varthabharthi

ವಿಶೇಷ-ವರದಿಗಳು

ಗಾಂಧಿ ಕಗ್ಗೊಲೆ: ಕಾರಣ - ಪರಿಣಾಮ

ಆ ಹುಚ್ಚು ಕನಸು ಕೈಗೂಡುವಂತಹದ್ದೇ...?

ವಾರ್ತಾ ಭಾರತಿ : 1 Jun, 2019
ಕೋ. ಚೆನ್ನಬಸಪ್ಪ

ಭಾಗ-35

ಭಾರತಾಂತರ್ಗತ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಹೊರಗೆ ಹೋದ ಪಂಜಾಬ್, ಸಿಂದ್..ಪ್ರಾಂತಗಳನ್ನು ಮರಳಿ ಸ್ವಾಧೀನಪಡಿಸಿಕೊಂಡು ದಕ್ಕಿಸಿಕೊಳ್ಳಲಾದೀತೇ? ಪಾಕಿಸ್ತಾನವನ್ನು -ಅದರ ಯಾವುದೇ ಭಾಗವನ್ನು ಭೂಪಟದಿಂದ ಅಳಿಸುವುದು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಸಂಘಪರಿವಾರ ತಿಳಿಯಬೇಕು. ಅಖಂಡ ಭಾರತದ ಪುನರ್ನಿರ್ಮಾಣದ ಹುಚ್ಚು ಕನಸನ್ನು ಕೈ ಬಿಡಬೇಕು.

 ಮಾತೃಭೂಮಿ ‘ಭರತಮಾತೆ’ಯನ್ನು ತುಂಡರಿಸುವುದಕ್ಕೆ ಗಾಂಧೀಜಿಯೇ ಕಾರಣಕರ್ತರೆಂದು ಬಗೆದಿದ್ದ ಗೋಡ್ಸೆ, ಅವರನ್ನು ಕೊಲ್ಲುವುದೇ ‘ದೇಶಭಕ್ತ’ನ ಶ್ರೇಷ್ಠ ಕರ್ತವ್ಯವೆಂದು ಅವರನ್ನು ಗುಂಡಿಕ್ಕಿ ಕೊಂದ. ಅದಕ್ಕಾಗಿ ಅವನು ಪ್ರಾಣಾರ್ಪಣೆ ಮಾಡಿದ. ಅಂದ ಮೇಲೆ ಮುಂದೆ ಮಾಡಬೇಕಾದ ಕರ್ತವ್ಯ ಏನಿತ್ತು? ಗಾಂಧಿ ಕೊಲೆಯಿಂದಲೇ ದೇಶಭಕ್ತರ ಕರ್ತವ್ಯ ಮುಗಿಯ ಲಿಲ್ಲ. ಅವನ ದೃಷ್ಟಿಯಲ್ಲಿ ತುಂಡಾದ ದೇಶವನ್ನು ಒಂದುಗೂಡಿಸುವ ಪರಮ ಪವಿತ್ರ ಕರ್ತವ್ಯ ಉಳಿದಿತ್ತು.ಅದನ್ನು ನೆರವೇರಿಸುವವರಾರು? ಸಹಜವಾಗಿ ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಪಣತೊಟ್ಟಿದ್ದ ಅವನ ರಾಜಕೀಯ ಪಕ್ಷದ ನೇತಾರರು ವಿಭಜಿಸಿದ್ದ ದೇಶವನ್ನು ಒಂದುಗೂಡಿಸಲೇಬೇಕು. ಒಂದಲ್ಲ ಒಂದು ದಿನ ಒಂದಾಗಿಯೇ ಆಗುತ್ತದೆ ಎಂಬ ಅವನ ನಂಬಿಕೆ ಎಷ್ಟು ದೃಢವಾಗಿತ್ತೆಂದರೆ, ಈ ಹಿಂದೆ ನಾವು ಗಮನಿಸಿರುವಂತೆ ಪುನಃ ನಿರ್ಮಾಣವಾದ ಅಖಂಡ ಭಾರತದಲ್ಲಿ ಹರಿಯುವ ನದಿಯ ನೀರಿನಲ್ಲಿಯೇ ತನ್ನ ಚಿತಾಭಸ್ಮವನ್ನು ವಿಸರ್ಜಿಸಬೇಕೆಂದು ಮರಣಪತ್ರವನ್ನು ಬರೆದಿಟ್ಟಿದ್ದ! ಅಖಂಡ ಭಾರತ ನಿರ್ಮಾಣ ಅಂದಿನ ಸರಸಂಘ ಚಾಲಕರ ಕನಸು. ಇಂದಿಗೂ ಸಂಘಪರಿವಾರದ ರಾಜಕೀಯ ಆದರ್ಶ. ಅವರ ಈ ನಂಬಿಕೆಗೆ ಶ್ರೀ ಅರವಿಂದರು 1947ರ ಆಗಸ್ಟ್ 15 ರಂದು ಕೊಟ್ಟ ಸ್ವಾತಂತ್ರ ಸಂದೇಶದಲ್ಲಿ ಹೇಳಿದ: (‘‘The partition of the country must go,.. it is hoped by a slackening of tension, by a progressive understanding of the need for peace and concord,..in this way unity may come about under whatever form... but by whatever means the division must and will go.."The partition of the country must go.. by whatever means the division must and will go..") ’’ ಈ ಸುದೀರ್ಘ ವಾಕ್ಯ ಸರಣಿಯಲ್ಲಿ ಬರುವ: ಎಂಬ ಮಾತುಗಳನ್ನು ಸಂಘಪರಿವಾರ ಮತ್ತು ಕೆಲವು ಶ್ರೀ ಅರವಿಂದರ ಶಿಷ್ಯರ ಸೋಗು ಧರಿಸಿದ ಪರಿವಾರದ ಹಿಂಬಾಲಕರು ಹಿಡಿದುಕೊಂಡು ಗೋಡ್ಸೆ ಕನಸಿನ ‘ಅಖಂಡ ಭಾರತ’ ಪುನರ್ನಿರ್ಮಾಣಕ್ಕೆ ಹವಣಿಸುತ್ತಿದ್ದಾರೆ.ಆದರೆ ಈ ವಾಕ್ಯದಲ್ಲಿ ಬರುವ ("By progressive understanding of the need for peace and concord") ಎಂಬ ಮಾತುಗಳನ್ನು ಮರೆಯುತ್ತಾರೆ. ಅಖಂಡ ಭಾರತದ ಹೆಸರಿನಲ್ಲಿ ಉಳಿದಿರುವ ಈ ಭಾರತವನ್ನು ದಕ್ಷ ಯಜ್ಞನ ಅಗ್ನಿಕುಂಡಕ್ಕೆ ತಳ್ಳುತ್ತಿದ್ದಾರೆ. ಇಂದಿಗೂ ನಡೆಯುತ್ತಿರುವ ಈ ಘೋರ ಪ್ರಯತ್ನ ಸಾವರ್ಕರ್ ಬಿತ್ತಿದ ಬೀಜ ಎಂಬುದು ಈ ದೇಶದ ದುರಂತ. ಬಾಬರಿ ಮಸೀದಿ ಧ್ವಂಸದಲ್ಲಿ ಪ್ರಕಟವಾದ ದುರ್ಘಟನೆ!!
