varthabharthi

ವಿಶೇಷ-ವರದಿಗಳು

(2019 ಮೇ 12ರಂದು ಅರುಂಧತಿ ರಾಯ್ ಮಾಡಿದ ಪಿಇಎನ್ ಅಮೆರಿಕ ಆರ್ಥರ್ ಮಿಲ್ಲರ್ ಫ್ರೀಡಂ ಟು ರೈಟ್ ಉಪನ್ಯಾಸದ ಮುಖ್ಯಾಂಶಗಳು)

ಭಾರತ ತನ್ನ ಆತ್ಮಕ್ಕಾಗಿ ಹೋರಾಡುತ್ತಿದೆ: ಅರುಂಧತಿ ರಾಯ್

ವಾರ್ತಾ ಭಾರತಿ : 31 May, 2019

ಭಾರತ ತನ್ನ ಆತ್ಮಕ್ಕಾಗಿ ಹೋರಾಡುತ್ತಿದೆ. ಆರೆಸ್ಸೆಸ್ ಊಸರವಳ್ಳಿ ತರಹ. ಅದು ಬೇಕಾದಾಗ ಸನ್ನಿವೇಶಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿಸಬಲ್ಲದು. ಅದು ತಾಳ್ಮೆಯಿಂದ, ಕಠಿಣ ಶ್ರಮದಿಂದ ದೇಶದ ಪ್ರತಿಯೊಂದು ಸಂಸ್ಥೆಯೊಳಕ್ಕೂ ಕೊರೆಯುತ್ತ ಹೋಗಿರುವ ಒಂದು ಬೃಹತ್ ಪಶು. ಎಲ್ಲ ಸಂಸ್ಥೆಗಳು ಎಂದರೆ ನ್ಯಾಯಾಲಯಗಳು, ವಿಶ್ವವಿದ್ಯಾನಿಲಯಗಳು, ಮಾಧ್ಯಮ ಸಂಸ್ಥೆಗಳು, ಭದ್ರತಾ ಪಡೆಗಳು, ಗುಪ್ತಚರ ಸೇವೆಗಳು.

ಈ ವರ್ಷದ ಆರ್ಥರ್ ಮಿಲ್ಲರ್ ಫ್ರೀಡಂ ಟು ರೈಟ್ ಉಪನ್ಯಾಸ ನೀಡಲು ಪಿಇಎನ್ ಅಮೆರಿಕ ನನ್ನನ್ನು ಆಹ್ವಾನಿಸಿರುವುದು ನನಗೆ ದೊರಕಿದ ನಿಜವಾದ ಗೌರವವೆಂದು ತಿಳಿಯುತ್ತೇನೆ... ಭಾರತದಲ್ಲಿ ನನ್ನ ಗುರುತು ರಾಷ್ಟ್ರ ವಿರೋಧಿಗಳ ಪಟ್ಟಿಯಲ್ಲಿ ತುಂಬ ಮೇಲಕ್ಕೆ ಎ-ಲಿಸ್ಟ್‌ನಲ್ಲೆ ಇದೆ. ಇತ್ತೀಚೆಗೆ ಭಾರತದಲ್ಲಿ ರಾಷ್ಟ್ರವಿರೋಧಿ ಎಂದು ಪರಿಗಣಿಸಲ್ಪಡುವ ಮಾನದಂಡವನ್ನು ತುಂಬ ಸರಳಗೊಳಿಸಲಾಗಿದೆ: ನೀವು (ಪ್ರಧಾನಿ) ನರೇಂದ್ರ ಮೋದಿಯವರಿಗೆ ಮತ ನೀಡದಿದ್ದರೆ ಆಗ ನೀವು ಒಬ್ಬ ಪಾಕಿಸ್ತಾನಿ. ತನ್ನ ದೇಶದ ಜನಸಂಖ್ಯೆ ಹೀಗೆ ಹೆಚ್ಚುತ್ತಿರುವ ಬಗ್ಗೆ ಪಾಕಿಸ್ತಾನಕ್ಕೆ ಹೇಗನ್ನಿಸುತ್ತದೋ ನನಗೆ ಗೊತ್ತಿಲ್ಲ. ಹಿಮಗಡ್ಡೆಗಳು ಕರಗಿದಂತೆ, ಸಾಗರಗಳ ಬಿಸಿ ಏರುತ್ತಿರುವಾಗ ಮತ್ತು ಜಲಮಟ್ಟ ಕುಸಿಯುತ್ತಿರುವಾಗ, ಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಬಹುಪಾಲು ಮನುಷ್ಯರು ಭಾಗವಹಿಸುವ ಅಗತ್ಯವೇ ಇಲ್ಲದಿರುವ ದಿನಗಳು ಬರುತ್ತಿರುವಾಗ... ಇಂತಹ ಸಮಯದಲ್ಲಿ ಶ್ವೇತ ಭವನದಲ್ಲಿ ಸುಪ್ರಿಮ್ಯಾಸಿಸ್ಟ್‌ಗಳು (ಸರ್ವಾಧಿಕಾರಿಗಳು), ಚೀನಾದಲ್ಲಿ ನವಸಾಮ್ರಾಜ್ಯಶಾಹಿಗಳು, ಭಾರತದಲ್ಲಿ ಹಿಂದೂರಾಷ್ಟ್ರವಾದಿಗಳು, ಇತರ ದೇಶದಲ್ಲಿ ಒಂದಷ್ಟು ಮಂದಿ ಕಟುಕ ರಾಜಕುಮಾರರು ಮತ್ತು ಸಣ್ಣ ಪುಟ್ಟ ಸರ್ವಾಧಿಕಾರಿಗಳು ಅವ್ಯಕ್ತದೆಡೆಗೆ, ಅಜ್ಞಾತದೆಡೆಗೆ ನಮ್ಮನ್ನು ಮುನ್ನಡೆಸಲು ಕಾದು ಕುಳಿತಿದ್ದಾರೆ.

