varthabharthi

ನಿಮ್ಮ ಅಂಕಣ

ಸಕಾಲಿಕ ಬರಹ

ವಾರ್ತಾ ಭಾರತಿ : 31 May, 2019
-ಮೀರಾ ಆರ್. ಕಿಣಿ, ದೊಂಬಿವಿಲಿ, ಮುಂಬೈ

ಮಾನ್ಯರೇ,

‘ವಾರ್ತಾಭಾರತಿ’ಯಲ್ಲಿ ದಿನಾಂಕ 23-5-2019ರಂದು ಪ್ರಕಟವಾದ ತಾರಾ ಭಟ್‌ರ ವೈದ್ಯಕೀಯ ಕ್ಷೇತ್ರದ ಅನಗತ್ಯ ಪರೀಕ್ಷೆಗಳ ಕುರಿತಾದ ಲೇಖನ ಸಕಾಲಿಕವಾದುದು. ಇದು ಲೇಖಕಿಯ ಅನುಭವ ಮಾತ್ರವಲ್ಲ, ಆರೋಗ್ಯ ತಪಾಸಣೆಗೆಂದು ಬರುವ ಹೆಚ್ಚಿನವರ ಅನುಭವವೂ ಆಗಿರುತ್ತದೆ. ಆರೋಗ್ಯ ತಪಾಸಣೆ ನೆಪದಲ್ಲಿ ಅನಗತ್ಯ ಪರೀಕ್ಷೆಗಳಿಗೆ ಅಮಾಯಕರನ್ನು ಒಳಪಡುವಂತೆ ಮಾಡಿ, ಅವರಿಂದ ದುಡ್ಡು ಸುಲಿಗೆ ಮಾಡುವುದು ಬಹುತೇಕ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ ಜ್ವರವೆಂದು ಆಸ್ಪತ್ರೆಗೆ ಹೋದಾಗ ನನ್ನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ವೈದ್ಯರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ನನಗೆ ತಿಳಿಸಿದರು.

ಮನೆಯವರಿಗೆ ತಿಳಿಸಿ ಮುಂದಿನ ವಾರ ಬರುವುದಾಗಿ ಹೇಳಿದ ನನಗೆ ಕಾರಣಾಂತರದಿಂದ ಹೋಗಲಾಗದೆ ಮುಂದೆ ನಾನು ಆ ವಿಷಯವನ್ನು ಮರೆತೇ ಬಿಟ್ಟಿದ್ದೆ. ಆ ಮಾತಿಗೆ ಹತ್ತು ವರ್ಷಗಳೇ ಕಳೆದವು. ನಾನು ಆರೋಗ್ಯವಾಗಿಯೇ ಇದ್ದೇನೆ ಏನೂ ಅಂತಹ ಸಮಸ್ಯೆ ಇಲ್ಲ. ಇದೆಲ್ಲ ಖಾಸಗಿ ಆಸ್ಪತ್ರೆಗಳ ದುಡ್ಡು ಸೆಳೆಯುವ ತಂತ್ರವಾಗಿದೆ ಎಂಬುದು ತಿಳಿದ ವಿಷಯವೇ ಆಗಿದೆ. ಭ್ರಷ್ಟತೆಯಲ್ಲಿ ಪೊಲೀಸ್ ವ್ಯವಸ್ಥೆ ಮೊದಲನೇ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನ ಖಾಸಗಿ ವೈದ್ಯಕೀಯ ಕ್ಷೇತ್ರದ್ದು ಎಂಬುದು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಮೀಕ್ಷೆ ವರದಿಯ ಸಾರಾಂಶ. ಇದರಲ್ಲಿ ಔಷಧ ತಯಾರಿಕಾ ಕಂಪೆನಿಗಳ ಪಾಲೂ ಇದೆ. ತಮ್ಮದೇ ಕಂಪೆನಿಯ ಔಷಧಗಳನ್ನು ರೋಗಿಗಳಿಗೆ ಸೂಚಿಸುವಂತೆ ವೈದ್ಯರಿಗೆ ತಿಳಿಸಿ, ಅಂತಹ ವೈದ್ಯರಿಗೇ ನಿಗದಿತ ಕಮಿಷನ್ ಕೂಡ ನಿಗದಿ ಮಾಡುತ್ತಾ ಬಂದಿರುವ ಈ ಔಷಧಿ ಕಂಪೆನಿಗಳ ದೊಡ್ಡ ಮಾಫಿಯಾವೇ ಆರೋಗ್ಯ ಕ್ಷೇತ್ರದ ಬಹುದೊಡ್ಡ ಖಳನಾಯಕ.

