varthabharthiಸಂಪಾದಕೀಯ

ಪ್ರಧಾನಿ ಮಾತು ಬರೀ ಮಾತಾಗಿ ಉಳಿಯಬಾರದು

ವಾರ್ತಾ ಭಾರತಿ : 31 May, 2019

ಇವಿಎಂ ನಿಷೇಧಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಾಪಾಡಿ ಎಂದು ನಾಗರಿಕ ಹಕ್ಕು ಸಂಘಟನೆಗಳು ದೇಶವ್ಯಾಪಿ ಜನಜಾಗೃತಿ ಆಂದೋಲನವನ್ನು ಆರಂಭಿಸಿರುವಾಗಲೇ ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರದ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಈ ಬಾರಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮಂಗಳವಾರ ಎನ್‌ಡಿಎ ಸಂಸದರ ಸಭೆಯನ್ನುದ್ದೇಶಿಸಿ ಮಾತಾಡಿದ ಮೋದಿಯವರು ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ಎಂಬ ತಮ್ಮ ಹಳೆಯ ಘೋಷಣೆಯೊಂದಿಗೆ ಅದಕ್ಕೆ ‘ಸಬ್ ಕಾ ವಿಶ್ವಾಸ್’ ಪದವನ್ನು ಸೇರಿಸಿ ಇದೇ ತಮ್ಮ ಸರಕಾರದ ಮಂತ್ರ ಎಂದು ಹೇಳಿದ್ದಾರೆ. ಭಾರೀ ಕೋಮು ಧ್ರುವೀಕರಣ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಯವರಿಗೆ ಈಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿವೇಕ ಮೂಡಿದೆ. ಸಬ್ ಕಾ ವಿಶ್ವಾಸ್ ಅಂದರೆ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾತನ್ನು ಅವರು ಆಡಿದ್ದಾರೆ. ಆದರೆ ಹಿಂದಿನ ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ನಂತೆ ‘ಸಬ್ ಕಾ ವಿಶ್ವಾಸ್’ ಬಾಯಿ ಮಾತಿನ ಘೋಷಣೆಯಲ್ಲ ಎಂಬುದನ್ನು ಮೋದಿಯವರು ತಮ್ಮ ಮುಂದಿನ ಅಧಿಕಾರಾವಧಿಯಲ್ಲಿ ನಿಜ ಮಾಡಿ ತೋರಿಸಬೇಕಾಗಿದೆ.

 ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಹುರುಪಿನಲ್ಲಿ ಮೋದಿಯವರು ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾತನ್ನಾಡಿದ್ದರೂ ಅವರ ಮಾತನ್ನು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಅವರು ಆಡಿದ ಮಾತಿಗೂ ಅವರು ನಂಬಿದ ಸಿದ್ಧಾಂತಕ್ಕೂ ಭೂಮಿ ಮತ್ತು ಆಕಾಶದಷ್ಟು ಅಂತರವಿದೆ. ಅವರ ಪರಿವಾರ ಮತ್ತು ಪಕ್ಷ ಇದಕ್ಕೆ ಪೂರಕವಾಗಿಲ್ಲ. ಈ ಬಾರಿ ಚುನಾವಣಾ ಫಲಿತಾಂಶ ಬಂದ ದಿನದಿಂದ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ, ಆದಿವಾಸಿಗಳ ಮೇಲೆ, ಹಿಂದುಳಿದವರ ಮೇಲೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೈಹಿಕ ದಾಳಿಗಳನ್ನು ಗಮನಿಸಿದರೆ ಆತಂಕವುಂಟಾಗುತ್ತದೆ.

