದಲ್ಲಿರುವ ಅವರ ಮಿತ್ರರು ಅಬ್ಬರದ ಪ್ರಚಾರ ನೀಡಿದರು. ಮೋದಿ ಪ್ರಧಾನಿಯಾದ ಆರಂಭದ ದಿನಗಳಿಂದಲೇ ಅವರನ್ನು ಟೀಕಿಸುವುದಕ್ಕೆ ಬಹುತೇಕ ಮಾಧ್ಯಮಗಳು ನಿರಾಕರಿಸಿದವು ಮತ್ತು ಅವು ವಸ್ತುಶಃ ಅವರ ಮುಖವಾಣಿಯಾಗಿಯೇ ಕೆಲಸ ಮಾಡಲಾರಂಭಿಸಿದವು. ಅದೇ ರೀತಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ಮೋದಿ ಬಗ್ಗೆ ತುತ್ತೂರಿ ಊದುವ ಬಳಗವೇ ಸೃಷ್ಟಿಯಾಯಿತು. ಮೋದಿ, ಇನ್ನೊಂದು ಅವಧಿಗೆ ಭಾರತದ ಪ್ರಧಾನಿಯಾಗುವ ಅಗತ್ಯವಿದೆ. ಅವರ ಕೈಗಳಲ್ಲಿ ಭಾರತವು ಸುರಕ್ಷಿತ ಹಾಗೂ ಸುಭದ್ರವೆಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಮೂಡಿಸುವಲ್ಲಿ ಮೋದಿ ಬ್ರಿಗೇಡ್ ಯಶಸ್ವಿಯಾಯಿತು. ಮೋದಿ ಬೆಂಬಲಿಗರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಡೆಬಿಡದೆ ಪ್ರತಿಪಕ್ಷಗಳ ಪ್ರತಿಯೊಂದು ನಡೆಯನ್ನು ಟೀಕಿಸುವುದು ಹಾಗೂ ಮೋದಿಯನ್ನು ಓರ್ವ ಜೀವಂತ ದಂತಕತೆ ಎಂಬ ಹಾಗೆ ಬಿಂಬಿಸುತ್ತಿದ್ದುದು ಬಿಜೆಪಿಗೆ ಭಾರೀಲಾಭ ತಂದುಕೊಟ್ಟಿತು. ಈ ಚುನಾವಣೆಯಲ್ಲಿ ಅಮಿತ್‌ಶಾ ಅವರ ಸಂಘಟನಾತ್ಮಕ ಚಾತುರ್ಯದೊಂದಿಗೆ ಬಿಜೆಪಿಯು ತನ್ನ ಕಾರ್ಯಕರ್ತರು ಹಾಗೂ ತಂಡವನ್ನು ಅತ್ಯಂತ ಬೃಹತ್ ಹಾಗೂ ಸುಸಜ್ಜಿತವಾದ ಚುನಾವಣಾ ಯಂತ್ರವಾಗಿ ಮಾರ್ಪಡಿಸಿತು. ಮೋದಿ, ಬಿಜೆಪಿ ಕಾರ್ಯಕರ್ತರು ಹಾಗೂ ಮಾಧ್ಯಮಗಳು ಸಂಪೂರ್ಣವಾಗಿ ಭಾರತೀಯ ರಾಜಕೀಯ ಪ್ರಕ್ರಿಯೆಗೆ ಮರುವ್ಯಾಖ್ಯಾನವನ್ನು ನೀಡಿದವು.

