varthabharthi

ಸುಗ್ಗಿ

ಅಧ್ಯಯನ ಮತ್ತು ಅರಿವು

ನೆತಿಕ ಶಿಕ್ಷಣ ಮತ್ತು ಶಾಲೆ

ವಾರ್ತಾ ಭಾರತಿ : 2 Jun, 2019
ಯೋಗೇಶ್ ಮಾಸ್ಟರ್, ಬೆಳೆಯುವ ಪೈರು

ಕಲಿಕೆಯೆಂಬ ಪ್ರಕ್ರಿಯೆ: ಭಾಗ 22

ಮೊತ್ತಮೊದಲನೆಯದಾಗಿ ನಾವೇ ಒಂದು ಪ್ರಶ್ನೆ ಹಾಕಿಕೊಳ್ಳುವ. ನೈತಿಕ ಶಿಕ್ಷಣ ಎಂಬ ಪ್ರತ್ಯೇಕವಾದಂತಹ ವಿಷಯ ಶೈಕ್ಷಣಿಕವಾಗಿ ಬೇಕಾಗಿದೆಯೇ? ಇದ್ದರೆ ಅದನ್ನು ಹೇಗೆ ನಿಭಾಯಿಸ ಬೇಕು? ಅಥವಾ ಇದ್ದಾಗ ಅದನ್ನು ಹೇಗೆ ಕಂಡರು?

ಮಾರಲ್ ಸೈನ್ಸ್ ಅಥವಾ ನೀತಿ ಶಿಕ್ಷಣ ಅಥವಾ ನೈತಿಕ ಶಿಕ್ಷಣ ಅಂತ ಮೊದಲೆಲ್ಲಾ ಇತ್ತು. ಆದರೆ ಅದು ಗಣಿತ, ವಿಜ್ಞಾನ, ಭಾಷೆ, ಸಮಾಜ ಪರಿಚಯದಂತೆ ಮುಖ್ಯ ಅಂತ ನಮ್ಮ ಶಿಕ್ಷಕರಿಗೆ ಅನ್ನಿಸದೇ ಇರುವ ಕಾರಣದಿಂದ ಕ್ರಮೇಣ ಅದು ಮೂಲೆಗುಂಪಾಯಿತು. ಗಣಿತ ಕಲಿಯುವಷ್ಟು ಪ್ರಾಮಾಣಿಕತೆಯನ್ನು ಕಲಿಯುವುದು ಮುಖ್ಯವಲ್ಲ ಎಂದು ನಮ್ಮ ಶಿಕ್ಷಕರು ಭಾವಿಸಿದ್ದರಿಂದಲೋ ಏನೋ, ನೀತಿ ಶಿಕ್ಷಣದ ಅವಧಿಯನ್ನೆಲ್ಲಾ ತಮ್ಮ ಇತರ ವಿಷಯಗಳ ಪಾಠಗಳನ್ನು ಮಾಡಿ ಮುಗಿಸಲು ಯತ್ನಿಸಿದರು. ಅದರಂತೆಯೇ ನೀತಿ ಶಿಕ್ಷಣಕ್ಕೆ ಪ್ರತ್ಯೇಕವಾಗಿ ಒಂದು ಪರೀಕ್ಷೆ ಎಂದಾಗಲಿ, ಅಂಕಗಳು ಎಂದಾಗಲಿ ಇರದಿದ್ದ ಕಾರಣದಿಂದ ನೀತಿ ಶಿಕ್ಷಣವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿಯಿತು. ಕ್ರಮೇಣ, ಈಗ ಗಮನಿಸಿದರೆ ಅದು ವಿಷಯವೇ ಅಲ್ಲ ಎಂಬಾಗಿದೆ. ಈಗಿನ ಎಷ್ಟೋ ಶಾಲೆಗಳಿಗೆ, ಮಕ್ಕಳಿಗೆ, ಅಷ್ಟೇಕೆ ಶಿಕ್ಷಕರಿಗೆ ಮಾರಲ್ ಸೈನ್ಸ್ ಎಂದರೆ ಅಥವಾ ನೀತಿ ಶಿಕ್ಷಣ ಎಂದರೆ ಗೊತ್ತೇ ಇಲ್ಲ ಅಥವಾ ನಮಗೆ ಆಗ ಇತ್ತು, ಈಗ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಾಸಿದ ನೆನಪು. ಇದರ ಪರಿಣಾಮವೇ ಇಂದು ಗಣಿತದಲ್ಲೋ, ವಿಜ್ಞಾನದಲ್ಲೋ, ಸಮಾಜ ಶಾಸ್ತ್ರದಲ್ಲೋ, ಇತಿಹಾಸದಲ್ಲೋ ಪರಿಣಿತರಾಗಿರುವವರಿಗೆ ನೈತಿಕತೆಯೆಂಬುದೇ ಇಲ್ಲವಾಗಿರುವುದು.

