varthabharthi

ಸಂಪಾದಕೀಯ

ಹೊಸತೇನನ್ನೂ ಹೇಳದ ಕೇಂದ್ರ ಸಂಪುಟ

ವಾರ್ತಾ ಭಾರತಿ : 1 Jun, 2019

ಭಾರತದ 14ನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಅವರ ಜೊತೆಗೆ ಕೇಂದ್ರ ಸಂಪುಟದ 57 ಮಂದಿ ಸಚಿವರೂ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಮುಂದಿನ ಐದು ವರ್ಷ ದೇಶವನ್ನು ಎತ್ತಿ ನಿಲ್ಲಿಸಲು ಪ್ರಜೆಗಳು ನೀಡಿರುವ ಅವಕಾಶ ಎಂದು ಸ್ವತಃ ಮೋದಿಯವರೇ ಒಪ್ಪಿಕೊಂಡಿದ್ದಾರೆ. ಅವರ ಐದು ವರ್ಷಗಳು ಹೇಗಿರುತ್ತವೆ ಎನ್ನುವುದಕ್ಕೆ ಹಿಡಿವ ಕನ್ನಡಿಯಾಗಿದೆ ಅವರು ಆಯ್ಕೆ ಮಾಡಿರುವ ಸಂಪುಟ ಸಚಿವರು. ಈ ಕಾರಣದಿಂದಲೇ ಈ ಬಾರಿ ಅವರು ತಮ್ಮ ಸಂಪುಟದಲ್ಲಿ ಸೇರ್ಪಡೆಗೊಳಿಸುವ ಮುತ್ಸದ್ದಿಗಳ ಕುರಿತಂತೆ ದೇಶ ಕುತೂಹಲವನ್ನು ಹೊಂದಿದೆ ಮಾತ್ರವಲ್ಲ, ಭಾರೀ ನಿರೀಕ್ಷೆಗಳನ್ನೂ ಇಟ್ಟುಕೊಂಡಿದೆ.

ಕಳೆದ ಐದು ವರ್ಷಗಳಲ್ಲಿ ನೋಟು ನಿಷೇಧ, ಜಿಎಸ್‌ಟಿ ಜಾರಿಯಂತಹ ಮಹತ್ವದ ನಿರ್ಧಾರಗಳನ್ನು ನರೇಂದ್ರ ಮೋದಿ ಸರಕಾರ ತೆಗೆದುಕೊಂಡಿತ್ತಾದರೂ, ಮೋದಿ ನೀಡಿರುವ ‘ಅಚ್ಛೇದಿನ್’ ಭರವಸೆಗಳನ್ನು ಈಡೇರಿಸುವಲ್ಲಿ ಈ ನಿರ್ಧಾರಗಳು ಯಾವ ರೀತಿಯಲ್ಲೂ ಸಹಾಯ ಮಾಡಲಿಲ್ಲ. ನೋಟು ನಿಷೇಧದಿಂದಾಗಿ ದೇಶದೊಳಗಿರುವ ಭಾರೀ ಕಪ್ಪು ಹಣ ಬಹಿರಂಗವಾಗಬಹುದು ಎಂದು ಸರಕಾರ ನಿರೀಕ್ಷಿಸಿತ್ತು. ಆದರೆ ಯಾವುದೇ ಕಪ್ಪು ಹಣ ಬೆಳಕಿಗೆ ಬರಲಿಲ್ಲ. ಸರಿಯಾದ ಪೂರ್ವ ತಯಾರಿಯ ಕೊರತೆಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ನೋಟು ನಿಷೇಧ ತನ್ನದೇ ರೀತಿಯ ದುಷ್ಪರಿಣಾಮಗಳನ್ನು ಉಂಟು ಮಾಡಿತ್ತು. ಜಿಎಸ್‌ಟಿಯ ಯದ್ವಾ ತದ್ವಾ ತೆರಿಗೆ ಹೇರಿಕೆಯೂ ಉದ್ಯಮ ವ್ಯವಹಾರಗಳ ಮೇಲೆ ನೇರ ದಾಳಿ ನಡೆಸಿತು. ನರೇಂದ್ರ ಮೋದಿಯವರು ಮಾಡಿದ ಪ್ರಯೋಗಗಳೆಲ್ಲವೂ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಿಂದಕ್ಕೆ ಚಲಿಸುವಂತೆ ಮಾಡಿತ್ತು. ಆದರೆ ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರು ‘‘ಇದೊಂದು ಆರಂಭ ಮಾತ್ರ. ನಿಜವಾದ ಅಚ್ಛೇದಿನ್ ಜಾರಿಗೆ ಬರಬೇಕಾದರೆ ಇನ್ನೂ ಐದು ವರ್ಷ ಬೇಕು’’ ಎಂದು ಕೇಳಿಕೊಂಡರು.

