varthabharthi

ನಿಮ್ಮ ಅಂಕಣ

ನವೀನ್ ಪಟ್ನಾಯಕ್ ಎಂಬ ಪ್ರಾದೇಶಿಕ ಪೈಲ್ವಾನ್

ವಾರ್ತಾ ಭಾರತಿ : 30 May, 2019
ಬಸು ಮೇಗಲಕೇರಿ

ಸತತ ಐದನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 73ರ ಹರೆಯದ ನವೀನ್ ಪಟ್ನಾಯಕ್, ದೇಶ ಕಂಡ ಅತ್ಯಂತ ಸರಳ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನರೆತ ಕೂದಲು, ಕ್ಲೀನ್ ಶೇವ್‌ನ ನಗುಮುಖ, ಬಿಳಿ ಜುಬ್ಬಾ, ಪೈಜಾಮ ಮತ್ತು ಕಾಲಿಗೆ ಸಾಧಾರಣ ಚಪ್ಪಲಿ. ಓಡಾಡಲು ಅಂಬಾಸಿಡರ್ ಕಾರು. ಈ ಮಟ್ಟದ ಸರಳತೆಯನ್ನು ಸದ್ಯದ ರಾಜಕಾರಣದಲ್ಲಿ, ಯಾವ ಪಕ್ಷದ ನಾಯಕನಲ್ಲೂ ನೋಡಲು ಸಾಧ್ಯವಿಲ್ಲ. ಕೆಲವೇ ನಿಮಿಷಗಳ ಗಣ್ಯರ ಭೇಟಿಗೆ 10 ಲಕ್ಷ ಬೆಲೆಬಾಳುವ ಭೋಜ್ಪುರಿ ಸೂಟ್ ಧರಿಸುವ; ಒಂದು ಹೊತ್ತಿನ ಊಟಕ್ಕೆ 80 ಸಾವಿರ ರೂ. ಬೆಲೆಯ ತೈವಾನ್ ಅಣಬೆ ತಿನ್ನುವ; ದೇವರ ದರ್ಶನಕ್ಕೆ ಏರೋಪ್ಲೇನ್ ಏರುವ; ವಾಕ್ ಮಾಡಲು ಪಂಚತಾರಾ ಹೋಟೆಲ್ ಲಾನೆ ಬೇಕೆನ್ನುವ ರಾಜಕಾರಣಿಗಳ ನಡುವೆ ನವೀನ್ ಪಟ್ನಾಯಕ್- ನಿಜವಾದ ಜನನಾಯಕ. ಮುಖ್ಯಮಂತ್ರಿಯಾದವರು ಹೀಗೂ ಇರಬಹುದು ಎಂಬುದನ್ನು ಆಚರಣೆಯಲ್ಲಿ ತೋರಿದ ಅಪರೂಪದ ರಾಜಕಾರಣಿ. ಹಾಗೆ ನೋಡಿದರೆ ನವೀನ್ ಪಟ್ನಾಯಕ್ ಬಡವರಲ್ಲ, ಕಷ್ಟ-ಕೊರತೆಯಲ್ಲಿ ಬೆಳೆದವರಲ್ಲ, ಹಸಿವು-ಅವಮಾನಗಳನ್ನು ಅನುಭವಿಸಿದವರಲ್ಲ.

