varthabharthi

ವಿಶೇಷ-ವರದಿಗಳು

ಅರ್ಥಪೂರ್ಣ ಸಂತಸವನ್ನು ಸಾರುವ ಈದುಲ್ ಫಿತ್ರ್

ವಾರ್ತಾ ಭಾರತಿ : 4 Jun, 2019
ಶರ್ಫುದ್ದೀನ್ ಬಿ.ಎಸ್. ಕುವೈತ್

ಈದುಲ್ ಫಿತ್ರ್ ಎಂದರೆ ಅರಬಿ ಭಾಷೆಯಲ್ಲಿ ‘ಪಾರಣೆಯ ಹಬ್ಬ’. ಅಂದರೆ ಒಂದು ತಿಂಗಳ ಉಪವಾಸ ವ್ರತ ಮತ್ತು ಚಾಂದ್ರಮಾನ ಮಾಸದ ಒಂಬತ್ತನೇ ತಿಂಗಳಾದ ರಮಝಾನ್ ತಿಂಗಳ ಸಕಲ ಒಳಿತುಗಳನ್ನು ತನ್ನದಾಗಿಸಿಕೊಂಡ ಸಂತೋಷದಲ್ಲಿ ಕೃತಾರ್ಥ ಭಾವನೆಯನ್ನು ಪ್ರಕಟಿಸುವ ಹಬ್ಬ. ಸಂತೋಷದ ಶಾಶ್ವತ ಬುನಾದಿಗಳು ಎಂದು ಹೇಳಬಹುದಾದ ಹಲವು ಮೌಲ್ಯಗಳನ್ನು ಗಳಿಸಿಕೊಳ್ಳಲು ರಮಝಾನ್ ತಿಂಗಳಿನಲ್ಲಿ ವಿಫುಲ ಅವಕಾಶಗಳಿವೆ. ಈದುಲ್ ಫಿತ್ರ್ ಇದಕ್ಕಾಗಿರುವ ಕೃತಜ್ಞತಾರ್ಪಣೆಯ ಹಬ್ಬ.

ಆತ್ಮ ನಿಯಂತ್ರಣ

ರಮಝಾನ್ ತಿಂಗಳಿನ ಉಪವಾಸ ವ್ರತದ ಪ್ರಮುಖ ಉದ್ದೇಶಗಳಲ್ಲೊಂದು ಆತ್ಮ ನಿಯಂತ್ರಣದ ತರಬೇತಿ. ಎಲ್ಲಾ ಮಾನವರ ಅತ್ಯಂತ ಪ್ರಮುಖ ಆಕಾಂಕ್ಷೆಗಳು ಆಹಾರ ಸೇವನೆ, ಲೈಂಗಿಕಾಸಕ್ತಿ ಮತ್ತು ವಿಶ್ರಾಂತಿಯನ್ನು ಪಡೆಯುವುದಾಗಿದೆ.

