varthabharthi

ನಿಮ್ಮ ಅಂಕಣ

ಈ ಫಲಿತಾಂಶ ‘ಪರ್ಯಾಯ ರಾಜಕಾರಣವನ್ನು’ ಉತ್ಪಾದಿಸಿದೆಯೇ?

ವಾರ್ತಾ ಭಾರತಿ : 25 May, 2019
ಡಾ. ಕಿರಣ್ ಎಂ. ಗಾಜನೂರು

‘‘ನರೇಂದ್ರ ಮೋದಿಯವರನ್ನು ಭಾರತದ ಟ್ರಂಪ್ ಎಂದು ಕೆಲವರು ಕರೆಯುತ್ತಾರೆ, ಮೋದಿ ಮತ್ತು ಟಂಪ್ ನಡುವಿನ ಈ ಹೋಲಿಕೆಯ ಕುರಿತು ನಿಮ್ಮ ಅಭಿಪ್ರಾಯವೇನು?’’ ಇದು ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್ ಅವರಿಗೆ ಕೇಳಿದ ಪ್ರಶ್ನೆ...! ಇದಕ್ಕೆ ಆಕೆ ಕೊಟ್ಟ ಉತ್ತರ, ‘‘ಖಂಡಿತ ಈ ಹೋಲಿಕೆ ಸರಿಯಲ್ಲ. ಅಮೆರಿಕದ ಟ್ರಂಪ್ ಅಲ್ಲಿನ ವ್ಯವಸ್ಥೆಯ ತಪ್ಪುಗಳ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದಾರೆ, ಆದರೆ ಭಾರತದಲ್ಲಿ ನರೇಂದ್ರ ಮೋದಿ 1925ರಿಂದ ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದಾರೆ. ಇಂದು ಮೋದಿ ಎಂದರೆ ಕೇವಲ ವ್ಯಕ್ತಿಯಲ್ಲ, ಅದೊಂದು ವ್ಯವಸ್ಥೆ. ಆ ಕಾರಣಕ್ಕೆ ಈ ದೇಶದ ಮಾಧ್ಯಮಗಳು, ನ್ಯಾಯಾಲಯ, ಪೊಲೀಸ್, ಮಿಲಿಟರಿ, ಗುಪ್ತಚರ ಇಲಾಖೆ, ಚುನಾವಣಾ ಆಯೋಗ ಎಲ್ಲವೂ ಇಂದು ಬಹುತೇಕ ನಮೋಮಯವಾಗಿದೆ. ಆಧುನಿಕ ಭಾರತದ ಚರಿತ್ರೆ ಈ ಹಂತವನ್ನು ದಾಟಲೇಬೇಕಿದೆ. ಆದರೆ ಭಾರತ ಈ ಹಂತ ದಾಟುವಾಗ ನಡೆಯುವ ಅಂಚಿನ ವರ್ಗಗಳ ಮೇಲಿನ ಹಿಂಸೆ, ಶೋಷಣೆಗಳ ಪ್ರಮಾಣ ಕಡಿಮೆ ಆಗಿರಲಿ ಎಂಬದಷ್ಟೆ ನಮ್ಮಂತಹವರ ನೀರಿಕ್ಷೆ...!’’ ಎಂಬುದಾಗಿತ್ತು.

ನನಗೆ ಅರುಂಧತಿ ಅವರು ಭಾರತದ ವರ್ತಮಾನದ ಕುರಿತು ತುಸು ಉತ್ಪ್ರೇಕ್ಷೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅನ್ನಿಸಿದರೂ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಯಾವ ವಿಷಯಗಳೂ ಈ ದೇಶದ ಸಾಮಾನ್ಯ ಜನರ ಬದುಕಿಗೆ ಸಂಬಂಧಿಸಿದ ಸಂಗತಿಗಳಾಗಿರಲಿಲ್ಲ. ಬದಲಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಕುರಿತು ಈಗಾಗಲೇ ತಾವೇ ಸೃಷ್ಟಿಸಿಕೊಂಡ ಅಥವಾ ಮಾಧ್ಯಮಗಳು ಸೃಷ್ಟಿಸಿರುವ ನುಡಿಗಟ್ಟುಗಳನ್ನು ಅತ್ಯಂತ ಅಸೂಕ್ಷ್ಮ ಭಾಷೆಯ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗಿ ಚುನಾವಣಾ ಪ್ರಚಾರವನ್ನು ಬಳಸಿಕೊಂಡವು. ಒಂದು ಅರ್ಥದಲ್ಲಿ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಜಾಪ್ರಭುತ್ವದ ಮೂಲಧಾತುವಾದ ‘ಜನ’ ಅವರ ‘ಧ್ವನಿ’ ಅದೃಶ್ಯವಾಗಿತ್ತು.

