varthabharthiಸಂಪಾದಕೀಯ

ರಾಜ್ಯದಲ್ಲಿ ಮೈತ್ರಿ ಸರಕಾರ: ಮುತ್ಸದ್ದಿ ನಿರ್ಧಾರ

ವಾರ್ತಾ ಭಾರತಿ : 27 May, 2019

‘ಮಹಾಚುನಾವಣೆಯ ಫಲಿತಾಂಶ ರಾಜ್ಯದ ಮೈತ್ರಿ ಸರಕಾರದ ಮೇಲೂ ತನ್ನ ಪರಿಣಾಮವನ್ನು ಬೀರಲಿದೆ. ದಿಲ್ಲಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಾರೆ’ ಎನ್ನುವುದು ರಾಜ್ಯ ಬಿಜೆಪಿಯ ಕನಸಾಗಿತ್ತು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಮೇ 23ರ ಸಂಜೆ ಕುಮಾರಸ್ವಾಮಿಯ ಅಧಿಕಾರಾವಧಿ ಮುಗಿಯುತ್ತದೆ’’ ಎಂದು ಭವಿಷ್ಯ ನುಡಿದಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯವನ್ನು ತನ್ನದಾಗಿಸಿಕೊಂಡಿತಾದರೂ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಕೊನೆಯ ಕ್ಷಣದಲ್ಲಿ ಪ್ರದರ್ಶಿಸಿದ ಮುತ್ಸದ್ದಿತನದ ಪರಿಣಾಮವಾಗಿ ರಾಜ್ಯದಲ್ಲಿ ಸರಕಾರ ಜೀವ ಉಳಿಸಿಕೊಂಡಿದೆ.

 ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷವೂ ಅನಿವಾರ್ಯ ಸ್ಥಿತಿಯಲ್ಲಿ ಜೆಡಿಎಸ್‌ಗೆ ಬೆಂಬಲಕೊಟ್ಟು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿತ್ತು. ಬಿಜೆಪಿಯೊಂದಿಗೆ ಸೇರಿಕೊಂಡು ಸರಕಾರ ರಚಿಸಿದರೆ ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದಿರಲಿಲ್ಲ. ಬಿಜೆಪಿ ಯಾವ ಕಾರಣಕ್ಕೂ ಅಧಿಕಾರಕ್ಕೇರಬಾರದು ಎನ್ನುವ ಪೂರ್ಣ ಮನಸ್ಸಿನಿಂದ ಕಾಂಗ್ರೆಸ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಿತ್ತು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವುದು ಇನ್ನೊಂದು ಮುಖ್ಯ ಕಾರಣ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡುವ ದೂರಗಾಮಿ ಯೋಜನೆಯೊಂದು ಇದರ ಹಿಂದೆ ಇತ್ತು.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದ ಕಾರಣಕ್ಕಾಗಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಿತು ಎನ್ನುವ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಜೆಡಿಎಸ್‌ಗೆ ಬೆಂಬಲವನ್ನು ನೀಡಿತ್ತು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಾವ ರೀತಿಯಲ್ಲೂ ಕಾಂಗ್ರೆಸ್‌ಗೆ ಸಹಾಯವನ್ನು ಮಾಡಲಿಲ್ಲ. ಮೈತ್ರಿಯನ್ನು ಮಾಡಿಕೊಳ್ಳದೇ ಇದ್ದಿದ್ದರೆ ನಾಲ್ಕೈದು ಸ್ಥಾನಗಳಾದರೂ ದಕ್ಕುತ್ತಿತ್ತೇನೋ ಎಂಬಂತಹ ಭಾವ ಕಾಂಗ್ರೆಸ್‌ನೊಳಗೆ ನೆಲೆಸಿದೆ. ಮೈತ್ರಿಯಿಂದ ಲಾಭವಾದುದಕ್ಕಿಂತ ನಷ್ಟವಾದುದೇ ಹೆಚ್ಚು. ಜೆಡಿಎಸ್ ಕೂಡ ಲೋಕಸಭೆಯಲ್ಲಿ ಸಾಕಷ್ಟು ಕಳೆದುಕೊಂಡಿದೆಯಾದರೂ, ಮೈತ್ರಿಯ ಕಾರಣದಿಂದ ದೊರಕಿರುವ ಮುಖ್ಯಮಂತ್ರಿ ಸ್ಥಾನದ ಮುಂದೆ ಕಳೆದುಕೊಂಡದ್ದೇನೇನೂ ಅಲ್ಲ. ಲೋಕಸಭೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಯಾವರೀತಿಯಲ್ಲೂ ಕಾಂಗ್ರೆಸ್‌ಗೆ ಸಹಕಾರಿಯಾಗದೇ ಇದ್ದುದರಿಂದ ಅದು ಬೆಂಬಲವನ್ನು ಹಿಂದೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳಿತ್ತು. ಈಗಾಗಲೇ ಮೈತ್ರಿಯೊಳಗೆ ಸಾಕಷ್ಟು ಬಿಕ್ಕಟ್ಟುಗಳು ಭಿನ್ನಮತಗಳು ತಲೆದೋರಿರುವುದರಿಂದ ಲೋಕಸಭೆಯ ಸೋಲು ಸರಕಾರ ಬೀಳುವುದಕ್ಕೆ ಒಂದು ನೆಪವಾಗುವ ಸಾಧ್ಯತೆಗಳಿದ್ದವು. ಆದರೆ ಕೊನೆಯ ಕ್ಷಣದಲ್ಲಿ ವಿವೇಕವನ್ನು ಪ್ರದರ್ಶಿಸಿರುವ ಕಾಂಗ್ರೆಸ್ ನಾಯಕರು, ಕುಮಾರಸ್ವಾಮಿಗೆ ತಮ್ಮ ಒಮ್ಮತದ ಬೆಂಬಲವನ್ನು ಘೋಷಿಸಿದ್ದಾರೆ.

