varthabharthi


ಪ್ರಚಲಿತ

ಹೊಸ ಸನ್ನಿವೇಶದ ಸವಾಲುಗಳು

ವಾರ್ತಾ ಭಾರತಿ : 27 May, 2019
ಸನತ್ ಕುಮಾರ್ ಬೆಳಗಲಿ

ಮತಾಂಧತೆಯನ್ನು ಒಪ್ಪಿಕೊಂಡ, ಅಪ್ಪಿಕೊಂಡ ಯಾವ ದೇಶವೂ ಜಗತ್ತಿನಲ್ಲಿ ಸುರಕ್ಷಿತವಾಗಿ ಉಳಿದಿಲ್ಲ. ಅಂಥ ದೇಶಗಳು ಯಾದವೀ ಕಲಹದಿಂದ ಒಡೆದು ಚೂರಾಗಿ ಹೋಗಿವೆ. ಭಾರತವೂ ಈಗ ಅಂಥ ಭೀತಿಯನ್ನು ಎದುರಿಸುತ್ತಿದೆ.


ದೇಶದ ದಿಕ್ಕನ್ನು ಬದಲಿಸುತ್ತದೆ ಎಂದು ವ್ಯಾಖ್ಯಾನಿಸಲಾಗಿದ್ದ ಲೋಕಸಭಾ ಚುನಾವಣೆ ಮುಗಿದಿದೆ. ದೇಶದ ಸಂವಿಧಾನ ಬದಲಿಸಿ ಮನುವಾದದ ಕಂದಕಕ್ಕೆ ದೇಶವನ್ನು ತಳ್ಳಲು ಬಯಸುವವರು ಈಗ ಗೆಲುವಿನ ಸಂಭ್ರಮದಲ್ಲಿದ್ದಾರೆ. ಮೇಲ್ನೋಟಕ್ಕೆ ಇದು ಮೋದಿ ಗೆಲುವಿನಂತೆ ಕಂಡರೂ ವಾಸ್ತವವಾಗಿ ಗೆದ್ದಿರುವುದು ಮಹಾತ್ಮಾ ಗಾಂಧೀಜಿಯನ್ನು ಕೊಂದ ಗೋಡ್ಸೆ ಸಿದ್ಧ್ದಾಂತ. ಗೋಡ್ಸೆ ದೇಶಭಕ್ತ ಎಂದು ಹೊಗಳಿದ ಪ್ರಜ್ಞಾ ಸಿಂಗ್ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಇದು ಸಾಮಾಜಿಕ ನ್ಯಾಯದ, ಸಮಾನತೆಯ ಬುದ್ಧ, ಬಸವ, ಬಾಬಾಸಾಹೇಬರ ಆಶಯದ ಹಿನ್ನಡೆ ಕೂಡ ಎಂದರೆ ಅತಿಶಯೋಕ್ತಿಯಲ್ಲ.

ಮೂರು ತಿಂಗಳ ಕಾಲ ಸುದೀರ್ಘವಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಏನೇನು ಗೋಲ್‌ಮಾಲ್ ನಡೆಯಿತು, ಇವಿಎಂ ಬಾನಗಡಿ, ಮತ ಎಣಿಕೆ ಹುನ್ನಾರ... ಹೀಗೆ ನಾನಾ ಆರೋಪಗಳೇನೇ ಇರಲಿ, ಬರೀ ಇವಿಎಂ ಕತೆ ಹೇಳಿದರೆ ಪ್ರಯೋಜನವಿಲ್ಲ. ಭಾರತದ ಬಹುಸಂಖ್ಯಾತ ಜನ ಹಿಂದುತ್ವದ ಮಾಯಾಜಾಲಕ್ಕೆ ಒಳಗಾಗಿದ್ದಾರೆ ಎಂಬುದೇ ಸತ್ಯಕ್ಕೆ ಹತ್ತಿರವಾದ ವಿಶ್ಲೇಷಣೆ.

