varthabharthi

ಆರೋಗ್ಯ

ಬರಲಿದೆ ಹೃದಯ ವೈಫಲ್ಯದ ಕುರಿತು ಎಚ್ಚರಿಕೆ ನೀಡುವ ಟಾಯ್ಲೆಟ್ ಸೀಟ್!

ವಾರ್ತಾ ಭಾರತಿ : 25 May, 2019

 ಹೃದಯ ರೋಗಗಳಿಂದ ಬಳುತ್ತಿರುವವರಲ್ಲಿ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಕಾಳಜಿ ವಹಿಸುವುದನ್ನು ಕಡೆಗಣಿಸುತ್ತಾರೆ. ವಾಸ್ತವದಲ್ಲಿ ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್ ಅಥವಾ ಹೃದಯವು ಸರಿಯಾಗಿ ರಕ್ತವನ್ನು ಪಂಪ್ ಮಾಡಲು ವಿಫಲಗೊಂಡಿರುವ ರೋಗಿಗಳ ಪೈಕಿ ಹೆಚ್ಚಿನವರು ಆಸ್ಪತ್ರೆಯಿಂದ ಬಿಡುಗಡೆಗೊಂಡ 90 ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿ ಪುನಃ ಆಸ್ಪತ್ರೆಗೆ ದಾಖಲಾಗುತ್ತಾರೆ.

ಇದು ಹೃದ್ರೋಗಿಗಳ ಜೀವನಶೈಲಿಯ ಸಮಸ್ಯೆ ಮಾತ್ರವಲ್ಲ, ಬಿಡುಗಡೆಗೊಂಡ ಬೆನ್ನಿಗೇ ದಾಖಲಾಗುವ ಆಸ್ಪತ್ರೆಗಳಿಗೂ ತಲೆನೋವನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ನ ರೋಚೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಆರ್‌ಐಟಿ)ಯ ಸಂಶೋಧಕರು ವಿನೂತನ ವಿಧಾನವನ್ನು ಕಂಡುಕೊಂಡಿದ್ದಾರೆ. ಪ್ರತಿ ವ್ಯಕ್ತಿಯೂ ದಿನಕ್ಕೆ ಹಲವು ಬಾರಿ ಸಂಪರ್ಕಕ್ಕೆ ಬರುವ ವಸ್ತುವಿನಲ್ಲಿ ಸೆನ್ಸರ್ ಅಥವಾ ಸಂವೇದಕಗಳನ್ನು ಅಳವಡಿಸುವುದು ಅವರ ತಂತ್ರವಾಗಿದೆ. ಈ ವಸ್ತು ವ್ಯಕ್ತಿಯ ಹೃದಯದ ಆರೋಗ್ಯದ ಮೇಲೆ ನಿಗಾ ಇರಿಸುತ್ತದೆ ಮತ್ತು ಇದಕ್ಕಾಗಿ ವ್ಯಕ್ತಿ ಹೆಚ್ಚು ಕಷ್ಟಪಡಬೇಕಿಲ್ಲ,ಆತ ಆ ವಸ್ತುವಿನ ಮೇಲೆ ಕುಳಿತುಕೊಂಡರೆ ಸಾಕು.

ಅತ್ಯಂತ ಸುಶಿಕ್ಷಿತ ರೋಗಿಗಳೂ ಪ್ರತಿದಿನ ತಮ್ಮ ರಕ್ತದೊತ್ತಡವನ್ನು ಅಳೆಯುವುದಿಲ್ಲ ಎನ್ನುತ್ತಾರೆ ಆರ್‌ಐಟಿಯ ಇಂಜಿನಿಯರ್ ಹಾಗೂ ಹೃದಯ ಆರೋಗ್ಯ ವಿಭಾಗದ ಸಿಇಒ ನಿಕೋಲಸ್ ಕಾನ್.

ರೋಗಿಯಿಂದ ಯಾವುದೇ ಮಾಹಿತಿ ಪಡೆಯದೆ ಆತನ/ಆಕೆಯ ಆರೋಗ್ಯದ ಮೇಲೆ ನಿಗಾ ಇಡಲು ಅತ್ಯಂತ ಸುಲಭ ವಿಧಾನವನ್ನು ಹುಡುಕಲು ಆರ್‌ಐಟಿ ಸಂಶೋಧನಾ ತಂಡವು,ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಏಕೀಕರಿಸಲು ನಾವೇನು ಮಾಡಬಹುದು?,ಕಂಪ್ಯೂಟರ್,ವೌಸ್ ಅಥವಾ ಕಾರಿನ ಸ್ಟಿಯರಿಂಗ್ ಚಕ್ರ?, ಜನರು ಪ್ರತಿದಿನ ಏನನ್ನು ಬಳಸುತ್ತಾರೆ ಇವೇ ಮುಂತಾದ ಪ್ರಶ್ನೆಗಳನ್ನು ತನಗೇ ಹಾಕಿಕೊಂಡಿತ್ತು.

‘ಟಾಯ್ಲೆಟ್ ಸೀಟ್ ’ ಸಂಶೋಧನಾ ತಂಡವು ತನ್ನ ಪ್ರಶ್ನೆಗಳಿಗೆ ಕಂಡುಕೊಂಡಿದ್ದ ಅತ್ಯಂತ ಪರಿಪೂರ್ಣ ಉತ್ತರವಾಗಿತ್ತು. ಅದು ರೋಗಿಯ ಚರ್ಮದೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ನಿಗಾಯಿರಿಸುವುದನ್ನು ಸುಲಭಗೊಳಿಸುತ್ತದೆ ಮತ್ತು ಪ್ರತಿಯೊಬ್ಬರೂ ಅದನ್ನು ಬಳಸುತ್ತಾರೆ ಎನ್ನುವುದು ಟಾಯ್ಲೆಟ್ ಸೀಟ್‌ನಲ್ಲಿ ಅವರು ಕಂಡುಕೊಂಡಿದ್ದ ಪ್ಲಸ್ ಪಾಯಿಂಟ್ ಆಗಿತ್ತು.