ಇಡೀ ಮಾನವ ಜೀವನ ಈ ಪ್ರಮುಖ ಮೂಲಭೂತ ಮತ್ತು ಅನಿವಾರ್ಯ ಆಕಾಂಕ್ಷೆಗಳ ಸುತ್ತ ಹೆಣೆದು ಕೊಂಡಿದೆ. ನಮ್ಮ ಪರಿಸರದಲ್ಲಿ ಕಂಡು ಬರುವ ಎಲ್ಲಾ ಉಪಾಹಾರಗೃಹಗಳು, ದಿನಸಿ ಅಂಗಡಿಗಳು, ಮೀನು ಮಾಂಸದಂಗಡಿಗಳು ಆಹಾರ ಸೇವನೆಯ ಆಕಾಂಕ್ಷೆಯನ್ನು ಪೂರೈಸಲಿಕ್ಕಿರುವ ಮೂಲಗಳಾಗಿವೆ. ಯಾರೆಲ್ಲಾ ಆಹಾರ ಸೇವನೆ ಮತ್ತು ಅದರ ಸರಬರಾಜಿಗಾಗಿ ಕೆಲಸ ಮಾಡುವವರು ಎಂದು ಹುಡುಕ ಹೊರಟರೆ ಸುಮಾರು ಶೇ. 50ರಷ್ಟು ಜನ ಇದಕ್ಕಾಗಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಆದ್ದರಿಂದ ಇದು ಎಷ್ಟು ಪ್ರಮುಖವಾದ ಆಕಾಂಕ್ಷೆ ಎಂದು ಅಂದಾಜಿಸಬಹುದು. ಮನುಷ್ಯ ಈ ಆಕಾಂಕ್ಷೆಯ ಗುಲಾಮನಾದಾಗ ಹೊಟ್ಟೆ ಹೊರೆಯಲಿಕ್ಕಾಗಿ ಏನು ಮಾಡಲಿಕ್ಕೂ ಸಿದ್ಧನಾಗುತ್ತಾನೆ. ಭ್ರಷ್ಟಾಚಾರ, ಕಳ್ಳತನ, ಕಾಳಸಂತೆ, ಅಕ್ರಮ ಸಾಗಾಟ, ಆಕ್ರಮಣ ಇತ್ಯಾದಿಗಳೆಲ್ಲವನ್ನು ಹೊಟ್ಟೆ ಹೊರೆಯಲಿಕ್ಕಾಗಿ ಮಾಡಲು ಅವನು ಹಿಂಜರಿಯುವುದಿಲ್ಲ. ಉಪವಾಸ ಈ ಮಹಾ ಆಕಾಂಕ್ಷೆಯನ್ನು ಹೇಗೆ ಅಂಕಿತದಲ್ಲಿಡ ಬಹುದು ಮತ್ತು ಅದನ್ನು ಮೌಲ್ಯಾಧಾರಿತ ನಿಯಂತ್ರಣಕ್ಕೆ ಬದ್ಧಗೊಳಿಸಿಕೊಳ್ಳಬಹುದು ಎಂಬ ತರಬೇತಿಯನ್ನು ಕಲಿಸುತ್ತದೆ.

ವಿಷಯಾಸಕ್ತಿಯೂ ಅಷ್ಟೇ ಪ್ರಬಲವಾದ ಇನ್ನೊಂದು ಆಕಾಂಕ್ಷೆ. ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಇತಿಹಾಸದಾದ್ಯಂತ ದೊಡ್ಡ ದೊಡ್ಡ ಯುದ್ಧ್ದಗಳು ನಡೆದಿವೆ. ಇದೇ ಆಸಕ್ತಿಯನ್ನು ನಿಯಂತ್ರಣಕ್ಕೆ ಬದ್ಧಗೊಳಿಸಿ ‘ವಿವಾಹ’ ಎಂಬ ಪವಿತ್ರ ಬಂಧನಕ್ಕೊಳಪಡಿಸಿದಾಗ ಸಮಾಜದಲ್ಲಿ ಆರೋಗ್ಯ ಪೂರ್ಣ ಮತ್ತು ಗೌರವಯುತವಾದ ಹಲವು ಸಂಬಂಧಗಳು ಬೆಳೆಯುತ್ತದೆ.

ತಂದೆ-ತಾಯಿ, ಮಕ್ಕಳು, ಕುಟುಂಬಸ್ಥರು ಹೀಗೆ ಪರಸ್ಪರರಿಗಾಗಿ ಮಿಡಿಯುವ ಮತ್ತು ತ್ಯಾಗ ಸನ್ನದ್ಧತೆಗೆ ಪ್ರೇರೇಪಿಸುವ ಮಾನವರನ್ನು ಅದು ಸೃಷ್ಟಿಸುತ್ತದೆ. ಉಪವಾಸದ ವೇಳೆ ದಂಪತಿಗಳ ನಡುವೆಯೂ ದಿನದ ಉಪವಾಸದ ಹೊತ್ತಿನಲ್ಲಿ ಯಾವುದೇ ಲೈಂಗಿಕ ಸಂಬಂಧ ನಿಷೇಧಿಸಲಾಗಿದೆ. ಆ ಮೂಲಕ ಈ ಪ್ರಮುಖ ಆಕಾಂಕ್ಷೆಯನ್ನು ನಿಯಂತ್ರಣಕ್ಕೆ ಬದ್ಧಗೊಳಿಸುವ ತರಬೇತಿ ಉಪವಾಸ ವ್ರತದಲ್ಲಿದೆ.