ಭಾರತದ ಬಹುಸಂಖ್ಯಾತ ಹಿಂದೂಗಳು ಅದರಲ್ಲೂ 25 ವಯಸ್ಸಿನೊಳಗಿನ ತರುಣರು ಮೋದಿ ಅಭಿಮಾನಿಗಳು ಮಾತ್ರವಲ್ಲ ಗೋಳ್ವಾಲ್ಕರ್, ಗೋಡ್ಸೆ ಮಾದರಿಯ ಹಿಂದುತ್ವದ ಸಮೂಹ ಸನ್ನಿಗೆ ಒಳಗಾಗಿದ್ದಾರೆ. ಅವರಿಗೆ ಸಮಾಜವಾದ, ವೈಚಾರಿಕತೆಗಳ ಆಕರ್ಷಣೆ ಇಲ್ಲ. ಗಾಂಧಿ, ವಿವೇಕಾನಂದ ಮಾದರಿಯ ಉದಾರವಾದಿ ಹಿಂದೂ ಧರ್ಮವೂ ಅವರಿಗೆ ಬೇಡವಾಗಿದೆ. ಭಾರತ ಬಹುಧರ್ಮೀಯ, ಬಹುಜನಾಂಗೀಯ ದೇಶ ಎಂಬುದನ್ನು ಅವರು ಒಪ್ಪುವುದಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಅದರಲ್ಲೂ ವಿಶೇಷವಾಗಿ ಮುಸಲ್ಮಾನರ ಬಗ್ಗೆ ಅವರಲ್ಲಿ ದ್ವೇಷ ಭಾವನೆ ಮೂಡಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ. ಸರ್ವರಿಗೂ ಸಮಾನಾವಕಾಶ ನೀಡಿದ ಅಂಬೇಡ್ಕರ್ ಸಂವಿಧಾನ ಬೇಡ. ಮುಸಲ್ಮಾನರು, ಕ್ರೈಸ್ತರು ಹಿಂದೂಗಳ ಅಡಿಯಾಳಾಗಿರಬೇಕು ಎಂಬ ಗೋಳ್ವಾಲ್ಕರ್‌ರ ಸಿದ್ಧಾಂತಕ್ಕೆ ಬಹುತೇಕರನ್ನು ಒಲಿಸಿಕೊಳ್ಳುವಲ್ಲಿ ಸಂಘ ಪರಿವಾರ ಯಾಶಸ್ವಿಯಾಗಿದೆ. ಅದೇ ಕಾರಣಕ್ಕಾಗಿ ಮೋದಿ ನೇತೃತ್ವದ ಬಿಜೆಪಿಗೆ ನಿಚ್ಚಳ ಬಹುಮತ ದೊರಕಿದೆ. ಸೀಟು ಮಾತ್ರವಲ್ಲ ಓಟಿನ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ.

ಇದು ಬಿಜೆಪಿ ಗೆಲುವಿನ ಮತ್ತು ಕಾಂಗ್ರೆಸ್ ಸೋಲಿನ ಪ್ರಶ್ನೆ ಮಾತ್ರವಲ್ಲ. ಮೋದಿ ಗೆಲುವಿಗೆ ಮತ್ತು ರಾಹುಲ್ ಸೋಲಿಗೆ ಇದು ಸೀಮಿತವಾಗಿಲ್ಲ. ಇದು ಒಂದು ಸಿದ್ಧ್ದಾಂತದ ವೌಲ್ಯಗಳ ಹಿನ್ನಡೆ, ಇನ್ನೊಂದು ಸಿದ್ಧಾಂತದ ಗೆಲುವು. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ, ಭಗತ್‌ಸಿಂಗ್, ನೆಹರೂ ಸುಬಾಷ್‌ರ ಭಾರತ ಸೋತಿದೆ.

