varthabharthi

ನಿಮ್ಮ ಅಂಕಣ

ಚುನಾವಣೆಯಲ್ಲಿ ಆಗಿರುವ ಹಿನ್ನಡೆಯನ್ನು ಎದುರಿಸುವಾಗ ವಿರೋಧಪಕ್ಷಗಳು ಹತಾಶೆಯ ಜಾರುದಾರಿಯಲ್ಲಿ ಬೀಳಬಾರದು.

ವಿರೋಧ ಪಕ್ಷಗಳು ಹತಾಶೆಗೊಳ್ಳಬಾರದು

ವಾರ್ತಾ ಭಾರತಿ : 4 Jun, 2019
ಕೃಪೆ: Economic and Political Weekly

ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಅದರ ನೇತೃತ್ವದ ಎನ್‌ಡಿಎ ಕೂಟದ ಚುನಾವಣಾ ವಿಜಯದ ಪ್ರಮಾಣ ಹಾಗೂ ಅಂತರಗಳೆರಡೂ ದಿಗ್ಭ್ರಾಂತಿ ಹುಟ್ಟಿಸುವಂತಿದೆ. ಆದರೆ ಅದಕ್ಕೆ ದಿಢೀರಾದ ಅಥವಾ ಉತ್ಪ್ರೇಕ್ಷಿತ ಪ್ರತಿಕ್ರಿಯೆಗಳನ್ನು ನೀಡದೆ ಸಂಯಮ ಪಾಲಿಸುವುದು ಒಳಿತು. ಏಕೆಂದರೆ ಅಂತಹ ಪ್ರತಿಕ್ರಿಯೆಗಳು ಗಂಭೀರವಾದ ವಿಶ್ಲೇಷಣೆಯನ್ನು ಆಧರಿಸಿರುವುದಿಲ್ಲ. ಗಂಭೀರವಾದ ವಿಶ್ಲೇಷಣೆಗಳನ್ನು ತರಾತುರಿಯಲ್ಲೂ ಮಾಡಲಾಗುವುದಿಲ್ಲ. ಸಕಲರನ್ನು ಒಳಗೊಳ್ಳುವ ಪ್ರಜಾತಂತ್ರದ ಬಗ್ಗೆ ಆಸಕ್ತರಾಗಿರುವ ಎಲ್ಲರೂ ಅಂಥ ಒಂದು ಸಮಗ್ರ ವಿಶ್ಲೇಷಣೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ. ಸ್ವಲ್ಪ ಸಮಯ ತೆಗೆದುಕೊಂಡು ವಿಷದವಾಗಿ ಮತ್ತು ಆತ್ಮವಿಮರ್ಶಾತ್ಮಕವಾಗಿ ಚುನಾವಣೆಯ ಫಲಿತಾಂಶಗಳನ್ನು ವಿಶ್ಲೇಷಿಸುವ ಜವಾಬ್ದಾರಿ ಅಂಥವರ ಮೇಲಿದೆ. ಆದರೆ ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಗರ ಭಾವೋನ್ಮಾದಿ ಮತ್ತು ಅತಿರಂಜಿತ ವಿಜಯದ ಸಮಾರಂಭಗಳು ನಡೆಯುತ್ತಿದ್ದರೆ ಮತ್ತೊಂದೆಡೆ ವಿರೋಧ ಪಕ್ಷಗಳಲ್ಲಿ ಅಪಾರವಾದ ಹತಾಶೆಯೇ ಕಂಡುಬರುತ್ತಿದೆ. ಇಂತಹ ಒಂದು ವಿಜಯವನ್ನು ಉತ್ಪಾದಿಸಿಕೊಳ್ಳಲು ಎನ್‌ಡಿಎ ಕೂಟಕ್ಕಿದ್ದ ಸೌಕರ್ಯಗಳನ್ನು ಗಮನಿಸಿದಾಗ ವಿರೋಧ ಪಕ್ಷಗಳನ್ನು ಹತಾಶೆಗೆ ದೂಡಿರುವ ಪರಿಸ್ಥಿತಿಗಳ ಬಗ್ಗೆ ನಮ್ಮ ವಿಶ್ಲೇಷಣೆಯನ್ನು ಕೇಂದ್ರೀಕರಿಸುವುದು ನ್ಯಾಯೋಚಿತವಾಗಿರುತ್ತದೆ.