 ಸಾವರ್ಕರ್ ಪ್ರಣೀತ, ಡಾ.ಹೆಡ್ಗೆವಾರ್ ಮತ್ತು ಗುರೂಜಿ ಗೋಳ್ವಾಲ್ಕರ್ ಪೋಷಿತ ಈ ಅಖಂಡ ಭಾರತ ಕಲ್ಪನೆಯ ತರ್ಕಹೀನತೆಯನ್ನು ಪರ್ಯಾಲೋಚಿಸಬೇಕು. ಒಂದು ರಾಷ್ಟ್ರವಾಗಲು ಆ ದೇಶ ಅಥವಾ ಆ ಪ್ರದೇಶದಲ್ಲಿ ವಾಸಿಸುವ ಜನರೆಲ್ಲರ ಧರ್ಮ ಒಂದೇ ಆಗಿರಬೇಕು ಎಂಬುದು ಹಿಂದೂರಾಷ್ಟ್ರದ ಮೂಲತತ್ತ್ವ. ಅವರ ‘ಹಿಂದೂ ಧರ್ಮ’ ಉಪನಿಷತ್, ಗೀತೆ, ಧರ್ಮ ಸೂತ್ರಗಳ ಜೀವ-ಜಗತ್ತು-ಈಶ್ವರ ಇವುಗಳ ಪರಸ್ಪರ ಸಂಬಂಧ ಸೃಷ್ಟಿ ರಹಸ್ಯ ಇತ್ಯಾದಿ ಗಾಢ ವಿಷಯಗಳನ್ನು ಕುರಿತಾದದ್ದಲ್ಲ. ಅವರ ಪ್ರಕಾರ ಹಿಂದುತ್ವ ರಾಷ್ಟ್ರದ ಆಧಾರವಾಗಬೇಕು. ಸಾಧಾರಣವಾಗಿ ಪಾಶ್ಚಾತ್ಯ ರಾಜ್ಯಶಾಸ್ತ್ರ ನಿಪುಣರು ಹೇಳುವಂತೆ ಒಂದು ಜನಾಂಗದ ಸಾಮಾನ್ಯ ಇತಿಹಾಸ, ಸಮಾನ ಭಾಷೆ, ಸಮಾನ ಆಶೋತ್ತರಗಳು ಅವರ ಸಮಾನ ನಂಬುಗೆಗಳು, ನಡವಳಿಕೆ, ನಡೆನುಡಿ ಒಂದು ರಾಷ್ಟ್ರದ ಲಕ್ಷಣಗಳು. ಸಮಾನ ಮತಧರ್ಮಗಳು ಮುಖ್ಯವಲ್ಲ. ಅಂಥ ಲಕ್ಷಣಗಳುಳ್ಳ ಜನಾಂಗ ಒಂದು ನಿರ್ದಿಷ್ಟ ದೇಶ, ಪ್ರದೇಶದಲ್ಲಿ ವಾಸಿಸುವ ಜನರು (Nation state) ಜನಾಂಗೀಯ ರಾಷ್ಟ್ರಗಳು ಈಗ ಕ್ರಮೇಣ ಒಂದು ಕಡೆ ಕಡಿಮೆಯಾಗುತ್ತಿವೆ! ಇನ್ನೊಂದು ಕಡೆ ಅದೇ ಕಾಲದಲ್ಲಿ ಮತ್ತೆ ಮತ್ತೆ ತಲೆಯೆತ್ತುತ್ತಿವೆ!! ಉದಾಹರಣೆಗೆ ಹಿಂದೆ ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ, ಗ್ರೀಸ್ ಮುಂತಾದ ರಾಷ್ಟ್ರಗಳು ಪ್ರಮುಖವಾಗಿ ತಾವಾಡುವ ಭಾಷೆಗಳ ಆಧಾರದ ಮೇಲೆ ನಿರ್ಮಾಣವಾಗಿದ್ದವು. ಅವೀಗ ಯುರೋಪಿಯನ್ ಯೂನಿಯನ್ (EU) ಎಂಬ ಸಡಿಲವಾದ ಒಕ್ಕೂಟವಾಗಿದೆ.ಅವರವರ ದೇಶದಲ್ಲಿ ಅವರು ಸರ್ವಸ್ವತಂತ್ರ. ಆದರೆ ಕೆಲವು ವಿಚಾರಗಳಲ್ಲಿ-ಮುಖ್ಯವಾಗಿ ವಾಣಿಜ್ಯ ವ್ಯವಹಾರದಲ್ಲಿ ಅವೆಲ್ಲ ಒಂದು. ಹೀಗೆ ಈ ವಿಚಾರದಲ್ಲಿ ಅವರ ದೇಶಗಳ ಗಡಿ ಅಳಿಸಿದೆ.