ಜನರು ಆ ಮಾತಿನ ಮೇಲೆ ಅಪಾರ ಭರವಸೆಯನ್ನಿಟ್ಟು ಅವರಿಗೆ ಇನ್ನೂ ಐದು ವರ್ಷಗಳನ್ನು ನೀಡಿದ್ದಾರೆ. ಈ ಹಿಂದಿನ ಐದು ವರ್ಷ, ಭಾರತವನ್ನು ಗುಡಿಸಿ ಸ್ವಚ್ಛಗೊಳಿಸುವುದರಲ್ಲೇ ಮುಗಿಯಿತು, ಇನ್ನು ಮುಂದಿನ ಐದು ವರ್ಷಗಳಲ್ಲಿ ಮೋದಿಯವರು ದೇಶದ ಕನಸುಗಳನ್ನು ನನಸು ಮಾಡಲಿದ್ದಾರೆ ಎಂದು ಜನರು ಬಲವಾಗಿ ನಂಬಿದ್ದಾರೆ. ಈ ನಂಬಿಕೆಯನ್ನು ಹುಸಿ ಮಾಡದಂತೆ ನೋಡಿಕೊಳ್ಳಬೇಕಾದರೆ ನರೇಂದ್ರ ಮೋದಿ, ಒಂದು ಪ್ರಬುದ್ಧ ಸಂಪುಟ ಸಚಿವರ ತಂಡವನ್ನು ಹೊಂದುವುದು ಅತ್ಯಗತ್ಯ. ನರೇಂದ್ರ ಮೋದಿಯ ಸಂಪುಟದಲ್ಲಿ ಸ್ಥಾನಪಡೆದವರ ಪಟ್ಟಿಯನ್ನು ಗಮನಿಸಿದಾಗ ನಿರಾಸೆಯಾಗುತ್ತದೆ. ಕಳೆದ ಬಾರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ರಾಜನಾಥ್ ಸಿಂಗ್, ಸುಶ್ಮಾ ಸ್ವರಾಜ್, ಜೇಟ್ಲಿಯಂತಹ ನಾಯಕರು ಇದ್ದರಾದರೂ, ಎಲ್ಲ ಅಧಿಕಾರಗಳುಮೋದಿ ಕೇಂದ್ರಿತವಾಗಿತ್ತು. ಅಥವಾ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಕಾರ್ಪೊರೇಟ್ ಮತ್ತು ಆರೆಸ್ಸೆಸ್ ಸರಕಾರವನ್ನು ನಿಯಂತ್ರಿಸುತ್ತಿತ್ತು. 92ರ ದಶಕದಲ್ಲಿ ಆರ್ಥಿಕ ಉದಾರೀಕರಣ ನಡೆದಾಗ ಅದರ ಸಂಪೂರ್ಣ ಹೆಗ್ಗಳಿಕೆಯನ್ನು ಅರ್ಥ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ತನ್ನದಾಗಿಸಿಕೊಂಡಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ ನಡೆದ ಆರ್ಥಿಕ ನಿರ್ಧಾರಗಳೆಲ್ಲವೂ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ನಡೆದವು. ನೋಟು ನಿಷೇಧ, ಜಿಎಸ್‌ಟಿ ಜಾರಿ, ಆರ್‌ಬಿಐಯೊಳಗಿನ ಬದಲಾವಣೆಗಳಲ್ಲಿ ವಿತ್ತ ಸಚಿವರಾಗಿದ್ದ ಜೇಟ್ಲಿಯ ಪಾತ್ರವೇ ಇದ್ದಿರಲಿಲ್ಲ. ಹಾಗೆಯೇ ಪಾರಿಕ್ಕರ್ ಬಳಿಕ ವರ್ಷಗಳ ಕಾಲ ಈ ದೇಶಕ್ಕೆ ಅಧಿಕೃತ ರಕ್ಷಣಾ ಸಚಿವರೂ ಇದ್ದಿರಲಿಲ್ಲ. ಕೊನೆಯ ಎರಡು ವರ್ಷಗಳಲ್ಲಿ ಆ ಸ್ಥಾನವನ್ನು ನಿರ್ಮಲಾ ಸೀತಾರಾಮನ್ ನಿಭಾಯಿಸಿದರಾದರೂ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಗಡಿಯಲ್ಲಿ ನಡೆದ ಹಲವು ಘಟನೆಗಳಲ್ಲಿ ರಕ್ಷಣಾ ಸಚಿವರು ವಹಿಸಿದ ಪಾತ್ರಗಳೇನು ಎನ್ನುವುದು ಚರ್ಚೆಗೇ ಬರಲಿಲ್ಲ.

