varthabharthi

ವಿಶೇಷ-ವರದಿಗಳು

ಚುನಾವಣೆ ಮತ್ತು ಪ್ರಾದೇಶಿಕತೆ

ವಾರ್ತಾ ಭಾರತಿ : 26 May, 2019
ಡಾ.ಪುರುಷೋತ್ತಮ ಬಿಳಿಮಲೆ

‘ಪ್ರಾದೇಶಿಕ ಪರಿಕಲ್ಪನೆ’ಯನ್ನು ಸರಿಯಾಗಿ ನಿರ್ವಚಿಸಿಕೊಂಡು, ಅದರ ಅಭಿವೃದ್ಧಿಗೆ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಒಂದು ಪಕ್ಷವೂ ನನ್ನ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಬೇಕಾದ ಪೂರ್ವ ತಯಾರಿ ದೇಶದ ಯಾವ ಪಕ್ಷಗಳಿಗೂ ಇಲ್ಲ. ಹೀಗಾಗಿಯೇ ಪ್ರಾದೇಶಿಕ ಪಕ್ಷವೆಂಬುದು ಅವಕಾಶವಾದೀ ರಾಜಕಾರಣದ ಒಂದು ಸಂಕೇತವಾಗಿಯಷ್ಟೇ ಕಾಣುತ್ತಿದೆ. ಇವನ್ನು ರಾಷ್ಟ್ರೀಯ ಪಕ್ಷಗಳು ಸುಲಭವಾಗಿ ನುಂಗಿ ಹಾಕುವುದನ್ನು ನಾವು ಕಂಡಿದ್ದೇವೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ಕಟ್ಟುವುದರ ಜೊತೆಗೆ ಪ್ರಾದೇಶಿಕವಾಗಿ ಭಾಷಾಧರಿತ ರಾಜ್ಯಗಳನ್ನು ಕಟ್ಟುವ ಕೆಲಸಗಳೂ (ನಮ್ಮಲ್ಲಿ ಏಕೀಕರಣದ ಹೋರಾಟ ನಡೆದ ಹಾಗೆ) ನಡೆದುವು. ಇವೆರಡರ ನಡುವೆ ಸಂಘರ್ಷ ಉಂಟಾಗದ ಎಚ್ಚರವನ್ನು ಆಗಣ ನಾಯಕರು ತೋರಿದರು. ಕುವೆಂಪು ಅವರು ‘‘ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೇ’’ ಎಂದು ಬರೆದು ಸಮಸ್ಯೆಯನ್ನು ಸಂಘರ್ಷಾತೀತಗೊಳಿಸಿದರು. ಆದರೆ ಈಗ ಏನಾಗುತ್ತಿದೆ? ನಮ್ಮ ರಾಷ್ಟ್ರೀಯ ಪಕ್ಷಗಳಾಗಲೀ, ಪ್ರಾದೇಶಿಕ ಪಕ್ಷಗಳಾಗಲೀ ರಾಜ್ಯಗಳ ಅಭಿವೃದ್ಧಿಯ ಬಗ್ಗೆ ಏನು ಹೇಳಿದುವು? ರಾಷ್ಟ್ರೀಯ ಸುರಕ್ಷತೆಯ ಪ್ರಶ್ನೆಯನ್ನು ಮುಂದು ಮಾಡಿದ ಬಿಜೆಪಿಯು ಭಾರತದ 19,500ಕ್ಕೂ ಮಿಕ್ಕು ಭಾಷೆಗಳಿಗೆ ಬಂದಿರುವ ಅಪಾಯದ ಬಗ್ಗೆ ಮಾತಾಡಿತೇ?. ಪರಿಸರಕ್ಕೊದಗಿದ ಅಪಾಯಗಳ ಬಗ್ಗೆ ಮಾತಾಡಿತೇ? ಅಭಿವೃದ್ಧಿಯ ಬಗ್ಗೆ ಮಾತಾಡಿದ ಬಿಜೆಪಿ/ಕಾಂಗ್ರೆಸ್‌ಗಳು ನೀರೇ ಬತ್ತಿಹೋಗುತ್ತಿರುವುದರ ಬಗೆಗಾಗಲೀ, ದೇಶದ ಒಕ್ಕೂಟಕ್ಕೆ ಬಹಳ ಅಗತ್ಯವಾದ ರಾಷ್ಟ್ರಿಯ ಜಲನೀತಿಯ ಬಗೆಗಾಗಲೀ ತಮ್ಮ ಧೋರಣೆಗಳನ್ನು ಪ್ರಕಟಿಸಿದುವೇ? ಆರ್‌ಜೆಡಿ, ಜೆಡಿಎಸ್, ಟಿಆರ್‌ಎಸ್, ಮೊದಲಾದುವು ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಾದುವೇ ವಿನಾ ಪ್ರಾದೇಶಿಕ ನಿಷ್ಠವಾದ ವಸ್ತು ವಿಷಯಗಳನ್ನು ಆಧರಿಸಿ ಜನರ ಬಳಿ ಹೋಗುವ ಸೈದ್ಧಾಂತಿಕ ತಿಳುವಳಿಕೆಯನ್ನು ರೂಪಿಸಿದುವೇ? ಪ್ರಾದೇಶಿಕ ಪಕ್ಷವೆಂದು ಘೋಷಿಸಿಕೊಂಡವರ ಪ್ರಣಾಳಿಕೆಯನ್ನು ಯಾವ ರಾಷ್ಟ್ರೀಯ ಪಕ್ಷಕ್ಕಾದರೂ ಸುಲಭವಾಗಿ ಅನ್ವಯಿಸಬಹುದಾದರೆ, ಅವುಗಳನ್ನು ಪ್ರಾದೇಶಿಕ ಪಕ್ಷಗಳ ಪ್ರಣಾಳಿಕೆ ಎಂದು ಯಾಕಾದರೂ ಕರೆಯಬೇಕು? ಈ ಸಲದ ಚುನಾವಣೆಯಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಮಾತುಗಳು ಹಿನ್ನೆಲೆಗೆ ಸರಿದುವು. ದೇಶ ಎಂಬ ಒಂದು ಕಲ್ಪಿತ ಪರಿಕಲ್ಪನೆಯ ಸುತ್ತವೇ ಮತದಾರರು ಭಾವುಕವಾಗಿ ಒಟ್ಟಾದರು. ಪ್ರಣಾಳಿಕೆಯೇ ಅಗತ್ಯವಿಲ್ಲ ಎಂಬ ಮಾತೂ ಕೇಳಿಬಂತು. ಉಗ್ರ ರಾಷ್ಟ್ರೀಯತೆಯನ್ನು ಉಗ್ರ ಹಿಂದುತ್ವದೊಡನೆ ಜೋಡಿಸಿದಾಗ ಪ್ರಾದೇಶಿಕತೆಯ ಚರ್ಚೆ ತಾನೇ ತಾನಾಗಿ ತನ್ನ ಮಹತ್ವವನ್ನು ಕಳೆದುಕೊಂಡಿತು. ಪಕ್ಕದ ತಮಿಳುನಾಡಿನಲ್ಲಿ ಏನಾಯಿತೆಂದು ನಮಗೆ ತಿಳಿದಿದೆ. ಅಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ. ಡಿಎಂಕೆ ಮತ್ತು ಎಐಎಡಿಎಂಕೆ. ಈ ಎರಡೂ ಪಕ್ಷಗಳಿಗೆ ಸುದೀರ್ಘವಾದ ಹಿನ್ನೆಲೆಯಿದೆ. ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದ ಸ್ವತಂತ್ರ ಪಕ್ಷವು ವಾಸ್ತವವಾಗಿ ‘ಸ್ವತಂತ್ರ ದ್ರಾವಿಡಸ್ಥಾನ’ದ ಬೇಡಿಕೆಯನ್ನು ಮುಂದಿಟ್ಟು, ಉತ್ತರ ಭಾರತದ ‘ಆರ್ಯ ಕೇಂದ್ರಿತ’ ಚಿಂತನಾ ಕ್ರಮವನ್ನು ದಿಟ್ಟವಾಗಿ ವಿರೋಧಿಸಿತ್ತು. ಇದರ ಜೊತೆಗೆ ಜಸ್ಟೀಸ್ ಪಕ್ಷವು ‘ತಮಿಳು ಹೆಮ್ಮೆ’ಯನ್ನು ಆಧರಿಸಿ, ಹಿಂದಿಯ ಹೇರಿಕೆಯ ಬಗ್ಗೆ ಹೋರಾಟ ನಡೆಸಿತ್ತು. ನಿಧಾನವಾಗಿ ಈ ಎರಡೂ ಪಕ್ಷಗಳೂ ಒಟ್ಟು ಸೇರಿ ಡಿಎಂಕೆ ಆಯಿತು. ಡಿಎಂಕೆಯು ಪ್ರತ್ಯೇಕ ದ್ರಾವಿಡಸ್ಥಾನದ ಬೇಡಿಕೆಯನ್ನು ಕೈಬಿಟ್ಟು, ಭಾರತದ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ‘ತಮಿಳುನಾಡಿಗೆ’ ಬೇಡಿಕೆ ಸಲ್ಲಿಸಿತು, ಅದರಲ್ಲಿ ಯಶಸ್ವಿಯಾಯಿತು. ಉತ್ತರ ಭಾರತದ ಸಾಂಸ್ಕೃತಿಕ ಆಕ್ರಮಣ, ಬ್ರಾಹ್ಮಣೀಕರಣ, ಹಿಂದಿ ಹೇರಿಕೆ, ಮತ್ತು ‘ಆರ್ಯ ವಿರೋಧೀ’ ಧೋರಣೆಗಳು ತಮಿಳುನಾಡಿನ ಜನರನ್ನು ಪ್ರಾದೇಶಿಕ ಪಕ್ಷ ಡಿಎಂಕೆಯ ಕಡೆಗೆ ಭಾವನಾತ್ಮಕವಾಗಿ ಸೆಳೆದವು. ಇದು ಸ್ವಲ್ಪಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ನಿಜ, ಆದರೆ 1972ರಲ್ಲಿ ಎಂ. ಜಿ. ರಾಮಚಂದ್ರನ್ ಅವರು ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿದಾಗ ಚಳವಳಿ ದುರ್ಬಲವಾಯಿತು. ಮಾತ್ರವಲ್ಲ ಮುಂದೆ ಜಯಲಲಿತಾ ಅವರು ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಲ್ಲಿಗೆ ಅದರ ಪ್ರಾದೇಶಿಕ ಹೋರಾಟದ ಸ್ವರೂಪ ವಿರೂಪಗೊಂಡಿತು. ಮುಂದೆ ಡಿಎಂಕೆ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿತು. ತಮಿಳುನಾಡಿನ ಮಾದರಿಯಲ್ಲಿಯೇ 1982ರಲ್ಲಿ ‘ತೆಲುಗು ಸಾಂಸ್ಕೃತಿಕ ಹೆಮ್ಮೆ’ಯನ್ನು ಆಧರಿಸಿ ತೆಲುಗು ದೇಶಂ ಅಸ್ತಿತ್ವಕ್ಕೆ ಬಂದು ಸ್ವಲ್ಪಕಾಲ ಸದ್ದು ಮಾಡಿತು, ಆದರೆ ಮುಂದೆ ಚಂದ್ರಬಾಬು ನಾಯ್ಡು ಕಾಲದಲ್ಲಿ ಅದು ಕೂಡಾ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಿತು. ಅಲ್ಲಿಗೆ ಅದರ ತೆಲುಗು ಹೆಮ್ಮೆಯ ಕತೆ ಕೊನೆಯಾಯಿತು. ಪಂಜಾಬ್ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದ ಅಕಾಲಿ ದಳವು ಸ್ವಾತಂತ್ರ್ಯಪೂರ್ವದಲ್ಲಿ ‘ಸಿಖ್ ಧರ್ಮ’ ವನ್ನು ಆಧರಿಸಿ ‘ಪ್ರಾದೇಶಿಕ’ ಬೇಡಿಕೆಯನ್ನು ಮಂಡಿಸಿತು. ಪರಿಣಾಮವಾಗಿ 1966ರಲ್ಲಿ ‘ಪಂಜಾಬ್’ ರಚನೆಯಾಯಿತು, ಆದರೆ ಮುಂದೆ ಅಕಾಲಿ ದಳದಲ್ಲಿದ್ದ ಕೆಲವು ಉಗ್ರಗಾಮಿಗಳು ಪ್ರತ್ಯೇಕ ಖಾಲಿಸ್ಥಾನಕ್ಕೆ ಬೇಡಿಕೆಯಿಟ್ಟರು. ಆದರೆ ಅದು ವಿಫಲವಾಯಿತು. ‘ಪಂಜಾಬೀ ಹೆಮ್ಮೆ’ಯ ತೀವ್ರ ಪ್ರತಿಪಾದಕರಾದ ಅಕಾಲಿ ದಳವು ಕೂಡಾ ಮುಂದೆ ಬಿಜೆಪಿಯ ತೆಕ್ಕೆಗೆ ಸೇರಿಕೊಂಡಿತು. ಮಹಾರಾಷ್ಟ್ರ ಮತ್ತು ಅಸ್ಸಾಮಿನಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಗೆ ಕಾರಣವಾದದ್ದು ‘ಮಣ್ಣಿನ ಮಕ್ಕಳ’ ಪರಿಕಲ್ಪನೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಸ್ಸಾಮನ್ನು