varthabharthiಸಂಪಾದಕೀಯ

ರಾಹುಲ್ ಪ್ರಬುದ್ಧ ನಡೆ

ವಾರ್ತಾ ಭಾರತಿ : 30 May, 2019

‘ವಂಶಪಾರಂಪರ್ಯ ಆಡಳಿತ ಕೊನೆಯಾಗಲಿ’ ಎಂಬ ಕೂಗು ಇಂದು ನಿನ್ನೆಯದಲ್ಲ. ಈ ಕೂಗಿನ ನೇರ ಗುರಿ ಕಾಂಗ್ರೆಸ್ ಪಕ್ಷವಾಗಿದೆ. ಗಾಂಧಿ ಯಾನೆ ನೆಹರೂ ಕುಟುಂಬ ರಾಜಕೀಯವನ್ನು ಎದುರಿಸಲು ವಿರೋಧ ಪಕ್ಷ ಬಳಸುವ ಪ್ರಮುಖ ಅಸ್ತ್ರವೂ ಇದಾಗಿದೆ. ಇದೀಗ ಲೋಕಸಭಾ ಫಲಿತಾಂಶ ಘೋಷಣೆಯ ಬಳಿಕ, ಸ್ವತಃ ಗಾಂಧಿ ಕುಡಿಯಾಗಿರುವ ರಾಹುಲ್‌ಗಾಂಧಿಯವರೇ ‘ನನ್ನನ್ನು ಹೊರಗಿಡಿ’ ಎಂದು ಹಟ ಹಿಡಿದು ಕೂತಿದ್ದಾರೆ. ಆದರೆ ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷ ಸಂಘಟಿತವಾಗಿ ಹೆಜ್ಜೆಯಿಟ್ಟೀತು ಎನ್ನುವ ಭರವಸೆ ಅದರೊಳಗಿರುವ ಯಾವ ಹಿರಿಯರಿಗೂ ಇದ್ದಂತಿಲ್ಲ. ಅವರೆಲ್ಲರೂ ಮತ್ತೆ ರಾಹುಲ್‌ಗಾಂಧಿಯವರಲ್ಲೇ ಕಾಂಗ್ರೆಸ್‌ನ ಭರವಸೆಯನ್ನು ಹುಡುಕುತ್ತಿದ್ದಾರೆ. ಒಂದಂತೂ ಸತ್ಯ. ಚುನಾವಣೆಯಿಂದ ಚುನಾವಣೆಗೆ ರಾಹುಲ್‌ಗಾಂಧಿ ಬೆಳೆಯುತ್ತಿದ್ದಾರೆ. ಹೆಚ್ಚು ಪ್ರಬುದ್ಧ ರಾಗುತ್ತಾ ಹೋಗುತ್ತಿದ್ದಾರೆ. ಮಾತಿನಲ್ಲಿರುವ ವಿವೇಕ, ಚಟುವಟಿಕೆ, ಸರಳತೆ ಇವೆಲ್ಲವೂ ಅವರನ್ನು ನಿಧಾನಕ್ಕೆ ಈ ದೇಶದ ಜನರಿಗೆ ಹತ್ತಿರವಾಗಿಸುತ್ತಿದೆ. ಇಂದು ಮಾಧ್ಯಮಗಳು ಮತ್ತು ಕಾರ್ಪೊರೇಟ್ ಶಕ್ತಿಗಳ ಮೂಲಕ ಕೃತಕವಾಗಿ ಸೃಷ್ಟಿಯಾಗಿರುವ ಮೋದಿಯ ವರ್ಚಸ್ಸು ರಾಹುಲ್ ಎನ್ನುವ ಎಳೆಯನ ಸರಳತೆಯ ಮುಂದೆ ಅತಿ ನಾಟಕೀಯತೆಯಿಂದ ನರಳತೊಡಗಿದೆ. ಜೊತೆಗೆ ಇಂದು ಕಾಂಗ್ರೆಸ್‌ನೊಳಗಿರುವ ಕೆಲವು ವೃದ್ಧ ನಾಯಕರಿಗಿಂತ ಬದ್ಧತೆಯಿಂದ ಕಾಂಗ್ರೆಸನ್ನು ಮುನ್ನಡೆಸುವ ಶಕ್ತಿ ರಾಹುಲ್ ಅವರಲ್ಲಿದೆ.

