varthabharthi

ನಿಮ್ಮ ಅಂಕಣ

ಉತ್ತಮ ಶಿಕ್ಷಣ ವ್ಯವಸ್ಥೆಯಿಂದಲೇ ಸಂತುಷ್ಟ ದೇಶದ ನಿರ್ಮಾಣ ಸಾಧ್ಯ

ವಾರ್ತಾ ಭಾರತಿ : 1 Jun, 2019
ತಲ್ಹ ಇಸ್ಮಾಯಿಲ್ ಬೆಂಗ್ರೆ ಸಂಶೋಧಕರು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಅನಾಲಿಸಿಸ್, ಬೆಂಗಳೂರು

ನಮ್ಮ ದೇಶವು ವಿಶ್ವದ 156 ದೇಶಗಳ ಪೈಕಿ 140ನೇ ಸಂತುಷ್ಟ ರಾಷ್ಟ್ರವೆಂದುಕೊಂಡಿದೆ ಎಂದು UN  ‘ಹ್ಯಾಪಿನೆಸ್ ಇಂಡೆಕ್ಸ್’ ಹೇಳುತ್ತದೆ, ಎನ್ನುವಾಗ ನಾವು ಭಾರತೀಯರು ಏಕೆ ಅಷ್ಟು ಅಸಂತುಷ್ಟರಾಗಿದ್ದೇವೆಂದು ನಮ್ಮನ್ನೇ ಹಲವು ಬಾರಿ ಪ್ರಶ್ನಿಸಿಕೊಳ್ಳಬಹುದು, ನಿಜ ಹೇಳಬೇಕೆಂದರೆ, ನಾವು ಏಕೆ ಅಸಂತುಷ್ಟರೆಂದು ಆಲೋಚಿಸುವ ಬದಲು, ನಾವು ಹೇಗೆ ಸಂತುಷ್ಟರಾಗಬಹುದೆಂದು ಆಲೋಚಿಸಬೇಕಲ್ಲವೇ?

 ಭಾರತೀಯರಲ್ಲಿ ಸಂತುಷ್ಟತೆ ಹೆಚ್ಚಲು ಇಲ್ಲಿನ ಶಿಕ್ಷಣ ವ್ಯವಸ್ಥೆಯು ಬಹುದೊಡ್ಡ ಪಾತ್ರವಹಿಸಬಹುದೆಂದು ನನಗನಿಸುತ್ತದೆ. ಏಕೆಂದರೆ ಮಕ್ಕಳು ಮತ್ತು ಮಕ್ಕಳ ಆರೈಕೆ ಎನ್ನುವುದು ಹಿರಿಯರ ಅತ್ಯಂತ ತಲೆನೋವಿನ ವಿಚಾರ. ಮಕ್ಕಳು ಮಕ್ಕಳ ಹೆತ್ತವರಿಗಿರಲಿ, ಅಥವಾ ತಾತ, ಅಜ್ಜಿ, ಅಜ್ಜ, ಅಕ್ಕ ಅಣ್ಣ ಹೀಗೆ ಅವರು ಮನೆಯಲ್ಲಿರುವ ಎಲ್ಲರ ಜವಾಬ್ದಾರಿಯಾಗಿಬಿಡುತ್ತಾರೆ. ಬಹುಷಃ ಅದಕ್ಕಾಗಿಯೇ UN ದೇಶಗಳ ಸಂತುಷ್ಟತೆಯನ್ನು ಅಳತೆಮಾಡುವ ಒಂದು ಪ್ರಮುಖ ವಿಚಾರಗಳಲ್ಲಿ ಶಿಕ್ಷಣಕ್ಕೆ ಪ್ರಮುಖ ಸ್ಥಾನ ನೀಡಿದೆ. ಈ ಸಲ ವಿಶ್ವದಲ್ಲಿಯೇ ಅತ್ಯಂತ ಸಂತುಷ್ಟ ದೇಶ ಎಂದು ಗುರುತಿಸಿರುವ ಫಿನ್ಲ್ಯಾಂಡ್ ದೇಶದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಆದ್ಯತೆ ನೀಡಲಾಗುತ್ತದೆ, ’ಫ್ರೀ ಎಜುಕೇಶನ್’ ಎನ್ನುವುದೇ ಆ ದೇಶದ ನಾಗರಿಕರಿಗಿರುವ ದೊಡ್ಡ ವರ ಎಂದರೆ ತಪ್ಪಾಗಲಾರದು.