ಒಂದು ಪ್ರಜಾತಂತ್ರವು ಜೀವಂತವಾಗುಳಿಯಬೇಕೆಂದರೆ ವಿರೋಧ ಪಕ್ಷಗಳ ಆರೋಗ್ಯವು ಸದೃಢವಾಗಿರುವುದು ಅತ್ಯಗತ್ಯವಾಗಿರುವುದರಿಂದಲೂ ಚುನಾವಣೋತ್ತರ ಸಂದರ್ಭದಲ್ಲಿನ ವಿರೋಧಪಕ್ಷಗಳ ಪರಿಸ್ಥಿತಿಯ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ. ಈ ಹತಾಶೆಯ ಕ್ಷಣಗಳು ಹಲವಾರು ಸ್ವರೂಪಗಳಲ್ಲಿ ಅಭಿವ್ಯಕ್ತಗೊಂಡಿದೆ. ವಿರೋಧಿ ಬಣದೊಳಗೆ ನಡೆಯುತ್ತಿರುವ ಪರಸ್ಪರ ದೋಷಾರೋಪಣೆಗಳು, ನೈತಿಕ ಮೇಲರಿಮೆಯಿಂದ ಕೂಡಿದ ವಿಮರ್ಶೆಗಳು ಮತ್ತು ಅದನ್ನು ಆಧರಿಸಿದ ಉದಾರಮಯ ಸಲಹೆಗಳಲ್ಲಿ ಒಂದು ಬಗೆಯ ಹತಾಶೆ ವ್ಯಕ್ತವಾಗುತ್ತಿದೆ. ವಿರೋಧಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷವು ಸಾಂಪ್ರದಾಯಿಕವಾಗಿ ಬಿಜೆಪಿಯು ಪ್ರಬಲವಾಗಿರುವ ಕಡೆಗಳಲ್ಲಿ ಯಾವ ಪರಿಣಾಮವನ್ನೂ ಬೀರಿಲ್ಲ. ಇದು 2014ರ ನಂತರ ಅದು ಎಲ್ಲೆಲ್ಲಿ ಬಿಜೆಪಿಯ ವಿರುದ್ಧ ನೇರ ಹಣಾಹಣಿ ನಡೆಸಿದೆಯೋ ಅಲ್ಲೆಲ್ಲಾ ಕಳೆದುಕೊಂಡಿರುವ ಸೀಟುಗಳ ಪ್ರಮಾಣದಲ್ಲಿ ವ್ಯಕ್ತವಾಗಿದೆ.

ಮಧ್ಯಭಾರತದ ಮೂರು ರಾಜ್ಯಗಳಲ್ಲಿ ಅದು ವಿಧಾನಸಭಾ ಚುನಾವಣೆಗಳಲ್ಲಿ ಮಾಡಿದ ಸಾಧನೆಯನ್ನು ಉಳಿಸಿಕೊಳ್ಳಲು ವಿಫಲವಾಗಿರುವುದು ಮತ್ತು ತನ್ನ ಪ್ರಭಾವವು ಪ್ರಬಲವಾಗಿದ್ದ ಕರ್ನಾಟಕ, ಮಹಾರಾಷ್ಟ್ರ ಮತ್ತು ಅಮೇಥಿಗಳನ್ನು ಕಳೆದುಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸೇತರ ವಿರೋಧವೂ ಇಲ್ಲದಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಈ ಚುನಾವಣಾ ವೈಫಲ್ಯವು ಚುನಾವಣಾತ್ಮಕ ದೃಷ್ಟಿಯಿಂದ ಮಾತ್ರವಲ್ಲದೆ ವಿಶಾಲ ಪ್ರಜಾತಾಂತ್ರಿಕ ದೃಷ್ಟಿಯಿಂದಲೂ ಕಳವಳಕಾರಿ ಸಂಗತಿಯಾಗಿದೆ. ಇದಲ್ಲದೆ ವಿರೋಧಪಕ್ಷಗಳ ನಡುವಿನ ಮೈತ್ರಿಯ ಕೊರತೆಯಲ್ಲೂ ಹಾಗೂ ಅದರಲ್ಲಿ ಕಾಂಗ್ರೆಸ್‌ನ ಜವಾಬ್ದಾರಿಯ ಬಗ್ಗೆಯೂ ಟೀಕೆಗಳನ್ನು ಮಾಡಬಹುದು. ಆದರೆ ಉತ್ತರಪ್ರದೇಶ ಮತ್ತು ಬಿಹಾರಗಳಲ್ಲೂ ಸಹ ವಿರೋಧ ಪಕ್ಷಗಳು ಒಂದು ಸದೃಢವಾದ ಸಾಮಾಜಿಕ ಮೈತ್ರಿ ಅಥವಾ ಸಾಮಾಜಿಕ ಕೂಟವನ್ನು ಕಟ್ಟುವಲ್ಲಿ ವಿಫಲವಾಗಿರುವುದೂ ಸಹ ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಎದ್ದುಕಾಣುತ್ತದೆ.