ನೀತಿ ಶಿಕ್ಷಣ

ಈಗಲೂ ನನಗೆ ನೆನಪಿದೆ. ನೀತಿ ಶಿಕ್ಷಣ ಎಂಬ ಪಠ್ಯದಲ್ಲಿ ಪ್ರಾಮಾಣಿಕತೆ, ಸತ್ಯಸಂಧತೆ, ಪರೋಪಕಾರ, ನ್ಯಾಯಪರತೆ, ದಯೆ, ಕರುಣೆ, ಒಗ್ಗಟ್ಟಿನಲ್ಲಿ ಬಲವಿದೆ; ಇತ್ಯಾದಿ ವಿಷಯಗಳೆಲ್ಲಾ ಕತೆಗಳ ರೂಪದಲ್ಲೋ, ಯಾರೋ ಮಹಾತ್ಮರ ಜೀವನದ ಘಟನೆಗಳ ಭಾಗಗಳಲ್ಲೋ, ಮಹಾಭಾರತ, ರಾಮಾಯಣ, ಬೈಬಲ್ ಇತ್ಯಾದಿಗಳಿಂದ ಆಯ್ದ ತುಣುಕುಗಳಲ್ಲೋ ಬಿಂಬಿಸಲು ಯತ್ನಿಸುತ್ತಿದ್ದರು. ಹೀಗಾಗಿ, ನಾವೂ ಕೂಡಾ, ಯಾವುದ್ಯಾವುದರಲ್ಲೋ ಸತ್ಯವನ್ನು, ನ್ಯಾಯವನ್ನು, ಕರುಣೆಯನ್ನು, ದಯೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದೆವು ಹಾಗೂ ಗುರುತಿಸುತ್ತಿದ್ದೆವು. ಪರೀಕ್ಷೆಗೆಂದೇ ನೀವು ಹೀಗೆ ಮಾಡಿ. ಸಿಬಿಎಸ್‌ಇ ಅಥವಾ ಸ್ಟೇಟ್ಸ್; ಯಾವುದೇ ಸಿಲಬಸ್‌ನಲ್ಲಿ ಓದುತ್ತಿರುವ ಯಾವುದೇ ವರ್ಗದ ಮಕ್ಕಳನ್ನು ಕೂರಿಸಿಕೊಂಡು ಪ್ರಾಮಾಣಿಕತೆ, ಸತ್ಯಸಂಧತೆ ಅಥವಾ ನ್ಯಾಯಪರತೆ ಎಂದರೆ ಏನು ಎಂದು ಪ್ರಶ್ನಿಸಿ. ಅದಕ್ಕೆ ಅವರು ವಿವರಣೆಯನ್ನೋ, ವ್ಯಾಖ್ಯಾನವನ್ನೋ ಅಥವಾ ಅರ್ಥವನ್ನೋ ಕೊಡುವುದನ್ನು ನಾನೂ ನೀರೀಕ್ಷಿಸುವುದಿಲ್ಲ. ಒಂದೆರಡು ಉದಾಹರಣೆಗಳನ್ನು ಕೊಡುವವರೋ? ಅಥವಾ ಅವರು ಏನು ಉತ್ತರ ಕೊಡುವರೋ ನೋಡಿ. ಸತ್ಯ, ನ್ಯಾಯ, ದಯೆ, ಕರುಣೆ; ಇವೆಲ್ಲಾ ಅತ್ಯಂತ ಅಪರಿಚಿತ ಪದಗಳು. ಅಪರಿಚಿತ ಅನುಭವಗಳು. ನಿಮ್ಮದೇ ಮನೆಯಲ್ಲಿ ನಿಮ್ಮದೇ ಮಕ್ಕಳಿಗೆ ಕೇಳಿ ನೋಡಿ. ಅವರವರ ಶಾಲೆಗಳಲ್ಲಿ ಪ್ರೀತಿ, ಮಮತೆ, ಕರುಣೆ, ಶಾಂತಿ, ದಯೆ, ಪ್ರಾಮಾಣಿಕತೆ ಇತ್ಯಾದಿ ವೌಲ್ಯಗಳ ಬಗ್ಗೆ ಏನು ಹೇಳುತ್ತಿದ್ದಾರೆ? ಕೇಳಿ.

