varthabharthi


ವಿಶೇಷ-ವರದಿಗಳು

ಕಾರು ವಿಮೆ ಖರೀದಿ: ಆನ್‌ಲೈನ್ ಮತು ಆಫ್‌ಲೈನ್ ಪದ್ಧತಿಯ ಈ ಪ್ರಮುಖ ವ್ಯತ್ಯಾಸಗಳು ನಿಮಗೆ ತಿಳಿದಿರಲಿ

ವಾರ್ತಾ ಭಾರತಿ : 1 Jun, 2019

ಈಗ ಸರ್ವ ಆನ್‌ಲೈನ್‌ಮಯಂ ಆಗಿದೆ. ಯುವಪೀಳಿಗೆ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವುದನ್ನೇ ಹೆಚ್ಚು ಇಷ್ಟಪಡುತ್ತಿದೆ. ಬ್ಯಾಂಕಿಂಗ್ ವ್ಯವಹಾರ,ಶೇರು ವ್ಯವಹಾರ,ಶಾಪಿಂಗ್‌ನಿಂದ ಹಿಡಿದು ಮಕ್ಕಳಿಗೆ ಟ್ಯೂಷನ್ ಸಹ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಈ ಆನ್‌ಲೈನ್ ಕ್ರಾಂತಿಯ ಅತ್ಯಂತ ಹೆಚ್ಚಿನ ಲಾಭ ಪಡೆಯುತ್ತಿರುವವರು ಎಂದರೆ ಗ್ರಾಹಕರು.

ಇದಕ್ಕೆ ವಿಮಾ ಉದ್ಯಮವೂ ಹೊರತಾಗಿಲ್ಲ. ವಾಹನಗಳ ಮಾಲಿಕರು ತಮಗೆ ಇಷ್ಟವಿರಲಿ,ಇಲ್ಲದಿರಲಿ. ತಮ್ಮ ವಾಹನಗಳಿಗೆ ವಿಮೆ ಹೊಂದಿರುವುದು ಕಡ್ಡಾಯವಾಗಿದೆ. ಏಜೆಂಟ್‌ರ ಬಳಿ ಅಥವಾ ವಿಮಾ ಕಂಪನಿಗಳ ಕಚೇರಿಗಳಿಗೆ ಹೋಗಿ ವಿಮೆ ಮಾಡಿಸುವ ದಿನಗಳು ಈಗ ಕಡಿಮೆಯಾಗುತ್ತಿವೆ. ಎಲ್ಲವೂ ಆನ್‌ಲೈನ್ ಆಗಿರುವುದರಿಂದ ವಾಹನ ವಿಮೆ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಿವೆ. ಆಫ್‌ಲೈನ್(ಅಂದರೆ ಖುದ್ದಾಗಿ ಕಚೇರಿಗಳಿಗೆ ತೆರಳಿ ಅಥವಾ ಏಜಂಟರ ಮೂಲಕ) ಮತ್ತು ಆನ್‌ಲೈನ್ ವಾಹನ ವಿಮೆಯ ನಡುವಿನ ಐದು ಪ್ರಮುಖ ವ್ಯತ್ಯಾಸಗಳ ಕುರಿತು ಮಾಹಿತಿಯಿಲ್ಲಿದೆ.......

ದಾಖಲೆಗಳ ತಲೆಬಿಸಿಯಿಲ್ಲ

ಉದ್ದುದ್ದ ಫಾರ್ಮ್‌ಗಳನ್ನು ತುಂಬುವ ಕೆಲಸ ಒಂದು ದುಃಸ್ವಪ್ನವೇ ಸರಿ. ಆಫ್‌ಲೈನ್‌ನಲ್ಲಿ ವಾಹನ ವಿಮೆಯನ್ನು ಖರೀದಿಸುವಾಗ ವಿವರವಾದ ಫಾರ್ಮ್‌ಗಳನ್ನು ತುಂಬಬೇಕಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಏಜೆಂಟರೇ ಆ ಕೆಲಸವನ್ನು ಮಾಡುತ್ತಾರೆ ನಿಜ,ಆದರೆ ಆನ್‌ಲೈನ್ ಪದ್ಧತಿಯಲ್ಲಿ ಈ ತಲೆನೋವು ಇಲ್ಲ. ಆನ್‌ಲೈನ್‌ನಲ್ಲಿಯೂ ಫಾರ್ಮ್ ಇರುತ್ತದೆ,ಆದರೆ ಕೇವಲ ಪ್ರಾಥಮಿಕ ವಿವರಗಳನ್ನು ತುಂಬಿದರೆ ಸಾಕು.

