varthabharthi

ನಿಮ್ಮ ಅಂಕಣ

ವ್ಯವಸ್ಥಿತ ಕಾಮಗಾರಿಯನ್ನು ಕೈಗೊಳ್ಳಲಿ

ವಾರ್ತಾ ಭಾರತಿ : 2 Jun, 2019
ಡ್ಯಾನಿಯಲ್.ಜೆ, ಹುಣಸನಹಳ್ಳಿ, ತರೀಕೆರೆ

ಮಾನ್ಯರೇ,

ರಾಜ್ಯದಲ್ಲಿ ಇನ್ನು ಒಂದು ವಾರದಲ್ಲಿ ಮುಂಗಾರು ಆರಂಭಗೊಳ್ಳುವ ಸಾಧ್ಯತೆಗಳಿದ್ದು, ಇದರ ಅನ್ವಯ ಉದ್ಯಾನ ನಗರಿ ಸೇರಿದಂತೆ ಬಂದರು ನಗರಿ ಮಂಗಳೂರಿನಲ್ಲೂ ಈಗಿನಿಂದಲೇ ವ್ಯವಸ್ಥಿತ ಕಾಮಗಾರಿಗಳನ್ನು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ನಡೆಸಬೇಕಿದೆ. ರಸ್ತೆಯ ಅಕ್ಕ ಪಕ್ಕದ ಕಸಗಳ ಸಾಗಾಟ, ಚರಂಡಿ ಹಾಗೂ ಕಾಲುವೆಗಳಲ್ಲಿ ಸಂಗ್ರಹವಾದ ಕಸಗಳನ್ನು ತೆಗೆದು ಸರಾಗವಾಗಿ ಮಳೆ ನೀರು ಹರಿಯಲು ಅನುವು ಮಾಡಬೇಕಿದೆ. ತಗ್ಗು ಪ್ರದೇಶದಲ್ಲಿನ ಮನೆಗಳ ಪಕ್ಕದ ಚರಂಡಿಗಳ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕಿದೆ.

ಪ್ರತಿ ವರ್ಷ ಮುಂಗಾರು ಆರಂಭಗೊಂಡ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಂತೂ ತತ್ತರಿಸಿ ಹೋಗುತ್ತಿದೆ. ರಸ್ತೆ ಹಾಗೂ ಚರಂಡಿಗಳೆಲ್ಲಾ ಕಾಂಕ್ರಿಟ್‌ನಿಂದ ಆವೃತವಾಗಿದ್ದು ನೀರನ್ನು ಹೀರಿಕೊಳ್ಳಲು ಭೂಮಿಗೆ ಅವಕಾಶವೇ ಇಲ್ಲದಂತಾಗಿದೆ. ಮಳೆಗಾಲದಲ್ಲಿ ನಗರದ ಕೆಲ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಮನೆಗಳಿಗೆ ನೀರು ನುಗ್ಗುವುದು ಸರ್ವೆ ಸಾಮಾನ್ಯವಾಗಿದೆ. ನಗರದಾದ್ಯಂತ ಸುಸಜ್ಜಿತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆ ತುಂಬೆಲ್ಲಾ ಹರಿದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿವೆ. ರಸ್ತೆಗಳೆಲ್ಲಾ ಕೆರೆಗಳಾಗಿಬಿಡುತ್ತವೆ. ಇದರ ಜೊತೆಗೆ ಕಸ-ಕಡ್ಡಿ ತ್ಯಾಜ್ಯ ವಸ್ತುಗಳು ನೀರಿನಲ್ಲಿ ತೇಲಿ ಬಂದು ರಸ್ತೆಯಲ್ಲೆ ನಿಂತು ಗಬ್ಬು ನಾರುತ್ತಿದ್ದ ಪ್ರಸಂಗಗಳು ಆಗಿದ್ದುಂಟು. ಅತಿಯಾದ ಮಳೆಯಿಂದ ರಸ್ತೆ ಕಾಣದೆ ಚರಂಡಿ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಹಾಗೂ ತಗ್ಗು ಪ್ರದೇಶದ ಅಂಡರ್ ಪಾಸ್‌ನ ನೀರಲ್ಲಿ ಬಸ್ಸು ಸಿಕ್ಕಿಕೊಂಡ ಪ್ರಸಂಗಗಳನ್ನೂ ಕಾಣಬಹುದು.

ಇಷ್ಟೆಲ್ಲಾ ಸಮಸ್ಯೆಗಳು ಪ್ರತಿ ಮಳೆಗಾಲದಲ್ಲೂ ನಡೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳಾಗಲಿ ಅಥವಾ ಸರಕಾರವಾಗಲಿ ಇದರ ಕುರಿತಂತೆ ಚರ್ಚೆಗಳನ್ನು ನಡೆಸಿ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಂತೆ ಕಾಣಿಸುತ್ತಿಲ್ಲ. ಅವಘಡಗಳು ಸಂಭವಿಸಿದಾಗ ಮಾತ್ರ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡುತ್ತಾರೆ. ಅದರ ಬದಲು ಮಳೆಗಾಲ ಆರಂಭವಾಗುವ ಮೊದಲೇ ರಸ್ತೆಯ ಅಕ್ಕ-ಪಕ್ಕದ ಚರಂಡಿಗಳ ಕ್ಲೀನಿಂಗ್ ಕಾರ್ಯ ಹಾಗೂ ರಾಜ ಕಾಲುವೆಯಲ್ಲಿನ ಕಸದ ರಾಶಿಯನ್ನು ತೆಗೆಸಿ ಮಳೆನೀರು ಹರಿಯಲು ಸುಲಭವಾಗಿ ಮಾರ್ಗ ಮಾಡಿದರೆ ಯಾವುದೇ ಸಮಸ್ಯೆಗಳು ಸಂಭವಿಸುವುದಿಲ್ಲ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)