ಸ್ವತಂತ್ರ ಭಾರತದಲ್ಲಿ ನಡೆದ ಹಲವು ಲೋಕಸಭಾ ಚುನಾವಣೆಗಳು ವಿವಿಧ ಪಕ್ಷಗಳ ನಡುವೆ ಮಹತ್ವದ ಸೈದ್ಧಾಂತಿಕ ಚರ್ಚೆಗಳಾಗಿ ಮಾರ್ಪಟ್ಟಿವೆ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ 1952, 1957, 1962, 1967 ಮತ್ತು 1972ರ ಲೋಕಸಭಾ ಚುನಾವಣೆಗಳು ಈ ದೇಶದಲ್ಲಿ ಕಾಂಗ್ರೆಸ್ ಆಧಿಪತ್ಯವನ್ನು ಸ್ಥಾಪಿಸಿದರೂ, 1957 ಮತ್ತು 1967ರ ಚುನಾವಣೆಗಳು ಒಂದು ಅರ್ಥದಲ್ಲಿ ಕಾಂಗ್ರೆಸ್ ಈ ದೇಶದ ರಾಜಕಾರಣದಲ್ಲಿ ಹೊಂದಿದ್ದ ಯಾಜಮಾನ್ಯಕ್ಕೆ ಸ್ವಲ್ಪಪ್ರಮಾಣದಲ್ಲಿ ಪೆಟ್ಟನ್ನು ನೀಡಿದ ಫಲಿತಾಂಶ ಗಳಾಗಿದ್ದವು. ಅದರಲ್ಲೂ ತರ್ತುಪರಿಸ್ಥಿತಿಯ ನಂತರ 1977ರಲ್ಲಿ ನಡೆದ ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವ ಚರಿತ್ರೆಯ ಹೊಸ ಅಧ್ಯಾಯಕ್ಕೆ ಕಾರಣವಾಗಿ ಮೊದಲಬಾರಿ ಕೇಂದ್ರದಲ್ಲಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂದಿತು. ಈ ಹಂತದಲ್ಲಿ ನಡೆದ ಚುನಾವಣಾ ಪ್ರಚಾರಗಳು ಹಲವು ಸೈದ್ಧಾಂತಿಕ ದೃಷ್ಟಿಕೋನಗಳಿಂದ ಭಾರತೀಯ ಸಮಾಜ ಮತ್ತು ಜನಸಮುದಾಯವನ್ನು ರಾಜಕೀಯವಾಗಿ ಒಗ್ಗೂಡಿಸಲು ಪ್ರಯತ್ನಿಸಿದ್ದವು.