ಬಂಡವಾಳಶಾಹಿಯ ಅನಗತ್ಯ ಯುದ್ಧಗಳು ಮತ್ತು ದುರಾಸೆಗಳು ಭೂಮಿಗೆ ಗಂಡಾಂತರ ತಂದೊಡ್ಡಿವೆ ಮತ್ತು ಅದನ್ನು ನಿರಾಶ್ರಿತರಿಂದ ತುಂಬಿವೆ. ಇದರ ಹೆಚ್ಚಿನ ಜವಾಬ್ದಾರಿ ಅಮೆರಿಕದ ಭುಜಗಳ ಮೇಲಿದೆ. ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ, ತಾಲಿಬಾನನ್ನು ಪದಚ್ಯುತಿಗೊಳಿಸುವ ಏಕೈಕ ಉದ್ದೇಶಕ್ಕಾಗಿ ಅದರ ಮೇಲೆ ಬಾಂಬ್ ಮಳೆ ಸುರಿಸಿ ಅದನ್ನು ಶಿಲಾಯುಗಕ್ಕೆ ಮರಳಿಸಿದ 17 ವರ್ಷಗಳ ಬಳಿಕ, ಅದೇ ಅಮೆರಿಕ ಅದೇ ತಾಲಿಬಾನ್ ಜತೆ ಮರಳಿ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಅದು ಇರಾಕ್, ಲಿಬಿಯಾ ಮತ್ತು ಸಿರಿಯಾವನ್ನು ನಾಶ ಮಾಡಿದೆ. ಲಕ್ಷಗಟ್ಟಲೆ ಮಂದಿ ಯುದ್ಧದಿಂದಾಗಿ ಮತ್ತು ನಿಷೇಧಗಳಿಂದಾಗಿ ಸತ್ತಿದ್ದಾರೆ. ಪ್ರಾಚೀನ ನಗರಗಳ ಮೇಲೆ ಬಾಂಬ್ ಮಳೆಸುರಿಸಿ ಅವುಗಳನ್ನು ಧೂಳೀಪಟ ಮಾಡಲಾಗಿದೆ. ಹತಾಶೆ ಮತ್ತು ಭಗ್ನಗೊಂಡ ನಗರಗಳ ನಡುವೆ ಐಸಿಸ್ (ಐಎಸ್‌ಐಎಸ್) ಎಂಬ ಒಂದು ರಾಕ್ಷಸ ಶಕ್ತಿ ಹುಟ್ಟಿಕೊಂಡಿದೆ. ಕಳೆದ ಈ ಕೆಲವು ವರ್ಷಗಳಲ್ಲಿ ತಾನು ಮಾಡಿರುವ ಯುದ್ಧಗಳು ಹಾಗೂ ಮುರಿದ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಂದಾಗಿ ಅಮೆರಿಕ, ಅದೇ ನೀಡಿರುವ ಪುಂಡರಾಷ್ಟ್ರದ (ರೋಗ್ ಸ್ಟೇಟ್) ವ್ಯಾಖ್ಯಾನಕ್ಕೆ ಅದೇ ಅತ್ಯುತ್ತಮ ಉದಾಹರಣೆಯಾಗಿದೆ....