ಆದರೆ ಅದೇ ಸಮಯದಲ್ಲಿ ಬಿಜೆಪಿಯ ಚುನಾವಣಾ ಸಾಧನೆಯು ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದೆಯೆಂದು ದಕ್ಷಿಣದಲ್ಲಿ ಬಿಜೆಪಿ ವಿಫಲವಾಗಿದೆಯೆಂದು ನಮಗೇ ನಾವೇ ರಿಯಾಯಿತಿಕೊಟ್ಟುಕೊಂಡು ಸಮಾಧಾನ ಪಟ್ಟುಕೊಳ್ಳುವುದು ಸಹ ಆತ್ಮವಂಚನೆಯೇ ಆಗುತ್ತದೆ. ಇದಕ್ಕೆ ಬಿಜೆಪಿಯು ಕರ್ನಾಟಕದಲ್ಲಿ ಭಾರೀ ಸಾಧನೆ ಮಾಡಿರುವುದು ಮಾತ್ರವಲ್ಲದೆ ತೆಲಂಗಾಣ ಹಾಗೂ ಪ.ಬಂಗಾಳಗಳಲ್ಲೂ ಬಲವಾದ ಮುನ್ನಡೆಯನ್ನು ಪಡೆದಿರುವುದು ಮಾತ್ರ ಕಾರಣವಲ್ಲ. ಬದಲಿಗೆ ಸರ್ವಾಧಿಕಾರಿ ಬಹುಸಂಖ್ಯಾತವಾದಕ್ಕೆ ಪ್ರಾದೇಶಿಕತೆ ಒಂದು ಬಲವಾದ ಪರ್ಯಾಯವಾಗುವುದಿಲ್ಲ ಎನ್ನುವುದೇ ಇದಕ್ಕೆ ಪ್ರಮುಖ ಕಾರಣ. ಹಾಗೆಯೇ ಬಿಜೆಪಿಯೇತರ ಮತ್ತು ಎನ್‌ಡಿಎಯೇತರ ಪಕ್ಷಗಳು ಪಡೆದಿರುವ ವೋಟುಗಳು ಈಗಲೂ ಎನ್‌ಡಿಎಗಿಂತ ಅಧಿಕವಾಗಿದೆಯೆನ್ನುವುದರಲ್ಲಿ ಸಮಾಧಾನ ಪಟ್ಟುಕೊಳ್ಳುವುದನ್ನು ನಿಲ್ಲಿಸಬೇಕು. ಕಳೆದ ಐದು ವರ್ಷಗಳಲ್ಲಿ ಇತರು ಪಡೆದ ಶೇ.69 ವೋಟುಗಳಿಗಿಂತ ಬಿಜೆಪಿ ಪಡೆದ ಶೇ.31 ವೋಟು ಕಡಿಮೆಯೆಂಬ ವಾದವನ್ನು ಪದೇಪದೇ ಮಾಡುತ್ತಲೇ ಬರಲಾಗಿತ್ತು.