ಬಿಹಾರದ ಬೆಗುಸರಾಯ್‌ನಲ್ಲಿ ವ್ಯಕ್ತಿಯೊಬ್ಬನ ಹೆಸರು ಕೇಳಿ ಆತ ಮುಸ್ಲಿಂ ಎಂದು ಗೊತ್ತಾದಾಗ ಅವನ ಮೇಲೆ ಹಲ್ಲೆ ಮಾಡಿ ‘‘ಪಾಕಿಸ್ತಾನಕ್ಕೆ ಹೋಗು’’ ಎಂದು ಅವಮಾನ ಮಾಡಿದ ಘಟನೆ, ಮುಂಬೈನಲ್ಲಿ ಪಾಯಲ್ ಸಲ್ಮಾನ್ ತಡ್ವಿ ಎಂಬ ಆದಿವಾಸಿ ಮುಸ್ಲಿಂ ಸಮಾಜದ ಸ್ನಾತಕೋತ್ತರ ವಿದ್ಯಾರ್ಥಿನಿ ಆಸ್ಪತ್ರೆಯ ಮೇಲ್ಜಾತಿಯ ಮೂವರು ಹಿರಿಯ ವೈದ್ಯೆಯರ ಜಾತಿ ನಿಂದನೆಯ ಹಿಂಸೆ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ಕೊಲೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ. ಇನ್ನೊಂದೆಡೆ ಗುಜರಾತಿನಲ್ಲಿ ದಲಿತರ ಮದುವೆ ದಿಬ್ಬಣದ ಮೆರವಣಿಗೆಯ ಮೇಲೆ ಸವರ್ಣೀಯರು ಹಲ್ಲೆ ಮಾಡಿದ್ದಾರೆ, ಈ ಹಲ್ಲೆಯಲ್ಲಿ ಮೆರವಣಿಗೆಯ ಕುದುರೆ ಸತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಜಯಶಾಲಿಯಾಗುತ್ತಿದ್ದಂತೆ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿಗೆ ದೊರೆತ ಜನಾದೇಶ ಎಂಬಂತೆ ಹಿಂಸಾಚಾರಗಳು ನಡೆದಿವೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿಯಲ್ಲಿನ ಒಡಕು ಬಾಯಿಗಳು ಪ್ರತಿನಿತ್ಯವೂ ಅಲ್ಪಸಂಖ್ಯಾತರ ವಿರುದ್ಧ ಬಾಯಿಗೆ ಬಂದಂತೆ ಮಾತಾಡುತ್ತಿವೆ. ‘‘ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ’’ ಎಂದು ಬಹಿರಂಗವಾಗಿ ಹೇಳುವ ಸಂಸದರು ಬಿಜೆಪಿಯಲ್ಲಿದ್ದಾರೆ. ‘‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು’’ ಎಂದು ಹೇಳುವ ಸಾಕ್ಷಿ ಮಹಾರಾಜ್‌ರಂಥ ಸಂಸದರಿದ್ದಾರೆ.‘‘ಮಹಾತ್ಮಾ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆ ನಿಜವಾದ ರಾಷ್ಟ್ರ ಭಕ್ತ’’ ಎಂದು ಮೋದಿಯವರೇ ಬಿಜೆಪಿ ಟಿಕೆಟ್ ನೀಡಿ ಆರಿಸಿ ತಂದ ಶಂಕಿತ ಭಯೋತ್ಪಾದಕಿ ಪ್ರಜ್ಞಾಸಿಂಗ್ ಸಂಸತ್ ಪ್ರವೇಶಿಸಲಿದ್ದಾರೆ. ಹಾಗೆ ಮಾತಾಡಬಾರದೆಂದು ಮೋದಿಯವರು ಆಕೆಗೆ ಉಪದೇಶ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಬಿಜೆಪಿ ಶಾಸಕಿ ‘‘ಗೋಡ್ಸೆ ನಿಜವಾದ ರಾಷ್ಟ್ರ ಭಕ್ತ’’ ಎಂದು ಹೊಗಳಿದ್ದಾರೆ. ಈ ನಡುವೆ ದಲಿತರ ಹಿಂದುಳಿದವರ ಮೀಸಲಾತಿ ರದ್ದುಗೊಳಿಸುವ ಮಾತುಗಳೂ ಕೇಳಿ ಬರುತ್ತಿವೆ. ಇಂತಹ ಪ್ರಚೋದನಕಾರಿ ಮಾತುಗಳಿಂದ ಮತ್ತು ಹಲ್ಲೆ, ದಾಳಿಗಳಿಂದ ಸಮಾಜದ ವಿಭಿನ್ನ ಧರ್ಮೀಯರಲ್ಲಿ ದೊಡ್ಡ ಕಂದಕವೇ ನಿರ್ಮಾಣವಾಗಿದೆ. ಈ ಕಂದಕವನ್ನು ಮೋದಿಯವರು ಹೇಗೆ ಮುಚ್ಚುತ್ತಾರೆ.? ಹೇಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಕಾಸದ ಶಕೆ ಆರಂಭಿಸುತ್ತಾರೆ ಎಂಬುದನ್ನು ದಟ್ಟ ಅಪನಂಬಿಕೆಯ ನಡುವೆಯೂ ಕಾಯ್ದು ನೋಡಬೇಕಾಗಿದೆ.