ಕೆಲವು ವರ್ಷಗಳ ಹಿಂದೆ ನಿಷೇಧಿತ ಮಾವೋವಾದಿ ಸಾಹಿತ್ಯವನ್ನು ಹಂಚುತ್ತಿದ್ದರೆಂಬ ಆಪಾದನೆಯಲ್ಲಿ ಇಬ್ಬರು ಪುರುಷರನ್ನು ಬಂಧಿಸಲಾಯಿತು. ಪೊಲೀಸರು ಅವರಿಂದ ವಶಪಡಿಸಿಕೊಂಡ ‘ವಸ್ತುಗಳಲ್ಲಿ’ ಅರುಂಧತಿ ರಾಯ್ ಬರೆದ ಕೆಲವು ಪುಸ್ತಕಗಳು ಇದ್ದವು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅರಣ್ಯಗಳ, ನದಿಗಳ, ಬೆಳೆಗಳ, ಬೀಜಗಳ, ಭೂಮಿಯ, ರೈತರ .. ಮೇಲೆ ಕಾರ್ಪೋರೇಟ್ ಕಂಪೆನಿಗಳು ಮಾಡಿದ ಭಾರೀ ದಾಳಿಗಳ ಕುರಿತಾಗಿ ನಾನು ಬರೆದಿದ್ದ ಪುಸ್ತಕಗಳು ಅವು. ಅವುಗಳಲ್ಲಿ ಹೆಚ್ಚಿನವು ದಾಳಿಗಳ ವಿರುದ್ಧ ಹೋರಾಡಿದ ಜನರ ಕುರಿತು ಬರೆದಿದ್ದ ಪುಸ್ತಕಗಳು. ಅವರನ್ನು ಸತತವಾಗಿ ಖಳನಾಯಕರೆಂದು, ರಾಷ್ಟ್ರವಿರೋಧಿಗಳೆಂದು ಚಿತ್ರಿಸಲಾಯಿತು. ಅವುಗಳು ನಾನು ಬರೆದ ಹಲವಾರು ಪ್ರಬಂಧಗಳು. ಅವುಗಳು ಮೊತ್ತಮೊದಲು ಪ್ರಕಟವಾದಾಗ ಅವುಗಳನ್ನು ಅಪಾಯಕಾರಿ ಅನುಮಾನದಿಂದ ನೋಡಲಾಯಿತು. ಕೆಲವರಿಗೆ ಅದು ಬರವಣಿಗೆ ಅಂತ ಅನ್ನಿಸಲೇ ಇಲ್ಲ: ‘‘ಓಹ್, ನಿನ್ಯಾಕೆ ಬರೆಯುವುದನ್ನು ನಿಲ್ಲಿಸಿದ್ದಿ? ನಾವು ನಿನ್ನ ಮುಂದಿನ ಪುಸ್ತಕಕ್ಕಾಗಿ ಕಾಯುತ್ತಿದ್ದೇವೆ’’ ಎಂದರು ಅವರು. ಸಮಯ ಕಳೆಯಿತು: ಅವ್ಯಕ್ತ ರಾಜಿಪಂಚಾತಿಕೆಯೊಂದು ನಡೆಯಿತು; ನನ್ನನ್ನು ‘ಲೇಖಕಿ- ಕಾರ್ಯಕರ್ತೆ’ ಎಂದು ಕರೆಯಲಾರಂಭಿಸಿದರು. ನನ್ನ ವಿರುದ್ಧ ಏನೇ ಆಪಾದನೆ ಪೊಲೀಸ್ ಮೊಕದ್ದಮೆ ಹೂಡಿದ್ದರೂ, ನಾನು ಇನ್ನೂ ಇಲ್ಲಿ ಇದ್ದೇನೆ, ನಿಮ್ಮನ್ನು ಉದ್ದೇಶಿಸಿ ಮಾತಾಡುತ್ತಿದ್ದೇನೆ...

ಆದರೆ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಆಪಾದನೆಯಲ್ಲಿ ಭಾರತದ ಜೈಲುಗಳು ರಾಜಕೀಯ ಕೈದಿಗಳಿಂದ ತುಂಬಿತುಳುಕುತ್ತಿವೆ. ಈ ರಾಜಕೀಯ ಕೈದಿಗಳಲ್ಲಿ ಹೆಚ್ಚಿನವರು ಒಂದೋ ಮಾವೋವಾದಿ ಅಥವಾ ಇಸ್ಲಾಮಿಸ್ಟ್ ಭಯೋತ್ಪಾದಕರೆಂಬ ಆಪಾದನೆ ಎದುರಿಸುತ್ತಿರುವವರು.

ಅತ್ಯಂತ ಇತ್ತೀಚೆಗೆ ನಡೆದ ಚುನಾವಣಾ ಪೂರ್ವ ಬಂಧನಗಳಲ್ಲಿ ಶಿಕ್ಷಕರು, ವಕೀಲರು, ಕಾರ್ಯಕರ್ತರು ಮತ್ತು ಲೇಖಕರನ್ನು ಜೈಲಿಗೆ ತಳ್ಳಲಾಗಿದೆ.

‘ರಿಪೋರ್ಟರ್ಸ್ ವಿದ್‌ಔಟ್ ಬಾರ್ಡರ್ಸ್‌’ ಹೇಳುವಂತೆ ಭಾರತವು ಪತ್ರಕರ್ತರಿಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿಯಾದ ಐದನೆಯ ದೇಶ. ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್ ಮತ್ತು ಮೆಕ್ಸಿಕೋದ ಬಳಿಕ ಭಾರತವೇ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶ. ಎಲ್ಲ ಹಿಂದೂ ಬಲಪಂಥೀಯ ವಿಮರ್ಶಕರನ್ನು, ಟೀಕಾಕಾರರನ್ನು ಹತ್ಯೆ ಮಾಡಲಾಗಿದೆ.... ಕಳೆದ ಐದು ವರ್ಷಗಳಲ್ಲಿ ಭಾರತವು ಒಂದು ಲಿಂಚಿಂಗ್ (ಗುಂಪು ಥಳಿತದ) ರಾಷ್ಟ್ರವಾಗಿ ಪ್ರಸಿದ್ಧಿ ಪಡೆದಿದೆ. ಮುಸ್ಲಿಮರು ಮತ್ತು ದಲಿತರನ್ನು ಹಾಡಹಗಲೇ ಸ್ವಘೋಷಿತ ಗೋರಕ್ಷಕ ದಾಳಿಕೋರ ಹಿಂದೂ ಗುಂಪುಗಳು ಸಾರ್ವಜನಿಕವಾಗಿ ಥಳಿಸಿವೆ ಮತ್ತು ಬಡಿದು ಕೊಂದಿವೆ.

ಭಾರತದಲ್ಲಿ ಜೈಲಿಗೆ ತಳ್ಳಲ್ಪಟ್ಟವರು ಅದೃಷ್ಟವಂತರು. ಇವರಷ್ಟು ಅದೃಷ್ಟವಂತರಲ್ಲದವರು ಸತ್ತು ಹೋಗಿದ್ದಾರೆ. ಗೌರಿಲಂಕೇಶ್, ನರೇಂದ್ರ ದಾಭೋಲ್ಕರ್, ಎಂ.ಎಂ. ಕಲಬುರ್ಗಿ ಮತ್ತು ಗೋವಿಂದ ಪನ್ಸಾರೆ ಇವರನ್ನು ಹತ್ಯೆ ಮಾಡಲಾಗಿದೆ. ಇವರೆಲ್ಲ ಹಿಂದೂ ಬಲಪಂಥೀಯವಾದದ ಟೀಕಾಕಾರರು.

ಭಾರತದಲ್ಲಿ ಈಗ ನಡೆಯುತ್ತಿರುವ ಗುಂಪುಥಳಿತ, ಹಿಂಸೆ, ಢಾಣಾ ಡಂಗುರವಾಗಿ ಎಗ್ಗಿಲ್ಲದೆ ಮುಕ್ತವಾಗಿ ಸಾರ್ವಜನಿಕವಾಗಿ ನಡೆಯುವಂಥದ್ದು, ಮತ್ತದು ಸ್ವಯಂ ಸ್ಫೂರ್ತವಲ್ಲ.

ಥಳಿಸುವವರಿಗೆ ತಮಗೆ ಅಧಿಕಾರದ ಅತ್ಯಂತ ಉನ್ನತ ಸ್ಥಳಗಳಲ್ಲಿ ರಕ್ಷಣೆ ಇದೆ ಎಂದು ಗೊತ್ತಿದೆ. ಸರಕಾರ ಮತ್ತು ಪ್ರಧಾನಿಯಿಂದಷ್ಟೇ ರಕ್ಷಣೆ ಅಲ್ಲ; ಅವರಿಬ್ಬರನ್ನೂ ನಿಯಂತ್ರಿಸುವ ತೀರ ಬಲಪಂಥೀಯ ಹಾಗೂ ಅಪಾಯಕಾರಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಸಂಘಟನೆಯಿಂದ ಅವರಿಗೆ ರಕ್ಷಣೆ ಇದೆ. ಭಾರತದಲ್ಲಿ ಆರೆಸ್ಸೆಸ್ ಅತ್ಯಂತ ರಹಸ್ಯಾತ್ಮಕವಾದ ಮತ್ತು ಅತ್ಯಂತ ಬಲಿಷ್ಠವಾದ ಒಂದು ಸಂಘಟನೆ.