ಈ ಜಂಟಿ ಸಂಯೋಜನೆಯು, ಜಾತಿರಾಜಕಾರಣ ವನ್ನು ಮೂಲೆಗುಂಪು ಮಾಡಿತು. ಈ ಚುನಾವಣೆಯಲ್ಲಿ ಹಿಂದುತ್ವವಾದವು, ಜಾತಿ ರಾಜಕಾರಣದ ಮೇಲೆ ಭಾಗಶಃ ಗೆಲುವು ಸಾಧಿಸಿರುವಂತೆ ಕಾಣುತ್ತದೆ. ಒಂದು ವೇಳೆ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಗಮನಕ್ಕೆ ತೆಗೆದುಕೊಳ್ಳುವುದಾದರೆ, ಬಿಎಸ್ಪಿ ಹಾಗೂ ಎಸ್ಪಿಗಳು ತಮ್ಮ ರಾಜಕೀಯ ಕಾರ್ಯತಂತ್ರದ ಬಗ್ಗೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. ಮಂಡಲ್ ಸಮಿತಿಯ ಶಿಫಾರಸುಗಳ ಅನುಷ್ಠಾನದ ಬಳಿಕ ಜಾತಿ ರಾಜಕಾರಣ ಅರಲ್ಲೂ ವಿಶೇಷ ಒಬಿಸಿ ಹಾಗೂ ದಲಿತ ರಾಜಕಾರಣವುಬೆಳವಣಿಗೆಯನ್ನು ಕಂಡಿತ್ತು. ಮುಲಾಯಂ, ಲಾಲು, ಕಾನ್ಶಿರಾಮ್ ಹಾಗೂ ಮಾಯಾವತಿ ಜಾತಿ ರಾಜಕಾರಣದ ನೂತನ ಸೇನಾನಿಗಳಾಗಿ ಹೊರಹೊಮ್ಮಿದ್ದರು. ಅವರು ಪ್ರತಿಪಾದಿಸಿದ ಜಾತಿ ರಾಜಕಾರಣವು ಹಿಂದೂ ಕೋಮುವಾದವನ್ನು ಒಂದು ಹಂತವನ್ನು ಮೀರಿ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಮೂವರು ರಾಜಕೀಯವಾಗಿ ತಾವು ವಿಕಸನಗೊಳ್ಳಲು ಹಾಗೂ ಬೆಳವಣಿಗೆಯನ್ನು ಸಾಧಿಸುವಲ್ಲಿ ವಿಫಲರಾದರು. ಮುಲಾಯಂ ಒಬಿಸಿಗಳ ನಾಯಕನಾದರೂ, ದೂರದೃಷ್ಟಿಯ ಕೊರತೆಯು ಅವರನ್ನು ಕೇವಲ ಯಾದವ ಸಮುದಾಯದ ನಾಯಕನಾಗಿ ಸೀಮಿತ ಗೊಳಿಸಿತು. ಅದೇ ರೀತಿ ಮಾಯಾವತಿ, ದಲಿತ ಸಮುದಾಯಕ್ಕೆ ಸೇರಿದ ಜಾಟವ್ ಪಂಗಡದ ನಾಯಕಿಯಾಗಿ ಉಳಿದುಕೊಂಡರೇ ಹೊರತು ಅದಕ್ಕಿಂತ ಮೇಲಕ್ಕೇರಲಿಲ್ಲ. ಜನಸಾಮಾನ್ಯ ಆರ್ಥಿಕತೆಯ ಪ್ರಗತಿ ಹಾಗೂ ಪ್ರಜಾತಾಂತ್ರಿಕ ಜಾಗೃತಿಯ ಹರಡುವಿಕೆ ಹಾಗೂ ಇತರ ಸಮುದಾಯಗಳ ವಿಶ್ವಾಸವನ್ನು ಗಳಿಸುವಲ್ಲಿ ಈ ನಾಯಕರ ವೈಫಲ್ಯ ಅವರಿಗೆ ಮಾರಕವಾಗಿ ಪರಿಣಮಿಸಿದೆ.