ಇಷ್ಟಕ್ಕೂ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಗಾಂಧಿ ಕುಟುಂಬದ ನಾಯಕತ್ವ ಕಾರಣ ಎಂಬ ವಾದಕ್ಕೆ ಯಾವ ಅರ್ಥವೂ ಇಲ್ಲ. ಗಾಂಧಿ ಕುಟುಂಬದ ಬಲವೊಂದನ್ನೇ ನೆಚ್ಚಿಕೊಂಡು ಚುನಾವಣೆ ಎದುರಿಸುತ್ತಾ ಬಂದಿರುವ ಅದರೊಳಗಿರುವ ನಿಷ್ಕ್ರಿಯ ನಾಯಕರೇ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ನಿಜವಾದ ಕಾರಣ. ಇಂದು ಕಾಂಗ್ರೆಸ್ ಸಣ್ಣದಾಗಿ ಉಸಿರಾಡುತ್ತಿದೆಯಾದರೆ ಅದು ಗಾಂಧಿ ಕುಡಿಗಳ ಕಾರಣದಿಂದಲೇ ಆಗಿದೆ. ಈ ಕುಟುಂಬ ರಾಜಕೀಯದಿಂದ ಹೊರಬಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ನೆಹರೂ ಕುಡಿಗಳು ಎನ್ನುವ ಕಾರಣಕ್ಕಷ್ಟೇ ದೇಶ ಗುರುತಿಸುತ್ತಿದೆಯೇ? ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿ ನೀಡಿದ ಕೊಡುಗೆಗಳು ವಿರೋಧಿಗಳ ಹೊಗಳಿಕೆಗೂ ಮಾನ್ಯವಾಗಿವೆ. ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆಯಂತಹ ಕಾಯ್ದೆಗಳನ್ನು ಜಾರಿಗೆ ತಂದು ಈ ದೇಶದ ಬಡವರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವಾದ ಹೆಗ್ಗಳಿಕೆ ಇಂದಿರಾ ಗಾಂಧಿಯದು. ನೇರ, ನಿಷ್ಠುರತೆಗೆ ಹೆಸರಾಗಿದ್ದ ಇಂದಿರಾ ಗಾಂಧಿಯ ಕಾಲದಲ್ಲಿ ಭಾರತಕ್ಕೆ ಅಂತರ್‌ರಾಷ್ಟ್ರೀಯ ವರ್ಚಸ್ಸಿತ್ತು.

