varthabharthi

ಸುಗ್ಗಿ

ಇತಿಹಾಸ

ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಖುಲ್ಲಾ ಖಾನ್ ಬರೆದ

ವಾರ್ತಾ ಭಾರತಿ : 2 Jun, 2019
- ಎಂ.ಐ. ರಾಜಸ್ವಿ, ಕನ್ನಡಕ್ಕೆ: ಜೆ. ಕಲೀಂ ಬಾಷ

ಸ್ವಾತಂತ್ರ್ಯ ಯೋಧ ಅಶ್ಫಾಖುಲ್ಲಾ ಖಾನ್ ಬ್ರಿಟಿಷರಿಗೆ ಸೆರೆ ಸಿಕ್ಕಿ ಮರಣದಂಡನೆ ಶಿಕ್ಷೆಯಾದ ಸಂದರ್ಭದಲ್ಲಿ ತಮ್ಮ ಸಹೋದರರ ಮಕ್ಕಳಿಗೆ ಬರೆದ ಪತ್ರ ಇಲ್ಲಿದೆ. ಆ ಮಕ್ಕಳು ಸೋದರರಾದ ಶಫೀಖುಲ್ಲಾ ಖಾನ್ ಮತ್ತು ರಿಯಾಸತುಲ್ಲಾ ಖಾನ್ ಅವರ ಪುತ್ರರಾಗಿದ್ದರು. ಅಶ್ಫಾಖ್ ಅವರು ತಮ್ಮ ಸಹೋದರರ ಮಕ್ಕಳ ಹೆಸರಿಗೆ ಈ ರೀತಿ ಸಂದೇಶವನ್ನು ಬರೆದು ಕಳಿಸಿದರು.

‘‘ಪ್ರೀತಿಯ ರಜಿ ಮತ್ತು ಖಲೀಲ್’’,

ತಮಗೆ ನನ್ನ ಆಶೀರ್ವಾದಗಳು. ತಾವು ಬೆಳೆದು ದೊಡ್ಡವರಾದಾಗ ನನ್ನ ಕಥೆಯನ್ನು ಕೇಳುವಿರಿ ಮತ್ತು ನನ್ನ ಕೈ ಬರಹಗಳನ್ನು ನೋಡುವಿರಿ ಮತ್ತು ಓದುವಿರಿ. ನನ್ನ ಈ ಬರಹಗಳನ್ನು ನೀವು ನನ್ನ ಹುಚ್ಚು ಮನಸ್ಸಿನ ವ್ಯರ್ಥ ಮಾತುಗಳೆಂದು ತಿಳಿಯದಿರಿ. ನನ್ನ ಮನಸ್ಸಿನ ಸ್ಥಿತಿ ಗತಿ ಸರಿಯಾಗಿ ನನ್ನ ಬುದ್ಧಿಯೂ ಸೂಕ್ತವಾಗಿ ಕೆಲಸ ಮಾಡುತ್ತಿದೆ. ನನ್ನ ಉದ್ದೇಶ ಕೇವಲ ಮಕ್ಕಳಿಗೆ ಬರೆಯುವುದೇನೆಂದರೆ, ನೀವು ನಿಮ್ಮ ಕರ್ತವ್ಯಗಳನ್ನು ಅರಿಯಿರಿ ಮತ್ತು ಆಗಾಗ ನನ್ನನ್ನು ಸ್ಮರಿಸುತ್ತಿರಿ. ನನ್ನ ನೆನಪು ನಿಮ್ಮನ್ನು ಜಾಗೃತಗೊಳಿಸಲಿ.

