varthabharthi

ಸುಗ್ಗಿ

ಫೋಟೋಗ್ರಫಿ ಸುತ್ತಮುತ್ತ

ಕ್ಯಾಮರಾ ಕೈಗೆ ಬಂದ ತಕ್ಷಣ...

ವಾರ್ತಾ ಭಾರತಿ : 2 Jun, 2019
ನೂರ್ ಅಹಮದ್ ಎ.ಎಸ್, ಲೋಕೇಶ್ ಮೊಸಳೆ

ಭಾಗ 21

ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಕಳೆಯುವ ಹಲವು ವಿಶೇಷ ಸಂದರ್ಭಗಳಲ್ಲಿ ಆ ಕ್ಷಣಗಳು ಮಾಸಿ ಹೋಗಕೊಡದೆಂದು ನಮ್ಮ ಮೊಬೈಲ್‌ಗಳನ್ನೇ ಬಳಸಿ ನಾವೆಲ್ಲ ಚಿತ್ರ ತೆಗೆಯುತ್ತಿರುತ್ತೇವೆ. ಅದರಾಚೆಗೆ ಕೆಲವರ ಮನದಲ್ಲಿ ಮೂಡಬಹುದಾದ ವಿಚಾರವೇನೆಂದರೆ ತಾವು ಹವ್ಯಾಸಿ ಛಾಯಾಗ್ರಾಹಕರಾಗಬೇಕೆಂದರೆ ಕೈಯಲ್ಲಿ ಉತ್ತಮ ಗುಣಮಟ್ಟದ ಡಿಎಸ್‌ಎಲ್‌ಆರ್ ಕ್ಯಾಮರಾ ಇರಬೇಕೆಂಬುದು. ಕೈಯಲ್ಲಿ ಸಾಕಷ್ಟು ಹಣವಿದ್ದರೆ ಈ ಆಸೆ ಈಡೇರಿಸಿಕೊಳ್ಳುವುದೂ ಕಷ್ಟವೇನಲ್ಲ. ಆಗ ಮೂಡುವ ಬಹುದೊಡ್ಡ ಪ್ರಶ್ನೆ ಏನೆಂದರೆ ಯಾವ ಬಗೆಯ, ಯಾವ ಮಟ್ಟದ, ಎಷ್ಟು ಬೆಲೆಯ ಕ್ಯಾಮರಾ ಖರೀದಿಸಬೇಕೆಂಬುದು. ಇಂಥ ಒಂದು ಗೊಂದಲಮಯ ಪ್ರಶ್ನೆಯನ್ನು ನಿವಾರಿಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ನಾವು ಮೊದಲು ನಮಗೆ ಯಾವ ಕಾರಣಕ್ಕಾಗಿ ಕ್ಯಾಮರಾದ ಆವಶ್ಯಕತೆ ಇದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕೇವಲ ನಮ್ಮ ಬದುಕಿನ ಸುತ್ತಮುತ್ತಲ ಹತ್ತು ಹಲವು ವಿಶೇಷ ಸಂದರ್ಭಗಳ ಛಾಯಾಚಿತ್ರ ತೆಗೆಯಬೇಕೆಂದರೆ ಬೇಸಿಕ್ ಮಾಡೆಲ್‌ನ ಆರಂಭಿಕ ಬೆಲೆಯ/ಕಡಿಮೆ ಬೆಲೆಯ ಕ್ಯಾಮರಾ ಖರೀದಿಸಬಹುದು.

ಸಮಾಜದ ನಡುವೆ ನಡೆಯುವ ವಿಶೇಷ ವಿದ್ಯಮಾನಗಳ ವಿಭಿನ್ನ ಚಿತ್ರಗಳನ್ನು ತೆಗೆಯುವ ಇರಾದೆ ಇದ್ದಲ್ಲಿ ಮುಂದಿನ ಹಂತದ ಕೊಂಚ ಹೆಚ್ಚಿನ ಬೆಲೆಯ ಕ್ಯಾಮರಾ ಖರೀದಿಸಬಹುದು. ಇನ್ನು ಮಾಡೆಲಿಂಗ್ ಕ್ಯಾಂಡಿಡ್ ಇತ್ಯಾದಿ ಚಿತ್ರಗಳನ್ನು ತೆಗೆಯಲು ಇನ್ನಷ್ಟು ಬೆಲೆ ತೆತ್ತು ಉತ್ತಮ ಗುಣಮಟ್ಟದ ಕ್ಯಾಮರಾಗೆ ಕೈ ಹಾಕಬಹುದು. ಒಂದು ವೇಳೆ ವನ್ಯಜೀವಿ ಛಾಯಾಗ್ರಹಣ ಮಾಡುವ ಮನಸ್ಸಿದ್ದಲ್ಲಿ ಇನ್ನೂ ದುಬಾರಿ ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಸಾಲು ಸಾಲಾಗಿ ದೊರಕುತ್ತವೆ.ಈ ಎಲ್ಲಾ ರೀತಿಯ ಕ್ಯಾಮರಾಗಳಿಗೂ ಉತ್ಕೃಷ್ಟ ಮಟ್ಟದ ಚಿತ್ರಣಕ್ಕಾಗಿ ವಿವಿಧ ರೀತಿಯ ಲೆನ್ಸ್‌ಗಳನ್ನು ಕಂಪೆನಿ ತಯಾರಿಸಿರುತ್ತದೆ.