ಪಾಕಿಸ್ತಾನಕ್ಕೆ ನಿಜವಾದ ಅರ್ಥದಲ್ಲಿ ಪಾಠ ಕಲಿಸಿದ್ದು ಇಂದಿರಾ ಗಾಂಧಿ. ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಭಜಿಸಿ ಅದಕ್ಕೆ ಸ್ವಾತಂತ್ರ ತಂದುಕೊಟ್ಟ ಹಿರಿಮೆ ಅವರದು. ಖಾಲಿಸ್ತಾನ ಉಗ್ರವಾದವನ್ನು ಕಠಿಣ ಮಾರ್ಗದಲ್ಲಿ ದಮನ ಮಾಡಿದ ಕಾರಣಕ್ಕಾಗಿಯೇ ಉಗ್ರರಿಗೆ ಬಲಿಯಾದರು. ಇಂದಿರಾ ಗಾಂಧಿಯ ಕಾಲದ ಒಂದೇ ಒಂದು ಕಪ್ಪು ಚುಕ್ಕೆ ‘ತುರ್ತು ಪರಿಸ್ಥಿತಿ’. ಆದರೆ ಆಕೆಯ ಆಡಳಿತ ಈ ದೇಶಕ್ಕೆ ನೀಡಿದ ಉಳಿದೆಲ್ಲ ಕೊಡುಗೆಯ ಮುಂದೆ ಅದೊಂದು ತೀರಾ ಸಣ್ಣ ಚುಕ್ಕೆಯೇ ಸರಿ. ಇಂದಿರಾಗಾಂಧಿಯ ಹತ್ಯೆಯ ಬಳಿಕ ಇಳಿದು ಬಂದವರು ರಾಜೀವ್ ಗಾಂಧಿ. ಅವರು ಅಧಿಕಾರ ಹಿಡಿದಾಗ, ಇಂದಿರಾ ಗಾಂಧಿಯ ಪುತ್ರ ಎನ್ನುವ ಅರ್ಹತೆಯಷ್ಟೇ ಇತ್ತು. ಆದರೆ ನುರಿತ ತಜ್ಞರನ್ನು, ಮುತ್ಸದ್ದಿಗಳನ್ನು ತನ್ನ ಜೊತೆಗೆ ಇಟ್ಟುಕೊಂಡು ಈ ದೇಶಕ್ಕೆ ಅತ್ಯುತ್ತಮ ಆಡಳಿತವನ್ನು ನೀಡಿದವರು ರಾಜೀವ್. ಕಂಪ್ಯೂಟರ್ ಯುಗಕ್ಕೆ ಭಾರತವನ್ನು ಸಜ್ಜುಗೊಳಿಸಿದ ಹೆಗ್ಗಳಿಕೆ ಅವರದು.

18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದ್ದು ರಾಜೀವ್ ಗಾಂಧಿ. ಯುವಕರನ್ನು ಸ್ವಾವಲಂಬನೆಯ ಕಡೆಗೆ ಮುನ್ನಡೆಸುವ ಕನಸು ಕಂಡ ಅವರು, ಯುವಕರಿಗಾಗಿ ವಿವಿಧ ತರಬೇತಿಗಳನ್ನು, ಆರ್ಥಿಕ ಸಹಾಯಗಳನ್ನು ತಮ್ಮ ಆಡಳಿತಾವಧಿಯಲ್ಲಿ ನೀಡಿದರು. ಬೊಫೋರ್ಸ್ ಹಗರಣ ಅವರ ರಾಜಕೀಯ ಬದುಕಿನ ದುರಂತವೇ ಸರಿ. ಆದರೆ ಸಾವಿನ ಬಳಿಕವಾದರೂ ಆ ಕಳಂಕದಿಂದ ಅವರು ಪಾರಾದರು. ಎಲ್‌ಟಿಟಿಇ ಉಗ್ರರ ದಾಳಿಗೆ ಅವರೂ ಬಲಿಯಾದರು. ಕಾಂಗ್ರೆಸೇತರ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಪಿ. ವಿ. ನರಸಿಂಹರಾವ್ ಈ ದೇಶಕ್ಕೆ ವಿಶೇಷವಾದುದೇನೂ ಕೊಡಲಿಲ್ಲ. ಅವರ ಕಾಲದ ಆರ್ಥಿಕ ಸುಧಾರಣೆಯ ಹಿಂದಿದ್ದವರು ಅಂದಿನ ಅರ್ಥ ಸಚಿವ ಮನಮೋಹನ್ ಸಿಂಗ್. ಇಂದಿರಾಗಾಂಧಿ, ರಾಜೀವ್ ಅವರ ಆಡಳಿತ್ಲ ದೇಶದ ತಳಸ್ತರದ ಜನರು ಮತ್ತು ಯುವಕರ ಕುರಿತಂತೆ ಹೊಂದಿದ್ದ್ದ ತಾಯಿ ಮನಸ್ಸು ನರಸಿಂಹರಾವ್ ಆಡಳಿತದಲ್ಲಿ ಕಾಣೆಯಾಯಿತು. ಕಾಂಗ್ರೆಸ್‌ನ ಸಿದ್ಧಾಂತದ ಬುಡ ಅಲುಗಾಡಿದ್ದೂ ಗಾಂಧಿಯೇತರ ಪ್ರಧಾನಿಯಿಂದ ಎನ್ನುವುದನ್ನೂ ನಾವು ಗಮನಿಸಬೇಕು.

