varthabharthi

ನಿಮ್ಮ ಅಂಕಣ

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಸಂರಕ್ಷಣೆಯಾಗಲಿ

ವಾರ್ತಾ ಭಾರತಿ : 26 May, 2019
ಮಹಾಂತೇಶ ಎನ್. ನೂಲಾನವರ, ಸಿಂದಗಿ

ಮಾನ್ಯರೇ,

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ರಜೆಯ ಮಜಾ ಮುಗಿಸಿ ಹೊಸ ಹುಮ್ಮಸ್ಸಿನಿಂದ ಶಾಲೆಯತ್ತ ಹೆಜ್ಜೆ ಹಾಕುವ ಮಕ್ಕಳಿಗೆ ಶಾಲಾ ಕೋಣೆಯೊಳಗೆ ಕಾಲಿಟ್ಟೊಡನೆ ಮತ್ತೆ ಅದೇ ಬಿರುಕು ಬಿಟ್ಟ ಗೋಡೆಗಳು, ಉದುರಿ ಬಿದ್ದ ಮೇಲ್ಛಾವಣಿಯ ಚಿತ್ರ ವಿಚಿತ್ರ ಡಿಸೈನ್‌ಗಳು ಭ್ರಮನಿರಸಗೊಳಿಸುವುದಲ್ಲದೇ ಅಪಾಯದ ಅಳುಕೊಂದು ಅವರ ಮನದಲ್ಲಿ ಮನೆ ಮಾಡುತ್ತದೆ.

 ಹೌದು! ಹಲವಾರು ಸರಕಾರಿ ಶಾಲೆಗಳ ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಬೋಧನೆ ಮಾಡುತ್ತಾರೆ. ಸರಕಾರದಿಂದ ಶಾಲೆಗಳ ಅಭಿವೃದ್ಧ್ದಿಗೆ ಕೋಟ್ಯಂತರ ರೂ. ಹರಿದು ಬಂದರೂ ಸಂಬಂಧಿಸಿದ ಇಲಾಖೆ ಇತ್ತಕಡೆ ಮುಖ ಮಾಡದಿರುವುದು ದುರಂತವೇ ಸರಿ. ಮಳೆಗಾಲದಲ್ಲಿ ಹಲವು ಕೋಣೆಗಳು ಸಂಪೂರ್ಣ ಸೋರಿ ಮಕ್ಕಳು ಕುಳಿತುಕೊಳ್ಳಲು ಪರದಾಡುತ್ತಾರೆ. ಶಿಕ್ಷಕರು ಕೂಡ ಆತಂಕದಲ್ಲಿಯೇ ಪಾಠ ಮಾಡುವ ಅನಿವಾರ್ಯಕ್ಕೆ ಒಗ್ಗಿಕೊಂಡಿದ್ದಾರೆ.

ಕೆಲವು ಸರಕಾರಿ ಶಾಲಾ ಪರಿಸರದಲ್ಲಿ ತಿಪ್ಪೆ ಗುಂಡಿಗಳದ್ದೇ ಕಾರುಬಾರು. ಗ್ರಾಮಸ್ಥರು ಶಾಲೆಯ ಸುತ್ತಮುತ್ತಲೂ ಕಸದ ಗುಂಡಿಗಳನ್ನು ತೋಡಿ ಅಲ್ಲಿಯೇ ದನಕರುಗಳು ಹಾಗೂ ಮನೆಯ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುತ್ತಾರೆ. ಶಿಕ್ಷಕರು ಮತ್ತು ಮಕ್ಕಳು ಮೂಗು ಮುಚ್ಚಿ ತಿರುಗುವ ಪರಿಸ್ಥಿತಿಯಾದರೆ ಪಾಲಕರಿಗೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಚಿಂತೆಯಿಂದಾಗಿ ಶಾಲೆಗೆ ಕಳುಹಿಸಲು ಆತಂಕ. ಶಾಲಾ ಕಟ್ಟಡಗಳು ಕೆಲವೊಂದು ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡು ಈಗಲೋ ಆಗಲೋ ಬಿದ್ದು ಬಿಡುತ್ತವೆಯೇನೋ ಎನ್ನುವಂತಿರುತ್ತವೆ. ಇನ್ನೂ ಕೆಲವು ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ. ಇರುವ ಶೌಚಾಲಯದ ಬಾಗಿಲುಗಳೂ ದುರಸ್ತಿಯಾಗದೆ ಮಕ್ಕಳು ಸುತ್ತ ಮುತ್ತಲಿನ ಜಾಲಿಯ ಪೊದೆಗಳ ಮರೆಯನ್ನೇ ಅವಲಂಬಿಸುವಂತಾಗಿದೆ. ನೀರಿನ ಸೌಲಭ್ಯವೂ ಇಲ್ಲವಾದ್ದರಿಂದ ಶುಚಿತ್ವ ಮರೀಚಿಕೆಯಾಗಿದೆ.

ಇಷ್ಟೆಲ್ಲ ಅವ್ಯವಸ್ಥೆಗಳ ಆಗರವಾಗಿರುವ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಕೊರತೆ, ಆರೋಗ್ಯದ ಸಮಸ್ಯೆ ಮುಂತಾದವುಗಳಿಂದಾಗಿ ಪಾಲಕರು ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿರುವುದು ಸಾಮಾನ್ಯ. ಈ ಎಲ್ಲ ಕೊರತೆಗಳನ್ನು ಪರಿಗಣಿಸಿ, ಪರಿಶೀಲಿಸಿ ಶಿಕ್ಷಣ ಇಲಾಖೆ ಶಾಲೆಗಳ ಸುಧಾರಣೆಗೆ ಮುಂದಾದರೆ ಸರಕಾರಿ ಶಾಲೆಗಳಿಗೆ ಭವಿಷ್ಯವಿದೆ. ಇಲ್ಲದಿದ್ದರೆ ಸರಕಾರಿ ಶಾಲೆಗಳು ಮಕ್ಕಳ ಹಾಜರಾತಿಯ ಕೊರತೆ ಎದುರಿಸಬೇಕಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)