ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ವಿದಾಯ
ಗೇಲ್ ಗುರಿ
ಲಂಡನ್, ಮೇ 25: ‘ಯುನಿವರ್ಸ್ ಬಾಸ್’ಎಂದೇ ಕರೆಯಲ್ಪಡುವ ಕ್ರಿಸ್ ಗೇಲ್ ಮೇ 30 ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿದಾಯ ಹೇಳುವ ಗುರಿ ಹಾಕಿಕೊಂಡಿದ್ದಾರೆ.
ಗೇಲ್ ಐದನೇ ಹಾಗೂ ಕೊನೆಯ ಬಾರಿ ಪ್ರಮುಖ ಅಂತರ್ರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಡಗೈ ದಾಂಡಿಗ ಗೇಲ್ ಕೆಲವೇ ತಿಂಗಳ ಹಿಂದೆ ವಿಶ್ವಕಪ್ ಫೇವರಿಟ್ ಇಂಗ್ಲೆಂಡ್ನ ವಿರುದ್ಧ ಆಡಿರುವ 4 ಇನಿಂಗ್ಸ್ಗಳಲ್ಲಿ 106 ಸರಾಸರಿಯಲ್ಲಿ 39 ಸಿಕ್ಸರ್ಗಳ ಸಹಿತ 424 ರನ್ ಗಳಿಸಿದ್ದರು. ತನ್ನ 20 ವರ್ಷಗಳ ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ಎದುರಾಳಿ ತಂಡಕ್ಕೆ ಅಪಾಯಕಾರಿ ದಾಂಡಿಗನಾಗಿ ಪರಿಣಮಿಸಿದ್ದರು.
2009ರಲ್ಲಿ ಲಂಡನ್ನ ಓವಲ್ನಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯದ ವೇಗದ ಬೌಲರ್ ಬ್ರೆಟ್ ಲೀ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿ ಗಮನ ಸೆಳೆದಿದ್ದರು. ಈ ಪೀಳಿಗೆಯ ಅತ್ಯಂತ ಮನರಂಜನೀಯ ದಾಂಡಿಗನಾಗಿರುವ ಗೇಲ್ ಇತ್ತೀಚೆಗಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಹೆಚ್ಚು ಪಂದ್ಯವನ್ನು ಆಡಿಲ್ಲ. ಕ್ರಿಕೆಟ್ ಮಂಡಳಿಯೊಂದಿಗಿನ ಸ್ವಹಿತಾಸಕ್ತಿ ಸಂಘರ್ಷವೇ ಇದಕ್ಕೆ ಕಾರಣ. ಜಮೈಕಾದ ದೈತ್ಯ ದಾಂಡಿಗ ಗೇಲ್ 289 ಏಕದಿನ ಪಂದ್ಯಗಳಲ್ಲಿ 25 ಶತಕ ಸಹಿತ 10,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 2 ಬಾರಿ ತ್ರಿಶತಕ ಸಿಡಿಸಿದ ಸಾಧನೆಯನ್ನೂ ಮಾಡಿದ್ದಾರೆ.