ಅದೇ ರೀತಿಯಲ್ಲಿ ರಮಝಾನ್ ತಿಂಗಳಿನ ಉಪವಾಸ ವ್ರತದಲ್ಲಿ ದೇಹ ದಂಡನೆಯ ಮತ್ತು ವಿಶ್ರಾಂತಿಯ ಅಗತ್ಯವನ್ನು ಅಂಕಿತದಲ್ಲಿಡುವ ತರಬೇತಿಯೂ ಇದೆ. ನಮ್ಮ ಸುತ್ತ ಮುತ್ತ ಕಂಡು ಬರುವ ಕಾರು, ಹವಾ ನಿಯಂತ್ರಣದ ಸಾಧನಗಳು, ಬಟ್ಟೆ ತೊಳೆಯುವ ಯಂತ್ರ, ವಿದ್ಯುಚ್ಛಕ್ತಿ ಮತ್ತಿತರ ಎಲ್ಲ ಸಾಧನಗಳೂ ವಿಶ್ರಾಂತಿ ಮತ್ತು ಆರಾಮಕ್ಕಾಗಿ ಮಾನವ ಕಂಡು ಹಿಡಿದ ವಸ್ತುಗಳು. ಇದು ಮಾನವನ ದೊಡ್ಡ ಆಕಾಂಕ್ಷೆ.

ರಮಝಾನ್‌ನಲ್ಲಿ ನಿಶಾ ಜಾಗರಣೆಯ ಹಲವು ಆದೇಶಗಳಿವೆ. ಕುರ್‌ಆನ್‌ನ ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲಿಡುವುದಕ್ಕೆ ಪ್ರೇರಣೆ ಇದೆ. ದಣಿದ ದೇಹ, ವಿಶ್ರಾಂತಿ ಬಯಸುವ ಜೀವ ಎರಡನ್ನು ಹಸಿವು, ಬಾಯಾರಿಕೆ ಸಹಿಸುತ್ತಾ ನಿಯಂತ್ರಣ ಮಾಡುವ ದೊಡ್ಡ ತರಬೇತಿ ಉಪವಾಸ ವ್ರತದಲ್ಲಿದೆ.

ಹೀಗೆ ಹಸಿವು, ವಿಷಯಾಸಕ್ತಿ ಮತ್ತು ವಿಶ್ರಾಂತಿ ಎಂಬ ಮೂರು ಪ್ರಮುಖ ಆಕಾಂಕ್ಷೆ ಮತ್ತು ಅನಿವಾರ್ಯತೆಗಳನ್ನು ನಿಯಂತ್ರಣಕ್ಕೊಳಪಡಿಸಿ ‘ಆತ್ಮನಿಗ್ರಹ’ದ ಪಾಠ ಕಲಿಯುವ ತರಬೇತಿ ಉಪವಾಸ ವ್ರತದಲ್ಲಿದೆ. ಆತ್ಮ ನಿಯಂತ್ರಣ ಎಂಬುದು ಸಂತೋಷದ ಶಾಶ್ವತ ಬುನಾದಿಗಳಲ್ಲೊಂದಾಗಿದೆ. ಈ ಸಾಧನೆಯನ್ನು ಮಾಡಿದ ಕಾರಣಕ್ಕಾಗಿಯೇ ‘ಈದುಲ್ ಫಿತ್ರ್’ ಅಥವಾ ಪಾರಣೆಯ ಹಬ್ಬ ಆಚರಿಸಲು ಉಪದೇಶಿಸಲಾಗಿದೆ. ಕುರ್‌ಆನ್ ಹೇಳುವಂತೆ ‘‘ಖಂಡಿತವಾಗಿಯೂ ಆತ್ಮವನ್ನು ಸಂಸ್ಕರಿಸಿದವನು ವಿಜಯಿಯಾದನು ಮತ್ತು ಅದನ್ನು ದಮನಿಸಿದವನು ಪರಾಜಯ ಹೊಂದಿದನು’’.(91:9-10)