ನಮಗೆ ಎಷ್ಟು ಬೆಲೆತೆತ್ತು ಲೆನ್ಸ್‌ಗಳನ್ನು ಖರೀದಿಸಲು ಸಾಧ್ಯವೋ ಅಷ್ಟು ವಿಸ್ತಾರವಾಗಿ ಲೆನ್ಸ್‌ಗಳ ಜಗತ್ತು ಹರಡಿಕೊಂಡಿದೆ. ನೂರಾರು ಬಗೆಯ ಲೆನ್ಸ್‌ಗಳು ಹತ್ತಿಪ್ಪತ್ತು ವಿಧದ ಫೋಟೊಗ್ರಫಿಗೆಂದು ಮೀಸಲಿವೆ. ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಕ್ಕಿಂತ ನಮ್ಮ ಜೇಬಿಗೆ ಹೆಚ್ಚಿನ ಹೊರೆಯಾಗದ, ನಮ್ಮ ಆಸಕ್ತಿಗೆ ಹೊಂದುವಂತಹ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಕೊಂಡುಕೊಳ್ಳುವುದು ಉತ್ತಮ.

 ಸಾಮಾನ್ಯವಾಗಿ ಕ್ಯಾಮರಾ ಕೊಳ್ಳುವಾಗ ಅದರೊಂದಿಗೆ ಸಾಧಾರಣ ಮಟ್ಟದ ಲೆನ್ಸ್‌ಗಳನ್ನು ಆಯಾ ಕಂಪೆನಿಗಳು ಕೊಡುತ್ತವೆ. ಅದರಿಂದ ಬಹಳ ವಿಷೇಶವಾದ ಚಿತ್ರಗಳನ್ನು ತೆಗೆಯಲು ಆಗುವುದಿಲ್ಲ. ಹಾಗಾಗಿ ಮೊದಲೇ ನಾವು ನಿರ್ಧರಿಸಬೇಕು-ಯಾವ ಗುಣಮಟ್ಟದ ಲೆನ್ಸ್‌ಅನ್ನು ಖರೀದಿಸುವುದು ಒಳಿತು ಎಂದು. ಬಹುತೇಕ ಮಂದಿಗೆ ಈ ಗೊಂದಲ ನಿವಾರಣೆಯಾಗುವುದು ಕಷ್ಟವೇ. ಆದರೆ ತಾವು ಖರೀದಿಸಲಿರುವ ಕ್ಯಾಮರಾ ಬಗ್ಗೆ ಮೊದಲೇ ಒಂದಷ್ಟು ಅಧ್ಯಯನ, ಮಾಹಿತಿ, ತಿಳುವಳಿಕೆ ಪಡೆಯುವುದು ಒಳಿತು.

ಯಾವುದೇ ಕ್ಯಾಮರಾ ಅಥವಾ ಲೆನ್ಸ್ ಖರೀದಿಸಲಿ ಅವುಗಳಿಗೆ ತಮ್ಮದೇ ಆದ ಮಿತಿಗಳೂ ಇರುತ್ತವೆ. ಅದನ್ನೂ ಅರಿಯಬೇಕು. ಹಾಗೊಂದು ವೇಳೆ ತಾವು ಖರೀದಿಸಿದ ಕ್ಯಾಮರಾದ ತಾಂತ್ರಿಕ ಅಂಶಗಳನ್ನು ಮತ್ತಷ್ಟು ಸವಿಸ್ತಾರವಾಗಿ ಅರಿತು ಅತ್ಯುತ್ತಮ ಛಾಯಾಗ್ರಹಣ ಅದರ ಮಿತಿಯಲ್ಲಿಯೇ ಮೂಡಬಹುದು ಎಂಬುದನ್ನೂ ತಿಳಿದುಕೊಳ್ಳಬೇಕು. ಸದಾ ಇನ್ನೊಂದು ಕ್ಯಾಮರಾ ಮತ್ತೊಂದು ಲೆನ್ಸ್ ಎನ್ನುತ್ತಾ ಅದರ ಹಿಂದೆ ಬೀಳುವುದು ಮುರ್ಖತನ. ತಮ್ಮ ಬಳಿಯಿರುವ ಕ್ಯಾಮರಾದ ‘ಆಳ-ಅಗಲ’ಗಳನ್ನು ಅಭ್ಯಸಿಸಿದರೆ ಅದರ ಮೇಲೆ ಸಂಪೂರ್ಣ ಹತೋಟಿ ಸಾಧಿಸಿ ಉತ್ತಮ ಚಿತ್ರಗಳನ್ನು ತೆಗೆಯುತ್ತ ದೀರ್ಘಕಾಲದವರೆಗೆ ಮತ್ತೊಂದು ಕ್ಯಾಮರಾದ ಬಗ್ಗೆ ಆಲೋಚನೆಬಾರದು. ಮುಂದೆ ಒಂದು ಹಂತದಲ್ಲಿ ಸಾಕು ಎಂದೆನಿಸಿದ ನಂತರ ಬೇರೊಂದು ಕ್ಯಾಮರಾ/ಲೆನ್ಸ್‌ಗೆ ಕೈ ಹಾಕುವುದು ಒಳಿತು.

