varthabharthi

ವಿಶೇಷ-ವರದಿಗಳು

ಕಾಡುತ್ತಿದೆ ಕೃತಕ ನೆರೆ ಭೀತಿ

ದ.ಕ.: ಮುಂಗಾರು ಪೂರ್ವ ಮಳೆ ಕುಸಿತ

ವಾರ್ತಾ ಭಾರತಿ : 29 May, 2019
ಸತ್ಯಾ. ಕೆ

ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 27: ವಾಡಿಕೆಯಂತೆ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮುಂಗಾರು ಪೂರ್ವ ಮಳೆ ಈ ಬಾರಿ ಕುಸಿತಕಂಡಿದೆ. ಎಪ್ರಿಲ್, ಮೇ ತಿಂಗಳಲ್ಲಿ ಸಾಧಾರಣವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಈ ಬಾರಿ ಮಳೆ ಪ್ರಮಾಣ ತೀವ್ರವಾಗಿ ಕುಸಿತವಾಗಿದೆ. ಹಾಗಿದ್ದರೂ ಈ ಬಾರಿ ಮಳೆಗಾಲದಲ್ಲಿ ಮಂಗಳೂರು ನಗರದಲ್ಲಿ ಮುಂಗಾರು ಸಂದರ್ಭ ಕೃತಕ ನೆರೆಯ ಸಾಧ್ಯತೆಯನ್ನು ಮಾತ್ರ ಅಲ್ಲಗಳೆಯಲಾಗುತ್ತಿಲ್ಲ. 2018ರ ಮೇ 29ರಂದು ಜಿಲ್ಲೆಯಾದ್ಯಂತ ಸುರಿದ ಮಹಾ ಮಳೆಗೆ ಇಬ್ಬರು ಪ್ರಾಣ ಕಳೆದುಕೊಳ್ಳುವ ಜೊತೆಗೆ ಸಾಕಷ್ಟು ಮನೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಸುಮಾರು 25 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿತ್ತು. ಸತತ 6 ಗಂಟೆಗಳ ಕಾಲ ಸುರಿದ ಆ ಮಹಾಮಳೆ ಮಂಗಳೂರು ನಗರವನ್ನೇ ಜಲಾಮಯಗೊಳಿಸಿತ್ತು. ಮಂಗಳೂರು ನಗರವೊಂದರಲ್ಲೇ 368 ಮಿಲಿ ಮೀಟರ್ ಮಳೆಯಾಗಿತ್ತು. ವಾಯುಭಾರ ಕುಸಿತದಿಂದ ಉಂಟಾಗಿದ್ದ, ಸುಮಾರು 15 ವರ್ಷಗಳ ಬಳಿಕ ಸುರಿದಂತಹ ಆ ಮಹಾ ಮಳೆಗೆ ಮಂಗಳೂರು ನಗರ ಸಂಪೂರ್ಣ ನಲುಗಿ ಹೋಗಿತ್ತು. ಈ ಬಾರಿಯೂ ಮುಖ್ಯವಾಗಿ ಪಂಪ್‌ವೆಲ್ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸಂಭವಿಸುವ ಭೀತಿ ಎದುರಾಗಿದೆ.ಪಂಪ್‌ವೆಲ್ ಬಳಿ ಮೇಲ್ಸೇತುವೆ ಕಾಮಗಾರಿಗಾಗಿ ಹಾಕಲಾಗಿರುವ ಮಣ್ಣಿನ ರಾಶಿ, ತೋಡಲಾಗಿರುವ ಗುಂಡಿಗಳು ಅಪಾಯ ವನ್ನು ಸೃಷ್ಟಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ನಗರ ವ್ಯಾಪ್ತಿಯಲ್ಲಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಗಿತ್ತು. ಹಾಗಿದ್ದರೂ ಉಷ್ಣಾಂಶ ಮಾತ್ರ ಕಡಿಮೆಯಾಗಿಲ್ಲ. ಇದೇ ವೇಳೆ ಮಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕವೂ ಹೆಚ್ಚುತ್ತಿದೆ. ಮುಂಗಾರು ಪೂರ್ವ ಮಳೆ ಕ್ಷೀಣಗೊಂಡಿರುವ ಜೊತೆಯಲ್ಲೇ ಮುಂಗಾರು ಮಳೆ ವಿಳಂಬವಾದಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ನಗರದಲ್ಲಿ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸುವ ಲಕ್ಷಣಗಳು ಎದುರಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಶೇ. 63ರಷ್ಟು ಮುಂಗಾರು ಪೂರ್ವ ಮಳೆ ಕೊರತೆ ಇದೆ. ಇತರ ತಾಲೂಕುಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಈ ಬಾರಿ ಅತೀ ಕಡಿಮೆ ಮುಂಗಾರು ಪೂರ್ವ ಮಳೆ ಸುರಿದಿದೆ. ಕಳೆದ ಬಾರಿ ಸುರಿದ ಮಹಾ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ನಗರದಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಹಾಗೂ ಹೂಳು ತೆಗೆಯಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದರು. ಅದಾಗಿ ಕೆಲ ದಿನಗಳ ಕಾಲ ಈ ಬಗ್ಗೆ ಪ್ರಕ್ರಿಯೆಗಳು ನಡೆಯಿತಾದರೂ ಮಳೆ ನಿಂತ ಬಳಿಕ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದೀಗ ಇನ್ನೂ ರಾಜಕಾಲುವೆಗಳ ಹೂಳು ತೆಗೆಯಲು ಸಮರ್ಪಕ ವ್ಯವಸ್ಥೆ ಆಗದಿರುವುದರಿಂದ ಈ ಬಾರಿ ಮಳೆಯ ವೇಳೆ ಕೃತಕ ನೆರೆಯ ಆತಂಕ ಹೆಚ್ಚಿದೆ ವಿಪತ್ತು ಸ್ಪಂದನ ಪಡೆ ಕೇಂದ್ರಕ್ಕೆ ಜಾಗ ಮಂಜೂರು

: ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಸುಸಜ್ಜಿತ ರಾಜ್ಯ ವಿಪತ್ತು ಸ್ಪಂದನಾ ಪಡೆ (ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಪೋರ್ಸ್ಸ್) ಎಸ್‌ಡಿಆರ್‌ಎಫ್ ಕೇಂದ್ರ ಸ್ಥಾಪನೆಗೆ ಬಜ್ಪೆ ಸಮೀಪದ ಬಡಗ ಎಕ್ಕಾರು ಅರಸುಲಪದವು ಎಂಬಲ್ಲಿ 10 ಎಕರೆ ಜಾಗ ಮಂಜೂರಾಗಿದೆ.

ಜಿಲ್ಲೆ ಮಾತ್ರವಲ್ಲದೆ, ಕರಾವಳಿಯ ಯಾವುದೇ ಭಾಗದಲ್ಲಿ ಭೂಕಂಪ, ಪ್ರವಾಹ, ಸುನಾಮಿ, ಭೂಕುಸಿತ ಮೊದಲಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಮಾದರಿಯಲ್ಲಿ ರಾಜ್ಯ ಮಟ್ಟದ ಈ ತಂಡ ಕಾರ್ಯಾಚರಿಸಲಿದೆ. ಈ ಹಿಂದಿನ ರಾಜ್ಯ ಸರಕಾರ ಈ ಪಡೆಯನ್ನು ಕರಾವಳಿಗೆ ಮಂಜೂರು ಮಾಡಿತ್ತಾದರೂ, ಸೂಕ್ತ ಜಮೀನಿನ ಕೊರತೆಯಿಂದ ಪಡೆ ನಿರ್ಮಾಣ ವಿಳಂಬವಾಗಿತ್ತು. ಇದೀಗ ಅರಸುಲಪದವು ಎಂಬಲ್ಲಿ 10 ಎಕೆರ ಜಮೀನನ್ನು ಅಗ್ನಿಶಾಮಕ ದಳದವರಿಗೆ ನೀಡಲು ನಿರ್ಧರಿಸಲಾಗಿದೆ. ಒಂದು ವಾರದೊಳಗೆ ಭೂ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಪಡೆಯಲ್ಲಿ 100ರಿಂದ 200 ಸಿಬ್ಬಂದಿ ಇದ್ದು, ಕರಾವಳಿ ಭಾಗದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುವ ವೇಳೆ ಸದ್ಯ ಬೆಂಗಳೂರಿನಲ್ಲಿರುವ ಈ ತಂಡವನ್ನು ಮಂಗಳೂರಿಗೆ ಕರೆಯಿಸಲಾಗುವುದು. ಕೆಎಸ್‌ಆರ್‌ಪಿ, ಅಗ್ನಿಶಾಮಕ ದಳ, ಆಂತರಿಕ ಭದ್ರತಾ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಿಬ್ಬಂದಿಯನ್ನೇ ಈ ಪಡೆಗೆ ಸದ್ಯ ನಿಯೋಜನೆ ಮಾಡಲಾಗುತ್ತಿದೆ. ಬೆಂಗಳೂರಿನ ಅಕಾಡಮಿ, ನ್ಯಾಷನಲ್ ಸಿವಿಲ್ ಡಿಫೆನ್ಸ್ ಕಾಲೇಜು ಸೇರಿದಂತ ವಿವಿಧ ಕಡೆ ಈ ತಂಡದ ಸಿಬ್ಬಂದಿಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಇಂದಿನಿಂದ 4 ದಿನ ಮತ್ತೆ ನೀರಿಲ್ಲ

ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸಾಧಾರಣ ಮಳೆಯಾಗಿದ್ದರೂ, ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ತುಂಬೆ ಅಣೆಕಟ್ಟಿನಲ್ಲಿ 3 ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ರೇಶನಿಂಗ್ ಮುಂದುವರಿಯಲಿದೆ. ಮೇ 28ರ ಬೆಳಗ್ಗೆ 6ರಿಂದ ಮುಂದಿನ ನಾಲ್ಕು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮನಪಾ ಹಿರಿಯ ಅಧಿಕಾರಿ ಲಿಂಗೇಗೌಡ ತಿಳಿಸಿದ್ದಾರೆ. ಇಂದಿನಿಂದ 4 ದಿನ ಮತ್ತೆ ನೀರಿಲ್ಲ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)