ದಾನ ಧರ್ಮ

ರಮಝಾನ್ ತಿಂಗಳಲ್ಲಿ ಮಾಡುವ ದಾನ ಧರ್ಮ ಮತ್ತು ಎಲ್ಲಾ ಸತ್ಕಾರ್ಯಗಳಿಗೆ ಎಪ್ಪತ್ತರಿಂದ ಏಳುನೂರು ಪಟ್ಟು ಹೆಚ್ಚು ಪುಣ್ಯ ಕೊಡಲಾಗುತ್ತದೆ ಎಂದು ಪ್ರವಾದಿವಚನದಲ್ಲಿ ಹೇಳಲಾಗಿದೆ. ಇದು ಎಷ್ಟು ಪ್ರೇರಕ ಶಕ್ತಿಯನ್ನು ಹೊಂದಿರುವ ಬೋಧನೆಯೆಂದರೆ ವಿಶ್ವದಾದ್ಯಂತ ಮುಸ್ಲಿಮರು ರಮಝಾನ್ ತಿಂಗಳಲ್ಲಿ ಧಾರಾಳ ದಾನಧರ್ಮ ಮತ್ತು ಸತ್ಕಾರ್ಯಗಳನ್ನು ಮಾಡುತ್ತಾರೆ.

ವಿಶ್ವದ ಶೇ. 22ರಷ್ಟಿರುವ ಮತ್ತು ಭಾರತದಲ್ಲಿ ಸುಮಾರು ಶೇ. 15ರಷ್ಟಿರುವ ಮುಸ್ಲಿಮರು ರಮಝಾನ್ ತಿಂಗಳಿನಲ್ಲಿ ಹಲವು ಶತಕೋಟಿ ರೂಪಾಯಿ ಮೌಲ್ಯದ ದಾನಧರ್ಮ ಮಾಡುತ್ತಾರೆ. ಹಲವಾರು ಸತ್ಕಾರ್ಯಗಳನ್ನು ಮಾಡುತ್ತಾರೆ. ಇದು ಮಾನವ ಸಮಾಜದ ಸಂತಸವನ್ನು ಬಹಳಷ್ಟು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಾಧನೆ ಮಾಡಿದ ತಿಂಗಳಾಂತ್ಯದಲ್ಲಿ ಹಬ್ಬದ ಸಂತೋಷಾಚರಣೆ ಮಾಡುವುದು ನಿಜವಾಗಿಯೂ ಅರ್ಥಪೂರ್ಣವಾಗಿದೆ.

ದಾನಧರ್ಮದಲ್ಲಿ ‘ಝಕಾತ್’ ಎಂಬ ಸಿರಿವಂತರ ಮೇಲೆ ಕಡ್ಡಾಯವಾಗಿರುವ ದಾನ ಅತ್ಯಂತ ಗಮನಾರ್ಹವಾಗಿದೆ. ಇದು ಇಸ್ಲಾಮಿನ ಪಂಚ ಸ್ತಂಭಗಳ ಪೈಕಿ ಮೂರನೆಯದು. ನಾಲ್ಕನೆಯ ಸ್ತಂಭ ಉಪವಾಸ ವ್ರತ. ಅಂದರೆ ಝಕಾತ್ ಎಂಬ ಕಡ್ಡಾಯ ದಾನಕ್ಕೆ ಉಪವಾಸ ವ್ರತಕ್ಕಿಂತ ಹೆಚ್ಚು ಪ್ರಾಮುಖ್ಯವಿದೆ.

ಝಕಾತನ್ನು ಎಂಟು ವಿಧದ ಜನವಿಭಾಗದಲ್ಲಿ ವಿತರಿಸಬಹುದಾಗಿದೆ. ಈ ಪೈಕಿ ಎಲ್ಲಾ ರೀತಿಯ ವಿಭಾಗಗಳನ್ನು ಮೂಲತಃ ಬಡತನ ನಿರ್ಮೂಲನದ ಉದ್ದೇಶದಿಂದ ಗುರುತಿಸಲಾಗಿದೆ. ವಿಶೇಷವೆಂದರೆ ಇಸ್ಲಾಮಿನ ಇತಿಹಾಸದಲ್ಲಿ ಹಲವು ಬಾರಿ ಸಿರಿವಂತರಿಂದ ಶೇ. 2.5 ಸಾಮೂಹಿಕ ಝಕಾತ್ ಸಂಗ್ರಹಣೆ ಮತ್ತು ಸಾಮೂಹಿಕ ವಿತರಣೆಯ ವ್ಯವಸ್ಥೆ ಇದ್ದಾಗ ಬಡತನ ಸಂಪೂರ್ಣ ನಿರ್ಮೂಲನೆಗೊಂಡಂತಹ ಉದಾಹರಣೆಗಳಿವೆ. ಆದರೆ ಇಸ್ಲಾಮಿನ ಆಡಳಿತ ವ್ಯವಸ್ಥೆ ಖಿಲಾಫತ್ ಕೊನೆಗೊಂಡಿರುವ ಈ ಕಾಲದಲ್ಲಿ ಎಲ್ಲಿಯೂ ಝಕಾತ್‌ನ ಸಾಮೂಹಿಕ ಸಂಗ್ರಹಣೆ ಮತ್ತು ವಿತರಣೆಯ ಪರಿಣಾಮಕಾರಿ ವ್ಯವಸ್ಥೆ ಜಾರಿಯಲ್ಲಿಲ್ಲ ಎಂದು ಹೇಳಬಹುದು.