ಈ ಮಾಫಿಯಾದ ಜೊತೆ ಒಳಒಪ್ಪಂದ ಮಾಡಿಕೊಂಡು ಔಷಧಿ ಕಂಪೆನಿಯ ಖರ್ಚಿನಲ್ಲಿ ವಿದೇಶಿ ಪ್ರವಾಸ ಮಾಡಿಕೊಂಡು ಬಂದ ಮಧ್ಯಪ್ರದೇಶದ ಹನ್ನೊಂದು ಮಂದಿ ವೈದ್ಯರ ಪರವಾನಿಗೆಯನ್ನು ಸ್ವಲ್ಪಸಮಯ ಅಮಾನತ್ತಿನಲ್ಲಿ ಇಟ್ಟಿದ್ದು ತೀರಾ ಏಳೆಂಟು ತಿಂಗಳ ಹಿಂದಿನ ಸುದ್ದಿ. ತಮ್ಮ ಬಳಿ ತಪಾಸಣೆಗೆ ಬರುವ ರೋಗಿಗಳ ಸಣ್ಣಪುಟ್ಟ ಕಾಯಿಲೆಗಳನ್ನೂ ಗಂಭೀರವೆಂಬಂತೆ ಬಿಂಬಿಸಿ ಶಸ್ತ್ರ ಚಿಕಿತ್ಸೆಗಾಗಿ ಅವರನ್ನು ಕಾರ್ಪೊರೇಟ್ ಆಸ್ಪತ್ರೆಗೆ ಕಳಿಸಿ ಅಂತಹ ರೋಗಿಗಳ ಸಂಖ್ಯೆಗನುಗುಣವಾಗಿ ಕಾರ್ಪೊರೇಟ್ ಆಸ್ಪತ್ರೆಗಳಿಂದ ಕಮಿಷನ್ ಪಡೆಯುವ ವೈದ್ಯರೂ ಇಲ್ಲದಿಲ್ಲ. ಇದೇ ಎಲ್ಲ ವಿಚಾರಗಳನ್ನು ಒಳಗೊಂಡ ಕೃತಿ ‘‘voices of conseienes from medical profession’’ (ವೈದ್ಯಕೀಯ ಕ್ಷೇತ್ರದಲ್ಲಿನ ಆತ್ಮಸಾಕ್ಷಿಯ ಧ್ವನಿಗಳು) ಒಂದು ವರ್ಷದ ಹಿಂದೆ ಪ್ರಕಟಗೊಂಡು ತಲ್ಲಣ ಎಬ್ಬಿಸಿತ್ತು. ‘ವೈದ್ಯೋ ನಾರಾಯಣೋ ಹರಿ’’ ಎನ್ನುವ ಕಾಲ ಬದಲಾಗಿದೆ. ಏಕೆಂದರೆ ಹೆಚ್ಚಿನ ವೈದ್ಯರು ಹಣದ ದುರಾಸೆಯಿಂದ ಸುಲಿಗೆಯ ಹೊಸ ಹೊಸ ಮಾರ್ಗಗಳನ್ನು ಶೋಧಿಸುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಜನಸಾಮಾನ್ಯರನ್ನು ದೇವರೇ ಕಾಪಾಡಬೇಕು. ಖಾಸಗಿ ವೈದ್ಯಕೀಯ ಕ್ಷೇತ್ರದ ಇಂತಹ ಅವಾಂತರಗಳ ಕುರಿತು ಹೆಚ್ಚಿನ ಜಾಗೃತಿ ಮೂಡಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)