varthabharthi

ವಿಶೇಷ-ವರದಿಗಳು

ಅಂತಾರಾಷ್ಟ್ರೀಯ ಮಾಧ್ಯಮದ ಸುದ್ದಿ ಎಂಬ ವಿಡಿಯೋ ಹಿಂದಿನ ವಾಸ್ತವವಿದು…

ಇವಿಎಂ ಬದಲಿಸುವ ಪಿತೂರಿ ನಡೆಸಿತ್ತೇ ಬಿಜೆಪಿ?

ವಾರ್ತಾ ಭಾರತಿ : 26 May, 2019

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಎನ್ ಡಿಎ ಅತಿದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಬಿಜೆಪಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಸಲುವಾಗಿ ಭದ್ರತಾ ಕೊಠಡಿಗಳಲ್ಲಿ ಇರಿಸಿದ್ದ ಇವಿಎಂಗಳನ್ನು ಬದಲಾಯಿಸಲು ಪಿತೂರಿ ನಡೆಸಿತ್ತು ಎಂದು ಆಪಾದಿಸಲಾಗಿದೆ

TNN World ವೆಬ್‍ಸೈಟ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ, ಸುದ್ದಿ ನಿರೂಪಕಿ ಭದ್ರತಾ ಕೊಠಡಿಗಳಲ್ಲಿ ಇವಿಎಂಗಳನ್ನು ಬದಲಿಸಿ ಚುನಾವಣೆ ಗೆಲ್ಲಲು ಬಿಜೆಪಿ ಪಿತೂರಿ ನಡೆಸಿದೆ ಎಂದು ಆರೋಪಿಸುತ್ತಾರೆ. ಈ ಬಗ್ಗೆ ಇಂಡಿಯಾ ಟುಡೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ವಿಡಿಯೋದಲ್ಲಿರುವ ಆಪಾದನೆಗಳು ಸುಳ್ಳು ಎಂಬುವು ಖಚಿತಗೊಂಡಿದೆ.

ಮೇ 19ರ ಬಳಿಕ, ಏಳು ಹಂತಗಳ ಚುನಾವಣೆ ಬಳಿಕ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ವಿಶ್ರಾಂತಿಯಲ್ಲಿರುವಾಗ, ಈ ಬಾರಿ ಸರ್ಕಾರದ ಒಳಗಿರುವ ಬಿಜೆಪಿ ಬಗ್ಗೆ ಒಲವು ಹೊಂದಿದ ವ್ಯಕ್ತಿಗಳು ಮತ್ತು ಬೆಂಬಲಿಗರು ಇವಿಎಂ ಬದಲಾವಣೆ ಮಾಡಬಹುದು. ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‍ಗಢ, ರಾಜಸ್ಥಾನ, ಕರ್ನಾಟಕ ಮತ್ತು ಕೇರಳವನ್ನು ಗುರಿ ಮಾಡಲಾಗಿದೆ ಎಂದು ಸುದ್ದಿ ನಿರೂಪಕಿ ಆರೋಪಿಸಿದ್ದರು.

ವೈರಲ್ ವಿಡಿಯೊ

7.53 ನಿಮಿಷದ ವಿಡಿಯೊದಲ್ಲಿ ಯಾವುದೇ ನಿರೂಪಕಿ ಅಥವಾ ವರದಿಗಾರರ ಹೆಸರು ಇರಲಿಲ್ಲ. ಸುದ್ದಿ ನಿರೂಪಕಿ, ಮಾಹಿತಿ ಮೂಲದ ಬಗ್ಗೆ ಏನನ್ನೂ ಬಹಿರಂಗಪಡಿಸಿರಲಿಲ್ಲ. ಇಡೀ ವಿಡಿಯೋದಲ್ಲಿ ಪಿತೂರಿ ಬಗೆಗಿನ ಮಾತುಗಳಿತ್ತು. ಭಾರತವನ್ನು ರಕ್ಷಿಸಿ,  ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ಜೈಹಿಂದ್ ಎಂಬ ಘೋಷಣೆಯೊಂದಿಗೆ ವಿಡಿಯೊ ಮುಕ್ತಾಯವಾಗಿತ್ತು.

ಟಿಎನ್‍ಎನ್ ವರ್ಲ್ಡ್ ವೆಬ್‍ಸೈಟ್

ವೆಬ್ ಸೈಟ್ ಪ್ರಕಾರ, ಟ್ರೈ ಕಲರ್ ನ್ಯೂಸ್ ನೆಟ್‍ವರ್ಕ್ (ಟಿಎನ್ ಎನ್) ವಿಶ್ವದ ಎಲ್ಲೆಡೆಯ ಸೆನ್ಸಾರ್ ಮಾಡದ ಸುದ್ದಿಗಳನ್ನಷ್ಟೇ ತೋರಿಸುತ್ತದೆ. ಆದಾಗ್ಯೂ ವೆಬ್ ಸೈಟ್ ಭಾರತದ ಸುದ್ದಿ ಮೇಲೆ ಮತ್ತು ಸಾರ್ವತ್ರಿಕ ಚುನಾವಣೆ ಸುದ್ದಿಗಳ ಮೇಲಷ್ಟೇ ಗಮನ ಕೇಂದ್ರೀಕರಿಸಿದೆ. ಇದೇ ವೆಬ್ ಸೈಟ್, ಬಿಜೆಪಿ 2014ರ ಚುನಾವಣೆಯಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇವಿಎಂಗಳನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಮೂಲದ ತಜ್ಞರು ಹೇಳಿದ್ದಾರೆ ಎಂಬ ವಿಡಿಯೊವನ್ನು ಕೂಡಾ ಪ್ರಕಟಿಸಿತ್ತು.

ಈ ವೆಬ್ ಸೈಟ್ ಟ್ವಿಟರ್ ಹಾಗೂ ಫೇಸ್‍ ಬುಕ್ ಪುಟಗಳನ್ನು ಕೂಡಾ ಹೊಂದಿದ್ದು, 2019ರ ಜನವರಿಯಲ್ಲಿ ಇದನ್ನು ಆರಂಭಿಸಲಾಗಿದೆ.

ಟಿಎನ್‍ಎನ್ ಮಾಲಕರು ಯಾರು?

ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ, ಟಿಎನ್‍ಎನ್ 2018ರ ನವೆಂಬರ್ 29ರಂದು ಸ್ಥಾಪನೆಯಾಗಿದ್ದು, ಡಯಾನಾ ಇರಿನಾ ಬಿಸೀನ್ ಎಂಬ ರೊಮ್ಯಾನಿಯಾ ಪ್ರಜೆ ಇದನ್ನು ಆರಂಭಿಸಿದ್ದಾರೆ. ಡಯಾನಾ ಅವರು ಈ ಸಂಸ್ಥೆಯ ಏಕೈಕ ಷೇರುದಾರರು ಮತ್ತು ನಿರ್ದೇಶಕರಾಗಿದ್ದು, ಇದು ಲಂಡನ್ ವಿಳಾಸವನ್ನು ಹೊಂದಿದೆ. ವಾಸ್ತವವಾಗಿ ಈ ವಿಳಾಸ ಲಂಡನ್ ಮೂಲದ ಏಜೆನ್ಸಿಯದ್ದಾಗಿದ್ದು, ಕಂಪನಿ ಫಾರ್ಮೇಷನ್ ಮೇಡ್ ಸಿಂಪಲ್ ಎನ್ನುವ ಹೆಸರಿನ ಈ ಸಂಸ್ಥೆಯ ವಿಳಾಸವನ್ನು ಕಂಪನಿಗಳು ಬಳಸಿಕೊಳ್ಳಬಹುದಾಗಿದ್ದು, ವಾರ್ಷಿಕ 50 ಪೌಂಡ್ ಪಾವತಿಸಿದಲ್ಲಿ ಈ ಸೌಲಭ್ಯ ಕಂಪನಿಗಳಿಗೆ ಲಭ್ಯವಾಗುತ್ತದೆ.

