varthabharthi

ಸಂಪಾದಕೀಯ

ಗಾಂಧಿಯಿಂದ ಗೋಡ್ಸೆಯೆಡೆಗೆ ಜಾರಿದ ಚುನಾವಣಾ ಫಲಿತಾಂಶ

ವಾರ್ತಾ ಭಾರತಿ : 24 May, 2019

ಪ್ರತಿ ಮಹಾ ಚುನಾವಣೆಯಲ್ಲೂ ಆಡಳಿತ ವಿರೋಧಿ ಅಲೆಯೊಂದು ಕೆಲಸ ಮಾಡುತ್ತದೆ. ಕಳೆದ ಬಾರಿಯ ಚುನಾವಣೆಯಲ್ಲಿ ಯುಪಿಎ ಸೋತು, ಬಿಜೆಪಿ ಅಧಿಕಾರ ಹಿಡಿದಾಗ ಆಡಳಿತ ವಿರೋಧಿ ಅಲೆಯೂ ಒಂದು ಕಾರಣ ಎಂದು ನಂಬಲಾಗಿತ್ತು. ಈ ಬಾರಿ ಮೋದಿ ಆಡಳಿತ ದೇಶದ ಶ್ರೀಸಾಮಾನ್ಯನ ಬದುಕಿನಲ್ಲಿ ಸ್ವರ್ಗವನ್ನೇನು ತಂದಿಳಿಸಲಿಲ್ಲ. ನೋಟು ನಿಷೇಧ, ಜಿಎಸ್‌ಟಿ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿತು ಮಾತ್ರವಲ್ಲ, ಇವು ಭಾರೀ ಹಗರಣಗಳಿಗೂ ಕಾರಣವಾದವು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿತು. ಪೆಟ್ರೋಲ್ ಬೆಲೆ ಏರಿಕೆಯಾಯಿತು. ಜೊತೆಗೆ ಹಿಂಸಾಚಾರಗಳ ಪ್ರಮಾಣವೂ ಹೆಚ್ಚಿತು. ರಫೇಲ್ ಹಗರಣ ಮಾಧ್ಯಮಗಳ ಮುಖಪುಟ ಸುದ್ದಿಯಾಯಿತು.

ಚುನಾವಣೆಯ ಮೇಲೆ ಶ್ರೀಸಾಮಾನ್ಯನ ಬದುಕಿನ ಏರುಪೇರು ತನ್ನ ಪ್ರಭಾವವನ್ನು ಬೀರಿದರೆ ಅದು ಪ್ರಜಾಸತ್ತೆಯ ಗಟ್ಟಿತನವನ್ನು ಹೇಳುತ್ತದೆ. ಈ ಕಾರಣದಿಂದ, ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಒಂದಿಷ್ಟಾದರೂ ತನ್ನ ಪರಿಣಾಮವನ್ನು ಬೀರುತ್ತದೆ ಎಂದು ರಾಜಕೀಯ ಪಂಡಿತರು ನಿರೀಕ್ಷಿಸಿದ್ದರು. ಆದರೆ ಎಲ್ಲ ನಿರೀಕ್ಷೆಗಳನ್ನು ಬುಡಮೇಲು ಮಾಡುವಂತೆ ಮೋದಿ ನೇತೃತ್ವದ ಬಿಜೆಪಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿದಿದೆ. ಈ ಬಹುಮತವನ್ನು ಗೌರವಿಸುತ್ತಲೇ, ವಿರೋಧ ಪಕ್ಷಗಳು ಮತ್ತು ಜಾತ್ಯತೀತವಾದಿಗಳು ಆತ್ಮಾವಲೋಕನ ಮಾಡಬೇಕಾದ ಸಮಯ ಬಂದಿದೆ. ಈ ಫಲಿತಾಂಶ ಭವಿಷ್ಯದಲ್ಲಿ ದೇಶದ ಪ್ರಜಾಸತ್ತೆಯ ಮೇಲೆ ಬೀರಬಹುದಾದ ಪರಿಣಾಮಗಳನ್ನು ಎದುರಿಸಲು ಈಗಲೇ ಸಿದ್ಧತೆ ನಡೆಸದೇ ಇದ್ದರೆ, ಮುಂದೊಂದು ದಿನ ದೇಶದಲ್ಲಿ ಚುನಾವಣೆಯೇ ನಡೆಯದಿರುವಂತಹ ಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ ಜಾತ್ಯತೀತ ಮನಸ್ಸುಗಳು ತಮ್ಮೆಲ್ಲ ಶಕ್ತಿಗಳನ್ನು ಒಂದಾಗಿಸಿ ದೇಶಕ್ಕಾಗಿ ಎದ್ದು ನಿಲ್ಲುವುದಕ್ಕೆ ಈ ಚುನಾವಣೆಯ ಫಲಿತಾಂಶ ಕಾರಣವಾಗಬೇಕು.