ಈ ಮಧ್ಯೆ ಮೋದಿ ಹಾಗೂ ಶಾ ಅವರು ರಾಜ್‌ಭರ್ ಹಾಗೂ ನಿಷಾದ್‌ನಂತಹ ಸಣ್ಣಪುಟ್ಟ ಜಾತಿಗಳ ನಾಯಕರನ್ನು ಪಕ್ಷದೆಡೆಗೆ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈಗ ಉದ್ಭವಿಸಿರುವ ಅತಿ ದೊಡ್ಡ ಪ್ರಶ್ನೆಯೆಂದರೆ ಇಂದಿರಾ ಹಾಗೂ ನೆಹರೂ ಯುಗದಲ್ಲಿ ಕಾಂಗ್ರೆಸ್ ಪಡೆದುಕೊಂಡಿದ್ದ ಸ್ಥಾನಮಾನವನ್ನು ಹಿಂದುತ್ವವಾದವು, ಬಿಜೆಪಿಗೆ ದೊರಕಿಸಿಕೊಡುವಲ್ಲಿ ಸಫಲವಾಗಿದೆಯೇ ಎಂಬುದಾಗಿದೆ. ಮೋದಿ ನೇತೃತ್ವದ ಹಿಂದುತ್ವವಾದವು ನೂತನ ಯಜಮಾನಿಕೆಯ ಸಿದ್ಧಾಂತವಾಗಿದೆ. ಈ ಸಿದ್ಧಾಂತವನ್ನು ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಸಂಘಟನೆಗೆ ಪದಚ್ಯುತಗೊಳಿಸುವುದು ಅಷ್ಟು ಸುಲಭವಲ್ಲ. ಪ್ರತಿಪಕ್ಷಗಳು ನೂತನ ರಾಜಕೀಯ ಕಾರ್ಯತಂತ್ರಕ್ಕಾಗಿ ಅನ್ವೇಷಣೆ ನಡೆಸಲು ಕಾಲ ಈಗ ಪಕ್ವವಾಗಿದೆ. ಬಿಜೆಪಿಯ ದೈತ್ಯ ಚುನಾವಣಾ ಯಂತ್ರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಕೂಡಾ ಅಷ್ಟೇ ಸಮರ್ಥವಾದ ಚುನಾವಣಾ ಯಂತ್ರವೊಂದನ್ನು ಮರು ಸಂಶೋಧಿಸುವ ಅಗತ್ಯವಿದೆ. ಮೋದಿ ರಾಜಕಾರಣದಲ್ಲಿ ಯಾಕೆ ಯಶಸ್ವಿಯಾಗುತ್ತಿದ್ದಾರೆಂದರೆ ಅರು ಗೆಲ್ಲಲೆಂದೇ ಹೋರಾಡುತ್ತಾರೆ. ಆದರೆ ರಾಹುಲ್ ಅಥವಾ ಇತರ ಪ್ರತಿಪಕ್ಷ ನಾಯಕರ ವಿಷಯದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ಒಂದು ‘ಯು’್ಧವನ್ನು ಗೆದ್ದ ಆನಂತರ ಮೋದಿ ವಿಶ್ರಮಿಸುವುದಿಲ್ಲ. ತಕ್ಷಣವೇ ಅವರು ಮತ್ತೊಂದು ಚುನಾವಣಾ ಸಮರಕ್ಕೆ ಸಿದ್ಧರಾಗುತ್ತಾರೆ. ಅವರ ದೃಷ್ಟಿಯಲ್ಲಿ ರಾಜಕೀಯವೆಂಬುದು ಶಾಶ್ವತವಾದ ಯುದ್ಧವಾಗಿದ್ದು ಪ್ರತಿಪಕ್ಷವು ಶಾಶ್ವತವಾದ ಶತ್ರುವಾಗಿದೆ ಮತ್ತು ಆ ಶತ್ರುವನ್ನು ಎಷ್ಟೇ ಬೆಲೆ ತೆತ್ತಾದರೂ ನಿರ್ಮೂಲನೆ ಗೊಳಿಸಬೇಕಾಗಿದೆ ಎಂಬುದೇ ಅವರ ಗುರಿಯಾಗಿದೆ.


ಕೃಪೆ: ಎನ್‌ಡಿಟಿವಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)