ಅಪ್ಪ ಬಿಜು ಪಟ್ನಾಯಕ್ ಆ ಕಾಲಕ್ಕೇ ಒಡಿಶಾದ ಮುಖ್ಯಮಂತ್ರಿಯಾಗಿದ್ದವರು. ನೆಹರೂಗೆ ಆಪ್ತರಾಗಿದ್ದವರು. ರಕ್ಷಣಾ ಇಲಾಖೆ ಹಾಗೂ ಕೇಂದ್ರ ಸರಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು. ಇಂತಹವರ ಮಗನಾಗಿ 1946ರಲ್ಲಿ ಜನಿಸಿದ ನವೀನ್ ಪಟ್ನಾಯಕ್ ಬಾಲ್ಯದಲ್ಲಿಯೇ ಇಂಗ್ಲಿಷ್ ಸ್ಕೂಲು, ಪ್ರತಿಷ್ಠಿತ ಕಾಲೇಜುಗಳ ಓದು ವಿದ್ಯಾಭ್ಯಾಸಕ್ಕೆಂದು ಒಡಿಶಾದಿಂದ ದೂರವೇ ಉಳಿದವರು. ಹಾಗೆಯೇ ತನ್ನ ಸೌಮ್ಯ ಸ್ವಭಾವಕ್ಕೆ, ಒಂಟಿ ಬದುಕಿಗೆ ಒಗ್ಗುವ ಕತೆ, ಕವಿತೆ ಬರೆದುಕೊಂಡು(ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ) ತನ್ನದೇ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತಿದ್ದವರು. 1997ರಲ್ಲಿ ಬಿಜು ಪಟ್ನಾಯಕ್ ಆಕಸ್ಮಿಕ ಸಾವನಪ್ಪಿದಾಗ ಅನಿವಾರ್ಯವಾಗಿ ಒಡಿಶಾಗೆ ಬಂದ ನವೀನ್, ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕಿಳಿದರು. ಅಪ್ಪನ ಅನುಕಂಪದ ಅಲೆಯ ಮೇಲೆ ಗೆದ್ದು ಮೊದಲ ಬಾರಿಗೆ ಸಂಸದರಾದರು. ವಾಜಪೇಯಿ ಸರಕಾರದಲ್ಲಿ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದರು. 2000ದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆದಾಗ, ತನ್ನದೇ ಆದ ಬಿಜು ಜನತಾ ದಳ ಎಂಬ ಪ್ರಾದೇಶಿಕ ಪಕ್ಷ ಕಟ್ಟಿ ಪೂರ್ಣಪ್ರಮಾಣದ ರಾಜಕಾರಣಿಯಾದರು.

ಮೊದಲಿಗೆ ಬಿಜೆಪಿಯ ಮಿತ್ರಕೂಟದಲ್ಲಿ ಗುರುತಿಸಿಕೊಂಡಿದ್ದ ನವೀನ್, ಎರಡನೇ ಅವಧಿ ಮುಗಿಯುವಷ್ಟರಲ್ಲಿ, 2008ರಲ್ಲಿ, ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯಲ್ಲಿ ಬಜರಂಗದಳ ಭಾಗಿಯಾಗಿದ್ದರಿಂದ, ಎನ್‌ಡಿಎ ಸಖ್ಯ ತೊರೆದು ಸ್ವತಂತ್ರವಾಗಿ ಸ್ಪರ್ಧೆಗಿಳಿದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ನವೀನ್ ಪಟ್ನಾಯಕ್ ದೇಶದ ವೃತ್ತಿರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಹಣ, ಹಣಕ್ಕಾಗಿ ಅಧಿಕಾರ ಎಂಬ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗದೆ ಇರುವುದು. ಬಡವರ ಪರ ಮತ್ತು ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟವನ್ನು ಚಾಲ್ತಿಯಲ್ಲಿಟ್ಟಿರುವುದು. ಅಧಿಕಾರ ಇರುವಷ್ಟು ದಿನ ಅಭಿವೃದ್ಧಿಯತ್ತ ಗಮನ ಹರಿಸಿ ಜನರ ಬದುಕನ್ನು ಹಸನುಗೊಳಿಸುವುದು. ಈ ಹಾದಿಯಲ್ಲಿ, ಕಳೆದ 20 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ಜನಪರ ಕೆಲಸಗಳು; ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿವರ್ಗವನ್ನು ಬಳಸಿಕೊಂಡ ಬಗೆ; ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಾದ ಬದಲಾವಣೆ ಒಡಿಶಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಸ್ವಚ್ಛ-ದಕ್ಷ ಆಡಳಿತ, ಪ್ರಾಮಾಣಿಕ ನಡೆ-ನುಡಿ ನವೀನ್ ಪಟ್ನಾಯಕ್ ಮತ್ತು ಜನರ ನಡುವೆ ಭಾವನಾತ್ಮಕ ಬೆಸುಗೆಯನ್ನು ಬಿಗಿಗೊಳಿಸಿದೆ. ಕಳೆದ 20 ವರ್ಷಗಳಿಂದ ನವೀನ್ ಪಟ್ನಾಯಕ್‌ರ ಬದುಕಿನೊಂದಿಗೆ ಬೆಸೆದುಕೊಂಡಿರುವ ಒಡಿಶಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾ ಮತ್ತು ದೇವೇಂದ್ರ ಪ್ರಧಾನ್ ಭಾರೀ ರಣತಂತ್ರಗಳನ್ನೇ ಹೆಣೆದಿದ್ದರು. ‘‘ಒಡಿಶಾವನ್ನು ಬದಲಿಸುತ್ತೇವೆ, ನಮಗೊಂದು ಅವಕಾಶ ಕೊಡಿ’’ ಎಂದು ಬಳಕೆಯಲ್ಲಿರುವ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿ ಶಕ್ತಿಮೀರಿ ಶ್ರಮಿಸಿದ್ದರು. ಆದರೆ ಒಡಿಶಾ ಜನ ನವೀನ್ ಪಟ್ನಾಯಕ್‌ರಂತೆಯೇ ಅಲ್ಪತೃಪ್ತರು.