ಝಕಾತ್‌ನ ಸರಿಯಾದ ಸಾಮೂಹಿಕ ಸಂಗ್ರಹಣೆ ಮತ್ತು ವಿತರಣೆ ಬಡತನ ನಿರ್ಮೂಲನಕ್ಕೆ ಇರುವ ಹಿಂದೆ ಯಶಸ್ವಿ ಪ್ರಯೋಗ ನಡೆಸಲಾಗಿರುವ ಒಂದು ಮಾದರಿ ವ್ಯವಸ್ಥೆಯಾಗಿದೆ. ಆದ್ದರಿಂದಲೇ ಹಿಂದೆ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಜನಜನಿತ ಸಚಿವರಾಗಿದ್ದ ನಝೀರ್ ಸಾಬ್, ಸರಕಾರಿ ಮಟ್ಟದಲ್ಲಿ ಝಕಾತ್ ಸಂಗ್ರಹ ಮತ್ತು ವಿತರಣೆಯ ಪ್ರಸ್ತಾಪ ಮುಂದಿಟ್ಟಿದ್ದರು. ಅದು ಸರಿಯೋ, ತಪ್ಪೋ ಎಂಬುದು ಬೇರೆ ವಿಚಾರ. ಆದರೆ ಝಕಾತ್ ಎಂಬುದು ಬಡತನ ನಿರ್ಮೂಲನಕ್ಕೆ ಇರುವ ಪರಿಣಾಮಕಾರಿ ಅಸ್ತ್ರ ಎಂದು ಧಾರ್ಮಿಕ ವ್ಯಕ್ತಿಯಾಗಿ ತಮ್ಮನ್ನು ಗುರುತಿಸಿಕೊಂಡಿರದ ಎಡಪಂಥೀಯ ಒಲವು ಹೊಂದಿದ್ದ ನಝೀರ್ ಸಾಬ್‌ರಂತಹ ವ್ಯಕ್ತಿಗಳೂ ಕೂಡ ಮನಗಂಡಿದ್ದರು ಎಂಬುದು ಗಮನಾರ್ಹ ವಿಚಾರ.

ಝಕಾತುಲ್ ಫಿತ್ರ್ ಅಥವಾ ಹಬ್ಬದ ದಿನದ ಕಡ್ಡಾಯ ದಾನ

‘ಝಕಾತುಲ್ ಫಿತ್ರ್’ ಎಂದರೆ ಹಬ್ಬದ ದಿನ ಬೆಳಗಿನ ಪ್ರಾರ್ಥನೆಗೆ ಹೊರಡುವ ಮುನ್ನ ಕೊಡಬೇಕಾದ ಕಡ್ಡಾಯವಾದ ದಾನ. ಇದು ಕೇವಲ ಸಿರಿವಂತರಿಗೆ ಕಡ್ಡಾಯವಲ್ಲ ಬದಲಾಗಿ ಹಬ್ಬದ ದಿನದಂದು ಆ ದಿನದ ಖರ್ಚಿಗೆ ಸೌಕರ್ಯವಿರುವ ಪ್ರತಿಯೊಬ್ಬನೂ ತನ್ನ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಕಡೆಯಿಂದ ತಲಾ ಸುಮಾರು ಎರಡುವರೆ ಕಿಲೊ ಧಾನ್ಯ ಅಥವಾ ಅದಕ್ಕೆ ತುಲ್ಯವಾದ ಮೊತ್ತವನ್ನು ಅತ್ಯಂತ ಅಪೇಕ್ಷಿತರನ್ನು ಗುರುತಿಸಿ ಅವರಿಗೆ ತಲುಪಿಸಬೇಕಾಗಿದೆ. ಹಬ್ಬದ ದಿನ ಅಪೇಕ್ಷಿತನಾದ ಯಾವುದೇ ವ್ಯಕ್ತಿ ಮತ್ತು ಅವನ ಕುಟುಂಬ ಹಬ್ಬದ ಸಂತೋಷದಿಂದ ಮುಕ್ತವಾಗಿರಬಾರದು ಎಂಬುದೇ ಅದರ ಉದ್ದೇಶ. ಮೂಲಭೂತ ಮಾನವೀಯ ಆವಶ್ಯಕತೆಗಳ ಈಡೇರಿಕೆಗೆ ಸಂದರ್ಭೋಚಿತವಾಗಿ ಸ್ಪಂದಿಸಲು ಅವಕಾಶ ಕಲ್ಪಿಸುವ ಈ ಫಿತ್ರ್‌ದಾನವೂ ಹಬ್ಬದ ಸಂತೋಷವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುತ್ತದೆ.

ಕುರ್‌ಆನ್‌ನ ವರ್ಷಾಚರಣೆ

ರಮಝಾನ್ ತಿಂಗಳು ಕುರ್‌ಆನ್ ಅವತೀರ್ಣವಾದ ತಿಂಗಳು ಮತ್ತು ಕುರ್‌ಆನ್‌ನೊಂದಿಗೆ ಸಂಬಂಧವನ್ನು ಪುನರುಜ್ಜೀವನಗೊಳಿಸಬೇಕಾದ ತಿಂಗಳು. ಕುರ್‌ಆನ್‌ನೊಂದಿಗೆ ಸಂಬಂಧವನ್ನು ನವೀಕರಿಸಿ, ಅದರ ಸಂದೇಶವನ್ನು ಮನನ ಮಾಡಿಕೊಳ್ಳಲು ಸಾರ್ಥಕ ಪ್ರಯತ್ನ ನಡೆಸಿದ ಸಂತೋಷವೂ ಈ ಹಬ್ಬದ ಮತ್ತೊಂದು ಪ್ರಮುಖ ಭಾಗವಾಗಿದೆ.

ಕುರ್‌ಆನ್ ಹಲವು ಕಾರಣಗಳಿಗಾಗಿ ವಿಶಿಷ್ಠ ಗ್ರಂಥ. ಕಂಠಪಾಠ ಮಾಡಲು ಸಾಧ್ಯವಿರುವ ಏಕೈಕ ಬೃಹತ್ ಗ್ರಂಥ. ಜಗತ್ತಿನ ಎಲ್ಲ ಮೂಲೆಯಲ್ಲಿಯೂ ಅದನ್ನು ಸಂಪೂರ್ಣ ಕಂಠಪಾಠ ಮಾಡಿದ ಹಾಫಿಝ್ (ಕುರ್‌ಆನ್ ಕಂಠಸ್ಥ ಮಾಡಿದವರು)ಗಳು ಕಂಡು ಬರುತ್ತಾರೆ.ಅದೇ ರೀತಿಯಲ್ಲಿ ತನ್ನ ಮೂಲ ರೂಪದಲ್ಲಿ ಸುರಕ್ಷಿತವಾಗಿರುವ ಏಕೈಕ ಗ್ರಂಥ. ವಿಶ್ವದೆಲ್ಲೆಡೆ ಇರುವುದು ಅದರ ಒಂದೇ ಆವೃತ್ತಿ. ವೈಜ್ಞಾನಿಕ ಸತ್ಯ ಮತ್ತು ನಿಖರತೆಗೆ ಸಾಟಿಯಾಗಿ ನಿಲ್ಲುವ ವಿಶಿಷ್ಟ ಗ್ರಂಥ. ಈ ನಿಟ್ಟಿನಲ್ಲಿ ಕೊಡಬಹುದಾದ ಉದಾಹರಣೆ ಹಲವಾರು. (ಉದಾಹರಣೆಗೆ ಹದಿನಾರನೆಯ ಶತಮಾನದ ಪ್ರಮುಖ ಕವಿ ವಿಲಿಯಂ ಶೇಕ್ಸ್ ಪಿಯರ್ ತಮ್ಮ ಹೆನ್ರಿ ಫೋರ್(Henry 4 )ಎಂಬ ಕೃತಿಯಲ್ಲಿ ಜೇನ್ನೊಣದ ಪ್ರಸ್ತಾಪ ಬಂದಾಗ ‘ರಾಜ ಮತ್ತು ಸೈನಿಕರು’ King and The Soldires) ಎಂದು ಬರೆದಿದ್ದಾರೆ.