ನೀತಿವಂತ ಬಾಳಲೇ ಬೇಕು

ಬಹುಪಾಲು ಶಾಲೆಗಳಲ್ಲಿ ಇವುಗಳ ಬಗ್ಗೆ ಏನೂ ಹೇಳುವುದಿರಲಿ, ಪಿಸುಗುಡುವುದೂ ಇಲ್ಲ. ಇನ್ನು ತೋರುವುದೆಂದರೆ, ನೀವು ಅತಿಯಾಗಿ ನಿರೀಕ್ಷಿಸುತ್ತಿದ್ದೀರಿ ಎಂದೇ ಅರ್ಥ. ಶಾಂತಿ, ಕರುಣೆ, ಮಮತೆ, ಸಹನೆ ಇವುಗಳ ಬಗ್ಗೆ ಬೋಧಿಸುವುದನ್ನು ನಾನೂ ಪ್ರಶ್ನಿಸುತ್ತೇನೆ. ಬೋಧನೆಗಳಿಂದ ಇವುಗಳು ಲಭ್ಯವಾಗುವುದಿಲ್ಲ ಎಂದೂ ನಾನು ನಂಬುತ್ತೇನೆ. ಆದರೆ ಇವುಗಳು ಬೇಕೇ ಬೇಡವೇ? ಎಂಬುದನ್ನು ಮೊದಲು ಪ್ರಶ್ನಿಸಿಕೊಳ್ಳೋಣ. ಒಂದು ವೇಳೆ ಬೇಡ ಎನ್ನುವವರಾರಾದರೂ ಇದ್ದರೆ, ಆಲ್ ರೈಟ್, ಮುಂದೆ ಹೋಗೋಣ. ಏನೂ ಚರ್ಚೆ ಬೇಡ. ಬೇಕು ಎನ್ನುವುದಾದರೆ, ಹೇಗೆ ಬೇಕು? ಯಾಕೆ ಬೇಕು? ಈ ನೈತಿಕ ಶಿಕ್ಷಣವನ್ನು ಹೇಗೆ ನೀಡಬೇಕು? ಯಾರು ನೀಡಬೇಕು ಎಂದು ಯೋಚಿಸೋಣ ಮತ್ತು ಯೋಜಿಸೋಣ. ನೀತಿವಂತ ಬಾಳಲೇ ಬೇಕು, ಸತ್ಯವೆಂದೂ ಉಳಿಯಲೇ ಬೇಕು, ಸತ್ಯಮೇವ ಜಯತೆ ಇತ್ಯಾದಿ ಹಾಡುಗಳನ್ನು ನಮ್ಮ ಮಕ್ಕಳಿಗೆ ಕೇಳಿಸಲಾದರೂ ನಾವು ಅವರಿಗೆ ಅವುಗಳ ಪದಗಳನ್ನು ಪರಿಚಯಿಸಬೇಕಲ್ಲವೇ?