ಡಯಾನಾ ಅವರ ಫೇಸ್‍ ಬುಕ್ ಹಾಗೂ ಲಿಂಕ್ಡೆನ್ ಖಾತೆಗಳನ್ನು ಕೂಡಾ ಪತ್ತೆ ಮಾಡಲಾಗಿದ್ದು, ಈ ವೆಬ್‍ಸೈಟ್ ಮಾಲಕರು ಎಂದು ಹೇಳಿಕೊಂಡಿದ್ದಾರೆ. ಫೇಸ್‍ ಬುಕ್ ಖಾತೆ ಕೂಡಾ ಭಾರತದ ಬಗೆಗಿನ ಸುದ್ದಿಯನ್ನು ಅದರಲ್ಲೂ ಮುಖ್ಯವಾಗಿ ಬಿಜೆಪಿ ವಿರೋಧಿ ಸುದ್ದಿಗಳನ್ನು ಒಳಗೊಂಡಿದೆ.

ಸುದ್ದಿ ನಿರೂಪಕಿ

ಈ ವಿಡಿಯೊ ತುಣುಕಿನಲ್ಲಿ ಸುದ್ದಿ ಪ್ರಸ್ತುತಪಡಿಸುತ್ತಿರುವವರು ಕ್ರಿಸ್ಟಿನ್ ಸ್ಟೀನ್. ಅವರ ಇನ್‍ ಸ್ಟಾಗ್ರಾಂ ಖಾತೆಯ ಪ್ರಕಾರ, ಇವರು ಅರೆಕಾಲಿಕ ನಟಿ, ಪತ್ರಕರ್ತೆ ಹಾಗೂ ನಿರೂಪಕಿ. ಇವರ ಪ್ರೊಫೈಲ್ ಟ್ಯಾಲೆಂಟ್ ಏಜೆನ್ಸಿಯ ವೆಬ್‍ಸೈಟ್ ಪ್ರತಿಫಲಿಸುವಂತೆ, ಇವರು ಹಲವು ಕಿರುಚಿತ್ರಗಳು, ಟೆಲಿವಿಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಇಂಡಿಯನ್ ಎಕ್ಸ್‍ಪ್ರೆಸ್ ಈ ವೆಬ್‍ಸೈಟ್‍ನ ಬಗ್ಗೆ ಕೆಲ ತಿಂಗಳ ಹಿಂದೆ ವಿವರವಾದ ವರದಿ ಪ್ರಕಟಿಸಿತ್ತು. ವೆಬ್‍ಸೈಟ್‍ನ ರೂಪುರೇಷೆಯ ಬಗ್ಗೆ ವಿವರ ನೀಡುವ ಜತೆಗೆ ಯಾವ ರೀತಿ ಇದು ರೋಚಕ ಸುದ್ದಿಗಳನ್ನು ಯಾವ ಅಧಿಕೃತ ಮೂಲವನ್ನೂ ಉಲ್ಲೇಖಿಸದೇ ಹೇಗೆ ಪ್ರಕಟಿಸುತ್ತದೆ ಎಂದು ವಿವರಿಸಿತ್ತು. ಜತೆಗೆ ಇದರ ಮಾಹಿತಿಗಳ ವಿಶ್ವಾಸಾರ್ಹವಲ್ಲ ಎಂದು ಸ್ಪಷ್ಟಪಡಿಸಿತ್ತು.

ವೈರಲ್ ವಿಡಿಯೋದಲ್ಲಿರುವ ಆರೋಪಗಳು ಗಂಭೀರವಾಗಿದ್ದರೂ, ಅದನ್ನು ಸಮರ್ಥಿಸುವಂತಹ ಯಾವುದೇ ದಾಖಲೆಗಳನ್ನು ಟಿಎನ್ ಎನ್ ಪ್ರಸ್ತುತಪಡಿಸಿಲ್ಲ. ಜೊತೆಗೆ  ಈ ಚಾನೆಲ್ ಬಗೆಗಿನ ಮಾಹಿತಿಯೂ ನಂಬುವಂತಿಲ್ಲ. ಹಾಗಾಗಿ ಇವಿಎಂ ಕುರಿತಾದ ಈ ವಿಡಿಯೋದಲ್ಲಿರುವ ಆರೋಪಗಳು ಬಹುತೇಕ ಸುಳ್ಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)