varthabharthi

ಸುಗ್ಗಿ

ನಟನಾಗುವ ಕನಸು ಕಂಡಿದ್ದ ಮದರ್ ಇಂಡಿಯಾ ನಿರ್ದೇಶಕ

ಮೆಹಬೂಬ್ ಖಾನ್

ವಾರ್ತಾ ಭಾರತಿ : 1 Jun, 2019
ರೇವತಿ ಕೃಷ್ಣನ್

ಮೆಹಬೂಬ್ ಖಾನ್ ಸಿನೆಮಾ ಜಗತ್ತಿನ ಜನಮಾನಸದಲ್ಲಿ ಮದರ್ ಇಂಡಿಯಾ ಚಿತ್ರದ ನಿರ್ದೇಶಕ ಎಂದೇ ಜನಜನಿತರು. ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಭಾಷೆಯ ಸಿನೆಮಾ ವಿಭಾಗದಲ್ಲಿ ನಾಮಾಂಕಣಗೊಂಡ ಮೊತ್ತಮೊದಲ ಭಾರತೀಯ ಸಿನೆಮಾ ಎಂಬ ಹೆಗ್ಗಳಿಕೆ ‘ಮದರ್ ಇಂಡಿಯಾ’ಗಿದೆ. ಮದರ್ ಇಂಡಿಯಾ ತನ್ನ ವಿಭಿನ್ನ ಶೈಲಿಯ ನೆಹರೂ ಅವರ ಸಮಾಜವಾದದಿಂದ ಕೂಡಿದ್ದ ನಿರೂಪಣೆ ಮತ್ತು ಭಾರತೀಯ ಸಿನೆಮಾವನ್ನು ಜಾಗತಿಕ ಭೂಪಟದಲ್ಲಿ ತಂದು ನಿಲ್ಲಿಸಿದ ಕಾರಣ ಕ್ಕಾಗಿ ಪ್ರತಿ ತಲೆಮಾರಿನ ಸಿನೆಮಾ ವೀಕ್ಷಕರಿಗೂ ಒಂದು ಆದರ್ಶಪ್ರಾಯ ಸಿನೆಮಾವಾಗಿಯೇ ಉಳಿದಿದೆ. ಆದರೆ ಖಾನ್ ಅವರ ಸಾಧನೆ ಕೇವಲ ಒಂದು ಸಿನೆಮಾಕ್ಕೆ ಸೀಮಿತವಾದುದಲ್ಲ. ಮದರ್ ಇಂಡಿಯಾ ಕೂಡಾ ಖಾನ್ ಅವರೇ ಹಿಂದೆ ನಿರ್ದೇಶಿಸಿದ್ದ ಮರು ಅವತರಣಿಕೆಯಾಗಿದೆ. ಅವರು ನಿರ್ದೇಶಿಸಿದ ಸುಮಾರು 20 ಸಿನೆಮಾಗಳಲ್ಲಿ ಅನೇಕವು ವಿವಿಧ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಮೆಹಬೂಬ್ ಖಾನ್ ಅವರ 55ನೇ ಪುಣ್ಯ ತಿಥಿಯ ಸಂದರ್ಭದಲ್ಲಿ, ಹಿಂದಿ ಚಿತ್ರ ಜಗತ್ತಿನಲ್ಲಿ ಮಿಂಚಿ ಮರೆಯದ ಸಾಧಕನ ಒಂದಷ್ಟು ವಿವರ ಇಲ್ಲಿದೆ; 1906ರಲ್ಲಿ ಪೊಲೀಸ್ ಪೇದೆ ಮಗನಾಗಿ ಜನಿಸಿದ ರಮಝಾನ್ ಖಾನ್ ಅಲಿಯಾಸ್ ಮೆಹಬೂಬ್ ಖಾನ್ ಟೂರಿಂಗ್ ಸಿನೆಮಾಗಳ ಮೂಲಕ ಚಿತ್ರ ಜಗತ್ತಿನ ಜೊತೆ ಪರಿಚಿತಗೊಂಡರು. ಸಿನೆಮಾ ನೋಡಲು ಹತ್ತಿರದ ಪಟ್ಟಣಗಳಿಗೆ ತೆರಳುತ್ತಿದ್ದ ಅವರು ಅತಿಸಣ್ಣ ವಯಸ್ಸಿನಲ್ಲೇ ತಾನು ಜನಿಸಿರುವುದೇ ಸಿನೆಮಾದಲ್ಲಿ ಹೀರೊ ಆಗಲು ಎಂಬ ನಿಲುವು ಹೊಂದಿದ್ದರು. 