ಆದರೆ ಅದೇ ಕಾಲಕ್ಕೆ ಈಗ ಯುನೈಟೆಡ್ ಕಿಂಗ್‌ಡಮ್ ಎಂದು ಕರೆಯುವ ಪ್ರದೇಶದಲ್ಲಿ ಇಂಗ್ಲೆಂಡ್, ಸ್ಕಾಟ್‌ಲೆಂಡ್, ಐರ್ಲೆಂಡ್ ಮತ್ತು ವೆಲ್ಷ್ ಎಂಬ ನಾಲ್ಕು ರಾಜ್ಯಗಳೂ ತಮ್ಮ ತಮ್ಮ ಗಡಿಯೊಳಗೆ ಸ್ವತಂತ್ರವಾಗಬೇಕೆಂಬ ವಾಂಛೆ ಉತ್ಕಟವಾಗುತ್ತಿದೆ! ನಮ್ಮ ದೇಶದಲ್ಲಿಯೆ, ಭಾರತ ಒಕ್ಕೂಟದಲ್ಲಿದ್ದುಕೊಂಡೇ ತಮಗೆ ಸ್ವಾಯತ್ತತೆ (Autonomy) ಬೇಕೆಂದು ಹಠ ಹಿಡಿದಿರುವ ಕಾಶ್ಮೀರದಂತೆ!! ಇಡೀ ಜಗತ್ತೆಲ್ಲವೂ ಒಂದು ಭೌಗೋಳಿಕ ಗ್ರಾಮ(Global village) ಆಗುತ್ತಲಿದೆ. ಅಂಥ ಈ ಜಾಗತಿಕ ಸಂದರ್ಭದಲ್ಲಿ ಹಿಂದೂ ಧರ್ಮಾವಲಂಬಿಗಳ ‘ಹಿಂದೂ ರಾಷ್ಟ್ರ’ ನಿರ್ಮಾಣದ ಕಲ್ಪನೆಯೇ ಅಪ್ರಸ್ತುತ ಎನಿಸುತ್ತದೆ.
ಇನ್ನೊಂದು ನಿಟ್ಟಿನಿಂದ ಸಾವರ್ಕರ್ ಪ್ರಣೀತ ಹಿಂದೂ ರಾಷ್ಟ್ರಕಲ್ಪನೆಯ ತರ್ಕಹೀನತೆಯನ್ನು ಗಮನಿಸಬಹುದು.ಒಂದು ದೇಶದ ಜನರ ಮತಧರ್ಮ ಒಂದೇ ಆಗಿರಬೇಕು ಎಂಬುದು ತರ್ಕಬದ್ಧವೆನಿಸಿದರೆ, ಆ ತತ್ತ್ವವನ್ನು ಅವಲಂಬಿಸಿಯೆ ನಿರ್ಮಾಣವಾದ ಪಾಕಿಸ್ತಾನವನ್ನು ಮತ್ತೆ ಭಾರತದಲ್ಲಿ ಅಂತರ್ಗತ ಮಾಡುವುದು ತರ್ಕಬದ್ಧವೆ? ಈಗ ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರ ಮತಧರ್ಮದ ಆಧಾರದ ಮೇಲೆ ಅದು ಪ್ರತ್ಯೇಕ ರಾಷ್ಟ್ರವೇ ಆಗಬೇಕಾಗುತ್ತದೆ. ಆದರೆ ಸಂಘಪರಿವಾರ ಅದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಅದಕ್ಕೆ ವಿಶೇಷ ಸ್ಥಾನವನ್ನು ಕೊಟ್ಟಿರುವ ನಮ್ಮ ಸಂವಿಧಾನದ 371ನೇ ಆರ್ಟಿಕಲ್ ಅನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತದೆ. ಕಾಶ್ಮೀರ ಬಹುಸಂಖ್ಯಾತ ಮುಸ್ಲಿಮರು ಇಸ್ಲಾಂ ಧರ್ಮಾನುಯಾಯಿಗಳಾದರೂ ಅದು ಭಾರತದಲ್ಲಿ ವಿಲೀನವಾಗಬೇಕೆಂದು ಷೇಕ್ ಅಬ್ದುಲ್ಲಾರ ಅಂದಿನ ಕಾಶ್ಮೀರ ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಮತಧರ್ಮಾಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬಾರದು ಎಂಬ ಉನ್ನತ ಧ್ಯೇಯಸಿದ್ಧಿಗಾಗಿ.ಅಲ್ಲಿಂದ ಇಲ್ಲಿಯವರೆಗೆ ಅರುವತ್ತು ವರ್ಷಗಳಿಂದ ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳುವುದಕ್ಕಾಗಿ ಪಾಕಿಸ್ತಾನದೊಡನೆ ಎರಡು ಘೋರ ಯುದ್ಧಗಳಲ್ಲಿ ತೊಡಗಿದ್ದುದು. ಆ ರಾಜ್ಯವನ್ನು ಭಾರತ ಬಿಟ್ಟುಕೊಡದಿರುವುದು ಭೂ ಆಕ್ರಮಣದಾಹದಿಂದಲ್ಲ.ಅಲ್ಲಿಯ ಜನರ ಜಾತ್ಯತೀತ ರಾಜ್ಯವಾಗಿರಬೇಕೆಂಬ ವಾಂಛೆಯಿಂದ.ಅವರ ಆಕಾಂಕ್ಷೆ ನಮ್ಮ ಸಂವಿಧಾನದ ಮೂಲಭೂತ ಸಿದ್ಧಾಂತದ ಔನ್ನತ್ಯವನ್ನು ಎತ್ತಿಹಿಡಿಯಲಿಕ್ಕಾಗಿ. ಅದಕ್ಕಾಗಿ ಎಷ್ಟು ಜನ ಯೋಧರು ಪ್ರಾಣತೆತ್ತರು! ಎಷ್ಟು ಲಕ್ಷ ಕೋಟಿ ಹಣ ವ್ಯಯಿಸಿದರು! ಕಾಶ್ಮೀರದ ಪ್ರಜೆಗಳೇ ಒಪ್ಪಿ ಭಾರತ ಒಕ್ಕೂಟದಲ್ಲಿ ಉಳಿದಿದ್ದರೂ ಅದನ್ನು ರಕ್ಷಿಸಲು, ಉಳಿಸಿಕೊಳ್ಳಲು ಎಷ್ಟು ಶ್ರಮಪಡುತ್ತಿದ್ದೇವೆ!! ಹೀಗೆ ಭಾರತಾಂತರ್ಗತ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಹೊರಗೆ ಹೋದ ಪಂಜಾಬ್, ಸಿಂದ್..ಪ್ರಾಂತಗಳನ್ನು ಮರಳಿ ಸ್ವಾಧೀನಪಡಿಸಿಕೊಂಡು ದಕ್ಕಿಸಿಕೊಳ್ಳಲಾದೀತೇ? ಪಾಕಿಸ್ತಾನವನ್ನು -ಅದರ ಯಾವುದೇ ಭಾಗವನ್ನು ಭೂಪಟದಿಂದ ಅಳಿಸುವುದು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಸಂಘಪರಿವಾರ ತಿಳಿಯಬೇಕು. ಅಖಂಡ ಭಾರತದ ಪುನರ್ನಿರ್ಮಾಣದ ಹುಚ್ಚು ಕನಸನ್ನು ಕೈ ಬಿಡಬೇಕು.