ಸದ್ಯಕ್ಕೆ ಇದಕ್ಕೆ ಹೊರತಾದ ಇನ್ನೊಂದು ಮಾರ್ಗವಿರಲಿಲ್ಲ. ಒಂದು ವೇಳೆ ಕಾಂಗ್ರೆಸ್ ಬೆಂಬಲವನ್ನು ಹಿಂದೆಗೆದುಕೊಂಡಿದ್ದರೆ ಜೆಡಿಎಸ್ ಏನನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಯಾಕೆಂದರೆ, ಅದು ಬಿಜೆಪಿಯೊಂದಿಗೆ ಸೇರಿ ಯಾವ ಮುಜುಗರವಿಲ್ಲದೆಯೇ ಹೊಸದಾಗಿ ಸರಕಾರ ರಚಿಸುತ್ತಿತ್ತು. ದೇಶಾದ್ಯಂತ ಮತ್ತೆ ಮೋದಿ ಬಿರುಗಾಳಿ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿರುವ ಸಮಯ ಸಾಧಕ ರಾಜಕಾರಣಿಗಳು ಅಧಿಕಾರಕ್ಕಾಗಿ ನೂತನ ಸರಕಾರದ ಜೊತೆ ಕೈ ಜೋಡಿಸುವ ಎಲ್ಲ ಸಾಧ್ಯತೆಗಳಿದ್ದವು. ಈಗಾಗಲೇ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಒಳಗೊಳಗೆ ಬಿಜೆಪಿಯ ಜೊತೆಗೆ ವ್ಯವಹರಿಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂದೆಗೆದುಕೊಂಡರೆ, ಅದರ ಸರ್ವ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಳ್ಳುತ್ತದೆ. ನೂತನ ಸರಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರೇವಣ್ಣ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿರಲಿಲ್ಲ ಅಥವಾ ಬಿಜೆಪಿಯು ತನ್ನ ‘ಆಪರೇಷನ್ ಕಮಲ’ ಮೂಲಕ ಸ್ವತಃ ಸರಕಾರ ರಚಿಸಿದರೂ ಅಚ್ಚರಿಯಿದ್ದಿರಲಿಲ್ಲ. ಒಂದು ವೇಳೆ ಅದರಲ್ಲಿ ಯಶಸ್ವಿಯಾದರೆ ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅಪಾಯದಲ್ಲಿ ಸಿಲುಕಿಹಾಕಿಕೊಳ್ಳಬೇಕಾಗುತ್ತದೆ. ಈಗಾಗಲೇ ಕೇಂದ್ರ ಸರಕಾರ ಐಟಿಯನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ಬಗ್ಗು ಬಡಿಯಲು ಯತ್ನಿಸಿದೆ. ಅದರ ಜೊತೆಗೆ ರಾಜ್ಯ ಸರಕಾರವೂ ಸೇರಿಕೊಂಡರೆ ಈ ನಾಯಕರು ಶಾಶ್ವತವಾಗಿ ಮನೆ ಸೇರಬೇಕಾಗುತ್ತದೆ. ಈ ಕಾರಣದಿಂದಲೇ ಮುಖ್ಯಮಂತ್ರಿ ಯಾರೇ ಆಗಿರಲಿ, ಸದ್ಯಕ್ಕೆ ಸರಕಾರ ನಮ್ಮದೇ ಆಗಿ ಉಳಿಯಲಿ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ. ಮುಂದಿನ ಕಾರ್ಯತಂತ್ರಗಳನ್ನು ನಿಧಾನವಾಗಿ ರೂಪಿಸಲು ಉಭಯ ಪಕ್ಷಗಳ ನಾಯಕರೂ ನಿರ್ಧರಿಸಿದಂತಿದೆ.