ವಿದೇಶಾಂಗ ಸಚಿವರಾಗಿ ಸುಶ್ಮಾ ಸ್ವರಾಜ್ ಪಾಸ್‌ಪೋರ್ಟ್, ವೀಸಾ ವಿಲೇವಾರಿಯಲ್ಲೇ ಮುಗಿದು ಹೋದರು. ಇದ್ದುದರಲ್ಲಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಮೆಚ್ಚುವಂತೆ ಕಾರ್ಯನಿರ್ವಹಿಸಿದರಾದರೂ, ದೇಶಾದ್ಯಂತ ವಿಸ್ತರಿಸುತ್ತಿದ್ದ ಗುಂಪು ಹತ್ಯೆ, ನಕಲಿ ಗೋರಕ್ಷಕರ ದಾಂಧಲೆಗಳಿಗೆ ಸ್ಪಂದಿಸುವಲ್ಲಿ ಅವರು ಅಸಹಾಯಕರಾಗಿದ್ದರು. ಈ ಬಾರಿ ಎಲ್ಲ ಹಿನ್ನಡೆಗಳಿಂದ ದೇಶವನ್ನು ಮೇಲೆತ್ತಲೇ ಬೇಕಾದಂತಹ ಅನಿವಾರ್ಯ ಸ್ಥಿತಿಯಲ್ಲಿ ಮೋದಿ ನೇತೃತ್ವದ ಸರಕಾರ ನಿಂತಿದೆ. ಹೀಗಿರುವಾಗ, ತಮ್ಮ ಸಂಪುಟದಲ್ಲಿ ಸಮರ್ಥ ಮುತ್ಸದ್ದಿಗಳನ್ನು ಆಯಾ ಖಾತೆಗಳಿಗೆ ಆಯ್ಕೆ ಮಾಡುವುದು ಮೋದಿಯವರ ಮೊದಲ ಹೊಣೆಗಾರಿಕೆಯಾಗಿರುತ್ತದೆ.