 ನೀವು ಕ್ಯಾಮರಾವೊಂದನ್ನು ಕೊಂಡುಕೊಂಡಿರೆಂದ ತಕ್ಷಣ ಅದರ ಜ್ಞಾನವೆಲ್ಲ ಸುಲಭವಾಗಿ ನಿಮ್ಮ ವಶವಾಗುವುದಿಲ್ಲ. ಏನೇನೂ ತಾಂತ್ರಿಕ ಜ್ಞಾನವಿಲ್ಲದಿದ್ದರೂ ನೀವು ಆಟೊ ಮೋಡ್‌ಗೆ ಹಾಕಿ ಫೋಟೊ ತೆಗೆಯಬಹುದು. ಹಾಗಿದ್ದರೆ ನಿಮ್ಮ ಕ್ಯಾಮರಾ ಜ್ಞಾನ ಶೇ.5 ಎಂದು ಅರ್ಥ. ಕ್ಯಾಮರಾದಲ್ಲಿ (DSLR) ಹಲವು ಮೋಡ್‌ಗಳಿದ್ದು ಬೇರೆ ಬೇರೆ ಸಂದರ್ಭಗಳಲ್ಲಿ ಅವು ಉತ್ತಮ ಚಿತ್ರ ತೆಗೆಯಲು ಪೂರಕವಾಗಿ ಹೊಂದಿಕೊಂಡು ಬರುತ್ತವೆ. ಉಳಿದ ಮೋಡ್‌ಗಳ ಅರಿವು ಮೂಡಿದರೆ ಶೇ.25ರಷ್ಟು ಕ್ಯಾಮರಾ ಕಲಿತಂತೆ. ಇನ್ನೂ ಕಲಿಯಬೇಕಾದ ತಾಂತ್ರಿಕತೆ ಹಿರಿದಾಗಿರುತ್ತದೆ. ಆದ್ದರಿಂದ ಕ್ಯಾಮರಾ ಒಂದನ್ನು ಕೊಂಡ ತಕ್ಷಣ ಅದರೊಂದಿಗೆ ನೀಡಲಾದ user manual (ಬಳಕೆದಾರರ ಕೈಪಿಡಿ) ಅನ್ನು ಚಾಚೂತಪ್ಪದೆ ಶ್ರದ್ಧೆಯಿಂದ ಓದಬೇಕು. ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ನಂತರವಷ್ಟೇ ಆ ಕ್ಯಾಮರಾದ ‘ಒಳ-ಹೊರಗು’ ನಿಮ್ಮಾಳಗೆ ಇಳಿಯಲು ಸಾಧ್ಯ. ಒಮ್ಮೆ ಅಲ್ಲದಿದ್ದರೆ ಮತ್ತೆ ಮತ್ತೆ ಓದಿ. ಓದಿದಂತೆಲ್ಲ ಕ್ಯಾಮರಾ ಮೇಲಿನ ನಿಮ್ಮ ಹಿಡಿತ ಬಿಗಿಯಾಗುತ್ತದೆ. ಅತ್ಯುತ್ತಮ ಚಿತ್ರ ತೆಗೆಯಲು ಸಾಧ್ಯವಾಗುತ್ತದೆ. ಇಂತಹ ಕೈಪಿಡಿಯನ್ನು ಮುಂದಿಟ್ಟುಕೊಂಡು ನಾವು ಪ್ರಯೋಗಗಳನ್ನು ಮಾಡುತ್ತಿರಬೇಕು. ಕಲಿಕೆ ಮನದಾಳಕ್ಕೆ ಇಳಿದಾಗ ಮನಸ್ಸಿಗೆ ಸಿಗುವ ಆನಂದವೇ ಆನಂದ. ನೀವು ಯಾವ ಕ್ಯಾಮರಾವನ್ನೇ ಕೊಂಡುಕೊಂಡರೂ ಅದಕ್ಕೆ ಅದರದ್ದೇ ಆದ ನೂರಾರು ವಿಶೇಷತೆಗಳಿರುತ್ತವೆ. ಆ ವಿಶೇಷತೆಯ ಮೇಲೆ ನಿಯಂತ್ರಣ ಪಡೆಯುವುದೇ ನಿಜವಾದ ಕಲಿಕೆ. ಆನಂತರ ತೆಗೆಯುವ ಛಾಯಾಚಿತ್ರಗಳು ಕೊಡುವ ಮಜವೇ ಬೇರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)