16ರ ವಯಸ್ಸಿನಲ್ಲಿ ಮನೆಬಿಟ್ಟು ಈಗಿನ ಮುಂಬೈಗೆ ಓಡಿಹೋದ ಖಾನ್‌ನನ್ನು ಅವರ ಪೊಲೀಸ್ ತಂದೆ ಪತ್ತೆಹಚ್ಚಿ ವಾಪಸ್ ಊರಿಗೆ ಕರೆತಂದರು. ಖಾನ್ ಮನೆಬಿಟ್ಟು ಹೋಗಬಾರದು ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಅವರ ತಂದೆ ಖಾನ್‌ಗೆ ಪಕ್ಕದ ಗ್ರಾಮದ ಬಾಲಕಿಯ ಜೊತೆ ವಿವಾಹ ನೆರವೇರಿಸಿ ದರು. ದಂಪತಿಗೆ ಮೂರು ಮಕ್ಕಳಾದವು. ಆದರೆ ತನ್ನ ಕನಸನ್ನು ಕೈಬಿಡದ ಖಾನ್, 23ನೇ ವಯಸ್ಸಿನಲ್ಲಿ ಜೇಬಿ ನಲ್ಲಿ 3ರೂ.ಯೊಂದಿಗೆ ಕನಸಿನ ನಗರಿ ಸೇರಿಯೇ ಬಿಟ್ಟರು. ಆರಂಭದಲ್ಲಿ ಖಾನ್ ಇಂಪೀರಿಯಲ್ ಫಿಲ್ಮ್ ಕಂಪೆನಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. 1931ರಲ್ಲಿ ಇನ್ನೇನು ನಿರ್ದೇಶಕ ಅರ್ದೆಶಿರ್ ಇರಾನಿ ಖಾನ್‌ಗೆ ಭಾರತದ ಮೊತ್ತಮೊದಲ ಸಂಭಾಷಣೆ ಯುಳ್ಳ ಸಿನೆಮಾ ಅಲಮ್ ಅರದಲ್ಲಿ ಮುಖ್ಯ ನಾಯಕನ ಪಾತ್ರ ನೀಡಲಿದ್ದರು. ಆದರೆ ಕೊನೆಕ್ಷಣದಲ್ಲಿ ಈ ಪಾತ್ರ ಮಾಸ್ಟರ್ ವಿಠಲ್ ಪಾಲಾಯಿತು. 1931ರಿಂದ 1935ರ ಮಧ್ಯೆ ಖಾನ್ ಸಿನೆಮಾ ಗಳಲ್ಲಿ ನಟಿಸಲು ಅದೆಷ್ಟು ಪ್ರಯತ್ನಿಸಿದರೂ ಸಾಧ್ಯ ವಾಗದೆ ಸಾಗರ್ ಮೋವೀಟೋನ್ ಪ್ರೊಡಕ್ಷನ್ಸ್‌ನಲ್ಲಿ ಸಿಬ್ಬಂದಿ ಕೆಲಸದಲ್ಲೇ ತೃಪ್ತಿಪಟ್ಟುಕೊಳ್ಳಬೇಕಾಯಿತು. 