varthabharthiಅಂತಾರಾಷ್ಟ್ರೀಯ

ಇರಾನ್ ಜೊತೆಗಿನ ಬಿಕ್ಕಟ್ಟು ಉಲ್ಬಣ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ 1500 ಹೆಚ್ಚುವರಿ ಸೈನಿಕರ ನಿಯೋಜನೆ: ಅಮೆರಿಕ ಘೋಷಣೆ

ವಾರ್ತಾ ಭಾರತಿ : 25 May, 2019

ವಾಶಿಂಗ್ಟನ್,ಮೇ 25: ಅಮೆರಿಕವು 1500 ಮಂದಿ ಹೆಚ್ಚುವರಿ ಸೈನಿಕರನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಯುಎಇ ಸಮುದ್ರಪ್ರದೇಶದಲ್ಲಿ ತೈಲಟ್ಯಾಂಕರ್‌ ಗಳ ಮೇಲೆ ನಡೆದ ದಾಳಿಯ ಹಿಂದೆ ಇರಾನ್‌ನ ಕೈವಾಡವಿದೆಯೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್ ಆರೋಪಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಶುಕ್ರವಾರ ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ಮಧ್ಯಪ್ರಾಚ್ಯದಲ್ಲಿ ನಮಗೆ ಸಂಪೂರ್ಣ ರಕ್ಷಣೆಯ ಅಗತ್ಯವಿದೆ’’ ಎಂದು ಹೇಳಿದರು. ನಾವು ಮಧ್ಯಪ್ರಾಚ್ಯಕ್ಕೆ ರಕ್ಷಣಾತ್ಮಕವಾಗಿ, ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರನ್ನು ಕಳುಹಿಸುತ್ತಿದ್ದೇವೆ’’ ಎಂದು ಟ್ರಂಪ್ ತಿಳಿಸಿದರು. ‘‘ ಕೆಲವು ಪ್ರತಿಭಾವಂತ ವ್ಯಕ್ತಿಗಳು ಮಧ್ಯಪ್ರಾಚ್ಯಕ್ಕೆ ನಿರ್ಗಮಿಸುತ್ತಿದ್ದಾರೆ. ಮುಂದೇನಾಗುತ್ತದೋ ನೋಡೋಣ’’ ಎಂದ ವರು ಹೇಳಿದರು.

    ಅಮೆರಿಕ ಅಧ್ಯಕ್ಷರ ಹೇಳಿಕೆಯ ಬೆನ್ನಲ್ಲೇ ಈ ತಿಂಗಳ ಆರಂಭದಲ್ಲಿ ಯುಎಇನ ಸಮುದ್ರಪ್ರದೇಶದಲ್ಲಿ ತೈಲಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗೆ ಇರಾನ್‌ನ ಕ್ರಾಂತಿಕಾರಿ ಪಡೆ (ಐಆರ್‌ಜಿಸಿ) ನೇರ ಹೊಣೆಗಾನಾಗಿದೆ ಎಂದು ಆರೋಪಿಸಿದೆ. ಯುಎಇನಲ್ಲಿ ನಿಯೋಜಿತವಾಗಿರುವ ಅಮೆರಿಕದ ಸೇನಾಪಡೆಗಳನ್ನು ಹೊರದಬ್ಬುವ ತನ್ನ ಅಭಿಯಾನದ ಅಂಗವಾಗಿ ಟೆಹರಾನ್ ಈ ಕ್ರಮಕ್ಕೆ ಮುಂದಾಗಿದೆಯೆಂದು ಅದು ಹೇಳಿದೆ.

   ‘‘ಫ್ಯುಜೈರಾದ ಮೇಲೆ ನಡೆದ ದಾಳಿಯ ಹೊಣೆಗಾರಿಕೆಯನ್ನು ನಾವು ಐಆರ್‌ಜಿಸಿಯ ಮೇಲೆ ಹೊರಿಸುತ್ತೇವೆ ’’ ಎಂದು ಜಂಟಿ ಸಿಬ್ಬಂದಿ ವರಿಷ್ಠ ರಿಯರ್ ಆಡ್ಮಿರಲ್ ಮೈಕೆಲ್ ಗಿಲ್ಡೆ ತಿಳಿಸಿದ್ದಾರೆ. ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಲು ಐಆರ್‌ಜಿಸಿಯು ಲಿಂಪೆಟ್ ಮೈನ್ಸ್ ಬಾಂಬ್‌ಗಳನ್ನು ಬಳಸಿರುವುದಾಗಿ ತಿಳಿಸಿದರು.

  ಗಲ್ಫ್ ಪ್ರಾಂತದಲ್ಲಿ ಒಟ್ಟು 10 ಸಾವಿರ ಮಂದಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಯೋಜನೆಯನ್ನು ಪೆಂಟಗಾನ್ ರೂಪಿಸಿತ್ತು. ಆದಾಗ್ಯೂ ನಿಯೋಜನೆಗೊಳ್ಳಲಿರುವ ಸೈನಿಕರ ಸಂಖ್ಯೆಯನ್ನ ಇನ್ನೂ ನಿರ್ಧರಿಸಲಾಗಿಲ್ಲವೆಂದು ಕಾರ್ಯನಿರತ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಾಹಾನ್ ತಿಳಿಸಿದರು. ಅಮೆರಿಕವು ಯುಎಇನಲ್ಲಿ ನಿಯೋಜಿಸಲಿರುವ 1500 ಮಂದಿ ಹೆಚ್ಚುವರಿ ಸೈನಿಕರಲ್ಲಿ, ಸೇನಾ ಎಂಜಿನಿಯರ್‌ಗಳು ಹಾಗೂ ಪ್ಯಾಟ್ರಿಯಟ್ ಕ್ಷಿಪಣಿಗಳನ್ನು ನಿರ್ವಹಿಸುವ 600 ಸಿಬ್ಬಂದಿ ಕೂಡಾ ಒಳಗೊಂಡಿದ್ದಾರೆ.

 ಇರಾನ್‌ನಿಂದ ಮಧ್ಯಪ್ರಾಚ್ಯದ ಶಾಂತಿಗೆ ಬೆದರಿಕೆಯಿದೆಯೆಂದು ಆರೋಪಿಸಿ, ಅಮೆರಿಕವು ಅರೇಬಿಯನ್ ಗಲ್ಫ್ ಪ್ರಾಂತದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲು ಆರಂಭಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)