ಪ್ರಧಾನಿ ಮೋದಿಯವರ ಬೆಣ್ಣೆಯಂಥ ಮಾತುಗಳು ಬರೀ ಬಣ್ಣದ ಮಾತುಗಳಾಗದೆ ಕ್ರಿಯಾ ಸ್ವರೂಪ ಪಡೆಯಬೇಕು. ಸಂವಿಧಾನ ಪ್ರತಿಗೆ ಬರೀ ನಮಸ್ಕಾರ ಮಾಡಿದರೆ ಸಾಲದು. ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಷ್ಟೆ ಅಲ್ಲ, ಮನುಸ್ಮತಿಯೇ ನಮ್ಮ ಸಂವಿಧಾನ ಎನ್ಮುವವರ ಬಾಯಿಗೆ ಬೀಗ ಜಡಿಯಬೇಕು. ತಮ್ಮ ಪಕ್ಷದ ಕೂಗುಮಾರಿಗಳನ್ನು, ಬೀದಿ ದಂಗೆಕೋರರನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಬರೀ ‘‘ಸಬ್ ಕಾ ವಿಶ್ವಾಸ್’’ ಎಂಬ ಒಣ ಮಾತುಗಳನ್ನು ಆಡಿದರೆ ಪ್ರಯೋಜನವಿಲ್ಲ. ಹಿಂದಿನ ಐದು ವರ್ಷಗಳ ಕಾಲಾವಧಿಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಅನೇಕ ಅಮಾಯಕರನ್ನು ಕೊಚ್ಚಿ ಕೊಂದು ಹಾಕಲಾಯಿತು.ಆಗಲೂ ಮೋದಿಯವರು ನನ್ನನ್ನು ಕೊಲ್ಲಿ ಅವರನ್ನು ಕೊಲ್ಲಬೇಡಿ ಎಂಬ ಭಾವುಕ ನಟನಾತ್ಮಕ ಮಾತುಗಳನ್ನಾಡಿದ್ದರು. ಆದರೂ ದನದ ಹೆಸರಿನಲ್ಲಿ ಮನುಷ್ಯರನ್ನು ಕೊಂದು ಹಾಕುವುದು ನಿಲ್ಲಲಿಲ್ಲ. ಈ ಬಾರಿ ಹಾಗಾಗಬಾರದು. ಪ್ರಧಾನಿ ತಮ್ಮ ಅನುಯಾಯಿಗಳ ಒಡಕು ಬಾಯಿಗಳಿಗೆ ಹೊಲಿಗೆ ಹಾಕಬೇಕು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಕತ್ತಲುಕೋಣೆಗೆ ತಳ್ಳಬೇಕು. ಆಗ ಮಾತ್ರ ಅವರ ಮಾತಿನ ಮೇಲೆ ನಂಬಿಕೆ ಬರುತ್ತದೆ.

ಇದಕ್ಕಿಂತ ಮುನ್ನ ಮೋದಿಯವರು ತಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಎಂಬುದನ್ನು ಮರೆತು ಪ್ರಧಾನಿಯಾಗಿ ಸಂವಿಧಾನಕ್ಕೆ ನಿಷ್ಠನಾಗಿ ವರ್ತಿಸಬೇಕು. ಸಾವರ್ಕರ್, ಗೊಳ್ವಾಲ್ಕಕರ್ ಬರೆದ ವಿಭಜನಕಾರಿ ಗ್ರಂಥಗಳಿಗಿಂತ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನ ಶ್ರೇಷ್ಠ ಎಂದು ಒಪ್ಪಿಕೊಂಡು ಅದಕ್ಕೆ ಬದ್ಧನಾಗಿ ನಡೆದುಕೊಳ್ಳಬೇಕು.