ಜೇನ್ನೊಣದಲ್ಲಿರುವುದು ‘ರಾಣಿ’ ಮತ್ತು ‘ಹೆಣ್ಣು ಕಾರ್ಮಿಕ ನೊಣಗಳು’ ಎಂಬುದು ಇತ್ತೀಚೆಗೆ ತಿಳಿದು ಬಂದ ಸಂಶೋಧನೆ. ಆದರೆ ನಿರಕ್ಷರಿ ಪ್ರವಾದಿ ಮುಹಮ್ಮದ್ (ಸ)ರು ಜಗತ್ತಿಗೆ ಸಮರ್ಪಿಸಿದ ದಿವ್ಯ ಗ್ರಂಥ ಕುರ್‌ಆನ್‌ನಲ್ಲಿ ಜೇನ್ನೊಣದ ಬಗ್ಗೆ ಇನ್ನೂ ಜನರಿಗೆ ಅನೇಕ ವಿಷಯಗಳು ತಿಳಿದಿರದ ಕಾಲದಲ್ಲಿ ಜೇನ್ನೊಣದ ಪ್ರಸ್ತಾಪ ಬಂದಾಗ ಅರಬಿ ಭಾಷೆಯಲ್ಲಿ ಸ್ತ್ರೀ ಲಿಂಗವನ್ನು ಉಪಯೋಗಿಸಲಾಗಿದೆ. (ಅಧ್ಯಾಯ 16: ಜೇನ್ನೊಣ: ಸೂಕ್ತ: 68-69)

ಇಂತಹ ಹಲವಾರು ವೈಜ್ಞಾನಿಕ ವಿಸ್ಮಯಗಳನ್ನೊಳಗೊಂಡ ಮತ್ತು ಏಳನೇ ಶತಮಾನದಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣವಾದ ಗ್ರಂಥ ಪವಿತ್ರ ಕುರ್‌ಆನ್. ಮಾನವ ಜೀವನಕ್ಕೆ ಬೇಕಾದ ಆಮೂಲಾಗ್ರ ಬೋಧನೆಗಳಿರುವ ‘ಪವಿತ್ರ ಕುರ್‌ಆನ್’ನೊಂದಿಗೆ ಅದು ಅವತೀರ್ಣಗೊಂಡ ರಮಝಾನ್ ತಿಂಗಳಿನಲ್ಲಿ ಸಂಬಂಧವನ್ನು ನವೀಕರಿಸಲು ದೊರೆತ ಅವಕಾಶಕ್ಕೆ ಸ್ತುತಿ ಅರ್ಪಿಸುವುದೂ ಕೂಡ ‘ಈದುಲ್ ಫ್ರಿತ್’ನ ಮತ್ತೊಂದು ಪ್ರಮುಖ ಧ್ಯೇಯ.

