varthabharthi

ರಾಷ್ಟ್ರೀಯ

ಫೇಸ್ ಬುಕ್ ಪೋಸ್ಟ್ ವಿಚಾರ: ದಲಿತ ದಂಪತಿಗೆ ಥಳಿಸಿದ 300ರಷ್ಟಿದ್ದ ಮೇಲ್ಜಾತಿಯ ಜನರ ಗುಂಪು

ವಾರ್ತಾ ಭಾರತಿ : 25 May, 2019

ವಡೋದರ, ಮೇ 25: ಗುಜರಾತ್ ರಾಜ್ಯದ ವಡೋದರದ ಪದ್ರ ತಾಲೂಕಿನ ಮಹುವಾಡ್ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ದಲಿತ ದಂಪತಿಯ ಮೇಲೆ ಸುಮಾರು 200ರಿಂದ 300ರಷ್ಟಿದ್ದ ಮೇಲ್ಜಾತಿಯ ಜನರ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದೆ. 

ದಲಿತರ ವಿವಾಹ ಸಮಾರಂಭಗಳನ್ನು ಗ್ರಾಮದ ದೇವಸ್ಥಾನದಲ್ಲಿ ನಡೆಸಲು ಸರಕಾರ ಅನುಮತಿಸುತ್ತಿಲ್ಲ ಎಂದು ದೂರಿ ಸಂತ್ರಸ್ತ ಪ್ರವೀಣ್ ಫೇಸ್ ಬುಕ್ ಪೋಸ್ಟ್ ಮಾಡಿದ ನಂತರ ಈ ಹಲ್ಲೆ ನಡೆದಿದೆ. ಘಟನೆ ಸಂಬಂಧ ಪೊಲೀಸರು 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಭಿನ್ನ ಸಮುದಾಯಗಳ ನಡುವೆ ದ್ವೇಷ ಹರಡಲು ಯತ್ನಿಸಿದ ಆರೋಪದ ಮೇಲೆ ಸಂತ್ರಸ್ತನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಫೇಸ್ ಬುಕ್ ಪೋಸ್ಟ್ ಮಾಡಿದಾತನ ಪತ್ನಿ ತಾರುಲತಾ ಬೆನ್ ಮಕ್ವಾನ ಗುರುವಾರ  ವಡು ಪೊಲೀಸ್ ಠಾಣೆಯಲ್ಲಿ 11 ಜನರು ಹಾಗೂ ಸುಮಾರು 200ರಿಂದ 300ರಷ್ಟಿದ್ದ ಗುಂಪಿನ ವಿರುದ್ಧ ಎಫ್‍ಐಆರ್ ದಾಖಲಿಸಿದ ನಂತರವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಮನೆಯ ಮೇಲೆ ದಾಳಿ ನಡೆಸಿ ಪತಿಗೆ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿ ನಂತರ ತಮ್ಮನ್ನು ಬೆದರಿಸಿದ್ದಾರೆಂದು ಆಕೆ ಆರೋಪಿಸಿದ್ದಾರೆ.

ದುಷ್ಕರ್ಮಿಗಳು ಪೈಪ್, ಬೆತ್ತ ಮತ್ತಿತರ ಆಯುಧಗಳೊಂದಿಗೆ ಬಂದಿದ್ದರಲ್ಲದೆ ತಮ್ಮ ವಿರುದ್ಧ ನಿಂದನಾತ್ಮಕ ಪದಗಳನ್ನು ಪ್ರಯೋಗಿಸಿದ್ದರೆಂದೂ ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಆಕೆಗೆ ಕಪಾಳಮೋಕ್ಷಗೈದ ಆರೋಪಿಗಳು ನಂತರ ಮನೆಯೊಳಕ್ಕೆ ನುಗ್ಗಿ ಪ್ರವೀಣ್ ‍ನನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಫೇಸ್ ಬುಕ್ ಪೋಸ್ಟ್ ಡಿಲೀಟ್ ಮಾಡದೇ ಇದ್ದರೆ ಪರಿಸ್ಥಿತಿ ನೆಟ್ಟಗಾಗದು ಎಂದೂ ದಂಪತಿಯನ್ನು ಆರೋಪಿಗಳು ಬೆದರಿಸಿದ್ದಾರೆನ್ನಲಾಗಿದೆ.

ಆರೋಪಿಗಳ ವಿರುದ್ಧ ಸೆಕ್ಷನ್ 149, ಸೆಕ್ಷನ್ 452, 323, 336, 504, 506(2) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರ 24-ಗಂಟೆ ಗಸ್ತು ಪಡೆಯನ್ನು ಗ್ರಾಮಕ್ಕೆ ಕಳುಹಿಸಲಾಗಿದೆ.

ಪ್ರವೀಣ್ ತನ್ನ ದೂರಿನಲ್ಲಿ ತಿಳಿಸಿದಂತೆ ಗ್ರಾಮದ ದೇವಸ್ಥಾನಗಳಲ್ಲಿ ದಲಿತರ ವಿವಾಹಕ್ಕೆ ಅನುಮತಿಸಲಾಗುತ್ತಿಲ್ಲ ಎಂಬ ವಿಚಾರ ನಿಜವೇ ಎಂದು  ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)