ಅನಿರೀಕ್ಷಿತವೆಂಬಂತೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ, ಮೋದಿಯ ಆಪ್ತ ಅಮಿತ್ ಶಾ ಸಂಪುಟ ಸೇರಿದ್ದಾರೆ ಮಾತ್ರವಲ್ಲ, ಗೃಹ ಸಚಿವರಾಗಿ ನೇಮಕಗೊಂಡಿದ್ದಾರೆ. ಸರಕಾರ ಯಾವ ದಿಕ್ಕಿಗೆ ಸಾಗುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆಯನ್ನು ಇದು ನೀಡಿದೆ. ಕಳೆದ ಅವಧಿಯಲ್ಲಿ ದೇಶಾದ್ಯಂತ ಅಸಹನೆ, ಅಸಹಿಷ್ಣುತೆ, ಗುಂಪು ಹತ್ಯೆ, ದಲಿತರ ಮೇಲೆ ದೌರ್ಜನ್ಯಗಳ ಪ್ರಕರಣ ತೀವ್ರ ಮಟ್ಟದಲ್ಲಿ ಏರಿಕೆ ಕಂಡಿತ್ತು. ಇವುಗಳನ್ನು ನಿಭಾಯಿಸಲು ರಾಜಧರ್ಮ ಅರಿತ, ಸಂವಿಧಾನ, ಕಾನೂನಿಗೆ ನಂಬಿಕಸ್ತನಾಗಿರುವ ಮುತ್ಸದ್ದಿಯೊಬ್ಬನ ಅಗತ್ಯ ಮೋದಿ ಸಂಪುಟಕ್ಕಿತ್ತು. ವಿಷಾದನೀಯವೆಂದರೆ, ನರೇಂದ್ರ ಮೋದಿಯವರು ಸಂವಿಧಾನಕ್ಕೆ ನಿಷ್ಠನಾಗಿರುವ ನಾಯಕನ ಬದಲಿಗೆ, ತನಗೆ ತೀರಾ ನಂಬಿಕಸ್ಥನಾಗಿರುವ ಅಮಿತ್ ಶಾ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ದೇಶಾದ್ಯಂತ ಬಿಜೆಪಿಯನ್ನು ಕಟ್ಟುವುದು ಮತ್ತು ದೇಶವನ್ನು ಕಟ್ಟುವುದು ಒಂದೇ ಅಲ್ಲ. ಬಿಜೆಪಿಯನ್ನು ಕಟ್ಟುವಲ್ಲಿ ಅಮಿತ್ ಶಾ ಈ ದೇಶದ ಕಾನೂನನ್ನು ದುರ್ಬಳಕೆ ಮಾಡಿಕೊಂಡ ಹಲವಾರು ಉದಾಹರಣೆಗಳಿವೆ.

ಜನರ ನಡುವೆ ದ್ವೇಷವನ್ನು ಬಿತ್ತಿ, ಪಕ್ಷವನ್ನು ಕಟ್ಟಿದ ಹೆಗ್ಗಳಿಕೆ ಅವರದು. ಈ ದೇಶದ ಅಭಿವೃದ್ಧಿಯ ಕುರಿತಂತೆ, ಕಾನೂನು ಸುವ್ಯವಸ್ಥೆಯ ಕುರಿತಂತೆ ಅವರಲ್ಲಿ ಯಾವ ಬದ್ಧತೆಯನ್ನೂ ಜನರು ಈವರೆಗೆ ಕಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಒಂದು ರಾಜ್ಯದ ಗೃಹ ಸಚಿವರಾಗಿ ಅವರು ವಿಫಲರಾದವರು. ಗುಜರಾತ್ ಹತ್ಯಾಕಾಂಡದಲ್ಲಿ ಅವರ ಪಾತ್ರವಿದೆ ಎಂದು ಮಾಧ್ಯಮಗಳು ಈ ಹಿಂದೆ ಹಲವು ಬಾರಿ ಆರೋಪಗಳನ್ನು ಮಾಡಿವೆ. ಈ ಹಿನ್ನೆಲೆಯಲ್ಲಿ ತನಿಖೆಗಳೂ ನಡೆದಿವೆ. ನಕಲಿ ಎನ್‌ಕೌಂಟರ್‌ಗಳ ಹಿಂದೆ ಅಮಿತ್ ಶಾ ಕೈವಾಡ ಕುರಿತಂತೆ ವ್ಯಾಪಕ ಆರೋಪಗಳು ಈ ಹಿಂದೆ ಕೇಳಿ ಬಂದಿವೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಇಷ್ಟೆಲ್ಲ ಕಳಂಕಗಳನ್ನು ಹೊಂದಿರುವ, ಒಂದು ರಾಜ್ಯದ ಗೃಹ ಸಚಿವರಾಗಿ ವಿಫಲರಾಗಿರುವ ಅಮಿತ್ ಶಾ ಅವರು ಈ ದೇಶದ ಗೃಹ ಸಚಿವರಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಾರೆ ಎನ್ನುವುದನ್ನು ನಂಬುವುದು ಕಷ್ಟ. ಉಳಿದಂತೆ ಈ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುವ ಖಾತೆ ವಿತ್ತ ಸಚಿವರದು.