ಮನು, ಸಾವರ್ಕರ್, ಗೋಳ್ವಾಲ್ಕರ್, ಗೋಡ್ಸೆ, ಮೋದಿ, ಪ್ರಜ್ಞಾಸಿಂಗ್‌ರ ಹಿಂದೂರಾಷ್ಟ್ರ ಗೆದ್ದಿದೆ. ಅಷ್ಟೇ ಅಲ್ಲ, ರಾಷ್ಟ್ರದ ಸಂಪತ್ತನ್ನು ಕೊಳ್ಳೆ ಹೊಡೆಯುವ ಅಂಬಾನಿ, ಅದಾನಿಗಳ ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಮತಾಂಧ ಶಕ್ತಿಗಳ ಮೈತ್ರಿ ಕೂಟ ಗೆದ್ದು ಹೂಂಕರಿಸುತ್ತಿದೆ.
ಇದೆಲ್ಲ ಒಮ್ಮೆಲೇ ಆದ ಬೆಳವಣಿಗೆ ಅಂದರೆ ಸರಿಯಾದ ವಿಶ್ಲೇಷಣೆ ಆಗುವುದಿಲ್ಲ. ಇದಕ್ಕೆ ಅರವತ್ತು ವರ್ಷಗಳ ಅದಕ್ಕಿಂತ ಹಿಂದಿನ ಇತಿಹಾಸವಿದೆ. ಆರೆಸ್ಸೆಸ್ ಕಾರ್ಯಕರ್ತರ ದಶಕಗಳ ಪರಿಶ್ರಮವಿದೆ. ಸಂಘದ ಜಾಲ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ. 25 ವಯಸ್ಸಿನೊಳಗಿನ ತರುಣರನ್ನು ಬ್ರೈನ್ ವಾಶ್ ಮಾಡುವಲ್ಲಿ ಅದು ಯಶಸ್ವಿಯಾಗಿದೆ.

ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ ಒಂದು ವಿಧದಲ್ಲಿ ಸಾಮಾಜಿಕ ತಿರಸ್ಕಾರಕ್ಕೆ ಒಳಗಾಗಿತ್ತು. ನಿಧಾನಕ್ಕೆ ತಾಳ್ಮೆಯಿಂದ ಅದು ಚಿಗಿತುಕೊಳ್ಳುತ್ತ ಬಂತು. ಕಾಂಗ್ರೆಸ್‌ನಲ್ಲಿ ಅಧಿಕಾರದಾಹಿಗಳು, ಲಾಭಕೋರರು ತುಂಬಿಕೊಂಡಾಗ ಹೊಸ ಯುವಕರನ್ನು ಸಂಘ ಆಕರ್ಷಿಸಿತು. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ವಿರೋಧ ರಾಜಕಾರಣದ ಹೆಸರಿನಲ್ಲಿ ರಾಮ ಮನೋಹರ ಲೋಹಿಯಾ ಸಂಘದ ರಾಜಕೀಯ ವೇದಿಕೆಯಾದ ಜನಸಂಘಕ್ಕೆ ಅವಕಾಶ ಕಲ್ಪಿಸಿದರು. ಅದಕ್ಕಿಂತ ಮಿಗಿಲಾಗಿ ಜಯಪ್ರಕಾಶ್ ನಾರಾಯಣರು ಎಪ್ಪತ್ತೈದರಲ್ಲಿ ಇಂದಿರಾ ಗಾಂಧಿ ವಿರೋಧಿ ಚಳವಳಿಯಲ್ಲಿ ಸೇರಲು ಆರೆಸ್ಸೆಸ್‌ಗೆ ಅವಕಾಶ ನೀಡಿದರು. ಇದರ ಬಗ್ಗೆ ಎಡಪಂಥೀಯರು ಆಕ್ಷೇಪಿಸಿದರು. ಆಗ ಜೆ.ಪಿ.ಯವರು ಆರೆಸ್ಸೆಸ್ ಫ್ಯಾಶಿಸ್ಟ್ ಆದರೆ, ನಾನೂ ಫ್ಯಾಶಿಸ್ಟ್ ಎಂದು ಹೇಳಿ ಬಾಪೂ ಹತ್ಯೆಯ ನಂತರ ಜನರಿಂದ ತಿರಸ್ಕೃತವಾಗಿದ್ದ ಆರೆಸ್ಸೆಸ್‌ಗೆ ಸಾಮಾಜಿಕ ಮಾನ್ಯತೆ ತಂದುಕೊಟ್ಟರು. ಆ ನಂತರ ಸಂಘ ಹೊರಳಿ ನೋಡಲಿಲ್ಲ.

ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ 1977ರಲ್ಲಿ ಪ್ರಥಮ ಕಾಂಗ್ರೆಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ಅದರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಪ್ರಥಮ ಬಾರಿ ಜನಸಂಘ ವಾಜಪೇಯಿ ವಿದೇಶ ಮಂತ್ರಿ, ಅಡ್ವಾಣಿ ವಾರ್ತಾ ಮಂತ್ರಿಯಾದರು. ಆಗಲೇ ಸರಕಾರದಲ್ಲಿ ಆರೆಸ್ಸೆಸ್ ಹಸ್ತಕ್ಷೇಪ ಆರಂಭವಾಯಿತು. ಇದನ್ನು ಸಮಾಜವಾದಿ ನಾಯಕ ಮಧುಲಿಮಯೆ ಪ್ರತಿಭಟಿಸಿದರು.

ನಂತರ ನಡೆದ ವಿದ್ಯಮಾನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜಾಗತೀಕರಣದ ನಂತರದ ಮಾರುಕಟ್ಟೆ ಆರ್ಥಿಕತೆ ಮತ್ತು ಅದಕ್ಕೆ ಪೂರಕವಾಗಿ ಬಂದ ಕೋಮು ದ್ವೇಷದ ಝಳದಲ್ಲಿ ಸ್ವಾತಂತ್ರ ಚಳವಳಿ, ಸಂವಿಧಾನ, ಸಾಮಾಜಿಕ ನ್ಯಾಯದ ವೌಲ್ಯಗಳು ಮುರುಟಿ ಹೋಗಿವೆ. ಇಂದಿನ ಪೀಳಿಗೆಗೆ ಗಾಂಧಿ, ನೆಹರೂ, ಸುಭಾಷ್, ಭಗತ್‌ಸಿಂಗರ ನೈಜ ಆಶಯಗಳ ಪರಿಚಯವನ್ನು ಕಾಂಗ್ರೆಸ್ ಮಾಡಿಕೊಡಲಿಲ್ಲ. ಕಮ್ಯುನಿಸ್ಟರ ಬಹುತೇಕ ಹೋರಾಟಗಳು ಆರ್ಥಿಕ ಹೋರಾಟಕ್ಕೆ ಸೀಮಿತಗೊಂಡವು. ಇದ್ದುದರಲ್ಲಿ ಎಡಪಂಥೀಯ ಬುದ್ಧಿಜೀವಿಗಳು ಫ್ಯಾಶಿಸ್ಟ್ ಕೋಮುವಾದಕ್ಕೆ ಪ್ರತಿರೋಧ ಒಡ್ಡಿದರು ಅಂತಲೇ ಅವರಲ್ಲಿ ಅನೇಕರು ಫ್ಯಾಶಿಸ್ಟರ ಗುಂಡಿಗೆ ಬಲಿಯಾದರು.

ಹೀಗೆ ತನ್ನ ಪ್ರಾಬಲ್ಯ ವಿಸ್ತರಿಸಿಕೊಂಡ ಸಂಘ ಪರಿವಾರ ತೊಂಬತ್ತರ ದಶಕದಲ್ಲಿ ಅಡ್ವಾಣಿ ರಥ ಯಾತ್ರೆಯ ನಂತರ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಲೋಕಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ನಂತರ ನಡೆದ ಚುನಾವಣೆಯಲ್ಲಿ ತನ್ನ ಬಲವನ್ನು ಒಮ್ಮೆಲೆ ಎಂಬತ್ತಕ್ಕೆ ಹೆಚ್ಚಿಸಿಕೊಂಡಿತು.