1935ರಲ್ಲಿ ಅಲ್ ಹಿಲಾಲ್ ಅಥವಾ ಅಲ್ಲಾಹ್‌ನ ತೀರ್ಪು ಎಂಬ ಆ್ಯಕ್ಷನ್ ಸಿನೆಮಾವನ್ನು ನಿರ್ದೇಶಿಸುವ ಅವಕಾಶ ಮೆಹಬೂಬ್‌ಖಾನ್‌ಗೆ ದೊರಕಿತು. ಈ ಸಿನೆಮಾ ರೋಮನ್-ಅರಬ್ ಸಂಘರ್ಷದ ಕತೆ ಯನ್ನು ಹೊಂದಿತ್ತು. ಈ ಸಿನೆಮಾ ಸಿಸಿಲ್ ಬಿ. ಡಿಮಿಲ್ಲೆ ನಿರ್ದೇಶನದ ‘ದ ಸೈನ್ ಆಫ್ ಕ್ರಾಸ್’ನ ಸ್ಫೂರ್ತಿ ಹೊಂದಿತ್ತು. ನಂತರ ಖಾನ್ ಅವರನ್ನು ಭಾರತೀಯ ಸಿನೆಮಾದ ಡಿಮಿಲ್ಲೆ ಎಂದೇ ಕರೆಯಲಾಗುತ್ತಿತ್ತು. ನಂತರ ಅವರು ಪಿ.ಸಿ ಬರುವಾ ಅವರ ದೇವ ದಾಸ್ ಸಿನೆಮಾ ಆಧಾರಿತ ಮನಮೋಹನ (1936), ಜಾಗಿರ್ದಾರ್ (1937) ಮತ್ತು ಏಕ್ ಹೀ ರಾಸ್ತಾ (1939) ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದರು. ಖಾನ್ ಸಿನೆಮಾಗಳಲ್ಲಿ ಅವರ ಸಾಮಾಜಿಕ ನಂಬಿಕೆಗಳು ಮತ್ತು ಮಣ್ಣಿನ ಮಗ ಸಿದ್ಧಾಂತ ಪ್ರತಿಫಲಿಸುತ್ತಿದ್ದರೂ ವಾಣಿಜ್ಯವಾಗಿಯೂ ಕಾರ್ಯಸಾಧುವಾಗಿದ್ದವು. ಖಾನ್ ತನ್ನ ಚಿತ್ರಜೀವನದ ಆರಂಭದಲ್ಲಿ ನಿರ್ದೇಶಿಸಿದ ಕೆಲವು ಸಿನೆಮಾಗಳು ಅತ್ಯಂತ ಪರಿಣಾಮ ಕಾರಿಯಾಗಿದ್ದವು. 1940ರಲ್ಲಿ ಅವರು ನಿರ್ದೇಶಿಸಿದ, ತನ್ನ ಜಮೀನಿನ ಮೇಲೆ ರೈತನಿಗಿರುವ ಪ್ರೀತಿಯನ್ನು ಆಧರಿಸಿದ ‘ಔರತ್’ ಸಿನೆಮಾ ಸಾಕಷ್ಟು ಪ್ರಶಂಸೆ ಗಳಿಸಿತ್ತು. ಈ ಚಿತ್ರದಲ್ಲಿ ನಟಿಸಿದ್ದ ಸರ್ದಾರ್ ಅಖ್ತಾರ್‌ರನ್ನು ಖಾನ್ ಎರಡು ವರ್ಷಗಳ ನಂತರ ಮದುವೆಯಾಗಿ ಸಾಜಿದ್ ಖಾನ್ ಎಂಬ ಮಗುವನ್ನು ದತ್ತುಪಡೆದರು. 1942ರಲ್ಲಿ ತನ್ನದೇ ನಿರ್ಮಾಣ ಸಂಸ್ಥೆ ಮೆಹಬೂಬ್ ಪ್ರೊಡಕ್ಷನ್ಸ್ ಸ್ಥಾಪಿಸಿದ ಖಾನ್ ಅದರ ಚಿಹ್ನೆಯಾಗಿ ಸುತ್ತಿಗೆ ಮತ್ತು ಕತ್ತಿಯನ್ನು ಬಳಸಿದರು. ಸಾಮಾಜಿಕ ಅಸಮಾನತೆಯನ್ನು ತನ್ನ ಸಿನೆಮಾಗಳಲ್ಲಿ ಎತ್ತಿ ತೋರಿಸುತ್ತಿದ್ದ ಖಾನ್ ಅವರ ನಿರ್ಮಾಣ ಸಂಸ್ಥೆಗೆ ಈ ಚಿಹ್ನೆ ಅತ್ಯಂತ ಸೂಕ್ತವಾಗಿತ್ತು. 