ಸಮಯದ ಉಳಿತಾಯ

ಸಮಯವೇ ಹಣವಾಗಿರುವ ದುನಿಯಾದಲ್ಲಿಂದು ನಾವು ಬದುಕುತ್ತಿದ್ದೇವೆ ಮತ್ತು ಸಮಯವನ್ನು ಉಳಿಸಿದರೆ ಹಣವನ್ನು ಉಳಿಸಿದಂತೆಯೇ. ಆನ್‌ಲೈನ್‌ನಲ್ಲಿ ವಾಹನ ವಿಮೆ ಪಾಲಿಸಿಯ ಖರೀದಿ ಪ್ರಕ್ರಿಯೆಯನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು,ಅಷ್ಟೇ ಅಲ್ಲ,ನಿಮ್ಮ ಕಾರಿಗೆ ವಿಮೆ ಪಾಲಿಸಿಯನ್ನು ನೀವು ಮಧ್ಯರಾತ್ರಿಯಲ್ಲಿಯೂ ಖರೀದಿಸಬಹುದು.ಇಲ್ಲಿ ಯಾವುದೇ ಕಾಲಮಿತಿಯಿಲ್ಲ.

ಆಫ್‌ಲೈನ್ ಪದ್ಧತಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತದೆ. ನೀವು ಪಾಲಿಸಿ ಖರೀದಿಗಾಗಿ ವಿಮೆ ಕಂಪನಿಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ನೀವು ಏಜೆಂಟ್ ನೆರವು ಪಡೆದರೂ ಆತ ಪೂರ್ವ ನಿಗದಿತ ಸಮಯಕ್ಕೆ ನಿಮ್ಮನ್ನು ಭೇಟಿಯಾಗುತ್ತಾನೆ ಮತ್ತು ಅನಂತರವೇ ಖರೀದಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ.

ಅಗ್ಗದ ದರಗಳು

ಆಫ್‌ಲೈನ್ ವಿಮೆ ಮಾರಾಟಕ್ಕೆ ಕಚೇರಿಗಳು,ಸಿಬ್ಬಂದಿ ಮತ್ತು ಈ ವ್ಯವಸ್ಥೆ ನಿರಂತರವಾಗಿರಲು ಸಂಪನ್ಮೂಲಗಳು ಅಗತ್ಯವಾಗುತ್ತವೆ. ಆದರೆ ಆನ್‌ಲೈನ್ ವಿಮೆಯಲ್ಲಿ ಡಿಜಿಟಲ್ ಇನ್ಶೂರರ್‌ಗಳು ಯಾವುದೇ ಕಚೇರಿಯನ್ನು ಹೊಂದಿರುವುದಿಲ್ಲ,ಮಾನವ ಶಕ್ತಿಯ ಬಳಕೆಯೂ ಕಡಿಮೆ. ಅಂದರೆ ಅವರ ಕಾರ್ಯಾಚರಣೆ ವೆಚ್ಚ ತುಂಬ ಕಡಿಮೆಯಾಗಿರುತ್ತದೆ. ಆನ್‌ಲೈನ್ ವಿಮೆ ಪಾಲಿಸಿಗಳು ಅಗ್ಗವಾಗಿರಲು ಇದು ಪ್ರಮುಖ ಕಾರಣವಾಗಿದೆ. ಅಂದ ಹಾಗೆ ದರಗಳು ಅಗ್ಗವಾಗಿದ್ದರೂ ಪಾಲಿಸಿ ನೀಡುವ ರಕ್ಷಣೆಯಲ್ಲಿ ಯಾವುದೇ ಕೊರತೆಯಿರುವುದಿಲ್ಲ.

