varthabharthi

ವಿಶೇಷ-ವರದಿಗಳು

ರಜಾದಿನಗಳ ಮಲಬದ್ಧತೆಯನ್ನು ಎದುರಿಸುವುದು ಹೇಗೆ?

ವಾರ್ತಾ ಭಾರತಿ : 29 May, 2019

 ನಮ್ಮ ಸುತ್ತಲಿನ ವಾತಾವರಣ ಮತ್ತು ನಾವು ಸೇವಿಸುವ ನೀರಿನ ಬದಲಾವಣೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಣನೀಯ ಪರಿಣಾಮವನ್ನು ಬೀರುತ್ತದೆ ಹಾಗೂ ಅಜೀರ್ಣ,ಮಲಬದ್ಧತೆ ಮತ್ತು ಬೇಧಿಗೆ ಕಾರಣವಾಗುತ್ತದೆ.

ಬೇಸಿಗೆಯ ರಜಾದಿನಗಳು ಬಂದರೆ ಸಾಕು,ಹೆಚ್ಚಿನ ಕುಟುಂಬಗಳು ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಪ್ರವಾಸಕ್ಕೆ ಹೊರಟುಬಿಡುತ್ತವೆ. ಪ್ರವಾಸವು ಮೋಜನ್ನೇನೋ ನೀಡುತ್ತದೆ ಸರಿ,ಆದರೆ ಅದು ಹಲವಾರು ಜೀರ್ಣ ಸಂಬಂಧಿ ಸಮಸ್ಯೆಗಳನ್ನೂ ತರುತ್ತದೆ. ರಜಾದಿನಗಳ ಪ್ರವಾಸಕ್ಕೆ ಹೊರಟಾಗಲೇ ಅಥವಾ ಪ್ರವಾಸದ ಮೋಜಿನಲ್ಲಿರುವಾಗಲೇ ವಾಯು ಸಮಸ್ಯೆ,ಹೊಟ್ಟೆಯುಬ್ಬರ ಮತ್ತು ಹೊಟ್ಟೆಯಲ್ಲಿ ನೋವು ಇತ್ಯಾದಿಗಳು ಕಾಡಬಹುದು. ಹೊಟ್ಟೆಯ ಕಿರಿಕಿರಿ ಪ್ರವಾಸದ ಮೋಜನ್ನು ಸಂಪೂರ್ಣವಾಗಿ ಅನುಭವಿಸಲು ಬಿಡುವುದಿಲ್ಲ. ಈ ಲಕ್ಷಣವನ್ನು ವೆಕೇಷನ್ ಕಾನ್‌ಸ್ಟಿಪೇಷನ್ ಅಥವಾ ರಜಾದಿನಗಳ ಮಲಬದ್ಧತೆ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಯಾಣದ ಒತ್ತಡ,ನೀರು ಮತ್ತು ಆಹಾರದ ಬದಲಾವಣೆ,ದೀರ್ಘಾವಧಿಯ ವಿಮಾನ ಪ್ರಯಾಣಗಳು ಮತ್ತು ನಿದ್ರೆಯ ಕೊರತೆ ಅಥವಾ ನಿದ್ರೆಯ ಸಮಯದಲ್ಲಿ ವ್ಯತ್ಯಯ ಹೀಗೆ ಹಲವಾರು ಕಾರಣಗಳಿವೆ.

  ಪ್ರಯಾಣ ಮಲಬದ್ಧತೆ ಪ್ರಯಾಣದ ಮಧ್ಯದಲ್ಲಿಯೇ ಕಾಡಬಹುದು. ದೀರ್ಘಾವಧಿಯ ಪ್ರಯಾಣ ಸಂದರ್ಭಗಳಲ್ಲಿ ಟಾಯ್ಲೆಟ್‌ಗಳ ಕೊರತೆ,ಸೂಕ್ತ ಆಹಾರದ ಅಲಭ್ಯತೆ ಮತ್ತು ನೀರಿನ ಬದಲಾವಣೆ ಇತ್ಯಾದಿಗಳು ಕರುಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ. ನೀವು ಹೋಟೆಲ್‌ನಲ್ಲಿದ್ದಾಗಲೂ ಕೂಡ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು ಶರೀರಕ್ಕೆ ಹೆಚ್ಚಿನ ಸಮಯಾವಕಾಶ ಅಗತ್ಯವಾಗಿರುತ್ತದೆ ಮತ್ತು ಇದು ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆಹಾರದಲ್ಲಿ ಬದಲಾವಣೆಯು ರಜಾದಿನಗಳ ಮಲಬದ್ಧತೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.