ಪ್ರತಿಪಕ್ಷಗಳು ಒಂದಾಗಿದ್ದರೆ ಫಲಿತಾಂಶವನ್ನು ಬದಲಿಸಬಹುದಾಗಿತ್ತು. ಮಹಾರಾಷ್ಟ್ರದಲ್ಲಿ ಪ್ರಕಾಶ ಅಂಬೇಡ್ಕರ್, ಕಾಂಗ್ರೆಸ್, ಶರದ್ ಪವಾರ್ ಕಾಂಗ್ರೆಸ್ ಒಂದಾಗಬೇಕಾಗಿತ್ತು. ಉತ್ತರ ಪ್ರದೇಶದಲ್ಲಿ ಮಾಯಾವತಿ, ಸಮಾಜವಾದಿ, ಕಾಂಗ್ರೆಸ್ ಒಂದಾಗಬೇಕಾಗಿತ್ತು ಹೀಗೆ ಏನೇನೊ ಲೆಕ್ಕಾಚಾರ ಮಾಡಬಹುದು. ಆದರೆ ಅದ್ಯಾವುದೂ ಪರಿಹಾರವಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದಾದರೂ ಏನು ಫಲಿತಾಂಶ ಬಂತು ಎಂಬುದು ಎಲ್ಲರಿಗೆ ಗೊತ್ತಿದೆ.

ಏನೇ ವಿಶ್ಲೇಷಣೆ ಮಾಡಿದರೂ ಹಳೆಯ ಮಾನದಂಡಗಳು ನಿಖರವಾದ ಉತ್ತರಗಳನ್ನು ಕೊಡುವುದಿಲ್ಲ. ಭಾರತ ಇಂದು ಬದಲಾಗಿದೆ. ಬಹುಮುಖಿ ಭಾರತದ ಬದಲಾಗಿ ಬಹುಸಂಖ್ಯಾತ ಭಾರತವಾಗಿ ಹೊಸ ದಿಕ್ಕಿಗೆ ಹೊರಳಿದೆ. ಹಿಂದೂ ಬಹುಸಂಖ್ಯಾತವಾದದ ಆಣತಿಯಂತೆ ಈ ದೇಶ ಮುನ್ನಡೆಯಬೇಕೆಂಬ ಬಲವಂತದ ಆಗ್ರಹ ಮತದಾನದ ಮೂಲಕ ವ್ಯಕ್ತವಾಗಿದೆ. ಇದೀಗ ಸರ್ವ ಜನಾಂಗದ ಶಾಂತಿಯ ತೋಟದ ಬದಲಾಗಿ ಬಹುಸಂಖ್ಯಾತ ಸಮಾಜ ಹಿಂದುತ್ವೀಕರಣ ಗೊಳ್ಳತೊಡಗಿದೆ. ದೇಶದ ಮಧ್ಯಮ ವರ್ಗ ಇದಕ್ಕೆ ಒತ್ತಾಸೆಯಾಗಿ ನಿಂತಿದೆ.

ಹಿಂದಿನ ಐದು ವರ್ಷಗಳ ಭಾರತ, ಅದರ ಹಿಂದಿನ ಅರವತ್ತು ವರ್ಷಗಳ ಭಾರತದಂತಿರಲಿಲ್ಲ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮಹಿಳೆಯರು ತೀವ್ರ ಯಾತನೆ ಅನುಭವಿಸಿದರು. ಇನ್ನು ಮುಂದಿನ ಐದು ವರ್ಷಗಳು ಹಿಂದಿನ ಐದು ವರ್ಷಗಳಂತಿರುವುದಿಲ್ಲ. ದಲಿತ ದಮನಿತ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಹಿಂಸೆಗಳ ಪ್ರಮಾಣ ಹೆಚ್ಚಲಿದೆ. ಪ್ರಭುತ್ವವನ್ನು ವಿರೋಧಿಸುವವರು ರಾಷ್ಟ್ರದ್ರೋಹದ ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ. ದೇಶದ ಹೆಸರಾಂತ ಚಿಂತಕರಾದ ಆನಂದ ತೇಲ್ತುಂಬ್ಡೆ, ರಾಮ್ ಪುನಿಯಾನಿ, ಮುಂತಾದವರನ್ನು ಪ್ರಭುತ್ವ ಬೆಂಬತ್ತಿ ಕಾಡಲಿದೆ.

ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ನಿಜವಾದ ದೇಶ ಭಕ್ತ ಎಂದು ಕರೆದವರು ಸಂಸತ್ತಿನ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಮಾಲೆಗಾಂವ್ ಬಾಂಬ್ ಸ್ಫೋಟದ ಭಯೋತ್ಪಾದನೆಯ ಆರೋಪ ಹೊತ್ತವಳು ದೇಶಕ್ಕಾಗಿ ಹುತಾತ್ಮರಾದ ಹೇಮಂತ್ ಕರ್ಕರೆಯವರ ಬಗ್ಗೆ ಕೆಟ್ಟ ಮಾತನ್ನಾಡಿದವಳು ಚುನಾವಣೆಯಲ್ಲಿ ಗೆದ್ದಿದ್ದಾಳೆ. ಇಂದಿನ ಭಾರತ ಹಿಂದಿನ ಭಾರತದಂತಿಲ್ಲ. ಅಂಬೇಡ್ಕರ್ ದೇಶದ್ರೋಹಿ ಎಂದವರೂ ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದವರೂ ಈ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ
ಭಾರತೀಯರಲ್ಲದವರನ್ನು ದೇಶದಿಂದ ಹೊರದಬ್ಬುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು. ಅವರ ದೃಷ್ಟಿಯಲ್ಲಿ ಹಿಂದೂಗಳು ಮಾತ್ರ ಭಾರತೀಯರು. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಅವರು ಬಾಂಗ್ಲಾದೇಶದಿಂದ ನುಸುಳಿ ಬಂದವರಲ್ಲಿ ತಾರತಮ್ಯ ಮಾಡಿ ಈಗಾಗಲೇ ಅಸ್ಸಾಂನಲ್ಲಿ ಹಿಂದು ನುಸುಳುಕೋರರಿಗೆ ಮಾತ್ರ ಪೌರತ್ವ ದೊರೆಯುವಂತೆ ಮಾಡಿದ್ದಾರೆ.
ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಗೋಳ್ವಾಲ್ಕರ್ ಹೇಳಿದಂತೆ ಮುಸ್ಲಿಂ ಮತ್ತು ಕ್ರೈಸ್ತ ಅಲ್ಪಸಂಖ್ಯಾತರು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಹಿಂದೂ ಸಮುದಾಯದ ಗುಲಾಮರಂತೆ ಬದುಕಬೇಕಾದ ದಿನಗಳು ಬಂದಿವೆ.
ಈ ಬಿಕ್ಕಟ್ಟಿನಿಂದ ಪಾರಾಗಲು, ದೇಶವನ್ನು ಪಾರು ಮಾಡಲು ಎಡ ಪಂಥೀಯ ಮತ್ತು ಉದಾರವಾದಿ ಪಕ್ಷಗಳು, ಸಂಘಟನೆಗಳು ಮರು ಚಿಂತನೆ ಮಾಡಬೇಕಿದೆ. ಹೊಸ ಆಲೋಚನೆ, ನವ ಕಾರ್ಯವಿಧಾನವನ್ನು ರೂಢಿಸಿಕೊಳ್ಳಬೇಕಾಗಿದೆ.
ಮತಾಂಧತೆಯನ್ನು ಒಪ್ಪಿಕೊಂಡ, ಅಪ್ಪಿಕೊಂಡ ಯಾವ ದೇಶವೂ ಜಗತ್ತಿನಲ್ಲಿ ಸುರಕ್ಷಿತವಾಗಿ ಉಳಿದಿಲ್ಲ. ಅಂಥ ದೇಶಗಳು ಯಾದವೀ ಕಲಹದಿಂದ ಒಡೆದು ಚೂರಾಗಿ ಹೋಗಿವೆ. ಭಾರತವೂ ಈಗ ಅಂಥ ಭೀತಿಯನ್ನು ಎದುರಿಸುತ್ತಿದೆ.
ಈ ದಿನಮಾನಗಳಲ್ಲಿ ಎಡಪಂಥೀಯ ಸಿದ್ಧಾಂತ, ಉದಾರವಾದಿ ಮಾನವತಾವಾದಿ ವಿಚಾರಧಾರೆ ನಾಸ್ಟಾಲ್ಜಿಯಾ ಅಂದರೆ ಬರೀ ಮೆಲಕು ಹಾಕಲು ಇರುವ ಸುಂದರ ನೆನಪುಗಳಾಗಿ ಮಾತ್ರ ಉಳಿದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)