ಪೂರ್ವ ಬಂಗಾಳದೊಂದಿಗೆ ಸೇರಿಸಲಾಗಿತ್ತು. ಕಾರಣ ಬಂಗಾಳಿಗಳು ಅಸ್ಸಾಮಿನ ಉದ್ದಗಲಗಳಲ್ಲಿ ಇರುವುದು ಸಹಜವಾಗಿತ್ತು. ಅಸ್ಸಾಂನಿಂದ ಬಂಗಾಲಿಗಳನ್ನು ಹೊರಹಾಕುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಪ್ರಣಾಳಿಕೆ ಇರಿಸಿಕೊಂಡ ಅಸೋಂ ಗಣ ಪರಿಷತ್‌ಗೆ 1980ರ ದಶಕದಲ್ಲಿ ಗಣನೀಯವಾಗಿ ಬೆಂಬಲ ದೊರೆಯಿತು. ಮುಂದೆ ಈ ಪಕ್ಷವೂ ಕೂಡಾ ಬಿಜೆಪಿಯೊಂದಿಗೆ ರಾಜಿಮಾಡಿಕೊಂಡಿತು. ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿಯಲ್ಲಿ ಗುಜರಾತೀ ಮತ್ತು ಕನ್ನಡಿಗರನ್ನು ಹೊರಹಾಕುವ ಉದ್ದೇಶದಿಂದ ಬೆಳೆದ ಮಹಾರಾಷ್ಟ್ರದ ಶಿವಸೇನೆಯು ಮರಾಠೀ ಹೆಮ್ಮೆಯನ್ನು ಹಿಂದೂ ಹೆಮ್ಮೆ ಜೊತೆ ಜೋಡಿಸಿಕೊಂಡು ಬೆಳೆಯಿತು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಗೆಳೆತನ ಸಾಧಿಸಿಕೊಂಡಿತು. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಇಂದು ಪ್ರಾದೇಶಿಕ ಪಕ್ಷಗಳು ತಲೆ ಎತ್ತುತ್ತಿವೆ. ಅವುಗಳು ಹೆಚ್ಚಿನವು ಭಾರತೀಯ ಜನತಾಪಕ್ಷದೊಂದಿಗೆ ಅಥವಾ ಕಾಂಗ್ರೆಸ್‌ನೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವುದು ಕುತೂಹಲಕರವಾಗಿದೆ. ಒಂದೆಡೆ ಪ್ರಾದೇಶಿಕತೆಯ ಹೆಸರು, ಇನ್ನೊಂದೆಡೆ ರಾಷ್ಟ್ರೀಯತೆಯ ಒಲವು-ಇವೆರಡರ ನಡುವಣ ಸ್ವಯಂ ವೈರುದ್ಧ್ಯಗಳ ನಡುವೆ ಚುನಾವಣೆ ನಡೆದಿದೆ. ‘ಪ್ರಾದೇಶಿಕ ಪರಿಕಲ್ಪನೆ’ಯನ್ನು ಸರಿಯಾಗಿ ನಿರ್ವಚಿಸಿಕೊಂಡು, ಅದರ ಅಭಿವೃದ್ಧಿಗೆ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಒಂದು ಪಕ್ಷವೂ ನನ್ನ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಬೇಕಾದ ಪೂರ್ವ ತಯಾರಿ ದೇಶದ ಯಾವ ಪಕ್ಷಗಳಿಗೂ ಇಲ್ಲ. ಹೀಗಾಗಿಯೇ ಪ್ರಾದೇಶಿಕ ಪಕ್ಷವೆಂಬುದು ಅವಕಾಶವಾದೀ ರಾಜಕಾರಣದ ಒಂದು ಸಂಕೇತವಾಗಿಯಷ್ಟೇ ಕಾಣುತ್ತಿದೆ. ಇವನ್ನು ರಾಷ್ಟ್ರೀಯ ಪಕ್ಷಗಳು ಸುಲಭವಾಗಿ ನುಂಗಿ ಹಾಕುವುದನ್ನು ನಾವು ಕಂಡಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)