ಕಳೆದ ಐದು ವರ್ಷಗಳಲ್ಲಾದ ಬಿಜೆಪಿಯ ‘ಬದಲಾವಣೆ’ಯನ್ನು ಕಣ್ಣಾರೆ ಕಂಡವರು. ಆ ಕಾರಣಕ್ಕಾಗಿಯೇ ಬಿಜೆಪಿಯನ್ನು ನಯವಾಗಿಯೇ ತಿರಸ್ಕರಿಸಿ, 146ರಲ್ಲಿ 112 ಕ್ಷೇತ್ರಗಳನ್ನು ಗೆಲ್ಲಿಸಿ ಮತ್ತೆ ನವೀನ್ ಪಟ್ನಾಯಕ್‌ರನ್ನೇ ಮುಖ್ಯಮಂತ್ರಿಯನ್ನಾಗಿಸಿಕೊಂಡಿದ್ದಾರೆ. ದೇಶದಾದ್ಯಂತ ಬೀಸಿದ ಮೋದಿಯ ಬಿರುಗಾಳಿಯಲ್ಲೂ ಒಡಿಶಾ ಜನ, ತಮಗೆ ಯಾರು ಸೂಕ್ತ ಎಂದು ನಿರ್ಧರಿಸಿದ್ದು ಅವರ ರಾಜಕೀಯ ಪ್ರಬುದ್ಧತೆಯನ್ನು ತೋರುತ್ತಿದೆ. ಕಲೆ, ಸಂಸ್ಕೃತಿ ಮತ್ತು ಭಾಷೆಯ ವಿಷಯಕ್ಕೆ ಬಂದರೆ, ಒಡಿಶಾದ ಜನ ಕೊಂಚ ಹೆಚ್ಚೆನ್ನಿಸುವ ಪ್ರಾದೇಶಿಕ ಪ್ರೀತಿಯುಳ್ಳವರು. ಕುತೂಹಲಕರ ವಿಷಯವೆಂದರೆ, ನವೀನ್ ಪಟ್ನಾಯಕ್ ಗೆ ಒಡಿಯಾ ಭಾಷೆಯೇ ಬರುವುದಿಲ್ಲ. ಅದು ಅವರ ರಾಜಕೀಯ ಬದುಕಿಗೆ ಸಮಸ್ಯೆಯೇ ಆಗಿಲ್ಲ. ಇವತ್ತಿಗೂ ಇಂಗ್ಲಿಷ್‌ನಲ್ಲಿ ಬರೆದುಕೊಂಡು ಒಡಿಯಾ ಭಾಷೆಯಲ್ಲಿ ಭಾಷಣ ಮಾಡುವ ನವೀನ್, ಅಲ್ಲಿಯ ಜನಕ್ಕೆ ಪರಕೀಯರಾಗಿ ಕಂಡಿಲ್ಲ. ಮೆದು ಮಾತಿನ, ಮೃದು ಸ್ವಭಾವದ ನಿಗರ್ವಿ ನವೀನ್‌ರನ್ನು ಇಷ್ಟಪಡಲು ಒಡಿಶಾ ಜನರಿಗೆ ನೂರಾರು ಕಾರಣಗಳಿವೆ. ಸಿಟ್ಟು ತೋರದ, ಸರಳ ಬ್ರಹ್ಮಚಾರಿ ಬದುಕು; ವಿರೋಧಿಗಳನ್ನೂ ಘನತೆ-ಗೌರವದಿಂದ ಕಾಣುವ ವಿಶಾಲ ಹೃದಯವಂತಿಕೆ; ಹಳ್ಳಿಗಾಡಿನ ಜನ, ಅದರಲ್ಲೂ ಬಡ ಆದಿವಾಸಿಗಳು, ರೈತರು, ಮಹಿಳೆಯರಿಗಾಗಿ ಜಾರಿಗೆ ತಂದಿರುವ ಹತ್ತಾರು ಯೋಜನೆಗಳು, 7 ಲಕ್ಷ ಸ್ತ್ರಿ ಸ್ವಸಹಾಯ ಕೇಂದ್ರಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವುದು ನವೀನ್ ಪಟ್ನಾಯಕ್ ಜನಪ್ರಿಯ ವ್ಯಕ್ತಿಯಾಗಿ ಜನಮಾನಸದಲ್ಲಿ ನೆಲೆಗೊಳಿಸಿವೆ.