ಸಾಂಸ್ಕೃತಿಕ ವಿನಿಮಯ

ಭಾರತ ಹಬ್ಬಗಳ ನಾಡು. ಹಲವು ಧರ್ಮಗಳ ನೆಲೆಬೀಡು. ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ ಹೇಳಿದಂತೆ, ಸರ್ವಜನಾಂಗದ ಶಾಂತಿಯ ತೋಟ. ರಸಿಕರ ಕಂಗಳ ಸೆಳೆಯುವ ನೋಟ. ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ. ಆದ್ದರಿಂದ ಹಲವು ಧರ್ಮದಲ್ಲಿನ ಹಬ್ಬದ ಹಿಂದಿನ ಸಂದೇಶವನ್ನು ಅರಿಯುವುದು ಮತ್ತು ಅನ್ಯ ಧರ್ಮದ ಬೋಧನೆ ಮತ್ತು ಆಚಾರಗಳ ಬಗ್ಗೆ ಗೌರವ ಮತ್ತು ಸಹಿಷ್ಣುತೆಯನ್ನು ಪ್ರಕಟಿಸುವುದು ಭಾರತದ ಸಾಮಾಜಿಕ ಸ್ವಾಸ್ಥಕ್ಕೆ, ಆರ್ಥಿಕ ಪ್ರಗತಿಗೆ, ಸೌಹಾರ್ದದ ಪರಂಪರೆಗೆ ಮತ್ತು ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಯಾದ ಮಕ್ಕಳ ಸ್ವಸ್ಥ ಮಾನಸಿಕ ವಿಕಸನಕ್ಕೆ ಬಹಳ ಮುಖ್ಯ.

ಇಂದು ಭಾರತ ಇತಿಹಾಸದ ಪ್ರಮುಖ ಕವಲು ದಾರಿಯಲ್ಲಿ ನಿಂತಿದೆ. ಶತಮಾನಗಳಿಂದ ರಕ್ಷಿಸಿಕೊಂಡು ಬರಲಾಗಿರುವ ಸೌಹಾರ್ದ, ಪರಧರ್ಮ ಸಹಿಷ್ಣುತೆ, ವೈಚಾರಿಕ ಭಿನ್ನಮತಗಳ ಬಗ್ಗೆ ಗೌರವ ಭಾವನೆ ಇತ್ಯಾದಿ ಮೌಲ್ಯಗಳು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲಾ ಹಬ್ಬಗಳು ‘ಸಾಂಸ್ಕೃತಿಕ ವಿನಿಮಯ’ದ ಅವಕಾಶವನ್ನು ಕಲ್ಪಿಸಬೇಕಾಗಿದೆ. ದೇಶದ ಭವಿಷ್ಯ ಮತ್ತು ಪ್ರಗತಿಗೆ ಇದು ಅನಿವಾರ್ಯ.

ಹಬ್ಬಗಳು ಸೇರಿದಂತೆ ಧರ್ಮದ ಹೆಸರು ಹೇಳಿಕೊಂಡು ನಡೆಸುವ ಎಲ್ಲಾ ಆಚಾರಗಳು ನಾಡಿನ ಜನರ ಹೃದಯಗಳನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ. ‘ಜಿಗರ್ ಮುರಾದಾಬಾದಿ’ ಎಂಬ ಉರ್ದು ಕವಿಯೊಬ್ಬರು ತಮ್ಮ ಉರ್ದು ದ್ವಿಪದಿಯಲ್ಲಿ ಇದನ್ನು ಬಹಳ ಚಂದವಾಗಿ ಸಾರಿದ್ದಾರೆ.

‘‘ಹೃದಯಗಳನ್ನು ಮೀಟುವ ಪ್ರಯತ್ನವಾಗಲಿ, ಪ್ರೀತಿಯನ್ನು ಪ್ರಕಟಿಸುವ ಪ್ರಯತ್ನವಾಗಲಿ, ಯಾರು ಮಾನವ ಹೃದಯಗಳನ್ನು ಜಯಿಸುತ್ತಾರೋ ಅವರೇ ದೊಡ್ಡ ಜಯಶಾಲಿಗಳು.’’ ಚುನಾವಣಾ ಜಯ ಚರ್ಚಾ ವಿಷಯವಾಗಿರುವ ಈ ಕಾಲದಲ್ಲಿ ಜಿಗರ್‌ ಮುರಾದಾಬಾದಿಯ ಈ ಸಾಲುಗಳು ಬಹಳ ಪ್ರಸ್ತುತ. ‘‘ಓ ಅದಾಯೆ ದಿಲ್‌ಬರಿ ಹೋ ಕೆ ನವಾಯೆ ಆಶಿಕಾನ: ಜೋ ದಿಲೋಂಕು ಪತ್‌ಹ್ ಕರ್‌ಲೆ ವಹೀ ಪಾತೆಹೆ ಝಮಾನ.’’

ಶರ್ಫುದ್ದೀನ್ ಬಿ.ಎಸ್. ಕುವೈತ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)