varthabharthi

ವಿಶೇಷ-ವರದಿಗಳು

ಗೋಡೆಗಳಲ್ಲಿ ಜಾನಪದ, ವೈವಿಧ್ಯಮಯ ವರ್ಲಿ ಚಿತ್ತಾರ

ಮದುವಣಗಿತ್ತಿಯಂತೆ ಶೃಂಗಾರಗೊಂಡ ಕನ್ಯಾನ ಶಾಲೆ!

ವಾರ್ತಾ ಭಾರತಿ : 29 May, 2019

ಬಂಟ್ವಾಳ, ಮೇ 28: ರಾಜ್ಯ ಸರಕಾರದ ಬಹುನಿರೀಕ್ಷೆಯ ಕರ್ನಾಟಕ ಪಬ್ಲಿಕ್ ಶಾಲೆ ಯೋಜನೆಯಲ್ಲಿ ಅಯ್ಕೆಗೊಂಡಿರುವ ಬಂಟ್ವಾಳ ತಾಲೂಕಿನ ಕನ್ಯಾನ ಶಾಲೆಯು ಇದೀಗ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ.

ಶಾಲಾ ಶಿಕ್ಷಣದ ವಿವಿಧ ಚಟುವಟಿಕೆಗಳನ್ನು, ಜಾನಪದ, ಸಾಂಸ್ಕೃತಿಕ, ವೈಜ್ಞಾನಿಕ, ಸನ್ನಿವೇಶಗಳನ್ನು ಬಿಂಬಿಸುವ ವರ್ಲಿ ಚಿತ್ರಕಲೆಯು ಶಾಲೆಯ ಗೋಡೆಗಳಲ್ಲಿ ಮೂಡಿಬಂದಿದ್ದು, ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ಕಟ್ಟಿ ಕೊಡುವುದಕ್ಕೆ ಕಾಯುತ್ತಿವೆ.

ಗೋಡೆಯಲ್ಲಿ ವರ್ಲಿ ಚಿತ್ರಕಲೆ: ಶಾಲೆಯ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದ್ದು, ಗೋಡೆಗಳಿಗೆ ಅಂದವಾದ ಬಣ್ಣ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಶಾಲೆಯ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ಅನುದಾನವನ್ನು ಮಂಜೂರು ಮಾಡಲು ಸರಕಾರ ಯೋಜನೆ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಶಾಲೆಯ ಗೋಡೆಗಳಲ್ಲಿ ವರ್ಲಿ ಚಿತ್ರಕಲೆಯು ಅರಳಿದ್ದು, ಶಾಲೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಜಿಲ್ಲೆಯ ಚಿತ್ರಕಲಾ ಶಿಕ್ಷಕರಾದ ತಾರಾನಾಥ್ ಕೈರಂಗಳ, ಮಂಜುನಾಥ, ಚಿತ್ರಕಲಾವಿದರಾದ ಕಮಲಾಕ್ಷ, ತೌಸೀದ್, ಯೋಗೀಶ್ ಮತ್ತು ಹರಿಚರಣ್ ಇವರ ಕುಂಚದಲ್ಲಿ ಅರಳಿರುವ ಚಿತ್ರಗಳು ನೋಡುಗರ ಮನವನ್ನು ಮುದಗೊಳಿಸುತ್ತದೆ.

ದಾಖಲಾತಿ ಪ್ರಕ್ರಿಯೆ ತೀವ್ರಗತಿಯಲ್ಲಿದೆ: 2019-20ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವೂ ಆರಂಭಗೊಂಡಿದ್ದು, ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭವಾಗಿದೆ. ಸರಕಾರದ ವತಿಯಿಂದಲೇ ಎಲ್‌ಕೆಜಿ ತರಗತಿಗೆ ಓರ್ವ ಶಿಕ್ಷಕಿ, ಓರ್ವ ಆಯಾರನ್ನು ತಾತ್ಕಾಲಿಕವಾಗಿ ನೇಮಿಸಲಾಗುತ್ತದೆ. ಕನ್ನಡ ಮಾಧ್ಯಮದ ಮಕ್ಕಳಿಗೆ ಸಮಾನವಾಗಿ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ, ಅಕ್ಷರದಾಸೋಹ ಮುಂತಾದ ಯೋಜನೆಗಳು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೂ ನೀಡಲಾಗುತ್ತದೆ. ಈ ಶಾಲೆ ಗ್ರಾಮೀಣ ಪ್ರದೇಶದಲ್ಲಿದ್ದರೂ, ಗುಣಮಟ್ಟದ ಶಿಕ್ಷಣವು ದೊರೆಯುತ್ತಿರುವುದರಿಂದ ವಿಶೇಷವಾಗಿ ಇಂಗ್ಲಿಷ್ ಮಾಧ್ಯಮದ ಎಲ್‌ಕೆಜಿ, ಒಂದನೇ, ಆರನೇ ಮತ್ತು ಎಂಟನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ಕನ್ಯಾನದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪಪ್ರಾಂಶುಪಾಲೆ ಸವಿತಾ ಕೆ. ತಿಳಿಸಿದ್ದಾರೆ. ಸರಕಾರದ ಮಹತ್ತರ ಯೋಜನೆಗೆ ಇಲಾಖೆಯ ಅಧಿಕಾರಿಗಳ ಮತ್ತು ಶಿಕ್ಷಕರ ಕ್ರಿಯಾಶೀಲತೆ, ಜನಪ್ರತಿನಿಧಿಗಳ ಬೆಂಬಲ, ಜನತೆಯ ಸಹಕಾರ ಇದ್ದಲ್ಲಿ ಯೋಜನೆ ಯಶಸ್ಸನ್ನು ಗಳಿಸಲು ಸಾಧ್ಯ ಎನ್ನುವುದಕ್ಕೆ ಕನ್ಯಾನದ ಕರ್ನಾಟಕ ಪಬ್ಲಿಕ್ ಶಾಲೆ ಸಾಕ್ಷಿ.

ಏನಿದು ಕರ್ನಾಟಕ ಪಬ್ಲಿಕ್ ಶಾಲೆ?:

ಸರಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಒಂದೇ ಕಡೆ 1ರಿಂದ 12ನೇ ತರಗತಿಗಳನ್ನು ಹೊಂದಿದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಒಗ್ಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು 2018-19ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಶಾಲೆಗಳ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಈ ಶಾಲೆಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಆಧುನಿಕ ತಂತ್ರಜ್ಞಾನ ಆಧಾರಿತ ತರಗತಿ ಕೊಠಡಿಗಳು, ಉತ್ತಮ ಕ್ರೀಡಾ ತರಬೇತಿ, ಪಠ್ಯಪೂರಕ ಚಟುವಟಿಕೆಗಳಿಗೆ ಆದ್ಯತೆ ಹೀಗೆ ಎಲ್ಲ ರೀತಿಯಲ್ಲೂ ಖಾಸಗಿ ಶಾಲೆಗಳಿಗೆ ಸಮಾನವಾದ ವ್ಯವಸ್ಥೆಯನ್ನು ಮಾಡಲು ಸರಕಾರವು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 2018-19ನೇ ಸಾಲಿನಲ್ಲಿ ಈ ಶಾಲೆಗೆ 13 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಇದರಿಂದ ಶಾಲಾ ಭೌತಿಕ ಪರಿಸರ ಆಕರ್ಷಣೀಯವಾಗಿ ಬದಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)