ಸಾವರ್ಕರ್ ಸಿದ್ಧಾಂತ- ಮತಧರ್ಮಾವಲಂಬನೆಯನ್ನು ಹಿಂದೂ ರಾಷ್ಟ್ರ ನಿರ್ಮಾಣದಂತೆ ಅಖಂಡ ಭಾರತವನ್ನು ಕಟ್ಟಬೇಕೆಂಬುದು ಒಂದು ವೇಳೆ ಯಶಸ್ವಿಯಾದರೆ, ಅಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲಿಗೆ ಹೋಗಬೇಕು? ಅದಕ್ಕೆ ಸಂಘಪರಿವಾರದ ಉತ್ತರ-ಪಾಕಿಸ್ತಾನಕ್ಕೆ ಹೋಗಲಿ! ಅಲ್ಲಿಗೆ ಕಳಿಸಲಾಗದಿದ್ದರೆ ಹಿಟ್ಲರ್ ಜ್ಯೂ ಜನಾಂಗವನ್ನು ವಿಷವಾಯು ಗೃಹಗಳಲ್ಲಿ ಕೂಡಿ ನರಮಾರಣಹೋಮ ಮಾಡಿದಂತೆ ಮಾಡಬೇಕು! ಹಾಗೆ ಇಡೀ ಭಾರತ ದೇಶವನ್ನೇ ಕೋಮುದ್ವೇಷದ ವಿಷವಾಯುವಿನಿಂದ ತುಂಬಬೇಕು! ಆದ್ದರಿಂದಲೇ ಸಂಘಪರಿವಾರದ ಸಂಸ್ಥಾಪಕ ಗುರೂಜಿ ಹಿಟ್ಲರ್ ನಮಗೆ ಆದರ್ಶ ಎಂಬುದಾಗಿ ಮಾರ್ಗದರ್ಶನ ಮಾಡಿದರು! ಆ ಆದರ್ಶ ಸಿದ್ಧಿಗಾಗಿ ಮುಂಬೈಯಲ್ಲಿ ಶಿವಸೇನೆ, ಗುಜರಾತಿನಲ್ಲಿ ಬಿಜೆಪಿ ಕಟಿಬದ್ಧವಾಗಿವೆ! ಸಂಘಪರಿವಾರದ ಈ ತರ್ಕವನ್ನು ಅನುಸರಿಸಿಯೇ ಕಾಶ್ಮೀರದ ಪಂಡಿತರನ್ನು ಅಲ್ಲಿಂದ ಮುಸ್ಲಿಂ ಉಗ್ರಗಾಮಿಗಳು ಹೊರಗಟ್ಟಿದರು.
ಹೀಗೆ ಕೋಮುದ್ವೇಷ, ವೈರ, ಪ್ರತೀಕಾರ ಇಡೀ ದೇಶವನ್ನು ಆವರಿಸಬೇಕೇ? ಸಾವರ್ಕರ್‌ರ ಸಿದ್ಧಾಂತದ ಆತ್ಯಂತಿಕ ಪರಿಣಾಮ ಅದೇ ಆಗುವುದು. ವೈರ ವೈರದಿಂದ ಕೊನೆಯಾಗದು. ಪ್ರೇಮವೇ ವೈರವನ್ನು ಗೆಲ್ಲುವುದು. ಈ ಮಾತನ್ನು ಬುದ್ಧ ಘೋಷಿಸಿದ. ಅದು ಎಂದೆಂದಿಗೂ ಸತ್ಯ ಎಂದು ಜಗತ್ತಿನ ಇತಿಹಾಸ ಸಾರುತ್ತಿದೆ.ಅದೇ ಸತ್ಯವನ್ನು ಗಾಂಧೀಜಿ ಸಾರಿದ್ದು. ಆ ಸತ್ಯವಾಣಿಯನ್ನು ಸಾಯಿಸಲಾರದೆ ಅವರನ್ನೇ ಸಾಯಿಸಿದರು. ಅವರ ಕೊಲೆಗೆ ಬೇಕಾಗಿದ್ದ ದ್ವೇಷದ ಸನ್ನಿವೇಶವನ್ನು ಸಾವರ್ಕರ್, ಅವರ ಶಿಷ್ಯವರ್ಗ ನಿರ್ಮಾಣ ಮಾಡಿದರು. ಹೀಗೆ ಗಾಂಧೀಜಿ ಹತ್ಯೆಗೆ ಕಾರಣರಾದರು.

(ಬುಧವಾರದ ಸಂಚಿಕೆಗೆ ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)