1925ರಲ್ಲಿ ಸ್ಥಾಪಿಸಲ್ಪಟ್ಟ ಅದರ ಮೂಲ ಸಿದ್ಧಾಂತಿಗಳು ಯುರೋಪಿಯನ್ ಫ್ಯಾಶಿಸಂನಿಂದ ಪ್ರಭಾವಿತರಾದವರು. ಅವರು ಸಾರ್ವಜನಿಕವಾಗಿಯೇ ಹಿಟ್ಲರ್ ಮತ್ತು ಮುಸ್ಸೋಲಿನಿಯನ್ನು ಹೊಗಳಿದ್ದರು. ಭಾರತವನ್ನು ಒಂದು ಹಿಂದೂ ರಾಷ್ಟ್ರವಾಗಿ ಅಧಿಕೃತವಾಗಿ ಘೋಷಿಸಲು ಆರೆಸ್ಸೆಸ್ 95 ವರ್ಷಗಳ ಕಾಲ ಸತತವಾಗಿ ಶ್ರಮಿಸಿದೆ. ಅದರ ಘೋಷಿತ ಶತ್ರುಗಳು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು.

ಇಂದು ತನ್ನಲ್ಲಿ ಆರು ಲಕ್ಷ ಮಂದಿ ತರಬೇತಾದ ಮಿಲಿಶಿಯಾ ಸದಸ್ಯರಿದ್ದಾರೆ ಎಂದು ಆರೆಸ್ಸೆಸ್ ಜಂಭಕೊಚ್ಚಿಕೊಳ್ಳುತ್ತಿದೆ. ಇವರು ತಮ್ಮನ್ನು ಹೆಮ್ಮೆಯಿಂದ ಸ್ವಯಂ ಸೇವಕರೆಂದು ಕರೆದುಕೊಳ್ಳುತ್ತಾರೆ. ಈ ಸದಸ್ಯರಲ್ಲಿ ಪ್ರಧಾನಿ ಹಾಗೂ ಅವರ ಸಂಪುಟದ ಬಹಳಷ್ಟು ಮಂದಿಯೂ ಸೇರಿದ್ದಾರೆ.

ಆಕಸ್ಮಿಕವಾಗಿ, (ಅಥವಾ ಆಕಸ್ಮಿಕವಾಗಿ ಅಲ್ಲದಿರಲೂಬಹುದು)ಮೋದಿಯವರ ಮುಖ್ಯಧಾರೆಯ ರಾಜಕೀಯ ಬದುಕು 9/11ರ ಘಟನೆ ನಡೆದ ಕೆಲವೇ ವಾರಗಳ ಬಳಿಕ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರಂಭವಾಯಿತು. ಅದಾಗಿ ಕೆಲವೇ ತಿಂಗಳುಗಳೊಳಗೆ ಗುಜರಾತಿನಲ್ಲಿ ಮುಸ್ಲಿಮರ ವಿರುದ್ಧ ಒಂದು ಮಾರಣಹೋಮ ನಡೆಯಿತು. ಅದರಲ್ಲಿ ಹಾಡಹಗಲೇ ಎರಡು ಸಾವಿರ ಮಂದಿ ಕೊಲ್ಲಲ್ಪಟ್ಟರು. ಕೆಲವು ತಿಂಗಳುಗಳೊಳಗಾಗಿ ಅವರು ಚುನಾವಣೆ ನಡೆಸಿ, ಅದರಲ್ಲಿ ಗೆದ್ದರು. ಗುಜರಾತಿನಲ್ಲಿ ನಡೆದ ವ್ಯಾಪಾರೋದ್ಯಮಿಗಳು, ಉದ್ಯಮಪತಿಗಳು ಹಾಗೂ ಭಾರತದ ಹಲವು ಕಾರ್ಪೊರೇಶನ್‌ಗಳ ಸಿಇಒಗಳು ಒಂದು ಅದ್ದೂರಿ ಸಮಾರಂಭದಲ್ಲಿ ಅವರನ್ನು ತಮ್ಮ ಭಾವೀ ಪ್ರಧಾನಿ ಅಭ್ಯರ್ಥಿ ಎಂದು ಅನುಮೋದಿಸಿದರು. ಫ್ಯಾಶಿಸಂ ಮತ್ತು ಕ್ಯಾಪಿಟಲಿಸಂ ಪರಸ್ಪರ ವಿವಾಹವಾದವು ಮತ್ತು ಜತೆಯಾಗಿ ಸಾಗಿದವು. ಮೋದಿಯವರು ವಿಶ್ವನಾಯಕರನ್ನು ಆಲಿಂಗಿಸುತ್ತಾ ಮತ್ತು ಅವರಿಂದ ಆಲಿಂಗಿಸಲ್ಪಡುತ್ತ ವಿಶ್ವ ಪರ್ಯಟನ ಗೈದಿದ್ದಾರೆ. ಆ ನಾಯಕರಲ್ಲಿ ಬರಾಕ್ ಒಬಾಮ ಹಾಗೂ ಇಮ್ಯಾನುವೆಲ್ ಮ್ಯಾಕ್‌ರನ್ ಮತ್ತು ಡೊನಾಲ್ಡ್ ಟ್ರಂಪ್ ಕೂಡ ಸೇರಿದ್ದಾರೆ. ಆ ನಾಯಕರಿಗೆಲ್ಲ ಮೋದಿ ನಿಜವಾಗಿಯೂ ಏನು ಎಂದು ಗೊತ್ತಿದೆ. ಆದರೆ ಅವರೆಲ್ಲರ ಬಳಿಯೂ ಒಂದು ಬಿಲಿಯ ಜನರಿಗಿಂತಲೂ ಹೆಚ್ಚು ಇರುವ ಈ ‘ಮಾರುಕಟ್ಟ್ಟೆ’ಗೆ ಮಾರಾಟ ಮಾಡಬಹುದಾದ ಏನೋ ಸರಕು, ಸೇವೆ ಇದೆ...