ಮೋದಿಯವರು ಬಾಯಿಯಿಂದ ಏನನ್ನೇ ಹೇಳಲಿ ಅದನ್ನು ಕೃತಿಗಿಳಿಸಲು ಅವರು ನಂಬಿದ ಸಿದ್ಧಾಂತ ಅಡ್ಡಿಯಾಗಿದೆ. ಆರೆಸ್ಸೆಸ್‌ನ ಹಿಂದೂರಾಷ್ಟ್ರ ನಿರ್ಮಾಣದ ಸಿದ್ಧಾಂತ ನಮ್ಮ ಸಂವಿಧಾನಕ್ಕೆ ವಿರೋಧವಾಗಿದೆ. ಹೀಗಿರುವಾಗ ಮೋದಿಯವರು ತಮ್ಮ ನಿಷ್ಠೆ ಸಂಘಕ್ಕೋ ಸಂವಿಧಾನಕ್ಕೋ ಎಂಬುದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು. ಮೋದಿಯವರು ನಡೆದು ಬಂದ ದಾರಿ ಅವರ ಮಾತಿನ ಮೇಲೆ ನಂಬಿಕೆ ಹುಟ್ಟಿಸುವುದಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002 ರಲ್ಲಿ ನಡೆದ ಭಯಾನಕ ಹತ್ಯಾಕಾಂಡವನ್ನು ಮರೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಅವರು ಈ ಹತ್ಯಾಕಾಂಡವನ್ನು ತಡೆಯಲಿಲ್ಲ. ನಡೆದ ನರಮೇಧದ ಬಗ್ಗೆ ಇಂದಿಗೂ ಅವರು ವಿಷಾದ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ.

ಈ ಬಾರಿ ಆಡಿದ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’’ ಮಾತಿನ ಬಗ್ಗೆ ನಂಬಿಕೆ ಬರಬೇಕಾದರೆ ಈ ಮಾತಿನಂತೆ ಅವರು ನಡೆದುಕೊಳ್ಳಬೇಕು. ಈ ಬಾರಿ ಆಡಿದ ಮಾತಿನಂತೆ ಅವರು ನಡೆದರೆ, ಜಾತಿಮತವೆನ್ನದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ವಿಶ್ವಾಸ ಗಳಿಸಲು ಶ್ರಮಿಸಿದರೆ ಅವರು ಹಿಂದೆ ಮಾಡಿದ ತಪ್ಪುಗಳನ್ನು ಕ್ಷಮಿಸುವಷ್ಟು ಉದಾರ ಹೃದಯ ನಮ್ಮ ಜನರಿಗೆ ಇದೆ. ಆದರೆ ಅದಕ್ಕೆ ಅವರನ್ನು ನಿಯಂತ್ರಿಸುತ್ತಿರುವ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಅವಕಾಶ ನೀಡಬೇಕಷ್ಟೆ. ಅದು ಅಂದುಕೊಂಡಷ್ಟು ಸುಲಭವಲ್ಲ.

ಅದೇನೇ ಇರಲಿ ಸಂಘಪರಿವಾರದ ನಿಯಂತ್ರಣದ ನಡುವೆಯೂ ವಾಜಪೇಯಿ ಅವರಂತೆ ಸಮಚಿತ್ತದಿಂದ ಜವಾಬ್ದಾರಿ ನಿರ್ವಹಿಸುವ ಇಚ್ಛಾಶಕ್ತಿಯನ್ನು ಮೋದಿಯವರು ತೋರಿಸಬೇಕು, ದಲಿತರು, ಆದಿವಾಸಿಗಳು, ಹಿಂದುಳಿದವರು ಮಹಿಳೆಯರು, ಅಲ್ಪಸಂಖ್ಯಾತರು ಮಾತ್ರವಲ್ಲ ಇತ್ತೀಚೆಗೆ ಫ್ಯಾಶಿಸ್ಟ್ ಶಕ್ತಿಗಳ ಹಿಂಸೆಗೆ ಬಲಿಯಾಗುತ್ತಿರುವ ಚಿಂತಕರು, ವಿಚಾರವಾದಿಗಳಿಗೆ ರಕ್ಷಣೆ ನೀಡಲು ಪ್ರಧಾನಿ ಸಂಕಲ್ಪಮಾಡಬೇಕು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)