varthabharthi

ನಿಮ್ಮ ಅಂಕಣ

ಬೆಟ್ಟಿಂಗ್ ವ್ಯಸನಕ್ಕೆ ಬಲಿಯಾಗದಿರಿ

ವಾರ್ತಾ ಭಾರತಿ : 27 May, 2019
ಗೌರೀಶ್ ಟಿ. ಎಸ್.,

ಮಾನ್ಯರೇ,

ಈಗಾಗಲೇ ಲೋಕಸಭಾ ಚುನಾವಣೆ ಹಾಗೂ ಐಪಿಎಲ್ 12ರ ಆವೃತ್ತಿ ಮುಕ್ತಾಯಗೊಂಡಿದೆ. ಐಪಿಎಲ್ ಮತ್ತು ಚುನಾವಣೆಯಲ್ಲಿ ಕೋಟ್ಯಂತರ ಹಣವನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಂಡು ತಮ್ಮ ಕುಟುಂಬವನ್ನು ಸಂಕಷ್ಟದಲ್ಲಿ ತಳ್ಳಿರುವ ಸಂಗತಿಗಳನ್ನು ಮಾಧ್ಯಮಗಳಲ್ಲಿ ನಾವು ದಿನನಿತ್ಯ ಗಮನಿಸುತ್ತಿದ್ದೇವೆ. ಇಂದಿನ ಯುವಕರು ಕಷ್ಟಪಟ್ಟು ದುಡಿಯುವುದನ್ನು ಬಿಟ್ಟು ಸುಲಭವಾಗಿ ಹಣ ಸಂಪಾದನೆ ಮಾಡಲು ಹಣ, ವಾಹನ ಮತ್ತು ಜಾನುವಾರುಗಳನ್ನು ಕೂಡಾ ಬೆಟ್ಟಿಂಗ್‌ನಲ್ಲಿ ಹೂಡಲು ಹೋಗಿ ಮನೆಮಾರು ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ.

ಒಂದು ರಾಷ್ಟ್ರ ಅಭಿವೃದ್ಧ್ದಿಯಾಗಬೇಕಾದರೆ ಅಲ್ಲಿ ಯುವಶಕ್ತಿ ಪ್ರಬಲವಾಗಿರಬೇಕು. ಆದರೆ ನಮ್ಮ ಯುವಜನತೆ ಮಾದಕವ್ಯಸನ, ಬೆಟ್ಟಿಂಗ್ ಮಾಯೆಗೆ ಒಳಗಾಗಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಕಷ್ಟಪಟ್ಟು ಶ್ರಮವಹಿಸಿ ದುಡಿದ ಹಣವೇ ನಮ್ಮ ಬಳಿ ಇರುವುದಿಲ್ಲವೆಂದರೆ ಇನ್ನ್ನು ಈ ರೀತಿ ಕೆಟ್ಟಹಾದಿಯಲ್ಲಿ ಸಂಪಾದನೆ ಮಾಡಿದ ಹಣ ನಮ್ಮಲ್ಲಿರುತ್ತದೆಯೇ ಎಂದು ಯುವಜನತೆ ಇನ್ನಾದರೂ ಯೋಚಿಸಬೇಕಾಗಿದೆ.

ಬೆಟ್ಟಿಂಗ್ ನಿಯಂತ್ರಣಕ್ಕೆ ಹಲವಾರು ಕಾನೂನುಗಳಿದ್ದರೂ ಅವುಗಳನ್ನು ಉಲ್ಲಂಘಿಸುವವರೇ ಹೆಚ್ಚು. ಧೂಮಪಾನ, ಮದ್ಯಪಾನಕ್ಕಿಂತಲೂ ಭಯಾನಕವಾದುದು ಈ ಬೆಟ್ಟಿಂಗ್ ಆಟವಾಗಿದೆ. ಧೂಮಪಾನ, ಮದ್ಯಪಾನ ದಿನದಿಂದ ದಿನಕ್ಕೆ ಆರೋಗ್ಯವನ್ನು ಕ್ಷೀಣಿಸುವಂತೆ ಮಾಡಿದರೆ ಈ ಬೆಟ್ಟಿಂಗ್ ಎಂಬುದು ಕೇವಲ ಕೆಲವೇ ದಿನಗಳಲ್ಲಿ ವ್ಯಕ್ತಿಯ ಸಂಪೂರ್ಣ ಬದುಕನ್ನೇ ಬದಲಾಯಿಸುತ್ತದೆ. ಅರಮನೆಯಿಂದ ಗುಡಿಸಲಿನ ಕಡೆಗೆ ಮುಖಮಾಡುತ್ತಿರುವ ಅದೆಷ್ಟೊ ಜನರು ಉದಾಹರಣೆಗಳಾಗಿ ಉಳಿದಿದ್ದಾರೆ. ತಂದೆ ಮಾಡಿದ ತಪ್ಪಿಗೆ ಹೆಂಡತಿ, ಮಕ್ಕಳು ಶಿಕ್ಷೆ ಅನುಭವಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಅತಿ ಹೆಚ್ಚಿನ ಹಣದಾಸೆಗೆ ತಾನು ಬಲಿಯಾಗುವುದಲ್ಲದೆ ತನ್ನ ಕುಟುಂಬವನ್ನು ಬೀದಿಗೆ ತರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಬೆಟ್ಟಿಂಗ್ ಆಡುವುದನ್ನು ಮೊದಲು ಶಾಲಾ ಕಾಲೇಜುಗಳಲ್ಲೇ ಹತೋಟಿಗೆ ತರಬೇಕಿದೆ. ಯುವಪೀಳಿಗೆ ಈ ರೀತಿಯ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡರೆ ಅವರ ಮುಂದಿನ ಭವಿಷ್ಯ ಯಾವ ರೀತಿ ಇರುತ್ತದೆಂಬುದು ಊಹಿಸಲಾಗದು. ಬೆಟ್ಪಿಂಗ್ ದಂಧೆಯನ್ನು ಸಮಾಜ ನಿರ್ಲಕ್ಷಿಸುತ್ತಾ ಹೋದರೆ ಅದು ಮುಂದಿನ ದಿನಗಳಲ್ಲಿ ಬಹು ಎತ್ತರಕ್ಕೆ ಬೆಳೆದು ಇಡೀ ಸಮಾಜವನ್ನೇ ನಾಶ ಮಾಡುವ ಪಿಡುಗಾಗಬಹುದು. ಯುವಜನತೆಗೆ ಬಿಸಿರಕ್ತದ ಹಠವಿರುವುದರಿಂದ ಯಾರ ಮಾತನ್ನೂ ಕೇಳಲು ಬಯಸುವುದಿಲ್ಲ. ಇಂತಹ ಯುವಜನತೆಗೆ ಸಾಕಷ್ಟು ಅರಿವಿನ ಅಗತ್ಯವಿದೆ. ಇಂತಹ ದುಶ್ಚಟಗಳ ಕೆಟ್ಟ ಬೇರುಗಳನ್ನು ಗಿಡವಿದ್ದಾಗಲೇ ಬುಡ ಸಮೆತ ಕಿತ್ತೆಸೆಯಬೇಕು. ಇಲ್ಲವಾದರೆ ಅದು ಮುಂದೊಂದು ದಿನ ಬೃಹತ್ತಾಗಿ ಬೆಳೆದು ಸಾಕಷ್ಟು ಜನರನ್ನು ನಾಶಮಾಡುವುದಲ್ಲದೆ, ಅನೇಕ ಕುಟುಂಬಗಳನ್ನು ಬೀದಿಗೆ ತರುವುದು ಖಚಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)