ನವೀನ್ ಪಟ್ನಾಯಕ್‌ರ ಮತ್ತೊಂದು ಮಹತ್ವದ ನಿರ್ಧಾರವೆಂದರೆ, ರಾಷ್ಟ್ರೀಯ ಪಕ್ಷಗಳೇ ಮಹಿಳಾ ಮೀಸಲಾತಿಗೆ ಮೀನಮೇಷ ಎಣಿಸುತ್ತಿರುವಾಗ ಮಹಿಳೆಯರಿಗೆ ಆದ್ಯತೆ ನೀಡಿದ್ದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡಿ, ಗೆಲ್ಲುವಂತೆ ನೋಡಿಕೊಂಡಿದ್ದು. ರಾಜಕಾರಣದಲ್ಲಿ ಮಹಿಳೆಯರ ಪಾತ್ರ ಮುಖ್ಯ ಎನ್ನುವುದನ್ನು ಎತ್ತಿ ಹಿಡಿದದ್ದು. ಈ ಚುನಾವಣೆಗಳು ನಡೆಯುತ್ತಿರುವಾಗಲೇ ಫನಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿ ಸರಕಾರವನ್ನು ದಿಕ್ಕುಗೆಡಿಸಿತು. ಆದರೆ ಒಡಿಶಾ ರಾಜ್ಯದ ಮೇಲೆ ಪದೇ ಪದೇ ಬಂದೆರಗುವ ಚಂಡಮಾರುತದಿಂದ ಎಚ್ಚೆತ್ತ ಸರಕಾರ, ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯದಿಂದ ಚಂಡಮಾರುತದ ಮುನ್ಸೂಚನೆ ಅರಿತು, ಅಗತ್ಯ ರಕ್ಷಣಾ ಕಾರ್ಯಗಳತ್ತ ಗಮನ ಹರಿಸಿತು. ಫನಿಯಿಂದ ಆಗಬಹುದಾದ ಅನಾಹುತ ಆದರೂ, ಸಾವುನೋವುಗಳಾಗದಂತೆ ನೋಡಿಕೊಂಡಿದ್ದು, ತಕ್ಷಣ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದು, ಪುನರ್ವಸತಿ ಕಲ್ಪಿಸಿದ್ದು ನವೀನ್ ಪಟ್ನಾಯಕ್ ಸರಕಾರದ ಹೆಗ್ಗಳಿಕೆ. ಕಟ್ಟುವ ಕೆಲಸದಲ್ಲಿ, ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟಿರುವ ನವೀನ್ ಪಟ್ನಾಯಕ್, ‘‘ಒಡಿಶಾ ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ, ನನ್ನನ್ನು ಮತ್ತೆ ಮತ್ತೆ ಹರಸಿ ಆರಿಸಿ ಕಳುಹಿಸುತ್ತಿರುವುದು ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತಿದೆ, ಇದಕ್ಕಾಗಿ ನಾನು ನನ್ನ ರಾಜ್ಯದ ಜನತೆಗೆ ಕೃತಜ್ಞನಾಗಿರಬೇಕು’’ ಎಂದಿದ್ದಾರೆ. ಕಳೆದ 20 ವರ್ಷಗಳಿಂದ ನುಡಿದಂತೆ ನಡೆದಿದ್ದಾರೆ. ಬೆಂಕಿಯುಗುಳುವ ಬಿಜೆಪಿಗೆ, ಜಡತ್ವದ ಕಾಂಗ್ರೆಸಿಗೆ ಸಡ್ಡು ಹೊಡೆದಿದ್ದಾರೆ. ಸಂತೆಯೊಳಗಿದ್ದೂ ಸಂತನಂತಿರುವ ನವೀನ್ ಪಟ್ನಾಯಕ್ ರಂತಹ ಪ್ರಾದೇಶಿಕ ಪೈಲ್ವಾನರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ, ರಾಜಕಾರಣಕ್ಕೆ ಬೆಲೆ ಬರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)