ಇಂದಿರಾ ಗಾಂಧಿಯ ‘ಗರೀಬಿ ಹಠಾವೋ’, ‘ಸಾಮಾಜಿಕ ಬದಲಾವಣೆಗಾಗಿ ಸಂಪೂರ್ಣ ಕ್ರಾಂತಿ’ ಎಂಬ ಜೆಪಿ ಘೋಷಣೆಗಳು ಭಾರತೀಯ ಚುನಾವಣಾ ರಾಜಕೀಯವನ್ನು ಮಹತ್ವದ ಸೈದ್ಧಾಂತಿಕ ಮತ್ತು ತಾತ್ವಿಕ ಜಿಜ್ಞಾಸೆಯಾಗಿ ಬದಲಾಯಿಸಿದವು. 20ನೇ ಶತಮಾನದ ಅಂತ್ಯ ಮತ್ತು 21ನೇ ಶತಮಾನದ ಭಾರತದ ರಾಜಕೀಯವನ್ನು ಪಂಡಿತರು ಸಮ್ಮಿಶ್ರ ಸರಕಾರದ ಯುಗ ಎಂದು ಕರೆದಿದ್ದರೂ, ಆಗ ನಡೆದ ಚುನಾವಣಾ ಚರ್ಚೆಗಳು ಯುಪಿಎ ಮೈತ್ರಿಕೂಟ ಜಾರಿಗೆ ತಂದ ಉದಾರವಾದಿ ಆರ್ಥಿಕತೆ ಮತ್ತು ಜಾಗತೀಕರಣದ ನೀತಿಗಳು ಎಷ್ಟು ಜನವಿರೋಧಿಯಾಗಿವೆ ಎಂಬ ವಿಮರ್ಶೆಯನ್ನು ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಬೆಳೆಸಿ ತಾತ್ವಿಕವಾಗಿ ಮಹತ್ವದ ಜನಾಂದೋಲವನ್ನೇ ರೂಪಿಸಿದವು. ಈ ತಾತ್ವಿಕತೆ ಗ್ರಾಮೀಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ರೈತರು, ಕಾರ್ಮಿಕರು, ದಲಿತ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಮಾಜಿಕ ಪ್ರಜ್ಞೆಯಾಗಿ ಬದಲಾಗಿ ಯುಪಿಎ ಮೈತ್ರಿಕೂಟದ ವಿರುದ್ಧ ನಿಧಾನವಾಗಿ ಒಂದು ಜನಾಭಿಪ್ರಾಯ ಮೂಡಲು ಆರಂಭವಾಯಿತು. ಮೇಲ್ನೋಟಕ್ಕೆ ಇದು ಯುಪಿಎ ವಿರುದ್ಧದ ಜನಾಭಿಪ್ರಾಯ ಎಂದು ಕಂಡರೂ ವಾಸ್ತವದಲ್ಲಿ ಇದು ನವ-ಉದಾರವಾದಿ ಆರ್ಥಿಕ ನೀತಿಗಳ ಜಾರಿಗೆ ಯತ್ನಿಸುತ್ತಿದ್ದ ಬಂಡವಾಶಾಹಿಯ ವಿರುದ್ಧದ ಜನಾಭಿಪ್ರಾಯವಾಗಿತ್ತು. ಈ ಹೋರಾಟದ ಪರಿಣಾಮದ ಹಿನ್ನಲೆಯಲ್ಲಿಯೇ ನಾವು ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಜಾರಿಗೆ ತಂದ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ನಂತರ ಚರ್ಚೆಗೆ ಬಂದ ಆಹಾರ ಭದ್ರತಾ ಕಾಯ್ದೆ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಇತ್ಯಾದಿಗಳನ್ನು ನೋಡಬೇಕಿದೆ.