ತಂಡವು ರೂಪಿಸಿರುವ ಟಾಯ್ಲೆಟ್ ಸೀಟ್ ಮಾನಿಟರ್ ಹೃದ್ರೋಗಿಯ ಬಿಗಡಾಯಿಸುತ್ತಿರುವ ಆರೋಗ್ಯವನ್ನು ಪತ್ತೆ ಹಚ್ಚಲು ಅಗತ್ಯವಾಗಿರುವ ಎಲ್ಲ ಸಾಧನಗಳನ್ನ ಒಳಗೊಂಡಿದೆ. ಹೃದಯದ ವಿದ್ಯುತ್ ಚಟುವಟಿಕೆಯನ್ನು ಅಳೆಯಲು ಸೀಟ್‌ನ ಮೇಲ್ಮೈಯಲ್ಲಿನ ಇಲೆಕ್ಟ್ರೋಡ್‌ಗಳನ್ನು ಬಳಸುವ ಇಲೆಕ್ಟ್ರೋಕಾರ್ಡಿಯೊಗ್ರಾಮ್(ಇಸಿಜಿ),ರೋಗಿಯ ಹೃದಯಬಡಿತವನ್ನು ಅಳೆಯುವ ಫೊಟೊಪ್ಲಿಥೈಸ್ಮೊಗ್ರಾಮ್ ಮತ್ತು ರೋಗಿಯ ತೂಕವನ್ನು ಗ್ರಹಿಸಿ ಹೃದಯ ಬಡಿದುಕೊಂಡಾಗ ತೂಕದ ಏರಿಳಿತಗಳ ಆಧಾರದಲ್ಲಿ ಹೃದಯದ ಮೂಲಕ ಸಾಗುವ ರಕ್ತದ ಪ್ರಮಾಣವನ್ನು ನಿರ್ಧರಿಸುವ ಬ್ಯಾಲಿಸ್ಟೊಕಾರ್ಡಿಯೊಗ್ರಾಮ್ ಹೀಗೆ ಮೂರು ಪ್ರಮುಖ ಉಪಕರಣಗಳನ್ನು ಟಾಯ್ಲೆಟ್ ಸೀಟ್ ಒಳಗೊಂಡಿರುತ್ತದೆ.

ಈ ಉಪಕರಣಗಳು ಸಾಕಷ್ಟು ಸಂವೇದನಾಶೀಲವಾಗಿದ್ದು,ಸಂಪೂರ್ಣ ಮಾಪನಗಳನ್ನು ಪಡೆಯಲು ರೋಗಿಯು ಸೀಟ್‌ನ ಮೇಲೆ ಸುಮಾರು 90 ಸೆಕೆಂಡ್‌ಗಳಷ್ಟು ಕಾಲ ಕುಳಿತುಕೊಂಡರೆ ಸಾಕು ಎನ್ನುವುದು ಸಂಶೋಧಕರ ಅಂದಾಜು. ಅಲ್ಲದೆ ರೋಗಿಯು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತುಕೊಂಡಾಗ ಆತ ನಿರಾಳವಾಗಿದ್ದಾನೆಯೇ ಅಥವಾ ಒತ್ತಡದಲ್ಲಿದ್ದಾನೆಯೇ ಎನ್ನುವುದನ್ನು ಗುರುತಿಸಲು ಅಲ್ಗಾರಿದಮ್‌ಗಳನ್ನೂ ತಂಡವು ವಿನ್ಯಾಸಗೊಳಿಸಿದೆ. ಏಕೆಂದರೆ ಮಲವಿಸರ್ಜನೆ ಸಂದರ್ಭದಲ್ಲಿ ದೊಡ್ಡಕರುಳಿನ ಚಲನವಲನ ಮತ್ತು ಮೂತ್ರ ವಿಸರ್ಜನೆ ಹೃದಯ ಬಡಿತ ದರದಲ್ಲಿ, ರಕ್ತದೊತ್ತಡ ಮತು ಉಸಿರಾಟದಲ್ಲಿ ಬೃಹತ್ ಬದಲಾವಣೆಗಳನ್ನುಂಟು ಮಾಡುತ್ತವೆ.

  ಭವಿಷ್ಯದಲ್ಲಿ ಯಾರು ಬೇಕಾದರೂ ಈ ಟಾಯ್ಲೆಟ್ ಸೀಟ್‌ಗಳನ್ನು ಖರೀದಿಸಬಹುದಾಗಿದೆ, ಆದರೆ ಸದ್ಯಕ್ಕೆ ವೈದ್ಯಕೀಯ ಅನ್ವಯಗಳಿಗಾಗಿ ಸೀಟ್‌ನ ಅಭಿವೃದ್ಧಿಯ ಕಡೆಗೆ ತಂಡವು ಗಮನ ಹರಿಸಿದೆ ಎನ್ನುತ್ತಾರೆ ಕಾನ್. ಸೀಟ್‌ನ ಅಂತಿಮ ಆವೃತ್ತಿಯು ಆರು ವರ್ಷಗಳ ಜೀವಿತಾವಧಿ ಹೊಂದಿರುವ ಅಂತರ್ನಿರ್ಮಿತ ಬ್ಯಾಟರಿಯನ್ನು ಹೊಂದಿರಲಿದೆ ಮತ್ತು ಸೆಲ್ಯುಲರ್ ಕನೆಕ್ಷನ್ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)