ಸರಕಾರ ಇನ್ನೇನು ಬೀಳುತ್ತದೆ ಎಂದು ಕಾದು ಕುಳಿತಿದ್ದ ಬಿಜೆಪಿಯ ರಾಜ್ಯ ನಾಯಕರು ನಿರಾಶರಾಗಿದ್ದಾರೆ ಮತ್ತೆ ‘ಆಪರೇಷನ್ ಕಮಲ’ದ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆಯಲ್ಲಿ ಮೈತ್ರಿ ಪಕ್ಷದ ಸೋಲು ಮತ್ತು ಮೈತ್ರಿ ಸರಕಾರದೊಳಗಿರುವ ಭಿನ್ನಮತೀಯರನ್ನು ಮುಂದಿಟ್ಟುಕೊಂಡು ಮತ್ತೆ ಕುದುರೆ ವ್ಯಾಪಾರ ಆರಂಭವಾಗಿದೆ. ಆದರೆ ಮೈತ್ರಿ ಸರಕಾರದ ನಾಯಕರು ಸ್ಪಷ್ಟ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಸದ್ಯಕ್ಕೆ ಬಿಜೆಪಿ ಈ ಕಾರ್ಯದಲ್ಲಿ ಯಶಸ್ವಿಯಾಗುವ ಸೂಚನೆಗಳು ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಲೋಕಸಭೆಯ ಫಲಿತಾಂಶದ ಬಳಿಕ ಕೇಂದ್ರ ಬಿಜೆಪಿ ನಾಯಕರು ಎಲ್ಲವನ್ನೂ ಜಾಗರೂಕತೆಯಿಂದ ನಿಭಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಕುರಿತಂತೆ ಕೇಂದ್ರ ಆಸಕ್ತಿಯನ್ನು ಹೊಂದಿದಂತಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಬಹುಮತದ ಮೂಲಕವೇ ಅಧಿಕಾರಕ್ಕೆ ಬರಬೇಕು ಎಂದು ಅವರೂ ಈ ಲೋಕಸಭೆಯ ಫಲಿತಾಂಶಗಳ ಮೂಲಕ ಬಯಸಿದಂತಿದೆ. ಮುಖ್ಯವಾಗಿ ಯಡಿಯೂರಪ್ಪರನ್ನು ಬದಿಗಿಟ್ಟು ಹೊಸ ನಾಯಕತ್ವದಲ್ಲಿ, ರಾಜ್ಯದಲ್ಲಿ ಬಿಜೆಪಿಯನ್ನು ಹೊಸದಾಗಿ ಕಟ್ಟುವ ಉದ್ದೇಶವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಅದರಲ್ಲಿ ಬಿಜೆಪಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)