ಭಾರತ ತನ್ನ ಆತ್ಮಕ್ಕಾಗಿ ಹೋರಾಡುತ್ತಿದೆ. ಆರೆಸ್ಸೆಸ್ ಊಸರವಳ್ಳಿ ತರಹ. ಅದು ಬೇಕಾದಾಗ ಸನ್ನಿವೇಶಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿಸಬಲ್ಲದು. ಅದು ತಾಳ್ಮೆಯಿಂದ, ಕಠಿಣ ಶ್ರಮದಿಂದ ದೇಶದ ಪ್ರತಿಯೊಂದು ಸಂಸ್ಥೆಯೊಳಕ್ಕೂ ಕೊರೆಯುತ್ತ ಹೋಗಿರುವ ಒಂದು ಬೃಹತ್ ಪಶು. ಎಲ್ಲ ಸಂಸ್ಥೆಗಳು ಎಂದರೆ ನ್ಯಾಯಾಲಯಗಳು, ವಿಶ್ವವಿದ್ಯಾನಿಲಯಗಳು, ಮಾಧ್ಯಮ ಸಂಸ್ಥೆಗಳು, ಭದ್ರತಾ ಪಡೆಗಳು, ಗುಪ್ತಚರ ಸೇವೆಗಳು.

1997ರಲ್ಲಿ ನನ್ನ ಕಾದಂಬರಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪ್ರಕಟವಾದಾಗ ಕೇರಳದಲ್ಲಿ ಆ ಕಾದಂಬರಿಯಲ್ಲಿ ತನ್ನ ಕುರಿತ ಟೀಕೆ ಇದೆ ಎಂದು ತಿಳಿದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ( ಮಾರ್ಕಿಸ್ಟ್) ವಿಚಲಿತಗೊಂಡಿತು. ತಡಮಾಡದೆ ನನಗೆ ಕಮ್ಯುನಿಸ್ಟ್ ವಿರೋಧಿ ಎಂದು ಹಣೆಪಟ್ಟಿ ಅಂಟಿಸಲಾಯಿತು. ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಒಂದು ಪಾತ್ರವಾಗಿರುವ ಕಾಮ್ರೇಡ್ ಕೆ .ಎನ್.ಎಮ್.ಪಿಳ್ಳೈ ತನ್ನ ಪತ್ನಿ ಕಲ್ಯಾಣಿ ಮತ್ತು ಓರ್ವ ವಿಚ್ಛೇದಿತ ಮಹಿಳೆ ಅಮ್ಮು ಜತೆ ಹೊಂದಿರುವ ಸಂಬಂಧವನ್ನು ಹಲವರು ಮೆಚ್ಚಲಿಲ್ಲ ‘‘ಅಮ್ಮುವಿನ ಮಕ್ಕಳು ಹಗಲು ಹೊತ್ತಿನಲ್ಲಿ ಪ್ರೀತಿಸಿದ ಪುರುಷನನ್ನು ಆಕೆ ರಾತ್ರಿ ವೇಳೆ ಪ್ರೀತಿಸುತ್ತಿದ್ದಳು.’’ ಐದು ಮಂದಿ ಪುರುಷ ವಕೀಲರು ಒಟ್ಟಾಗಿ ನನ್ನ ಮೇಲೆ ಅಶ್ಲೀಲತೆ ಮತ್ತು‘‘ ಸಾರ್ವಜನಿಕ ನೀತಿ’’ಯನ್ನು ಭ್ರಷ್ಟಗೊಳಿಸಿದ್ದಕ್ಕಾಗಿ ನ್ಯಾಯಾಲಯದಲ್ಲಿ ಒಂದು ಕ್ರಿಮಿನಲ್ ದಾವೆ ಹೂಡಿದರು.