ನಿಮ್ಮ ಚಿಕ್ಕಪ್ಪ ಕೆಲವು ದಿನಗಳ ನಂತರ ಇಹಲೋಕದಿಂದ ಪರಲೋಕಕ್ಕೆ ಶಾಶ್ವತವಾಗಿ ನಿಮ್ಮನ್ನಗಲಿ ತೆರಳುವನು. ನಿಮ್ಮಿಂದ ನಾನು ಏನನ್ನೂ ಬಯಸುವುದಿಲ್ಲ, ಮತ್ತೇನೂ ಹೇಳಲು ಇಚ್ಛಿಸುವುದಿಲ್ಲ. ನಿಮಗೆ ಅಲ್ಲಾಹನ ದಯೆ, ಕರುಣೆ, ಸಹಾಯ ಸದಾ ಸಿಗಲಿ. ನಿಮಗೆ ಉನ್ನತ ಸ್ಥಾನ, ಮಾನ, ಸಮ್ಮಾನ ದಯಪಾಲಿಸಲಿ, ನಿಮ್ಮನ್ನು ಜೀವನದಲ್ಲಿ ಸಮರ್ಥರನ್ನಾಗಿಸಿ, ಮನೆತನದ ಹೆಮ್ಮೆಯ ಮಕ್ಕಳನ್ನಾಗಿಸಲಿ.

ಮಾಡಿದೆವು ನಾವು ಕಾಯಕವ

ನಮ್ಮಿಂದ ಸಾಧ್ಯವಾದುದನು

ನಮ್ಮ ಯೌವನದಲಿ

ಸ್ವತಂತ್ರವಿದ್ದಾಗಿನ ಮಾತುಗಳಿವು

ಅದೇನೇ ಇದ್ದರೂ ಈಗಂತೂ

ಭರವಸೆಗಳೆಲ್ಲವು ನಿಮ್ಮಿಂದ

ಯುವಕರು ನೀವು

ಅಧಿಕಾರ ಅಂತಸ್ತು ನಿಮ್ಮಿಂದ

ಭರವಸೆಯ ಬೆಳಕಿನ ಆಶಾಕಿರಣವು ನಿಮ್ಮಿಂದ

‘‘ ನೀವು ಹಿರಿಯರ ಅಭಿಪ್ರಾಯದಂತೆ ನಡೆಯಬೇಕು. ಶಿಕ್ಷಣದಲ್ಲಿ ತನು, ಮನ, ಧನವನ್ನು ಅರ್ಪಿಸಿ ನಿಮ್ಮನ್ನು ನೀವು ಅತ್ಯುತ್ತಮ ಮಾನವರೆಂದು ಸಾಬೀತು ಮಾಡಬೇಕು. ನನಗೆ ನಿಮ್ಮಿಂದ ಇಷ್ಟು ಆಸೆ, ಆಕಾಂಕ್ಷೆ ಇದೆ, ನನ್ನ ಮರಣದ ಸ್ಮರಣೆ ಇರಲಿ. ನನ್ನ ದೇಶಪ್ರೇಮದ ಬಗ್ಗೆ, ದೇಶಭಕ್ತಿಯ ಬಗ್ಗೆ ಕಳಂಕ ತರುವಂತಹ ಆರೋಪ ನನ್ನ ಮೇಲಿದೆ ಹಾಗೂ ಇದೆಲ್ಲಾ ವಿನಾಕಾರಣಕ್ಕಾಗಿಯೇ, ನನಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ನೀವು ದೊಡ್ಡವರಾಗಿ ಸಮರ್ಥರಾದ ಮೇಲೆ ನನ್ನ ಪ್ರಕರಣದ ಒಟ್ಟು ವಿವರಗಳನ್ನು (ನಡಾವಳಿಗಳನ್ನು) ಓದಿರಿ ಹಾಗೂ ನನ್ನ ಬರಹಗಳನ್ನು ಓದಿರಿ. ಹೆಚ್ಚೇನು ಬರೆಯಲಿ, ನನ್ನ ಸದಾಶಯ, ಪ್ರಾರ್ಥನೆ, ದುವಾ, ಆಶೀರ್ವಾದ ನಿಮಗಾಗಿ ಸದಾ ಇರುವುದು.’’

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)