ಈ ಬಾರಿಯ ಫಲಿತಾಂಶವನ್ನೂ ಪಕ್ಷಗಳು ಇವಿಎಂ ತಲೆಗೆ ಕಟ್ಟಿ ಮುಜುಗರದಿಂದ ಪಾರಾಗಲು ಹವಣಿಸಬಹುದು. ಇವಿಎಂನಲ್ಲಿ ಅಕ್ರಮ ನಡೆದಿರಬಾರದು ಎಂದಿಲ್ಲ. ಹಲವೆಡೆ ಇವಿಎಂನಲ್ಲಿ ಅಕ್ರಮ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೆ ಇವಿಎಂ ಅಕ್ರಮಗಳ ಮೂಲಕ ಈ ಮಟ್ಟಿನ ಫಲಿತಾಂಶವನ್ನು ಬಿಜೆಪಿಗೆ ಪಡೆಯಲು ಸಾಧ್ಯವಿಲ್ಲ. ಉಳಿದಂತೆ ಐಟಿ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ಬಳಸಿರುವುದು, ಮಾಧ್ಯಮಗಳನ್ನು ಪೂರ್ಣ ಪ್ರಮಾಣದಲ್ಲಿ ತನ್ನ ಕರಪತ್ರವಾಗಿಸಿದ್ದು, ಚುನಾವಣಾ ಆಯೋಗವನ್ನು ತನ್ನ ಜೀತಕ್ಕಿಳಿಸಿದ್ದು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳನ್ನು ತನಗೆ ಪೂರಕವಾಗಿ ಬಳಸಿಕೊಂಡದ್ದು ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರಿರುವುದು ಸುಳ್ಳಲ್ಲ. ಈ ಚುನಾವಣೆಯಲ್ಲಿ ದೇಶದ ಅಭಿವೃದ್ಧಿ ಸಂಪೂರ್ಣ ಬದಿಗೆ ಸರಿಯಿತು. ಸೇನೆ, ಪಾಕಿಸ್ತಾನ, ಬಾಲಕೋಟ್, ಪುಲ್ವಾಮ ಮೊದಲಾದ ಶಬ್ದಗಳನ್ನು ಜಪಿಸುತ್ತಾ ನರೇಂದ್ರ ಮೋದಿ ದೇಶಾದ್ಯಂತ ಚುನಾವಣಾ ಪ್ರಚಾರ ನಡೆಸಿದರು. ಆ ಮೂಲಕವೇ ಭಾರೀ ಮತಗಳನ್ನು ತಮ್ಮೆಡೆಗೆ ಸೆಳೆದುಕೊಂಡರು. ಮಾಧ್ಯಮಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ಕಟ್ಟಿಕೊಟ್ಟ ಮೋದಿಯವರ ನಕಲಿ ವರ್ಚಸ್ಸಿಗೆ ಮತದಾರರು ಈ ಬಾರಿಯೂ ಬಲಿಯಾದರು.ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಅಭಿವೃದ್ಧಿಯ ಬದಲು, ಭಾವನಾತ್ಮಕ ವಿಷಯಗಳೇ ಆದ್ಯತೆಯನ್ನು ಪಡೆಯಬಹುದು. ಕಳೆದ ಬಾರಿಗಿಂತ ಈ ಬಾರಿಯ ಫಲಿತಾಂಶ ಎರಡು ಕಾರಣಗಳಿಗಾಗಿ ಅಪಾಯಕಾರಿ.