ನೀತಿ ಶಿಕ್ಷಣ: ಎರಡು ರೂಪದಲ್ಲಿ

ನನ್ನ ದೃಷ್ಟಿಯಲ್ಲಿ ನೈತಿಕ ಶಿಕ್ಷಣ ಅಥವಾ ನೀತಿ ಶಿಕ್ಷಣವನ್ನು ಎರಡು ರೀತಿಯಲ್ಲಿ ಯೋಜಿಸಬೇಕು. ಒಂದು ಪರೋಕ್ಷವಾಗಿ ಮತ್ತೊಂದು ಪ್ರತ್ಯಕ್ಷವಾಗಿ. ಈಗ ಎಷ್ಟೆಷ್ಟೋ ವಿದೇಶಿ ಭಾಷೆಗಳನ್ನು ಕಲಿತಿದ್ದರೂ, ಸಮಾಜ ಮತ್ತು ಇತಿಹಾಸದ ಜ್ಞಾನ ಮತ್ತು ವಿಜ್ಞಾನಗಳನ್ನು ತಿಳಿದಿದ್ದರೂ, ಗಣಿತ ಮತ್ತು ವೈಜ್ಞಾನಿಕವಾಗಿ ಪ್ರಯೋಗಗಳನ್ನು ಮಾಡಿದ್ದರೂ, ತಂತ್ರಜ್ಞಾನದ ಎಲ್ಲಾ ಆಯಾಮಗಳನ್ನು ತಿಳಿದಿದ್ದರೂ ನೈತಿಕವಾಗಿ ಒಂದು ನೆಲೆಗಟ್ಟಿದೆ, ಒಂದು ಆಯಾಮವಿದೆ ಎಂಬಷ್ಟೂ ತಿಳಿಯದೇ ಇರುವಷ್ಟು ಮುಗ್ಧರೋ, ಮೂರ್ಖರೋ ಆಗಿರುತ್ತಾರೆ. ಅಂದರೆ, ನೈತಿಕತೆ ಎಂಬುದು ಏನೂ ಕೆಲಸಕ್ಕೆ ಬಾರದ್ದು ಎಂಬುದೇ ಅವರ ಸ್ಪಷ್ಟ ಧೋರಣೆ ಮತ್ತು ನಿಲುವು ಆಗಿದ್ದು, ಅದನ್ನು ನೆನಪಿಸಿಕೊಳ್ಳಲೂ ತಮ್ಮ ಸಮಯವನ್ನು ಕೊಡದೇ ಇರುವಷ್ಟರ ಮಟ್ಟಿಗೆ ನಿರ್ಲಿಪ್ತರಾಗಿದ್ದಾರೆ. ಹಾಗಾಗಿಯೇ ಎಲ್ಲಾ ಶಾಸ್ತ್ರಗಳೂ, ಶಾಸ್ತ್ರೀಯ ವಿಷಯಗಳೂ, ಅಧ್ಯಯನಗಳೂ ಸಂಪೂರ್ಣವಾಗಿ ಅನೈತಿಕವಾಗಿ ಪ್ರತಿಫಲಿಸುವಷ್ಟರ ಮಟ್ಟಿಗೆ ಸಕ್ರಿಯವಾಗಿವೆ. ಒಬ್ಬ ಡಾಕ್ಟರ್ ತನ್ನ ಜೀವ ಉಳಿಸುವ ಸೇವಾ ಮನೋಭಾವದ ಬದಲು ಹೆಣಕ್ಕೆ ವೆಂಟಿಲೇಟರ್ ಕೊಟ್ಟು, ರೋಗಿಯ ಕಡೆಯವರು ಸಂಪೂರ್ಣ ಹಣವನ್ನು ಕಟ್ಟುವವರೆಗೂ ಅಥವಾ ಇನ್ನಷ್ಟು ದಿನಗಳ ಕಾಲ ಹೆಣವನ್ನೇ ಉಸಿರಾಡುವಂತೆ ಮಾಡಿಟ್ಟು ನಂತರ ಸಾರಿ ಅಂತ ಲಕ್ಷಾಂತರ ಹಣವನ್ನು ಪೀಕಿ, ಹೆಣವನ್ನು ಕೊಟ್ಟು ಕಳುಹಿಸಿಕೊಡುವಷ್ಟರ ಮಟ್ಟಿಗೆ ನೈತಿಕವಾಗಿ ಅಧಃಪತನಕ್ಕಿಳಿದಿದ್ದಾರೆ.