ಆದರೆ 2014ರ ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಮಹತ್ವವಾದ ಬದಲಾವಣೆಗೆ ಕಾರಣವಾಯಿತು. 1977ರ ಚುನಾವಣೆ ಮತ್ತು 1998-99ರ ವಾಜಪೇಯಿ ಕಾಲದ ಚುನಾವಣೆಗಳು ಸರಕಾರವನ್ನು (ಆಳ್ವಿಕೆಯನ್ನು)ಬದಲಿಸಿದ್ದರೂ ಭಾರತದ ಒಟ್ಟು ರಾಜಕೀಯ ಚರ್ಚೆಯ ದಿಕ್ಕನ್ನು ಆಮೂಲಾಗ್ರವಾಗಿ ಬದಲಿಸಿರಲಿಲ್ಲ. ಏಕೆಂದರೆ ವಾಜಪೇಯಿ ಕಾಲದ ಚುನಾವಣಾ ಚರ್ಚೆಗಳಲ್ಲಿಯೂ ನಾವು ಸಂವಿಧಾನದ ಆಶಯಗಳ, ಭಾರತದ ರಾಜಕೀಯ ಚರಿತ್ರೆ ಕಟ್ಟಿಕೊಂಡ ತಾತ್ವಿಕತೆಯ, ಈ ನೆಲಕ್ಕೆ ಇರುವ ಸಮಾಜವಾದಿ ಹಿನ್ನೆಲೆಯ ಕುರಿತು ಚರ್ಚೆಗಳನ್ನು ಕೇಳಬಹುದಾಗಿತ್ತು ಆ ಕಾಲದ ಚುನಾವಣಾ ಪ್ರಚಾರಗಳು ಸಂಪೂರ್ಣವಾಗಿ ಸೈದ್ಧಾಂತಿಕ ಚರ್ಚೆಯಿಂದ ಮುಕ್ತವಾಗಿರಲಿಲ್ಲ. ಆದರೆ 2014 ಚುನಾವಣೆ ಮೊದಲ ಬಾರಿಗೆ ಯಾವುದೇ ಸೈದ್ಧಾಂತಿಕ ಮತ್ತು ತಾತ್ವಿಕ ಚರ್ಚೆ ಮುಕ್ತ ಚುನಾವಣೆಗಳಿಗೆ ನಾಂದಿ ಹಾಡಿತು. 2019ರ ಚುನಾವಣೆ ಅದೇ ಪರಂಪರೆಯನ್ನು ಮತ್ತಷ್ಟು ಗಟ್ಟಿಯಾಗಿ ಮುಂದುವರಿಸಿದೆ.

ಇಲ್ಲಿ ಮುಖ್ಯವಾಗಿ ಎರಡು ಅಂಶಗಳನ್ನು ಗಮನಿಸಬೇಕಿದೆ. ಮೊದಲನೆಯದು, ಸಂಘಪರಿವಾರ ಮುಂದಿಟ್ಟಿರುವ ಹಿಂದುತ್ವ ಐಡಿಯಾಲಜಿ ವಾಜಪೇಯಿ-ಅಡ್ವಾಣಿ ಕಾಲದಿಂದ ಮೋದಿ-ಅಮಿತ್ ಶಾ ಕಾಲಕ್ಕೆ ಬರುವ ಹೊತ್ತಿಗೆ ಸಂಪೂರ್ಣ ರೂಪಾಂತರವನ್ನೇ ಹೊಂದಿದೆ ಅನ್ನಿಸುತ್ತಿರುವುದು, ಈಗ ಮೋದಿ-ಅಮಿತ್ ಶಾ ಪ್ರಸ್ತಾಪಿಸುವ ಹಿಂದುತ್ವ ಒಂದು ತಾತ್ವಿಕತೆಯಾಗಿ ಉಳಿದಿಲ್ಲ ಬದಲಾಗಿ ಅದೊಂದು ಚುನಾವಣಾ ಭಾಷಣದ ಸರಕಾಗಿ ಬದಲಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ವರ್ತಮಾನದ ಬಿಜೆಪಿ ಮುಂದಿಡುತ್ತಿರುವುದು ಹಿಂದುತ್ವದ ಸಾಂಸ್ಕೃತಿಕ ರಾಜಕಾರಣವಲ್ಲ, ಬದಲಾಗಿ ಹಿಂದುತ್ವದ ಕಾರ್ಪೊರೇಟ್ ರಾಜಕಾರಣ...! ಈ ರೂಪಾಂತರ ಭವಿಷ್ಯದಲ್ಲಿ ಸ್ವತಃ ಬಿಜೆಪಿಗೆ ಅಪಾಯಕಾರಿಯಾಗಲಿದೆ.