ಚುನಾವಣಾ ಹೊತ್ತಿನಲ್ಲಿ ದೇಶದೊಳಗೆ ಗೋಡ್ಸೆಯ ದೇಶಭಕ್ತಿ ಮೊದಲ ಬಾರಿಗೆ ಚರ್ಚೆಗೊಳಗಾಯಿತು. ಗೋಡ್ಸೆಯ ಪರವಾಗಿ ಧ್ವನಿ ಸೇರಿಸಿದ ಬಿಜೆಪಿಯ ನಾಯಕರು ಈ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ, ರಾಜಕೀಯವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಸನಾತನಸಂಸ್ಥೆಯ ಒಳಗಿನ ಶಕ್ತಿಗಳು ಪ್ರಜಾಸತ್ತೆಯೊಳಗೆ ತಮ್ಮ ಮೀಸೆಯನ್ನು ತೂರಿಸಿವೆ. ಈ ಶಕ್ತಿಗಳಿಗೆ ಪ್ರಜಾಸತ್ತೆ ಮತ್ತು ಸಂವಿಧಾನವೇ ಪ್ರಮುಖ ಶತ್ರುವಾಗಿದೆ. ಇದೊಂದು ರೀತಿ, ಮರವನ್ನು ಕಡಿಯಲು ಕೊಡಲಿಗೆ ಮರದ ಹಿಡಿಕೆ ಬಳಸಿದಂತೆ. ಪ್ರಜಾಸತ್ತೆಯನ್ನು ನಾಶ ಮಾಡಲು ಈ ಶಕ್ತಿಗಳು ಪ್ರಜಾಸತ್ತೆಯನ್ನೇ ಬಳಸಿಕೊಳ್ಳುತ್ತಿವೆ. ಬಿಜೆಪಿ ಅಟಲ್ ಬಿಹಾರಿಯ ಮೃದು ಹಿಂದುತ್ವದಿಂದ ದಾರಿಯಿಂದ ಮೋದಿಯ ಖಟ್ಟರ್ ಹಿಂದುತ್ವದ ತಿರುವಲ್ಲಿ ಸಾಗಿ, ಗೋಡ್ಸೆಯ ಉಗ್ರವಾದಿ ಹಿಂದುತ್ವದ ಪ್ರಪಾತದ ಕಡೆಗೆ ಸಾಗುತ್ತಿರುವ ಸೂಚನೆಯನ್ನು ಈ ಫಲಿತಾಂಶ ನೀಡಿದೆ. ಭಾರತೀಯ ಅಸ್ಮಿತೆಯನ್ನು ಸಂಪೂರ್ಣ ಇಲ್ಲವಾಗಿಸಿ ಅಲ್ಲಿ ಗೋಡ್ಸೆ, ಗೋಳ್ವಾಲ್ಕರ್‌ಗಳನ್ನು ತಂದು ಕೂರಿಸುವ ಪ್ರಯತ್ನಕ್ಕೆ ಸಿಕ್ಕಿದ ಮೊದಲ ಜಯ ಇದು. ಗಾಂಧೀಜಿಯ ಅಹಿಂಸೆಯನ್ನು ಪಕ್ಕಕ್ಕೆ ಸರಿಸಿ, ಗೋಡ್ಸೆಯ ಹಿಂಸೆಯನ್ನು ಈ ಫಲಿತಾಂಶ ಮುನ್ನೆಲೆಗೆ ತಂದಿದೆ. ಮುಂದಿನ ದಿನಗಳಲ್ಲಿ ದಲಿತರು, ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆಸಲು ಸಿಕ್ಕಿದ ಪರೋಕ್ಷ ಪರವಾನಿಗೆ ಎಂದು ಭಾವಿಸುವ ಸಾಧ್ಯತೆಗಳು ಹೆಚ್ಚಿವೆ.

ಭಾರತದೊಳಗೆ ನಿಧಾನಕ್ಕೆ ಬೆಳೆಯುತ್ತಿರುವ ಭಯೋತ್ಪಾದನಾ ಜಾಲವನ್ನು ವಿಶ್ವ ಈಗಾಗಲೇ ಗುರುತಿಸಿದೆ. ಆದುದರಿಂದ, ಜಾಗತಿಕವಾಗಿ ಈ ಫಲಿತಾಂಶ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಅಪ್ರಬುದ್ಧತೆ ಭಾಗಶಃ ಬಯಲಾಗಿದೆ. ಇಷ್ಟಾದರೂ ಮೋದಿ ಗೆದ್ದಿದ್ದಾರೆ ಎಂದರೆ ಅದರ ಹಿಂದೆ ಆರೆಸ್ಸೆಸ್, ಸಂಘಪರಿವಾರದ ಹಿಂಸಾತ್ಮಕ ಮನಸ್ಸುಗಳ ದಣಿವಿಲ್ಲದ ಶ್ರಮವಿದೆ. ಜಾತ್ಯತೀತ ಪಕ್ಷಗಳು ಚುನಾವಣೆಯ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವ ಸಮಯ ಬಂದಿದೆ. ಚುನಾವಣೆಯೆಂದರೆ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಪ್ರಚಾರಕ್ಕಿಳಿದು ಮತ ಯಾಚನೆ ಮಾಡುವ ಪ್ರಕ್ರಿಯೆಯಲ್ಲ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಬಿಜೆಪಿಗೂ ಇತರ ರಾಜಕೀಯ ಪಕ್ಷಗಳಿಗೂ ಒಂದು ದೊಡ್ಡ ವ್ಯತ್ಯಾಸವಿದೆ. ಬಿಜೆಪಿಯ ಹಿಂದೆ ನಿರ್ದಿಷ್ಟ ಸಿದ್ಧಾಂತವನ್ನು ತನ್ನದಾಗಿಸಿಕೊಂಡು ಹಗಲು ರಾತ್ರಿ ದುಡಿಯುವ ಸಂಘಟನೆಗಳಿವೆ. ಆರೆಸ್ಸೆಸ್‌ನ ಶಾಖೆಗಳು ದೇಶಾದ್ಯಂತ ಹರಡಿಕೊಂಡಿವೆ.ಹಳ್ಳಿ, ಕಾಡುಗಳನ್ನೂ ಇವುಗಳು ತಮ್ಮ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡಿವೆ. ಚುನಾವಣೆ ನಡೆಯಲಿ, ನಡೆಯದಿರಲಿ ತಮ್ಮ ಸಿದ್ಧಾಂತವನ್ನು ಜನರಿಗೆ ಬೇರೆ ಬೇರೆ ಬಗೆಯಲ್ಲಿ ತಲುಪಿಸುವುದಕ್ಕಾಗಿ ಪ್ರತಿ ದಿನ ಕೆಲಸ ಮಾಡುತ್ತಿವೆ. ಇಂದು ಆರೆಸ್ಸೆಸ್ ಬರೇ ಮನುಸಿದ್ಧಾಂತವನ್ನು ಪ್ರತಿಪಾದಿಸುವ ಶಾಖೆಯಾಗಿಯಷ್ಟೇ ಉಳಿದಿಲ್ಲ.

ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಸೇನೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಆಯಕಟ್ಟಿನ ಜಾಗದಲ್ಲಿರುವ ಉದ್ಯೋಗಗಳಿಗೆ ತನ್ನ ಕಾರ್ಯಕರ್ತರನ್ನು ನುಗ್ಗಿಸುತ್ತಿವೆ. ಸೇವೆಯ ವೇಷದಲ್ಲಿ ಮಾತ್ರವಲ್ಲ, ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ನಿರಂತರ ತಳಸ್ತರದ ಜನರ ಸಂಪರ್ಕದಲ್ಲಿದೆ. ಇವೆಲ್ಲವೂ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಮತಗಳಾಗಿ ಪರಿವರ್ತನೆಯಾಗುತ್ತವೆ. ಇದೇ ಸಂದರ್ಭದಲ್ಲಿ ಜಾತ್ಯತೀತ ವೌಲ್ಯಗಳನ್ನು, ಈ ದೇಶದ ನಿಜವಾದ ಇತಿಹಾಸವನ್ನು, ಅಂಬೇಡ್ಕರ್, ನಾರಾಯಣ ಗುರು ಚಿಂತನೆಗಳನ್ನು ಅಷ್ಟೇ ವ್ಯವಸ್ಥಿತವಾಗಿ ಹರಡುವ ಯಾವ ಸಂಸ್ಥೆಗಳೂ ನಮ್ಮ ನಡುವೆ ಇಲ್ಲ. ಕಾಂಗ್ರೆಸ್‌ನೊಳಗೆ ‘ಭಾರತ ಸೇವಾ ದಳ’ ಎನ್ನುವ ವಿಭಾಗವೊಂದಿದೆಯಾದರೂ, ಕಾಂಗ್ರೆಸ್‌ನ ಸಂತ್ರಸ್ತರ, ಸೋಮಾರಿಗಳ ಅಡ್ಡೆಯಾಗಿ ಅವುಗಳು ಪಾಳುಬಿದ್ದಿವೆ. ಈ ಕಾರಣದಿಂದಲೇ ಹೊಸ ತಲೆಮಾರು ಈ ದೇಶದ ಜಾತ್ಯತೀತ ಚರಿತ್ರೆಯ ಕುರಿತಂತೆ ಸಂಪೂರ್ಣ ಅಜ್ಞಾನಿಯಾಗಿದೆ. ಆ ಖಾಲಿ ಜಾಗದಲ್ಲಿ ಆರೆಸ್ಸೆಸ್ ತನ್ನದೇ ಕಪೋಲಕಲ್ಪಿತ ಹಿಂದುತ್ವ ಇತಿಹಾಸವನ್ನು ತುಂಬುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಈ ಬಾರಿ ಹೊಸದಾಗಿ ಸೇರ್ಪಡೆಗೊಂಡ ದೊಡ್ಡ ಸಂಖ್ಯೆಯ ಯುವ ಮತದಾರರಿಗೆ ಈ ಕಾರಣಕ್ಕಾಗಿಯೇ ಮೋದಿ ‘ನಾಯಕ’ರಾಗಿ ಕಂಗೊಳಿಸುತ್ತಿದ್ದಾರೆ. ಗೋಡ್ಸೆ ದೇಶಭಕ್ತನಂತೆ ಕಾಣುತ್ತಿದ್ದಾನೆ. ಬಿಜೆಪಿಯ ಗೆಲುವಿನಲ್ಲಿ ಈ ಯುವ ತಲೆಮಾರಿನ ಪಾತ್ರವೂ ದೊಡ್ಡದಿದೆ.

ಒಂದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಆರೆಸ್ಸೆಸ್ ಅದೆಷ್ಟು ವ್ಯವಸ್ಥಿತವಾಗಿ ತನ್ನ ಬಲೆಯನ್ನು ಹೆಣೆದಿದೆಯೆಂದರೆ, ಸರಕಾರ ಬದಲಿಸಿದಾಕ್ಷಣ ಆಡಳಿತ ನಡೆಸುವವರ ಮನಸ್ಥಿತಿ ಬದಲಾಗಬೇಕಾಗಿಲ್ಲ. ಪೊಲೀಸ್ ಇಲಾಖೆ, ಸೇನೆ, ಜಿಲ್ಲಾಡಳಿತ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಆರೆಸ್ಸೆಸ್ ಹಂತಹಂತವಾಗಿ ತನ್ನ ಜನರನ್ನು ಈಗಾಗಲೇ ಸೇರಿಸಿರುವಾಗ, ಸೇರಿಸುತ್ತಿರುವಾಗ ಮುಂದೊಮ್ಮೆ ಕಾಂಗ್ರೆಸ್ ಸೇರಿದಂತೆ ಯಾವ ಸರಕಾರ ಬಂದರೂ ಆಡಳಿತಶಾಹಿ ತನಗೆ ಪೂರಕವಾಗಿ ಆ ಸರಕಾರವನ್ನು ಬಳಸಿಕೊಳ್ಳುತ್ತದೆ ಅಥವಾ ದಾರಿತಪ್ಪಿಸುತ್ತದೆ. ಈ ನಿಟ್ಟಿನಲ್ಲಿ ಚುನಾವಣೆಯ ಉದ್ದೇಶವನ್ನಷ್ಟೇ ಇಟ್ಟುಕೊಳ್ಳದೇ ಈ ದೇಶದ ಜಾತ್ಯತೀತ, ಪ್ರಜಾಸತ್ತಾತ್ಮಕ ವೌಲ್ಯಗಳಿಗಾಗಿ ದುಡಿಯುವ, ಆ ವೌಲ್ಯಗಳನ್ನು ಹೊಸತಲೆಮಾರಿಗೆ ತಲುಪಿಸುವ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ಪರ್ಯಾಯ ಸಾಂಸ್ಕೃತಿಕ ಸಂಘಟನೆಗಳನ್ನು ಹುಟ್ಟು ಹಾಕುವುದಷ್ಟೇ ಅಲ್ಲ, ನವ ಭಾರತಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗಿದೆ. ಚುನಾವಣೆಯಲ್ಲಿ ತಾವು ಎದುರಿಸುತ್ತಿರುವುದು ಬಿಜೆಪಿ ಎನ್ನುವ ರಾಜಕೀಯ ಪಕ್ಷವನ್ನಲ್ಲ, ಆರೆಸ್ಸೆಸ್ ಎನ್ನುವ ಸೈದ್ಧಾಂತಿಕ ಸಂಘಟನೆಯನ್ನು ಎಂಬ ಅರಿವನ್ನು ಬೆಳೆಸಿಕೊಂಡು ಕಾರ್ಯತಂತ್ರ ರೂಪಿಸಬೇಕಾಗಿದೆ. ಚುನಾವಣೆಯಲ್ಲಿ ಇವಿಎಂನ್ನು ತಿರುಚಿ ಬಿಜೆಪಿ ಗೆದ್ದಿದ್ದರೆ ಅದು ಗಂಭೀರ ವಿಷಯವೇ ಸರಿ. ಆದರೆ ಇವಿಎಂನ್ನು ತಿರುಚದೆಯೇ ಈ ಪ್ರಮಾಣದಲ್ಲಿ ಬಿಜೆಪಿ ಗೆದ್ದಿದೆಯೆಂದಾದರೆ? ಇವಿಎಂನ್ನು ಸರಿಪಡಿಸಬಹುದು. ಆದರೆ ಕೋಮುವಾದಿಗಳಿಂದ ಹ್ಯಾಕ್ ಆಗಿರುವ ಯುವ ಮನಸ್ಸನ್ನು ಸರಿಪಡಿಸುವುದು ಹೇಗೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)