ಈ ತರ್ಕವು ಕ್ಷೇತ್ರವೊಂದರ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ವೋಟು ಪಡೆದವರು ಗೆಲ್ಲುವ ಭಾರತದ ಚುನಾವಣಾ ಪದ್ಧತಿಯ ವಾಸ್ತವವನ್ನು ಹಾಗೆಯೇ ಎದುರಿಸುವುದನ್ನು ನಿರಾಕರಿಸುವಂತೆ ಮಾಡುತ್ತದೆ. ಅಲ್ಲದೆ ಬಿಜೆಪಿಯ ರಾಜಕೀಯ ಸಂಕಥನಗಳು ಪಡೆದುಕೊಂಡಿರುವ ರಾಜಕೀಯ ಮಾನ್ಯತೆಯನ್ನು ಕಡೆಗಣಿಸುವಂತೆ ಮಾಡುತ್ತದೆ ಹಾಗೂ ಬಿಜೆಪಿಯ ಸಂಕಥನಕ್ಕೆ ಪ್ರತಿಯಾಗಿ ಜನರ ಮಾನ್ಯತೆ ಪಡೆಯಬಲ್ಲಂಥ ಪ್ರತಿ-ಸಂಕಥನವನ್ನು ಕಟ್ಟಬೇಕಿರುವ ಅಗತ್ಯವನ್ನೇ ಮನಗಾಣದೆ ರಾಜಕೀಯವನ್ನು ಒಂದು ಅಂಕಗಣಿತವನ್ನಾಗಿ ಪರಿಗಣಿಸುವಂತೆ ಮಾಡುತ್ತದೆ. ಅದೇ ರೀತಿ ವಿರೋಧ ಪಕ್ಷಗಳು ಆತ್ಮಾಘಾತ-ಸ್ವಯಂನಿಂದೆ ಮಾಡಿಕೊಳ್ಳುವ ಅಥವಾ ಅದಕ್ಕೆ ತದ್ವಿರುದ್ಧವಾಗಿ ಜನನಿಂದೆಯಲ್ಲಿ ತೊಡಗುವ ಎರಡೂ ಅಪಾಯಗಳ ಬಗ್ಗೆ ಕೂಡಾ ಎಚ್ಚರಿಕೆಯಿಂದಿರಬೇಕು. ಮೊದಲನೆಯದು ಜನರು ಬಿಜೆಪಿಗೆ ಕೊಟ್ಟಿರುವ ಸಕಾರಾತ್ಮಕವಾದ ಓಟಿನ ಪ್ರಮಾಣವನ್ನು ಕಡಿಮೆ ಮಾಡಿ ನೋಡುವಂತೆ ಮಾಡುತ್ತದೆ. ಇದು ಬಿಜೆಪಿಗೆ ಶೇ.50ರಷ್ಟು ವೋಟುಗಳನ್ನು ನೀಡಿರುವ ರಾಜ್ಯಗಳ ಸಂಖ್ಯೆಯಲ್ಲಿ ಮತ್ತು ಮಧ್ಯಭಾರತದಲ್ಲಿ ವಿಶೇಷವಾಗಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ಪಡೆದುಕೊಂಡಿರುವ ಗೆಲುವಿನ ಅಂತರದ ಪ್ರಮಾಣದಲ್ಲಿ ವ್ಯಕ್ತವಾಗಿದೆ.