ಮತ್ತೊಂದು ಮುಖ್ಯ ಅಂಶ ಯುಪಿಎ ಕಾಲದಲ್ಲಿ ಆಳುವ ಸರಕಾರದ ವಿರುದ್ಧ ಮಹತ್ವವಾದ ಜನ ಚಳವಳಿಯನ್ನು ಕಟ್ಟಿದ ಎಡ ಮತ್ತು ಪ್ರಾದೇಶಿಕ ಪಕ್ಷಗಳು 2014ರ ನಂತರ ತಮ್ಮ ಹೋರಾಟದ ನುಡಿಗಟ್ಟನ್ನೇ ಮರೆತಂತೆ ವಿಸ್ಮತಿಗೆ ಜಾರಿ ಕೇವಲ ನರೇಂದ್ರ ಮೋದಿ ಮತ್ತು ಅಮಿತ್ ಶಾ ಟೀಕೆಗೆ ಸೀಮಿತಗೊಂಡಿರುವುದು. ಇಂದು ಬಹತೇಕ ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಬಳಸುತ್ತಿರುವ ನುಡಿಗಟ್ಟಿಗೂ ಕಾಂಗ್ರೆಸ್ ಹಿಂದಿನಿಂದಲೂ ಬಳಸಿಕೊಂಡು ಬಂದಿರುವ ನುಡಿಗಟ್ಟಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬಂತಾಗಿದೆ.

ಇದರ ಫಲಿತವನ್ನು ಒಂದು ಹಂತದಲ್ಲಿ ಚಿಂತಕರು ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಗುರುತಿಸಿದ್ದರು. ಲೋಕಸಭಾ ಫಲಿತಾಂಶ ಆ ವಾದಕ್ಕೆ ಪುಷ್ಟಿಯನ್ನು ಕೊಟ್ಟಿದೆ. ಈ ಎಲ್ಲಾ ಅಂಶಗಳ ಪರಿಣಾಮವನ್ನು ನಾವು ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಕಂಡಿದ್ದೇವೆ. ಹಾಗಾಗಿ ಈ ಚುನಾವಣೆಯ ಫಲಿತಾಂಶ ಖಂಡಿತ ವರ್ತಮಾನದ ಭಾರತಕ್ಕೆ ಅಗತ್ಯವಾದ ‘ಪರ್ಯಾಯ ರಾಜಕಾರಣವನ್ನು’ ಉತ್ಪಾದಿಸಿದೆ ಅನ್ನಿಸುತ್ತಿಲ್ಲ. ಆ ಸತ್ವ ಖಂಡಿತ ಫಲಿತದಲ್ಲಿ ಕಾಣುತ್ತಿಲ್ಲ...! ನಿಜವಾಗಿಯೂ ‘ಪರ್ಯಾಯ ರಾಜಕೀಯ’ ಹುಟ್ಟಬೇಕಿರುವ ಜನರ ನಡುವೆಯಿಂದ ಅದಕ್ಕೆ ಬೇಕಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನು ರೂಪಿಸುವ ಕುರಿತು ಬೌದ್ಧಿಕ ವಲಯ ಮತ್ತು ಸಾಮಾಜಿಕ ಚಳವಳಿಗಳು ತೀವ್ರವಾಗಿ ಅಲೋಚಿಸಬೇಕಿದೆ, ಸೆಕ್ಯುಲರ್ ಪಕ್ಷಗಳು ಅಹಂ ಬಿಟ್ಟು ಜನರನ್ನು ತಲುಪುವ ನುಡಿಗಟ್ಟನ್ನು ಹುಡುಕಿಕೊಳ್ಳಬೇಕಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಹೀಗೆ ಯೋಚಿಸುವ ಕುರಿತ ಆಶಾವಾದವನ್ನು ನಮಗೆ ಬೆಂಗಳೂರಿನ ಗಾರ್ಮೆಂಟ್‌ಗಳಲ್ಲಿ ದುಡಿಯುವ ಹೆಣ್ಣುಮಕ್ಕಳು ಪಿ.ಎಫ್. ನೀತಿಗೆ ತೋರಿದ ಪ್ರತಿರೋಧ, ಭೂ ಸ್ವಾಧೀನ ಮಸೂದೆ ಕುರಿತು ಸುಗ್ರೀವಾಜ್ಞೆಗೆ ಈ ನೆಲದ ರೈತರು ತೋರಿದ ಪ್ರತಿರೋಧ, ಗುಜರಾತಿನ ಉನಾ ದಲಿತರು ಕಟ್ಟಿದ ಹೋರಾಟಗಳು ಒದಗಿಸುತ್ತವೆ ಎಂಬುದು ನನ್ನ ನಂಬಿಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)