 ಸಿರಿಯನ್ ಕ್ರಿಶ್ಚಿಯನ್ ವಂಶಪಾರಂಪರಿಕ ಕಾನೂನನ್ನು ರದ್ದುಗೊಳಿಸುವಂತೆ ನನ್ನ ತಾಯಿ ಮೇರಿ ರಾಯ್ ಹೂಡಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿ, ಮಹಿಳೆಯರಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುವಂತಾಯಿತು. ಇದರಿಂದ ಹಲವರು ಸಿಟ್ಟಾದರು. ಅವರಲ್ಲಿ ತಾಯಿ ಮತ್ತು ಮಗಳು ಇಬ್ಬರಿಗೂ ಒಂದು ಪಾಠ ಕಲಿಸಬೇಕಾಗಿದೆ ಎಂಬ ಭಾವನೆ ಕಾಣಿಸಿತು. ಮೊಕದ್ದಮೆಯ ಮೂರನೇ ಅಥವಾ ನಾಲ್ಕನೇ ವಿಚಾರಣೆ ನ್ಯಾಯಾಲಯದ ಮುಂದೆ ಬರುವಷ್ಟರಲ್ಲಿ ‘ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ಗೆ ಬುಕರ್ ಪ್ರಶಸ್ತಿ ಬಂತು. ಇದರಿಂದಾಗಿ ಸಾರ್ವಜನಿಕ ಅಭಿಪ್ರಾಯದಲ್ಲಿ ವಿಭಜನೆ ಕಾಣಿಸಿತು. ಸ್ಥಳೀಯ ಮಲಯಾಳಿ ಹೆಂಗಸೊಬ್ಬಳು ಒಂದು ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳಿಸುವುದು ಸಣ್ಣ ವಿಷಯವಲ್ಲ. ಅಂತಿಮವಾಗಿ ಮೊಕದ್ದಮೆ ವಜಾ ಆಗುವಷ್ಟರಲ್ಲಿ ಹತ್ತು ವರ್ಷಗಳು ಕಳೆದಿದ್ದವು. 1998ರ ಮೇ ತಿಂಗಳಲ್ಲಿ ಭಾರತದ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿ ನೇತೃತ್ವದ ಮೈತ್ರಿ ಕೂಟದ ಸರಕಾರ ಅಧಿಕಾರಕ್ಕೆ ಬಂತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೆಸ್ಸೆಸ್‌ನ ಸದಸ್ಯರಾಗಿದ್ದರು. ಅಧಿಕಾರ ಸ್ವೀಕರಿಸಿ ಕೆಲವು ವಾರಗಳೊಳಗಾಗಿ ಸರಣಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ಆರೆಸ್ಸೆಸ್‌ನ ದೀರ್ಘಕಾಲದ ಒಂದು ಕನಸನ್ನು ನನಸಾಗಿ ಮಾಡಿದರು. ಆ ಅಣ್ವಸ್ತ್ರ ಪರೀಕ್ಷೆಗಳನ್ನು ಸ್ವಾಗತಿಸಿ ನಡೆದ ಸಂಭ್ರಮಾಚರಣೆಗಳಿಂದ ಆಶ್ಚರ್ಯ ಆಘಾತಗಳಿಗೊಳಗಾದ ನಾನು ನನ್ನ ಮೊದಲ ಪ್ರಬಂಧ ‘‘ದಿ ಎಂಡ್ ಆಫ್ ಇಮ್ಯಾಜಿನೇಶನ್’’ ಬರೆದೆ. ಕಾದಂಬರಿಯಲ್ಲದ ಪ್ರಬಂಧಗಳನ್ನು ಬರೆಯುವ ಇಪ್ಪತ್ತು ವರ್ಷಗಳ ಬರವಣಿಗೆಯಲ್ಲಿ ಅದು ನನ್ನ ಆರಂಭದ ಬರಹವಾಯಿತು.