1942ರಲ್ಲಿ ಅವರ ನಿರ್ದೇಶಿಸಿದ ರೋಟಿ ಸಿನೆಮಾ ಸಮಾಜದಲ್ಲಿ ಉಳ್ಳವರು ಮತ್ತು ವಂಚಿತರ ನಡುವಿನ ಅಸಮಾನತೆಗೆ ಹಿಡಿದ ಕನ್ನಡಿಯಾಗಿತ್ತು. ತನ್ನ ಸಾಮಾಜಿಕ ಸಂದೇಶಗಳನ್ನು ಬದಿಗಿಟ್ಟ ಖಾನ್ 1949ರಲ್ಲಿ ಮೊದಲ ಬಾರಿ ಪ್ರೀತಿ ಆಧಾರಿತ ಸಿನೆಮಾ ಅಂದಾಝ್ ನಿರ್ದೇಶಿಸಿದರು. ಆ ಕಾಲದ ಘಟಾನುಘಟಿ ನಟರಾದ ದಿಲೀಪ್ ಕುಮಾರ್, ನರ್ಗಿಸ್ ಮತ್ತು ರಾಜ್ ಕಪೂರ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು. ದಿಲೀಪ್ ಕುಮಾರ್ ಜೊತೆ ಮತ್ತೆ ಎರಡು ಸಿನೆಮಾಗಳನ್ನು ಖಾನ್ ಮಾಡಿದರೂ ಎರಡೂ ಒಂದಕ್ಕೊಂದು ಭಿನ್ನವಾಗಿದ್ದವು. ಈ ಪೈಕಿ 1954ರಲ್ಲಿ ತೆರೆಕಂಡ ಅಮರ್ ಸಿನೆಮಾದಲ್ಲಿ ದಿಲೀಪ್ ಕುಮಾರ್ ಖಳನಾಗಿ ನಟಿಸಿದ್ದರು. ವ್ಯಕ್ತಿಯೊಬ್ಬ ತನ್ನ ಆಶ್ರಯದಲ್ಲಿರುವ ಮಹಿಳೆಯನ್ನು ಅತ್ಯಾಚಾರ ಮಾಡುವ ಅಸಹಜ ಕತೆ ಹೊಂದಿದ್ದ ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಅವರನ್ನು ಖಳನಟನಾಗಿ ಸ್ವೀಕರಿಸಲು ಪ್ರೇಕ್ಷಕರು ಸಿದ್ಧರಿರಲಿಲ್ಲ. ಹಾಗಾಗಿ ಈ ಸಿನೆಮಾ ಯಶಸ್ಸು ಕಾಣಲಿಲ್ಲ. ಆದರೆ ಖಾನ್ ಈ ಸಿನೆಮಾ ನನ್ನ ಅಚ್ಚುಮೆಚ್ಚಿನದ್ದಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು. ಮೆಹಬೂಬ್ ಖಾನ್ ತನ್ನ ಔರತ್ ಸಿನೆಮಾವನ್ನೇ ಒಂದಷ್ಟು ಬದಲಾವಣೆಗಳನ್ನು ಮಾಡಿ 1957ರಲ್ಲಿ ಮದರ್ ಇಂಡಿಯಾ ಹೆಸರಲ್ಲಿ ಮತ್ತೆ ತಯಾರಿಸಿದರು. ನರ್ಗಿಸ್, ಸುನೀಲ್ ದತ್ತ್ ಮತ್ತು ರಾಜೇಂದ್ರ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದ ಮದರ್ ಇಂಡಿಯಾ, ಬಡತನಪೀಡಿತ ಮಹಿಳೆಯೊಬ್ಬಳು ಎಲ್ಲ ಕಷ್ಟ ಕೋಟಲೆಗಳನ್ನು ಎದುರಿಸಿ ತನ್ನ ಇಬ್ಬರು ಮಕ್ಕಳನ್ನು ಹೇಗೆ ಬೆಳೆಸುತ್ತಾಳೆ ಎನ್ನುವ ಕತೆಯನ್ನು ಹೇಳುತ್ತಿತ್ತು. ಈ ಚಿತ್ರದಲ್ಲಿ ತಾಯಿ-ಮಗನಾಗಿ ನಟಿಸಿದ್ದ ನರ್ಗಿಸ್ ಮತ್ತು ಸುನೀಲ್ ದತ್ತ್ ಚಿತ್ರ ಬಿಡುಗಡೆಯ ನಂತರ ಪರಸ್ಪರ ವಿವಾಹವಾಗಿದ್ದರು. 1960ರಲ್ಲಿ ಮೊಘಲೆ ಆಝಮ್ ಸಿನೆಮಾ ಬಿಡುಗಡೆ ಯಾಗುವವರೆಗೆ ಮದರ್ ಇಂಡಿಯಾ ಅತೀಹೆಚ್ಚು ಗಳಿಕೆ ಕಂಡ ಸಿನೆಮಾ ಎಂಬ ಹೆಗ್ಗಳಿಕೆ ಹೊಂದಿತ್ತು. ಮದರ್ ಇಂಡಿಯಾದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ, ಚಿತ್ರಕತೆ ಬರಹಗಾರ ಮತ್ತು ಸಾಹಿತಿ ಜಾವೇದ್ ಅಖ್ತರ್, ಮದರ್ ಇಂಡಿಯಾ ಕಾಲ ಮತ್ತು ಮಿತಿಯನ್ನು ಮೀರಿದ ಸಿನೆಮಾ ಆಗಿದೆ ಎಂದು ತಿಳಿಸಿದ್ದರು. ಅಮೆರಿಕದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭ ದಲ್ಲಿ ಕೇವಲ ಒಂದು ಮತದಿಂದ ಪ್ರಶಸ್ತಿಯಿಂದ ವಂಚಿತಗೊಂಡ ಮದರ್ ಇಂಡಿಯಾ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಖಾನ್ ಅವರು ಮದರ್ ಇಂಡಿಯಾ ನಂತರ ನಿರ್ದೇಶಿಸಿದ ಮತ್ತು ಕೊನೆಯ ಸಿನೆಮಾ ಸನ್ ಆಫ್ ಇಂಡಿಯಾ (1962) ಜನಮೆಚ್ಚುಗೆ ಗಳಿಸಲು ವಿಫಲವಾಗಿತ್ತು. 1964ರ ಮೇ 28ರಂದು ಮೆಹಬೂಬ್ ಖಾನ್ ವಿಧಿವಶರಾದರು. ಮೇ 27ರಂದು ಪ್ರಧಾನಿ ಜವಾಹರ್ ಲಾಲ್ ನೆಹರೂ ನಿಧನದ ಸುದ್ದಿ ಕೇಳಿ ಖಾನ್‌ಗೆ ಹೃದಯಾಘಾತವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.

ಕೃಪೆ: ದಿ ಪ್ರಿಂಟ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)