ಇನ್ನು ಶಿಕ್ಷಕರ ಬಗ್ಗೆ ನಾನು ಹೇಳುವುದೇ ಇಲ್ಲ. ಅವರು ನೈತಿಕವಾಗಿ ಬದ್ಧತೆಯನ್ನು ಪ್ರದರ್ಶಿದ್ದೇ ಆದರೆ, ಅವರಿಂದ ಪಾಠಗಳನ್ನು ಕಲಿತ ವಿದ್ಯಾರ್ಥಿಗಳು ಜಾಣರೋ, ದಡ್ಡರೋ; ಯಾರೇ ಆಗಿದ್ದರೂ ಅವರು ನೈತಿಕವಾಗಿ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ, ಅಥವಾ ಯಾರೇ ಇತರರೊಂದಿಗೆ ವ್ಯವಹರಿಸುವುದರಲ್ಲಿ ನೈತಿಕವಾಗಿ ಯಶಸ್ವಿಯಾಗಿರುತ್ತಿದ್ದರು. ಈಗಿನ ಮಕ್ಕಳು ನೈತಿಕ ಶಿಕ್ಷಣವನ್ನು ಪಡೆಯದೇ ಇರುವ ವಿಷಯ ದಲ್ಲಿ ನಾನು ನೇರವಾಗಿ ಮತ್ತು ನೈತಿಕವಾಗಿ ಹೊಣೆಗಾರರನ್ನಾಗಿ ಮಾಡುವುದು ಪೋಷಕರನ್ನು ಮತ್ತು ಶಿಕ್ಷಕರನ್ನು. ಕುಟುಂಬದ ವಾತಾವರಣ ಅಥವಾ ಪೋಷಕರ ನೇರ ನಡವಳಿಕೆಗಳು ಮತ್ತು ಶಿಕ್ಷಕರ ನೈತಿಕ ಪ್ರದರ್ಶನವು ಪ್ರಭಾವಶಾಲಿಯಾಗಿದ್ದಲ್ಲಿ ಯಾವುದೇ ಮಗುವು ಸಹಜವಾಗಿ ನೈತಿಕವಾಗಿ ಸಬಲವಾಗಿರುವುದು. ತರಗತಿಗಳಲ್ಲಿ ಶಾಂತಿ, ಪ್ರೀತಿ, ಕರುಣೆ, ಮಮತೆ, ಪ್ರಾಮಾಣಿಕತೆ, ಒಗ್ಗಟ್ಟು, ಸಮಾನತೆ ಇತ್ಯಾದಿಗಳ ಬಗ್ಗೆ ಕತೆ ಮತ್ತು ಉದಾಹರಣೆಗಳ ಮೂಲಕ ತಿಳಿ ಹೇಳುವುದು ಒಂದು ಬಗೆಯ ಶಿಕ್ಷಣವಾದರೆ, ಶಿಕ್ಷಕರು ಮತ್ತು ಕುಟುಂಬವರ್ಗದ ಸದಸ್ಯರು ಕೂಡಾ ನೇರವಾಗಿ ತಮ್ಮ ನಡೆ, ನುಡಿ ಮತ್ತು ನಡವಳಿಕೆಗಳಲ್ಲಿ ನೇರವಾಗಿ ನೈತಿಕತೆಯನ್ನು ಪ್ರದರ್ಶಿಸುವುದು ಬಹಳ ಮುಖ್ಯವಾದ ನೈತಿಕ ಪಾಠವೇ ಆಗುತ್ತದೆ. ಇದರ ಬಗ್ಗೆ ಹೆಚ್ಚಿಗೆ ಮುಂದೆ ತಿಳಿಯೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)