  ಪ್ರಬಂಧಗಳು ಪ್ರಕಟವಾದಂತೆ ಐದು ಮಂದಿ ಪುರುಷ ವಕೀಲರ ತಂಡ ಕೂಡ ನನ್ನನ್ನು ಹಿಂಬಾಲಿಸುತ್ತಲೇ ಬಂತು. ನ್ಯಾಯಾಂಗ ನಿಂದನೆಗಾಗಿ ನನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ಸಂಖ್ಯೆಯೂ ಹೆಚ್ಚುತ್ತ ಹೋಯಿತು. ಅವುಗಳಲ್ಲಿ ಒಂದು, ಸಣ್ಣ ಅವಧಿಯ ನನ್ನ ಜೈಲುವಾಸದಲ್ಲಿ ಕೊನೆಗೊಂಡಿತು. ಇಪ್ಪತ್ತು ವರ್ಷಗಳ ಪ್ರಬಂಧಗಳ ಬರವಣಿಗೆಯ ಬಳಿಕ ಕಾದಂಬರಿ ನನಗೆ ಮರಳಿ ಬಂತು. ಅದೇ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಅದು ಯಾವ ಕಾಶ್ಮೀರದಲ್ಲಿ ಸತ್ಯವನ್ನು ಹೇಳಲು ಸಾಧ್ಯವಿಲ್ಲವೋ, ಎಲ್ಲಿ ಕಾದಂಬರಿ ಮಾತ್ರ ಸತ್ಯವಾಗಬಲ್ಲದೋ, ಆ ಕಾಶ್ಮೀರದ ಬಗ್ಗೆ ನಾನು ಬರೆದಿರುವ ಕಾದಂಬರಿ. ದೈಹಿಕ ತೊಂದರೆಯ, ಹಾನಿಯ ಅಪಾಯಕ್ಕೆ ಗುರಿಯಾಗದೆ ಭಾರತದಲ್ಲಿ ಕಾಶ್ಮೀರದ ಬಗ್ಗೆ ಮಾತಾಡಲು ಸಾಧ್ಯವಿಲ್ಲ.

ಓರ್ವ ಲೇಖಕಿಯಾಗಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ನಲ್ಲಿ ನಾನು ಪಾತ್ರಗಳನ್ನು ರಕ್ಷಿಸಿದೆ, ಯಾಕೆಂದರೆ ಅವುಗಳು ನಿರ್ಬಲ ವಾಗಿದ್ದವು. ‘ದಿ ಮಿನಿಸ್ಟ್ರಿ ಆಫ್ ಅಟ್‌ಮೊಸ್ಟ್ ಹ್ಯಾಪಿನೆಸ್’ ನ ಹಲವಾರು ಪಾತ್ರಗಳು ಇನ್ನಷ್ಟು ಹೆಚ್ಚು ನಿರ್ಬಲ, ದುರ್ಬಲ, ಅಸಹಾಯಕ ಪಾತ್ರಗಳು. ವಿಶೇಷವಾಗಿ ಅಂಜುಮ್ ಎಂಬ ಪಾತ್ರ.ಅಂಜುಮ್, ಪುರುಷರ ಮತ್ತು ಮಹಿಳೆಯರ, ಪ್ರಾಣಿಗಳ ಮತ್ತು ಮನುಷ್ಯರ ಮತ್ತು ಬದುಕು ಹಾಗೂ ಸಾವಿನ ನಡುವೆ ಇರುವ ಗೋಡೆಗಳನ್ನು ಮೃದುಗೊಳಿಸುತ್ತಾಳೆ, ಸಹ್ಯವಾಗಿಸುತ್ತಾಳೆ. ದಿನೇ ದಿನೇ ಇನ್ನಷ್ಟು ಕಠಿಣವಾಗುತ್ತ, ಕ್ರೂರವಾಗುತ್ತ ಹೋಗುವ ಈ ಪ್ರಪಂಚದಲ್ಲಿ ಕ್ರೂರ ಗಡಿಗಳ ದಬ್ಬಾಳಿಕೆಯಿಂದ ನನಗೆ ರಕ್ಷಣೆ ಬೇಕಾದಾಗೆಲ್ಲ ನಾನು ಅವಳ ಬಳಿಗೆ ಹೋಗುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)