ಆ ದೇಶದ ಶಿಕ್ಷಣ ವ್ಯವಸ್ಥೆಯ ಕೆಲವು ಪ್ರಮುಖ ವಿಚಾರಗಳ ಬಗ್ಗೆ ತಿಳಿದರೆ ನಮ್ಮ ದೇಶದಲ್ಲಿಯೂ ಅದರ ಅನುಕರಣೆಯಿಂದ ಕೆಲವು ಉತ್ತಮ ಬದಲಾವಣೆಯಾಗಬಹುದೆಂದು ನನಗನಿಸುತ್ತದೆ .

*ಪ್ರತೀ ಮಗುವಿನ ಆರಂಭಿಕ ವರ್ಷಗಳ ಆರೈಕೆಯು ಹೆಚ್ಚಿನ ಸಮಯದ ತನಕ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಫಿನ್ಲ್ಯಾಂಡ್ ವಿಶೇಷ ರೂಪುರೇಶೆಗಳು ಮತ್ತು ನಿಧಿ ಹೊಂದಿದೆ: ‘‘ಉನ್ನತ-ಗುಣಮಟ್ಟದ ಶಾಲಾಪೂರ್ವ ಆರೈಕೆಯು’’ ಪ್ರತಿ ಮಗುವಿನ ಕಾನೂನುಬದ್ಧ ಹಕ್ಕಾಗಿದೆ ಎನ್ನುವುದು ಅಲ್ಲಿನ ವಿಶೇಷತೆ.

* ಅಲ್ಲಿ ಯಾವ ಶಿಕ್ಷಣ ಸಂಸ್ಥೆಗಳೂ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ ಮತ್ತು ಯಾವ ಹೆತ್ತವರೂ ತಮ್ಮ ಮಕ್ಕಳಿಗಾಗಿ ಇಂತಹ ಶಾಲೆಯೇ ಬೇಕೆಂದು ಆಯ್ಕೆ ಮಾಡುವುದಿಲ್ಲ. ಏಕೆಂದರೆ ಅವರು ಎಲ್ಲಾ ಮಕ್ಕಳು ಉತ್ತಮರು ಮತ್ತು ಎಲ್ಲಾ ಶಾಲೆಗಳು ಉತ್ತಮ ಶಾಲೆಗಳೆಂದು ಅವರು ಭಾವಿಸುತ್ತಾರೆ.

*ಶಾಲೆಗಳಿಗೆ ಅತೀ ಹೆಚ್ಚು ಕಲಿತ ಮತ್ತು ಅನುಭವಸ್ಥ ಶಿಕ್ಷಕರ ನೇಮಕ ಮಾಡಲಾಗುತ್ತದೆ.
 

‘‘ಅಲ್ಲಿ ಡೇಕೇರ್ ಮತ್ತು ಪ್ರಿಸ್ಕೂಲ್‌ಗೆ ಹೋಗುವುದು ಪ್ರತಿ ಮಗುವಿನ ಹಕ್ಕಾಗಿದೆ. ಇವುಗಳು ನೀವು ಕೆಲಸ ಮಾಡುವಾಗ ನೀವು ನಿಮ್ಮ ಮಗುವನ್ನು ಡಂಪ್(ಎಸೆದು ಹೋಗುವ) ಮಾಡುವ ಸ್ಥಳವಲ್ಲ, ನಿಮ್ಮ ಮಗುವಿಗೆ ಆಡಲು, ಕಲಿಯಲು ಮತ್ತು ಇತರ ಮಕ್ಕಳೊಂದಿಗೆ ಸ್ನೇಹ ಬೆಳೆಸುವ ಸ್ಥಳವಾಗಿ ಪರಿಗಣಿಸುತ್ತಾರೆ ’’

*ಮಕ್ಕಳು ಬಹಳ ವಿಳಂಬಿಸಿ ಅಂದರೆ 7ನೇ ಅಥವಾ 8ನೇ ವಯಸ್ಸಿನಲ್ಲಿ ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ, ಏಕೆಂದರೆ ಅಷ್ಟರ ತನಕ ಮಕ್ಕಳಿಗೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಆಡಲು ಹೆಚ್ಚು ಅವಕಾಶ ಸಿಗಲಿ ಎಂದು ಅವರು ಆಶಿಸುತ್ತಾರೆ.