ಇದು ಸಂಘಪರಿವಾರದ ರಾಜಕೀಯ ಸಿದ್ಧಾಂತವನ್ನು ಬಳಸಿಕೊಳ್ಳುತ್ತಾ ಚುನಾವಣಾ ಮಾದರಿಯಿಂದ ಹೊರತಾಗಿಯೂ ಅಧಿಕಾರರೂಢ ಪಕ್ಷವಾಗಬೇಕೆಂಬ ಬಿಜೆಪಿಯ ಹುನ್ನಾರಗಳಿಗೆ ಸಿಕ್ಕಿರುವ ಸಕಾರಾತ್ಮಕ ಬೆಂಬಲವೇ ಆಗಿದೆ. ಇದನ್ನು ಗುರುತಿಸುವ ಸಂದರ್ಭದಲ್ಲೂ ಸಂಘಪರಿವಾರದ ಯೋಜನೆಗಳಿಗೆ ಬಲಿಯಾದ ಜನರನ್ನೇ ದೂಷಿಸಲು ಮುಂದಾಗಬಾರದು. ಆ ರೀತಿ ದೋಷಾರೋಪಣೆ ಮಾಡುವುದರಿಂದ ರಾಜಕೀಯ ಕ್ರಿಯಾಶೀಲತೆಯಿಂದ ಹಿಂದೆ ಸರಿದಂತಾಗುತ್ತದೆ. ವಿರೋಧಪಕ್ಷಗಳು ಮಾಡುವ ಆತ್ಮವಿಶ್ವಾಸ ರಹಿತ ವೈಭವೀಕರಣಗಳು ಜನರನ್ನು ಪ್ರಜ್ಞಾಶೂನ್ಯರನ್ನಾಗಿಸುತ್ತದೆ ಮತ್ತು ಸತ್ಯದ ಬೆನ್ನಿಗೆ ಜನರನ್ನು ಅಣಿನೆರೆಸುವ ಉದ್ದೇಶಗಳಿಗೂ ಧಕ್ಕೆಯುಂಟುಮಾಡುತ್ತದೆ. ರಾಜಕೀಯದಲ್ಲಿ ಸಾರ್ವಜನಿಕ ಅಭಿಪ್ರಾಯವೆಂಬುದು ಮೊದಲೇ ರೂಪುಗೊಂಡಿರುವುದಿಲ್ಲ. ಬದಲಿಗೆ ಅದನ್ನು ಸದಾ ರೂಪಿಸುತ್ತಿರಬೇಕಾಗುತ್ತದೆ. ವಾಸ್ತವವಾಗಿ ರಾಜಕೀಯ ಪ್ರಕ್ರಿಯೆಗಳ ಉದ್ದೇಶವೇ ಅದು. ಹೇಗಿದ್ದರೂ ಹೊಸ ಜನರನ್ನೇ ಆಯ್ಕೆ ಮಾಡಿಕೊಳ್ಳುವ ಪರ್ಯಾಯ ಎಂದಿಗೂ ಇರುವುದಿಲ್ಲವಾದ್ದರಿಂದ ಬಿಜೆಪಿ ಮತ್ತು ಎನ್‌ಡಿಎಗೆ ವೋಟುಹಾಕಿದ ಜನರನ್ನೂ ಒಳಗೊಂಡಂತೆ ಈ ಜನಸಮೂಹದೊಳಗಿಂದಲೇ ಎನ್‌ಡಿಎ-ಬಿಜೆಪಿಗಳು ಹುಟ್ಟುಹಾಕಿರುವ ಸಾರ್ವಜನಿಕತೆಗೆ ಪ್ರತಿಯಾದ ಪ್ರತಿಸಾರ್ವಜನಿಕತೆಯನ್ನು ರೂಪಿಸಬೇಕು.

ಬಿಜೆಪಿಯ ಅಜೆಂಡಾಗಳ ಸಾಮಾಜಿಕ ಸ್ವರೂಪ ಮತ್ತು ಅದರ ರಾಜಕೀಯ ಯೋಜನೆಗಳನ್ನು ಪರಿಗಣಿಸಿದಲ್ಲಿ ಅದು ರೂಪಿಸಬೇಕೆಂದುಕೊಂಡಿರುವ ಜನಾಭಿಪ್ರಾಯಕ್ಕೆ ಪೂರಕವಾದ ನೆಲೆಗಳು ಭಾರತೀಯ ಸಮಾಜದಲ್ಲಿ ದೃಢೀಕೃತ ರೂಪದಲ್ಲಲ್ಲವಾದರೂ ಅಮೂರ್ತವಾದಂಥ ರೂಪದಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದವು ಎಂಬುದನ್ನು ಮರೆಯಬಾರದು. ಈಗ ಅದಕ್ಕೆ ಬೇಕಾದ ಫಲವತ್ತಾದ ಭೂಮಿಕೆ ದೊರೆತಿರುವುದರಿಂದ ಅವು ಬಿಜೆಪಿ ಅಜೆಂಡಾಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಮತ್ತೊಂದೆಡೆ ನ್ಯಾಯ ಸಮ್ಮತವಾದ ಮತ್ತು ಸೌಹಾರ್ದವನ್ನು ಆಧರಿಸಿದ ಪ್ರತಿರೋಧದ ಅಜೆಂಡಾಗಳು ಮಾನ್ಯವಾಗಬೇಕೆಂದರೆ ರಾಜಕೀಯದ ನೆಲವನ್ನು ಇನ್ನೂ ಸಾಕಷ್ಟು ಹದಗೊಳಿಸಬೇಕಾದ ಅಗತ್ಯವಿದೆ. ವಿರೋಧ ಪಕ್ಷಗಳು ಈ ಕರ್ತವ್ಯಕ್ಕೆ ಅಣಿಯಾಗಬೇಕೆಂದರೆ ನೈತಿಕ ಮೇಲರಿಮೆ, ಆತ್ಮ ವಂಚನೆ ಮತ್ತು ಆತ್ಮಘಾತುಕತೆಗಳಿಂದ ಹೊರಬರುವುದು ಅತ್ಯಗತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)