varthabharthi

ನಿಮ್ಮ ಅಂಕಣ

ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣ ಯಾರು?

ವಾರ್ತಾ ಭಾರತಿ : 29 May, 2019
ಕೆ. ಎಸ್. ನಾಗರಾಜ್,ಹನುಮಂತನಗರ, ಬೆಂಗಳೂರು

ಮಾನ್ಯರೇ,

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಕೆಲಸಮಾಡುವವರು ಕಚೇರಿಯಿಂದ ಮನೆ ಸೇರುವುದು ಮತ್ತು ಮನೆಯಿಂದ ಕಚೇರಿ ಸೇರುವುದು ದೊಡ್ಡ ಸಮಸ್ಯೆಯಾಗಿದೆ. ಇನ್ನು ಶಾಲಾ ಮಕ್ಕಳಿಗಂತೂ ಶಾಲೆಗೆ ಹೋಗಿ ಬರಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸಣ್ಣ ಪುಟ್ಟ ರಸ್ತೆಗಳಲ್ಲೂ ಟ್ರಾಫಿಕ್ ಸಮಸ್ಯೆ. ಇವುಗಳಿಗೆಲ್ಲ ಸಂಬಂಧಿತರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಮತ್ತು ಅದಕ್ಷತೆಯೇ ಮೂಲ ಕಾರಣ. ಬೆಂಗಳೂರು ನಗರದಲ್ಲಿ 20x30 ಅಳತೆಯ ನಿವೇಶನದಲ್ಲಿ ವಾಸದ ಮನೆಯನ್ನು ನಿರ್ಮಾಣ ಮಾಡಲು ಹೊರಟರೆ ಅವರಿಗೆ ನಕ್ಷೆ ಕೊಡುವ ಸಂದರ್ಭದಲ್ಲಿ ನೆಲಮಾಳಿಗೆಯನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗೆ ನಿಗದಿಪಡಿಸಬೇಕೆಂದು ಷರತ್ತನ್ನು ವಿಧಿಸಿ ಅದರಂತೆಯೇ ನಕ್ಷೆಯನ್ನು ಮಂಜೂರು ಮಾಡುತ್ತಾರೆ. ಇದೇ ರೀತಿ ಎಲ್ಲಾ ಕಟ್ಟಡಗಳಿಗೂ ಕಾನೂನನ್ನು ಬಿಬಿಎಂಪಿಯವರು ಅನ್ವಯಿಸುವಂತೆ ಎಚ್ಚರಿಕೆ ವಹಿಸಿದ್ದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಬಹಳಷ್ಟು ಪರಿಹಾರ ಕಾಣಬಹುದಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನವೂ ಹಲವಾರು ವಾಣಿಜ್ಯ ಕಟ್ಟಡಗಳು ಮತ್ತು ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಲೇ ಇವೆ. ಅವುಗಳಲ್ಲಿ ಹೆಚ್ಚಿನವುಗಳು ಮಂಜೂರಾತಿ ಪಡೆದುಕೊಂಡಿರುವ ನಕ್ಷೆಗೂ ಮತ್ತು ನಿರ್ಮಿಸುತ್ತಿರುವ ಕಟ್ಟಡದ ವಿನ್ಯಾಸಕ್ಕೂ ಸಂಬಂಧವೇ ಇರುವುದಿಲ್ಲ. 100ಕ್ಕೆ 90ರಷ್ಟು ಇಂತಹ ಕಟ್ಟಡಗಳಲ್ಲಿ ನೆಲಮಹಡಿಯನ್ನು ವಾಹನ ನಿಲುಗಡೆಗಾಗಿ ಮೀಸಲಿಡದೆ ಅಲ್ಲಿಯೂ ಅಂಗಡಿಗಳನ್ನು ನಿರ್ಮಿಸಿ ಕಚೇರಿಗಳಿಗೆ ಇಲ್ಲವೇ ವ್ಯಾಪಾರ ಮಳಿಗೆಗಳನ್ನಾಗಿ ಪರಿವರ್ತಿಸಿ ಮಾರಾಟ ಇಲ್ಲವೇ ಬಾಡಿಗೆಗೆ ನೀಡಲಾಗುತ್ತದೆ. ಇದನ್ನು ಸಂಬಂಧಿತ ಇಲಾಖೆಯವರು ಗಮನಿಸಿದರೂ ಕಾಟಾಚಾರಕ್ಕೆ ಅವರಿಗೆ ಒಂದು ನೋಟಿಸ್ ಕೊಟ್ಟು ನಂತರ ತಮ್ಮ ಕೆಲಸವಾಯಿತೆಂದು ಸುಮ್ಮನಾಗುತ್ತಾರೆ. ನಗರದಲ್ಲಿ ಪ್ರತಿದಿನವೂ ಪ್ರತಿಯೊಂದು ವಾರ್ಡಿನಲ್ಲಿಯೂ ಸಹ ಹಲವಾರು ಕಟ್ಟಡಗಳು ದುರಸ್ತಿಯ ನೆಪದಲ್ಲಿ ಮತ್ತಷ್ಟು ವಿಸ್ತಾರಗೊಳಿಸುತ್ತಾ ಸಮುದಾಯ ಭವನಗಳನ್ನು, ಕಲ್ಯಾಣ ಮಂಟಪಗಳನ್ನು, ಸಾಂಸ್ಕೃತಿಕ ಭವನಗಳನ್ನು, ಹೀಗೆ ನಿರ್ಮಿಸುತ್ತಲೇ ಇದ್ದಾರೆ. ಹೆಸರಿಗೆ ಮಾತ್ರ ಕಟ್ಟಡದ ದುರಸ್ತಿ ಕಾರ್ಯ ಆದರೆ ನಿಜಕ್ಕೂ ಆಗುತ್ತಿರುವುದು ಇವುಗಳ ವಿಸ್ತರಣೆ ಕಾರ್ಯ. ಈ ಸಂದರ್ಭದಲ್ಲಾದರೂ ಅವರಿಗೆ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂಬಂಧಿತ ಇಲಾಖೆಯವರು ಏಕೆ ಆದೇಶಿಸುವುದಿಲ್ಲ.? ಬೆಂಗಳೂರು ನಗರದಲ್ಲಿ ನೂರಾರು ಕಲ್ಯಾಣ ಮಂಟಪಗಳಿದ್ದು ಎಲ್ಲಾ ಕಲ್ಯಾಣ ಮಂಟಪಗಳಲ್ಲಿಯೂ ನೆಲಮಹಡಿ ಸಂಪೂರ್ಣವಾಗಿ ಊಟದ ಹಾಲ್‌ಗಳಾಗಿ ಪರಿವರ್ತನೆಯಾಗಿವೆ. ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ಜನ ರಸ್ತೆಗಳಲ್ಲಿ ಮೇಲೆ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ನಮ್ಮ ಅಧಿಕಾರಿಗಳು ಗಮನವೇ ಹರಿಸುತ್ತಿಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳು ನಗರವನ್ನು ಆವರಿಸಿಕೊಂಡಿರುವಾಗ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕೀತೇ?

ಕೆ. ಎಸ್. ನಾಗರಾಜ್,ಹನುಮಂತನಗರ, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)