 ಪಿ. ವಿ. ನರಸಿಂಹ ರಾವ್ ಬಳಿಕ ಈ ದೇಶದ ಪ್ರಧಾನಿಯಾಗುವ ಅವಕಾಶ ಸೋನಿಯಾ ಗಾಂಧಿಯವರಿಗೆ ದೊರಕಿತಾದರೂ, ರಾಜಕೀಯ ಸೂಕ್ಷ್ಮಗಳನ್ನು ಅರ್ಥೈಸಿಕೊಂಡು ಆ ಪದವಿಯಿಂದ ದೂರ ನಿಂತರು. ಆದರೆ ಇದೇ ಸಂದರ್ಭದಲ್ಲಿ ಮನಮೋಹನ್ ಸಿಂಗ್‌ರಂತಹ ಮುತ್ಸದ್ದಿಯನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದರು. ಯುಪಿಎ ಅಧಿಕಾರಾವಧಿಯಲ್ಲಿ ಆರ್‌ಟಿಐಯಂತಹ ಕ್ರಾಂತಿಕಾರಿ ಕಾಯ್ದೆ ಜಾರಿಗೆ ಬಂತು. ಆಹಾರದ ಹಕ್ಕು, ಉದ್ಯೋಗದ ಹಕ್ಕು ಜನರಿಗೆ ದೊರಕಿದ್ದು ಈ ಅವಧಿಯಲ್ಲಿಯೇ. ಎರಡು ಅವಧಿಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಮುಂದುವರಿದರು. ಇವರ ನೆರಳಲ್ಲಿ ರಾಹುಲ್ ಬೆಳೆದರು. ನರೇಂದ್ರ ಮೋದಿಯ ವಿಭಜನಕಾರಿ ರಾಜಕೀಯಕ್ಕೆ ಸವಾಲಾಗಿ ನಿಲ್ಲುವಂತಹ ಬಹುದೊಡ್ಡ ಹೊಣೆಗಾರಿಕೆ ರಾಹುಲ್ ಗಾಂಧಿಯ ಮೇಲೆ ಬಿತ್ತು. ಕಾಂಗ್ರೆಸ್ ಎಂಬ ಪಿತ್ರಾರ್ಜಿತ ಆಸ್ತಿಯ ಸಕಲ ಪ್ರಯೋಜನಗಳನ್ನು ಉಂಡ ಪ್ರಣವ್ ಮುಖರ್ಜಿ, ಎಸ್. ಎಂ. ಕೃಷ್ಣರಂತಹ ಹಿರಿಯ ನಾಯಕರು ತಮ್ಮ ನಿವೃತ್ತಿಯ ಅವಧಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಪಾದಬುಡದಲ್ಲಿ ಹೊರಳಾಡುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ತನ್ನ ಮುಂದಿರುವ ಸವಾಲನ್ನು ಏಕಾಂಗಿಯಾಗಿ ಎದುರಿಸಿದರು. ಈ ಕಾರಣಕ್ಕಾಗಿಯೇ ಸದ್ಯಕ್ಕೆ ಕಾಂಗ್ರೆಸನ್ನು ಮುನ್ನಡೆಸುವ ಶಕ್ತಿಯಿರುವುದು ರಾಹುಲ್ ಗಾಂಧಿ ಮತ್ತು ಅವರ ಜೊತೆಗಿರುವ ತರುಣ ನಾಯಕರಿಗೆ ಮಾತ್ರ.