ಈ ಹಿಂದಿನ ಆರ್ಥಿಕ ಯಡವಟ್ಟುಗಳನ್ನೆಲ್ಲ ಸರಿಪಡಿಸುತ್ತಾ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಚಾಕಚಕ್ಯತೆ ಇವರಿಗಿರಬೇಕು. ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರ ಹೆಗಲಿಗೆ ಈ ಜವಾಬ್ದಾರಿ ಬಿದ್ದಿದೆ. ಆದರೆ ಅದಕ್ಕೆ ಬೇಕಾದ ಹಿನ್ನೆಲೆ ಸೀತಾರಾಮನ್ ಅವರ ಬಳಿ ಇಲ್ಲ ಎನ್ನುವುದು ಅಷ್ಟೇ ಸ್ಪಷ್ಟ. ರಕ್ಷಣಾ ಇಲಾಖೆಯನ್ನು ರಾಜನಾಥ್ ಸಿಂಗ್ ಅವರಿಗೆ ವಹಿಸಲಾಗಿದೆ. ಪಾಕಿಸ್ತಾನ-ಭಾರತ, ಚೀನಾ-ಭಾರತ ನಡುವಿನ ಸಂಬಂಧಗಳನ್ನು ಉಳಿಸಿ ಬೆಳೆಸುವಲ್ಲಿ ಸಿಂಗ್ ತಮ್ಮ ಅನುಭವವನ್ನು ಬಳಸಿಕೊಳ್ಳಬಹುದೇ? ಅಥವಾ ಅವರೂ ಈ ಹಿಂದಿನಂತೆ ಬರೇ ಸೂತ್ರದ ಗೊಂಬೆಯಾಗಿ ಕಾರ್ಯನಿರ್ವಹಿಸಲಿದ್ದಾರೋ ಕಾದು ನೋಡಬೇಕು. ಒಟ್ಟಿನಲ್ಲಿ ಈ ದೇಶದ ಎಲ್ಲ ಖಾತೆಗಳು ಮತ್ತೆ ಮೋದಿಯ ಜೇಬಿನಲ್ಲೇ ಸೇರಿಕೊಂಡಿವೆ. ವಿವಿಧ ಸಚಿವರ ಹೆಸರಲ್ಲಿ ಮತ್ತೆ ಮೋದಿಯೇ ಅದನ್ನು ನಿರ್ವಹಿಸಲಿದ್ದಾರೆ ಮತ್ತು ಮೋದಿಯನ್ನು ಈ ಹಿಂದಿನಂತೆ, ಕಾರ್ಪೊರೇಟ್ ಮತ್ತು ಆರೆಸ್ಸೆಸ್ ಶಕ್ತಿಗಳೇ ಮುನ್ನಡೆಸಲಿವೆ ಎನ್ನುವುದನ್ನು ಸದ್ಯದ ನೂತನ ಸಂಪುಟ ದೇಶಕ್ಕೆ ಸೂಚನೆ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)