ಹೆಚ್ಚಿನ ನಿಯಂತ್ರಣ

ಆಫ್‌ಲೈನ್ ವ್ಯವಸ್ಥೆಯಲ್ಲಿ ವಿಮೆ ಕಂಪನಿಯ ಅಧಿಕಾರಿ ಅಥವಾ ಏಜೆಂಟ್ ನಿಮಗೆ ಮುಖಾಮುಖಿಯಾಗುತ್ತಾನೆ. ಇಲ್ಲಿ ‘ಮಾರಾಟ’ ಮುಖ್ಯ ಶಬ್ದವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮಗೆ ಅಗತ್ಯವಿರದ್ದನ್ನು ಕೂಡ ನಿಮಗೆ ಮಾರಾಟ ಮಾಡುವ ಸಾಧ್ಯತೆಗಳಿರುತ್ತವೆ. ಆದರೆ ಆನ್‌ಲೈನ್‌ನಲ್ಲಿ ನೀವು ‘ಖರೀದಿ’ ಮಾಡುತ್ತೀರಿ ಮತ್ತು ನಿಯಂತ್ರಣವು ನಿಮ್ಮ ಕೈಯ್ಯಲ್ಲಿರುತ್ತದೆ. ಇಲ್ಲಿ ಯಾವುದೇ ಏಜೆಂಟ್ ಇರುವುದಿಲ್ಲ. ನಿಮಗೆ ಏನಾದರೂ ತೊಂದರೆ ಎದುರಾದರೆ ಫೋನೆತ್ತಿಕೊಂಡು ಕಾಲ್ ಸೆಂಟರ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪಾಲಿಸಿಯಲ್ಲಿ ಸೇರಿಸುವ ಮತ್ತು ಹೊರತುಪಡಿಸುವ ಅಂಶಗಳ ಬಗ್ಗೆ ನಿಮಗೆ ಅಗತ್ಯ ಮಾಹಿತಿಯನ್ನೊದಗಿಸುತ್ತಾರೆ ಮತ್ತು ನೀವು ನಿಮ್ಮ ವಾಹನಕ್ಕೆ ವಿಮೆ ಪಾಲಿಸಿಯ ಖರೀದಿಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಹೋಲಿಕೆ ಸುಲಭ

ಆಫ್‌ಲೈನ್‌ನಲ್ಲಿ ವಿವಿಧ ಕಂಪನಿಗಳ ವಿಮೆ ಪಾಲಿಸಿ ದರಗಳನ್ನು ತಿಳಿದುಕೊಳ್ಳಲು ಹಲವಾರು ಕಚೇರಿಗಳನ್ನು ಸುತ್ತಬೇಕಾಗುತ್ತದೆ ಮತ್ತು ಅವುಗಳ ಷರತ್ತುಗಳು ಹಾಗೂ ಲಾಭಗಳನ್ನು ನೀವೇ ಹೋಲಿಕೆ ಮಾಡಬೇಕಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ ಇದು ಸುಲಭದ ಕೆಲಸವಾಗಿದೆ. ಇಲ್ಲಿ ಹಲವಾರು ವೆಬ್ ಅಗ್ರಿಗೇಟರ್ ಸೈಟ್‌ಗಳಿದ್ದು, ಪಾಲಿಸಿಗಳನ್ನು ಹೋಲಿಕೆ ಮಾಡಲು ನಿಮಗೆ ನೆರವಾಗುತ್ತವೆ. ಈ ವೆಬ್‌ಸೈಟ್‌ಗಳಲ್ಲಿ ಕಾರ್/ಬೈಕ್ ಇನ್ಶೂರನ್ಸ್ ಕ್ಯಾಲ್ಕುಲೇಟರ್‌ಗಳೂ ಇರುತ್ತವೆ. ಹೀಗಾಗಿ ಎಲ್ಲ ಪಾಲಿಸಿಗಳನ್ನು ಪರಸ್ಪರ ಹೋಲಿಸಿ ಸೂಕ್ತವಾದುದನ್ನು ಖರೀದಿ ಮಾಡಬಹುದಾಗಿದೆ.

ಆನ್‌ಲೈನ್‌ನಲ್ಲಿ ವಾಹನ ವಿಮೆ ನವೀಕರಣ

ವಾಹನ ವಿಮೆ ಪಾಲಿಸಿ ಖರೀದಿಸಿದರೆ ಮಾತ್ರ ಸಾಲದು,ಅದನ್ನು ಆಗಾಗ್ಗೆ ನವೀಕರಿಸಬೇಕಾಗುತ್ತದೆ. ನಿಮ್ಮ ವಿಮೆ ಕಂಪನಿಯ ಬಳಿ ಈಗಾಗಲೇ ನಿಮ್ಮ ವಿವರಗಳು ಇರಬಹುದಾದ್ದರಿಂದ ಮೊದಲ ಬಾರಿಯ ಖರೀದಿಗೆ ಹೋಲಿಸಿದರೆ ನವೀಕರಣ ತುಂಬ ಸುಲಭದ ಕೆಲಸವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)