‘ರಾಹುಲ್ ಗಾಂಧಿ ಕಾಂಗ್ರೆಸನ್ನು ಮುನ್ನಡೆಸಬೇಕು’ ಎಂದು ಬಯಸುವ ಹಿರಿಯ ನಾಯಕರಿಗೆ, ತಮ್ಮ ಅಸ್ತಿತ್ವಕ್ಕಾಗಿ ರಾಹುಲ್ ಬೇಕಾಗಿದ್ದಾರೆ. ಆದರೆ ಈ ಹಿರಿಯರು ಕಾಂಗ್ರೆಸ್‌ನ ಉಳಿವಿಗಾಗಿ ಕೊಟ್ಟ ಕೊಡುಗೆಯೇನು? ಎಂದರೆ ಉತ್ತರ ಶೂನ್ಯ. ಬಹುಶಃ ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಮುತ್ಸದ್ದಿತನದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕಾಂಗ್ರೆಸ್‌ನಹಿರಿಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ‘ಗಾಂಧಿ ಕುಟುಂಬ’ವನ್ನು ಬಳಸುವುದನ್ನು ವಿರೋಧಿಸುವ ಭಾಗವಾಗಿ ರಾಜೀನಾಮೆ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ತಾನು ಮುಂದುವರಿಯಬೇಕಾದರೆ ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆ ನಡೆಸಲು ತನಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ ಈ ಪ್ರಸ್ತಾವ ಹಲವರಿಗೆ ನುಂಗಲಾರದ ತುತ್ತಾಗಿದೆ.

ಅವರಿಗೆ ತಮ್ಮ ರಾಜಕೀಯ ಹಿತಾಸಕ್ತಿಗೆ ರಾಹುಲ್‌ಗಾಂಧಿ ಬೇಕೇ ಹೊರತು, ಕಾಂಗ್ರೆಸ್‌ನ ಉಳಿವಿಗಾಗಿ ಅಲ್ಲ. ರಾಹುಲ್ ಗಾಂಧಿಗೆ ಪೂರ್ಣ ಅಧಿಕಾರ ನೀಡಿದ್ದೇ ಆದರೆ, ಕಾಂಗ್ರೆಸ್‌ನೊಳಗಿರುವ ಹಲವು ಹಿರಿಯರು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಇದು ಕಾಂಗ್ರೆಸ್‌ನೊಳಗೆ ಭಾರೀ ತಳಮಳವನ್ನು ಸೃಷ್ಟಿಸಬಹುದು. ಒಟ್ಟಿನಲ್ಲಿ, ಮೆದುಳಲ್ಲಿ ಆರೆಸ್ಸೆಸ್‌ನ ಗಂಜಲವನ್ನಿಟ್ಟುಕೊಂಡು, ಗಾಂಧಿ ಕುಟುಂಬದ ಹೆಸರಲ್ಲಿ ಉದರಪೋಷಣೆ ನಡೆಸುತ್ತಾ ಬಂದಿರುವ ಹಲವು ಹಿರಿಯರು ಕಾಂಗ್ರೆಸ್‌ನಿಂದ ಸಿಡಿಯುವ ಸಮಯ ಹತ್ತಿರವಾಗಿದೆ. ಇಂದು ಬದಲಾಗಬೇಕಾಗಿರುವುದು ರಾಹುಲ್ ಗಾಂಧಿ ಖಂಡಿತಾ ಅಲ್ಲ. ಕಾಂಗ್ರೆಸ್‌ನೊಳಗಿನ ಆಯಕಟ್ಟಿನ ಸ್ಥಾನದಲ್ಲಿ ಅಂಟಿಕುಳಿತಿರುವ ಹಲವು ನಾಯಕರನ್ನು ಬದಲಿಸಬೇಕಾದ ಸಮಯ ಇದು. ಹಾಗೆಯೇ ಕಾಂಗ್ರೆಸ್ ತಳಸ್ತರದ ಜನರನ್ನು ಮತ್ತೆ ತಲುಪುವ ದಾರಿಯನ್ನು ಹುಡುಕ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಆತ್ಮವಿಮರ್ಶೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿದೆ. ಕಾಂಗ್ರೆಸ್‌ನ ಈ ಅಗ್ನಿದಿವ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುವುದು ಅನಿವಾರ್ಯ ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)