 ಕೆಲವೊಮ್ಮೆ ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ಸಮಯ ವಲಯಗಳು ಸಹ ಬದಲಾವಣೆಯಾಗುತ್ತವೆ ಮತ್ತು ನಿದ್ರೆಯ ಪದ್ಧತಿಗೆ ವ್ಯತ್ಯಯವನ್ನುಂಟು ಮಾಡುತ್ತವೆ. ನಿದ್ರೆಗೆ ತೊಂದರೆಯಾದರೆ ಅದು ಕರುಳಿನ ಚಲನವಲನಕ್ಕೂ ವ್ಯತ್ಯಯವನ್ನುಂಟು ಮಾಡುತ್ತದೆ. ಮನೆಯಿಂದ ದೂರವಿದ್ದಾಗ ಈ ಸಮಸ್ಯೆಯನ್ನು ಎದುರಿಸುವುದು ಕಷ್ಟ. ಪ್ರಯಾಣದ ಸುತ್ತಾಟದಲ್ಲಿ ಟಾಯ್ಲೆಟ್ ಮತ್ತು ಸೂಕ್ತ ಆಹಾರ ಕೆಲವೊಮ್ಮೆ ಮರೀಚಿಕೆಯಾಗಬಹುದು. ಅಲ್ಲದೆ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ಬಳಸುವ ಅನಿವಾರ್ಯತೆಯುಂಟಾದರೆ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಇಂತಹ ಶೌಚಾಲಯಗಳಲ್ಲಿ ಟಾಯ್ಲೆಟ್ ಸೀಟ್‌ಗಳು ಹಲವಾರು ಸೂಕ್ಷ್ಮಜೀವಿಗಳಿಂದ ತುಂಬಿರುವುದರಿಂದ ಮೂತ್ರ ವಿಸರ್ಜನೆ ಅಥವಾ ಮಲ ವಿಸರ್ಜನಗೆ ಕಮೋಡ್ ಬದಲು ಭಾರತೀಯ ಪದ್ಧತಿಯ ಶೌಚಾಲಯವನ್ನೇ ಬಳಸಿ. ಸಾರ್ವಜನಿಕ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ವೈಯಕ್ತಿಕ ಸ್ವಚ್ಛತೆಯೂ ಮುಖ್ಯವಾಗಿದೆ ಎನ್ನುವುದನ್ನು ಮರೆಯಬೇಡಿ.

 ರಜಾಕಾಲದ ಮಲಬದ್ಧತೆಯನ್ನು ತಡೆಯಲು ಹಲವಾರು ಮಾರ್ಗಗಳಿವೆ. ಮೊದಲನೆಯದಾಗಿ ರಜಾದಿನಗಳ ಪ್ರವಾಸಕ್ಕೆ ತೆರಳುವ ಮುನ್ನ ನಿಮ್ಮ ವೈದ್ಯರನು ಭೇಟಿಯಾಗಿ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಿ. ಶರೀರದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕಾಯ್ದುಕೊಳ್ಳಲು ಪ್ರೊಬಯಾಟಿಕ್‌ಗಳನ್ನು ತೆಗೆದುಕೊಳ್ಳಬಹುದು.

ಸುದೀರ್ಘ ಅವಧಿಯ ವಿಮಾನ ಪ್ರಯಾಣ ಮತ್ತು ರಸ್ತೆ ಪ್ರಯಾಣಗಳಲ್ಲಿ ಆಗಾಗ್ಗೆ ನಡೆಯುತ್ತಿದ್ದರೆ ಒಳ್ಳೆಯದು. ಸೆಳೆತ ಮತ್ತು ನೋವನ್ನು ತಡೆಯಲು ಕಾಲುಗಳಲ್ಲಿ ರಕ್ತಪರಿಚಲನೆ ಅಗತ್ಯವಾಗಿದೆ. ಅಲ್ಲದೆ ಆಗಾಗ್ಗೆ ನಡೆದಾಡುವುದು ಕರುಳಿನ ಚಲನವಲನವನ್ನೂ ಉತ್ತಮಗೊಳಿಸುತ್ತದೆ.

ಪ್ರವಾಸದಲ್ಲಿರುವಾಗ ಜಂಕ್ ಫುಡ್‌ಗಳ ಸೇವನೆಯನ್ನು ಸೀಮಿತಗೊಳಿಸುವುದು ಒಳ್ಳೆಯದು. ಅತಿಯಾದ ಜಂಕ್ ಫುಡ್ ಸೇವನೆಯು ಹೊಟ್ಟೆಯ ಸುತ್ತ ‘ರಜಾದಿನಗಳ ’ ಬೊಜ್ಜಿಗೆ ಕಾರಣವಾಗುತ್ತದೆ ಮತ್ತು ಮಲಬದ್ಧತೆ,ಬೇಧಿ ಹಾಗೂ ಹೊಟ್ಟೆ ನೋವುಗಳಂತಹ ಇತರ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ.

ನಿಮ್ಮ ಶರೀರವು ಅತ್ಯುತ್ತಮವಾಗಿ ಜಲಸಂಚಯಗೊಂಡಿದ್ದರೆ ಯಾವುದೇ ತೊಂದರೆಗಳನ್ನು ಎದುರಿಸಬೇಕಿಲ್ಲ. ಹೊಸಹೊಸ ತಾಣಗಳನ್ನು ನೋಡುವ ಉತ್ಸಾಹದಲ್ಲಿ ನೀವು ಆಗಾಗ್ಗೆ ನೀರು ಕುಡಿಯುವುದನ್ನು ಮರೆತು ಬಿಡಬಹುದು. ಆದರೆ ನೀರು ಮಾತ್ರ ಜೀವನಶೈಲಿ ಸಂಬಂಧಿತ ಹಲವಾರು ತೊಂದರೆಗಳಿಂದ ಪಾರು ಮಾಡುತ್ತದೆ ಎನ್ನುವುದು ಗೊತ್ತಿರಲಿ. ಶರೀರದಲ್ಲಿ ಸಾಕಷ್ಟು ನೀರು ಇದ್ದಾಗ ಆಹಾರವೂ ಸರಿಯಾಗಿ ಜೀರ್ಣಗೊಳ್ಳುತ್ತದೆ ಮತ್ತು ಮಲಬದ್ಧತೆಯ ಕಾಟವೂ ಇರುವುದಿಲ್ಲ. ಹೀಗಾಗಿ ಪ್ರವಾಸದ ಸಮಯದಲ್ಲಿ ನೀರಿನ ಬಾಟಲಿಯೊಂದು ಸದಾ ಕೈಯ್ಯಲಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)