*ಆಟ ಮತ್ತು ಆನಂದಿಸುವುದನ್ನು ಪಠ್ಯದ ಭಾಗವೆನ್ನುತ್ತಾರೆ, ಅದೇರೀತಿ ‘ಚೈಲ್ಡ್ ಹ್ಯಾಪಿನೆಸ್’ ಶಾಲೆಯ ವಿಚಾರದಂತೆ ನೋಡುತ್ತಾರೆ.

*ದೇಶದ ಎಲ್ಲಾ ಮಕ್ಕಳಿಗೂ ಸಂಪೂರ್ಣ ಉಚಿತ ಶಿಕ್ಷಣ ಕೊಡಲಾಗುತ್ತಿದೆ. *ಅಧ್ಯಾಪಕರು ಪರೀಕ್ಷೆಗೋಸ್ಕರ ಓದಿಸುವುದಿಲ್ಲ, ಬದಲಾಗಿ ಕಲಿಕೆ ಗೋಸ್ಕರ ಮಾತ್ರ ಓದಿಸುತ್ತಾರೆ.

* ಎಲ್ಲಾ ಮಕ್ಕಳು ಸರಕಾರಿ ಶಾಲೆಗೆ ಹೋಗಬೇಕು. ಎಂದರೆ ಸಮಾನ ಶಿಕ್ಷಣ, ಅಂದರೆ ಮನೆಯ ಹತ್ತಿರವಿರುವ ನೆರೆಯ ಶಾಲೆಗೆ ಹೋಗಬೇಕು. ಇಷ್ಟೇ ಅಲ್ಲ ಇನ್ನೂ ಏನೇನೋ ವ್ಯವಸ್ಥೆ ಇದೆ, ಇದೆಲ್ಲಾ ಹೇಳುವಾಗ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ತುಂಬಾ ಬೇಸರವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಶಿಕ್ಷಣದ ವ್ಯಾಪಾರೀಕರಣವೆಂಬ ವಿಷ ವರ್ತುಲದಲ್ಲಿ ಸಿಲುಕಿರುವುದರಿಂದ ಫಿನ್ಲ್ಯಾಂಡ್‌ನ ಜನರು ಒಂದು ರೀತಿಯ ಇಡೆಯಲಿಸ್ಟಿಕ್(ಆದರ್ಶವಾದಿ) ಪ್ರಪಂಚದಲ್ಲಿ ಬದುಕುವ ಹಾಗೆ ನಮಗೆ ಕಾಣುತ್ತದೆ. ಇದೆಲ್ಲವೂ ನಡೆಯುತ್ತಿರುವುದು ನಾವು ಜೀವಿಸುವ ಇದೇ ಪ್ರಪಂಚದಲ್ಲಿ. ಫಿನ್ಲ್ಯಾಂಡ್ ಮಾತ್ರವಲ್ಲ ವಿಶ್ವದ ಬೇರೆ ಕಡೆಗಳಲ್ಲಿಯೂ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ.

ನಮ್ಮ ದೇಶವು ಅಭಿವೃದ್ಧಿ ಹೊಂದಬೇಕಿದ್ದರೆ ನಾವೆಲ್ಲರೂ, ಜಾತಿ, ಧರ್ಮ, ಲಿಂಗ, ಬಣ್ಣ ಮತ್ತು ಪಕ್ಷಭೇದ ಮರೆತು ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಒಂದು ಉತ್ತಮ ಶಿಕ್ಷಣ ವ್ಯವಸ್ಥೆಯನ್ನಾಗಿ ಮಾಡಬೇಕಾಗಿದೆ. ಪ್ರಜೆಗಳ ಉತ್ತಮ ಬಾಲ್ಯ ಮತ್ತು ಉತ್ತಮ ಶಿಕ್ಷಣವೆಂಬುವುದು ದೇಶದ ಸಂತುಷ್ಟತೆಯ ಬುನಾದಿ ಮತ್ತು ಮೊದಲ ಹೆಜ್ಜೆ ಎಂದು ಭಾವಿಸಿ ಒಂದು ಧನಾತ್ಮಕವಾದ ಬದಲಾವಣೆಗೆ ಮುನ್ನುಡಿ ಬರೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)